ಅಂಬೇಡ್ಕರ್ ಪ್ರತಿಮೆಗೆ ಅಪಮಾನ: ಅಂಬೇಡ್ಕರ್ ಅಭಿಮಾನಿಗಳ ಆಕ್ರೋಶಕ್ಕೆ ನಡುಗಿದ ಕಲಬುರಗಿ!

ಕಲಬುರಗಿ: ಅಂಬೇಡ್ಕರ್ ಪ್ರತಿಮೆಗೆ ಕಿಡಿಗೇಡಿಗಳು ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ಆಕ್ರೋಶದ ಕಿಡಿ ಹತ್ತಿಕೊಂಡಿದ್ದು, ಅಂಬೇಡ್ಕರ್ ಅಭಿಮಾನಿಗಳು ಸಿಡಿದೆದ್ದಿದ್ದಾರೆ.
ಕಲಬುರಗಿ ಹೊಂದಿಕೊಂಡಿರುವ ಕೋಟ್ನೂರು ಗ್ರಾಮದ ಬಳಿ ಅಂಬೇಡ್ಕರ್ ಪ್ರತಿಮೆಗೆ ಕಿಡಿಗೇಡಿಗಳು ಅಪಮಾನ ಮಾಡಿದ್ದರು. ಇದರ ವಿರುದ್ಧ ಪ್ರತಿಭಟನೆ ಶಾಂತಿಯುತವಾಗಿ ಆರಂಭವಾಯಿತಾದರೂ, ಮಧ್ಯಾಹ್ನದ ವೇಳೆ ಪ್ರತಿಭಟನಾಕಾರರ ಆಕ್ರೋಶದ ಕಟ್ಟೆ ಒಡೆದಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.
ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಹುಮ್ನಾಬಾದ್ ಬೇಸ್ ಮತ್ತು ಸೂಪರ್ ಮಾರ್ಕೆಟ್ ಪ್ರದೇಶಗಳಲ್ಲಿ ಅಂಗಡಿಗಳು, ಹೋಟೆಲ್ಗಳು ಮತ್ತು ಇತರೆ ಅಂಗಡಿಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಮಮಂದಿರ ವೃತ್ತದ ಬಳಿ ಬೆಳಗ್ಗೆಯೇ ದಲಿತ ಮುಖಂಡರು ರಾಜ್ಯ ಹೆದ್ದಾರಿ ತಡೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಉಪ ಪೊಲೀಸ್ ಆಯುಕ್ತೆ ಕನಿಕಾ ಸುಕ್ರಿವಾಲ್ ಅವರು ಸ್ಥಳಕ್ಕೆ ಧಾವಿಸಿ, ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು, ಆದರೆ, ಈ ಪ್ರಯತ್ನ ವಿಫಲವಾಯಿತು.
ನಂತರ ಪ್ರತಿಭಟನಾಕಾರರು ಡಿಸಿಪಿಯವರೇ ಪ್ರತಿಮೆಯನ್ನು ಸ್ವಚ್ಛಗೊಳಿಸಿ ಮಾಲಾರ್ಪಣೆ ಮಾಡುವಂತೆ ಮಾಡಿದರು.
ಅಂಬೇಡ್ಕರ್ ಪ್ರತಿಮೆ ಸುತ್ತಲೂ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಸುಮಾರು ಅರ್ಧ ಕಿಲೋಮೀಟರ್ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಕೂಡ ಎದುರಾಗಿತ್ತು.
ಜಿಲ್ಲಾಧಿಕಾರಿಗಳು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿಕೊಂಡರು. ಆದರೆ, ಕಿಡಿಗೇಡಿಗಳ ಬಂಧನದ ನಂತರವೇ ಪ್ರತಿಭಟನೆ ಕೈಬಿಡುವುದಾಗಿ ಪಟ್ಟು ಹಿಡಿದರು.
ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಅಧಿಕಾರಿಗಳು ಮಧ್ಯಾಹ್ನದ ವೇಳೆಗೆ, ಹೆಚ್ಚಿನ ರಸ್ತೆಗಳ ಮೇಲೆ ನಿರ್ಬಂಧ ಹೇರಿದರು. ನಂತರ ಪ್ರತಿಭಟನಾಕಾರರು ಹೋಟೆಲ್ ಸೇರಿದಂತೆ ಇತರೆ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಲು ಆರಂಭಿಸಿದರು. ನಂತರ ಅಂಗಡಿಗಳನ್ನು ಬಂದ್ ಮಾಡುವಂತೆ ವ್ಯಾಪಾಸ್ಥರಿಗೆ ಆಗ್ರಹಿಸಿದರು.