ಪ್ರಧಾನಿಯವರ ಅವಹೇಳನ: ಪ್ರಿಯಾಂಕ್ ಖರ್ಗೆ ವಿರುದ್ಧ ದೂರು: ಶೋಭಾ ಕರಂದ್ಲಾಜೆ
ಬೆಂಗಳೂರು: ಕಾಂಗ್ರೆಸ್ಸಿಗರು ನಿರಂತರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಆಕ್ಷೇಪಿಸಿದರು.
ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಇವತ್ತು ಮಲ್ಲಿಕಾರ್ಜುನ ಖರ್ಗೆಯವರ ಮಗ ಪ್ರಿಯಾಂಕ್ ಖರ್ಗೆಯವರ ವಿರುದ್ಧ ದೂರು ಕೊಡಲಾಗಿದೆ. ದೇಶದ ಪ್ರಧಾನಿಯನ್ನು ವಿಶ್ವವೇ ಕೊಂಡಾಡುತ್ತಿದೆ. ಪ್ರಧಾನಿ ಮೋದಿಯವರು ಕೇವಲ ಒಂದು ಪಕ್ಷದ ಪ್ರತಿನಿಧಿಯಲ್ಲ. ಅವರು ಈ ದೇಶದ ಪ್ರಧಾನಿಯಾಗಿದ್ದಾರೆ. ಪ್ರಧಾನಿಯವರ ಅವಹೇಳನದ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ಮನವಿ ನೀಡಿದ್ದೇವೆ ಎಂದು ವಿವರಿಸಿದರು.
ಹಿಂದಿನ ಚುನಾವಣೆಗಳಲ್ಲೂ ಮೋದಿಯವರ ಬಗ್ಗೆ ಕೆಟ್ಟದಾಗಿ, ಸಂವಿಧಾನವಿರೋಧಿ ಮಾತುಗಳಿಂದ ನಿಂದಿಸಿದ್ದರು. ಕರ್ನಾಟಕದ ಅಸೆಂಬ್ಲಿ ಚುನಾವಣೆಯಲ್ಲಿ ಹತಾಶರಾದ ಕಾಂಗ್ರೆಸ್ ನಾಯಕರು ಮತ್ತೆ ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮೋದಿಯವರನ್ನು ವಿಷ ಸರ್ಪ ಎಂದಿದ್ದರು. ಇವತ್ತು ಪ್ರಿಯಾಂಕ್ ಖರ್ಗೆ ಅವರು ದೆಹಲಿಯಲ್ಲಿ ನಾಲಾಯಕ್ ಪ್ರಧಾನಿ ಇದ್ದಾರೆಂದು ತಿಳಿಸಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ಸಿಗರು ಸೋಲುವ ಭೀತಿಯಲ್ಲಿದ್ದು, ಅತ್ಯಂತ ಹತಾಶರಾಗಿದ್ದಾರೆ. ಅವರ ಹತಾಶೆಯನ್ನು ತಮ್ಮ ಮಾತಿನ ಮೂಲಕ ತೋರಿಸುತ್ತಿದ್ದಾರೆ. ಅದರ ಜೊತೆಗೆ ಇವತ್ತು ವರುಣದಲ್ಲಿ ಸಿದ್ದರಾಮಯ್ಯ ಸೋಲುವ ಭೀತಿಯಲ್ಲಿದ್ದಾರೆ. ಮೊನ್ನೆ ನಮ್ಮ ಕಾರ್ಯಕರ್ತ ನಾಗೇಶ್ ಅವರ ಮೇಲೆ ಕಾಂಗ್ರೆಸ್ಸಿನವರು ಹಲ್ಲೆ ಮಾಡಿದ್ದರು. ಇವತ್ತು ದಿಲೀಪ್‍ಕುಮಾರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಟೀಕಿಸಿದರು.
ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರಚಾರಕ್ಕೆ ಕಾಂಗ್ರೆಸ್ ಭಯ ಪಡುತ್ತಿದೆ. ಗಾಂಧಿನಗರದ ಇಬ್ಬರು ಕಾರ್ಯಕರ್ತರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರ ಮೇಲೆಯೂ ದಿನೇಶ್ ಗುಂಡೂರಾವ್ ಅವರ ಗೂಂಡಾ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಯಲ್ಲೂ ಬೆದರಿಕೆ ಹಾಕುತ್ತಿದ್ದಾರೆ. ಇದು ಕಾಂಗ್ರೆಸ್ಸಿನ ಸ್ಥಿತಿ ಎಂದರು.
ಸೋಲಿನ ಭೀತಿಯಿಂದ ಬಿಜೆಪಿ ಕಾರ್ಯಕರ್ತರನ್ನು ಗುರಿ ಮಾಡಿ ಹಲ್ಲೆ ಮಾಡುತ್ತಿದ್ದಾರೆ. ಇದೊಂದು ಷಡ್ಯಂತ್ರವಾಗಿದೆ. ಇಂಥ ಷಡ್ಯಂತ್ರಕ್ಕೆ ನಾವು ಬೆದರುವುದಿಲ್ಲ. ನಾವು ಕಾರ್ಯಕರ್ತರ ಜೊತೆಗಿದ್ದೇವೆ. ಪ್ರಚಾರ ಮಾಡಲು ನಾವು ಕಾರ್ಯಕರ್ತರ ಜೊತೆಗೆ ನಿಂತು ರಕ್ಷಣೆ ಕೊಡುತ್ತೇವೆ ಎಂದು ಶೋಭಾ ಕರಂದ್ಲಾಜೆ ಅವರು ಭರವಸೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw