ಸೇಫ್ ಸಿಟಿ ಯೋಜನೆ ಅಡಿ 7000 ಸಿಸಿ ಕ್ಯಾಮರಾಗಳ ಅಳವಡಿಕೆ: ಸಿಎಂ ಬಸವರಾಜ ಬೊಮ್ಮಾಯಿ - Mahanayaka
4:47 PM Friday 20 - September 2024

ಸೇಫ್ ಸಿಟಿ ಯೋಜನೆ ಅಡಿ 7000 ಸಿಸಿ ಕ್ಯಾಮರಾಗಳ ಅಳವಡಿಕೆ: ಸಿಎಂ ಬಸವರಾಜ ಬೊಮ್ಮಾಯಿ

banglore
08/03/2023

ಬೆಂಗಳೂರು: ಮಹಿಳೆಯರ ಸುರಕ್ಷತೆಗಾಗಿ ಸೇಫ್ ಸಿಟಿ ಯೋಜನೆ ಅಡಿಯಲ್ಲಿ 7000 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸ್ತ್ರೀ ಸಬಲೀಕರಣ, ಸ್ವಾವಲಂಬನೆಯ ಬದುಕು, ಮಹಿಳೆಯರಿಗೆ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಜಯವಾಣಿ ಕನ್ನಡ ದಿನಪತ್ರಿಕೆ ಹಾಗೂ ದಿಗ್ವಿಜಯ ನ್ಯೂಸ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ “ಅಪರೂಪದ ಸಾಧಕಿಯರಿಗೆ ವರ್ಷದ ಮಹಿಳೆ-2023”ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರಿಗೆ ಪ್ರೋತ್ಸಾಹ ನೀಡಲು ಸ್ತ್ರೀಸಾಮರ್ಥ್ಯ ಯೋಜನೆಯಡಿ ಪ್ರತಿ ಗ್ರಾಮದ ಎರಡು ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ಸಹಾಯ, ತರಬೇತಿ ಹಾಗೂ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಹೊಲದಲ್ಲಿ ದುಡಿಯುವ ಮಹಿಳೆಯ ಅನುಕೂಲಕ್ಕಾಗಿ ಪೌಷ್ಟಿಕ ಆಹಾರ ಒದಗಿಸುವ ಯೋಜನೆ ಹಾಗೂ ಮಹಿಳಾ ಕಾರ್ಮಿಕರ ಮಕ್ಕಳಿಗಾಗಿ 4000 ಅಂಗನವಾಡಿಗಳನ್ನು ಪ್ರಾರಂಭಿಸಲಾಗಿದೆ. ಹೊಲದಲ್ಲಿ ದುಡಿಯುವ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಒಂದು ಸಾವಿರ ರೂ. ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.


Provided by

ಸ್ತ್ರೀಶಕ್ತಿ ಸಂಘಗಳಿಗೆ 1800 ಕೋಟಿ ರೂ. :

ಕಳೆದ ವರ್ಷ ರೈತ ವಿದ್ಯಾನಿಧಿ,ಈ ವರ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿದ್ದೇವೆ. ದುಡಿಯುವ ಮಹಿಳೆಗೆ ಉಚಿತ ಬಸ್ ಪಾಸ್ ನೀಡಲಾಗಿದೆ. ಪಿಯುಸಿ ಯಿಂದ ಡಿಗ್ರಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಸ್ತ್ರೀಶಕ್ತಿ ಸಂಘಗಳಿಗೆ 1800 ಕೋಟಿ ರೂ.ಗಳಷ್ಟು ಶೂನ್ಯಬಡ್ಡಿದರದಲ್ಲಿ ಸಾಲಸೌಲಭ್ಯವನ್ನು ನೀಡಲಾಗಿದೆ. ಮಹಿಳೆಗೆ ಸಮಾಜದಲ್ಲಿ ಸಾಕಷ್ಟು ಸವಾಲುಗಳಿವೆ ಅದನ್ನು ಎದುರಿಸಿದಾಗ ಸಾಧನೆ ಮಾಡಲು ಸಾಧ್ಯ. ವಿಜಯವಾಣಿ ಗುರುತಿಸಿರುವ ಎಲ್ಲ ಸಾಧಕರು ಅನ್ ಸಂಗ್ ಹಿರೋಗಳು. ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಲಿದೆ ಎಂದರು.

ಸಾಮಾಜಿಕ ಹೊಣೆಗಾರಿಕೆ:
ವಿಜಯವಾಣಿ ಪತ್ರಿಕೆ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವುದರಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ರೈತ, ಕೃಷಿ, ಶಿಕ್ಷಣ, ಉದ್ಯೋಗ, ಹೆಣ್ಣುಮಕ್ಕಳಿಗೆ ಪ್ರತಿ ವರ್ಷ ಗುರುತಿಸಿ ಪ್ರಶಸ್ತಿ ನೀಡುತ್ತಿರುವುದರಲ್ಲಿ ಬಹಳ ದೊಡ್ಡ ಪ್ರೇರಣಾ ಶಕ್ತಿಇದೆ. ಪತ್ರಿಕೆಯಿಂದ ಪ್ರಶಸ್ತಿ ಪಡೆದರೆ ತನ್ನದೇ ಮಹತ್ವವಿರುತ್ತದೆ. ಕ್ರಿಟಿಕ್ಸ್ ಅವಾರ್ಡ್ ಇದ್ದಂತೆ. ವಿಜಯವಾಣಿ ದಿಗ್ವಿಜಯ ಮಾಧ್ಯಮಕ್ಕೆ ಅಭಿನಂದಿಸಿದರು.

ಲಿಂಗಬೇಧ ಹೋಗಲಾಡಿಸಬೇಕು:

ಮನುಷ್ಯನ ಜೀವನದಲ್ಲಿ ಮಹಿಳೆಯ ಪಾತ್ರ ದೊಡ್ಡದು. ಸಂಬಂಧಗಳಿಂದ ಸಾಧನೆಯವರೆಗೆ ಅಪಾರ ಪ್ರಾಮುಖ್ಯತೆ ಇಡೀ ಜಗತ್ತಿನಲ್ಲಿದೆ. ಅದಕ್ಕಾಗಿಯೇ ವಿಶ್ವ ಮಹಿಳಾ ದಿನಾಚರಣೆ ಆಚರಿಸಲ್ಪಡುತ್ತಿದೆ. ಮಹಿಳೆ ಇಲ್ಲದೆ ಯಾವ ದಿನವೂ ನಡೆಯುವುದಿಲ್ಲ. ಜನ್ಮ ಪೂರ್ವದ ಸಂಬಂಧ ತಾಯಿ ಸಂಬಂಧ, ಒಂಬತ್ತು ತಿಂಗಳು ಹೊತ್ತು ಹೆತ್ತು ತನ್ನ ಸರ್ವಸರ್ವವನ್ನೂ ಹಂಚಿ ಭೂಮಿಗೆ ಬರಲು ಅವಕಾಶ ಮಾಡಿಕೊಡುವವಳು ತಾಯಿ. ಇದನ್ನು ಅರ್ಥ ಮಾಡಿಕೊಂಡರೆ ನಮ್ಮ ತಾಯಂದಿರನ್ನು ಹೇಗೆ ಗೌರವಿಸಬೇಕೆಂದು ತಿಳಿಯುತ್ತದೆ. ಇದರ ಅರಿವು ಬಹುತೇಕ ಜನರಿಗಿಲ್ಲ. ಮನುಕುಲ ಮುಂದುವರೆದಿರುವುದು ಮಹಿಳೆಯರಿಂದ. ಮಾನವನ ಅಭಿವೃದ್ಧಿಯ ಕೇಂದ್ರ ಮಹಿಳೆ. ಆಕೆಯನ್ನು ಬಿಟ್ಟು ಮಾನವನ ಅಭಿವೃದ್ಧಿಯಾಗಲಿ, ಮಾನವಕುಲ ಬೆಳೆಯವುದು ಸಾಧ್ಯವಿಲ್ಲ. ಇದು ಆಡಳಿತ ಮಾಡುವವರಿಗೆ ತಿಳಿಯದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ, 12 ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ, ಲಿಂಗ ಸಮಾನತೆಗಾಗಿ ಬಹಳ ದೊಡ್ಡ ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಇಂದಿಗೂ ಬಸವಣ್ಣನವರು ಪ್ರಸ್ತುತ ಎನ್ನುತ್ತೇವೆ. ಅಂದರೆ ಅವರು ಯಾವುದಕ್ಕೆ ಹೋರಾಟ ಮಾಡಿದ್ದರೋ ಅವೆಲ್ಲವೂ ಈಗಲೂ ಇವೆ ಎಂದು ಅರ್ಥ. ಸಾಮಾಜಿಕ ನ್ಯಾಯ, ಲಿಂಗಬೇಧ ಮೂಢನಂಬಿಕೆಗಳೂ ಪ್ರಸ್ತುತ ಇವೆ ಎಂದರ್ಥ. ಲಿಂಗಬೇಧ ಎಂದು ಹೋಗಲಾಡುತ್ತದೆಯೋ ಅಂದು ಈ ಸಾಮಜ, ದೇಶ, ನಾಡು ಅತ್ಯುತ್ತಮವಾಗಿರುತ್ತದೆ ಎಂದರು.

ಅವಕಾಶಗಳು ಅಗತ್ಯ :
ಅವಕಾಶಗಳು ನೀಡಿದಾಗ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ದೊಡ್ಡ ಸಾಧನೆ ಮಾಡಿದ್ದಾರೆ. ಏರೋಸ್ಪೇಸ್ನಲ್ಲಿಯೂ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಅತ್ಯಂತ ಕಠಿಣವಾದ ಕೆಲಸಗಳನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ ಎಂದರು.

ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ , ಚಿತ್ರನಟಿ ಸಪ್ತಮಿ ಗೌಡ, ವಿಜಯವಾಣಿ ಸಂಪಾದಕ ಚನ್ನೇಗೌಡ, ವಿಜಯವಾಣಿ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ, ವಿಜಯಾನಂದ ಟ್ರಾವೆಲ್ಸ್ ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ್, ಮತ್ತಿತರರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ