ಅಂಬೇಡ್ಕರ್ ಗೆ ಮಾಡುವ ಅಪಮಾನ, ಸಂವಿಧಾನಕ್ಕೆ ನೀಡುವ ಗೌರವವೇ ?
- ದಮ್ಮಪ್ರಿಯ ಬೆಂಗಳೂರು
ಒಂದು ಕಾಲದಲ್ಲಿ ದಲಿತರನ್ನು ಊರಿನ ಹೊರಗಡೆ ಇಟ್ಟಿದ್ದೇವೆ. ಅವರೊಡನೆ ಯಾರು ಸೇರಬಾರದು ಎನ್ನುವ ಬೇಧಭಾವವಿತ್ತು. ಕಾಲಕ್ರಮೇಣ ಕೆಲವು ಜಾತಿಗಳು ದಲಿತ ಜಾತಿಯೊಳಗೆ ಸೇರ್ಪಡೆಗೊಂಡವು. ಇನ್ನು ಕೆಲವು ಜಾತಿಗಳು ನಮ್ಮನ್ನು SC ST ಜಾತಿಗಳ ಪಟ್ಟಿಗೆ ಸೇರಿಸಿ ಎಂದು ಸರಕಾರಗಳ ಮುಂದೆ ಮನವಿಯನ್ನು ಕೊಟ್ಟವು. ಮತ್ತೆ ಕೆಲವು ಜಾತಿಗಳು ನಮ್ಮನ್ನು SC ST ಪಟ್ಟಿಗೆ ಸೇರಿಸಿ ಎಂದು ಪ್ರತಿಭಟನೆಗೆ ಮುಂದಾದವು. ಇವೆಲ್ಲವೂ ಸಂವಿಧಾನದಲ್ಲಿನ ಜಾತಿಯ ಆಧಾರದ ಮೇರೆಗೆ ದೊರೆಯಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ನಡೆದ ಘಟನೆಗಳು ಎನ್ನುವುದು ಬಹಳ ಸ್ಪಷ್ಟವಾಗಿ ಅರ್ಥವಾಗುತ್ತದೆ. ಇನ್ನು ಕೆಲವು ಜಾತಿಯ ಜನರು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಿ ಸರ್ಕಾರದ ಸವಲತ್ತುಗಳನ್ನು ಪಡೆದು ಅದನ್ನು ಅನುಭವಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದೆನೋ !!.
ಹೇಗಿದೆ ಈ ದೇಶದ ಸಂವಿಧಾನದ ಜಾತಿ ಆಧಾರಿತ ಸಮಾನತೆಯ ಸವಲತ್ತಿನ ತಾಕತ್ತು ಎನ್ನುವುದನ್ನು ಎಲ್ಲರು ಅರಿಯಬೇಕಿದೆ. ಒಂದು ಕಾಲದಲ್ಲಿ ದಲಿತರನ್ನು ಮುಟ್ಟಿಸಿಕೊಳ್ಳಲು, ದೇವಾಲಯದ ಒಳಗಡೆ ಪ್ರವೇಶ ಮಾಡಲು ನಿರಾಕರಿಸಿದವರು, ಇಂದು ಅದೇ ಜಾತಿಗೆ ಸಂವಿಧಾನಿಕವಾಗಿ ಸೇರ್ಪಡೆಯಾಗಲು ಮುಂದಾಗಿದ್ದಾರೆ. ಇದು ನಿಜವಾಗಿಯೂ ಸಂವಿಧಾನಕ್ಕೆ ಇರುವ ಸಮಾನತೆಯ ಶಕ್ತಿ ಎನ್ನಬಹುದು.
ಇನ್ನು ದೇವಾಲಯದ ಒಳಗೆ ದಲಿತರನ್ನು ಬಿಟ್ಟುಕೊಳ್ಳದ ಸಂದರ್ಭದಲ್ಲಿ, ಸಮಾನತೆಯನ್ನು ಸಮಾಜದಲ್ಲಿ ಕಾಣದ ಸಂದರ್ಭದಲ್ಲಿ, ಎಲ್ಲರು ಸಮಾನರು ಎಂದು ಭಾವಿಸಿ ಎಲ್ಲರಿಗೂ ಸ್ವರ್ಗ ಪ್ರಾಪ್ತಿ ಸಿಗದ ಸಂದರ್ಭದಲ್ಲಿ, ಸಹಪಂಕ್ತಿ ಭೋಜನವನ್ನು ಒಪ್ಪಿಕೊಳ್ಳದ ಸಮಾಜದಲ್ಲಿ, ಲಿಂಗ ತಾರತಮ್ಯವನ್ನು ತೊಳೆದು ಎಲ್ಲರಿಗೂ ಸಮಾಜದಲ್ಲಿ, ಸಮಾನತೆಯ ಶಿಕ್ಷಣ, ಸಮಾನ ಉದ್ಯೋಗ, ವಾಕ್ ಸ್ವಾತಂತ್ರ್ಯದ ಸಮಾನತೆಯನ್ನು ನೀಡಿದ್ದು ಬಾಬಾಸಾಹೇಬರು ನೀಡಿದ ಸಂವಿಧಾನವೇ ಹೊರತು ಯಾವ ದೇವರುಗಳು ಅಲ್ಲ ಎನ್ನುವುದನ್ನು ಮಾನ್ಯ ಗೃಹ ಮಂತ್ರಿಗಳು ಅರಿಯಬೇಕಿದೆ. ಒಂದು ಕಾಲದಲ್ಲಿ ಇಡೀ ಪ್ರಜಾ ಪ್ರಭುತ್ವ ವ್ಯವಸ್ಥೆಯೊಳಗೆ ಅಪರಾಧಿ ಸ್ಥಾನದಲ್ಲಿ ನಿಂತಿದ್ದವರನ್ನು ಈ ದೇಶದ ಗೃಹ ಮಂತ್ರಿಯಾಗಿ ಮಾಡಿದ್ದು, ಇದೇ ಬಾಬಾಸಾಹೇಬರು ಬರೆದ ಸಂವಿಧಾನವೇ ಹೊರತು, ಯಾವ ದೇವರುಗಳು ಅಲ್ಲ ಎನ್ನುವುದನ್ನು ಅರಿಯಬೇಕಿದೆ.
ಈ ಸಮಾಜದಲ್ಲಿ ಯಾವ ದೇವರುಗಳಿಂದ ಸಮಾನತೆ ಸಿಕ್ಕಿಲ್ಲ, ಯಾವ ದೇವರಿಂದ ಶಿಕ್ಷಣ ವ್ಯವಸ್ಥೆ ರೂಪುಗೊಂಡಿಲ್ಲ, ಯಾವ ದೇವರು ಮಹಿಳೆಯರಿಗೆ ಸಮಾನತೆಯನ್ನು ನೀಡಲಿಲ್ಲ, ಯಾವ ದೇವರು ಉದ್ಯೋಗದಲ್ಲಿ ಸಮಾನತೆಯನ್ನು ನೀಡಲಿಲ್ಲ, ಯಾವ ದೇವರು ರಾಜಕೀಯದಲ್ಲಿ ಸಮಾನತೆಯನ್ನು ಕೊಡಲಿಲ್ಲ, ಧಾರ್ಮಿಕವಾಗಿ ಸಮಾನತೆಯನ್ನು ನೀಡಲಿಲ್ಲ, ಹಾಗೇನಾದರೂ ಈ ಎಲ್ಲಾ ಸವಲತ್ತುಗಳು ಎಲ್ಲಾ ಜನರಿಗೂ ಸಿಕ್ಕಿವೆ ಎನ್ನುವುದಾದರೆ ಅದು ಬಾಬಾಸಾಹೇಬರು ನೀಡಿದ ಸಂವಿಧಾನದಿಂದ ಮಾತ್ರ ಎನ್ನುವುದನ್ನು ಎಲ್ಲರು ಅರಿಯಬೇಕಿದೆ. ಇಂದು ಧರ್ಮಾಧಿಕಾರಿಗಳು, ಮಠಾಧೀಶರು, ಖಾಸಗಿ ಕಂಪನಿಗಳ ಮಹಿಳೆಯರು ರಾಜಕೀಯ ರಂಗದಲ್ಲಿ ರಾಜ್ಯಸಭಾ, ಲೋಕಸಭಾ, ವಿಧಾನಸಭಾ, ವಿಧಾನಪರಿಷತ್ ಸದಸ್ಯರು ಆಗಿದ್ದಾರೆ ಎಂದರೆ, ಅವರು ಪೂಜಿಸುತ್ತಿರುವ ದೇವರುಗಳ ಪ್ರಸಾದ ಅಥವಾ ವರದಿಂದ ಅವರು ಆಯ್ಕೆಯಾಗಿಲ್ಲ, ಬಾಬಾಸಾಹೇಬರು ಕೊಟ್ಟ ಸಂವಿಧಾನದ ಆಧಾರದ ಮೇಲೆ ಅವರು ಅಲ್ಲಿಗೆ ಆಯ್ಕೆ ಆಗಿರುವುದು ಎನ್ನುವುದನ್ನು ಅರಿತು, ಇವರೆಲ್ಲರೂ ನಿತ್ಯ ಬಾಬಾಸಾಹೇಬರನ್ನು ಪೂಜಿಸಿ ನೆನೆಯಬೇಕಿದೆ.
ಇವರು ಸತ್ತಾಗ ಶವಕ್ಕೆ ಪೂಜೆ ಪುನಸ್ಕಾರಗಳು ಸಾಮಾಜಿಕವಾಗಿ ನಡೆಯಬಹುದು , ಇವರ ಅಂತ್ಯ ಸಂಸ್ಕಾರಗಳು ಸರ್ಕಾರಿ ಸಕಲ ಗೌರವಗಳೊಂದಿಗೆ ನಡೆಯಬೇಕು ಎನ್ನುವುದನ್ನು ನೀಡುದ್ದು ಭಾರತದ ಸಂವಿಧಾನ ಎನ್ನುವ ಕನಿಷ್ಠ ಪರಿಜ್ಞಾನವು ಮಾನ್ಯ ಗೃಹಮಂತಿಗಳಿಗೆ ಇಲ್ಲವಾಯಿತೇ ?ಅಂದರೆ ಸಾಮಾನ್ಯ ಮಾತಿನಂತೆ ಬಾಯಲ್ಲಿ ರಾಮನಾಮ ಬಗಲಲ್ಲಿ ಚೂರಿ ಎನ್ನುವ ಆಗಿದೆ ಬಾಬಾಸಾಹೇಬರ ಕುರಿತಾದ ಗೃಹಸಚಿವರ ಮಾತಿನ ನಡೆ ಎನ್ನುವುದಾಗಿದೆ.
ಮತ್ತೊಂದು ವಿಚಾರವನ್ನು ಮಾನ್ಯ ಗೃಹ ಮಂತ್ರಿಗಳಿಗೆ ಕೇಳಬಯಸುತ್ತೇವೆ, ಬಾಬಾಸಾಹೇಬರನ್ನು ನೀವು ಗೌರವಿಸದಿದ್ದ ಮೇಲೆ ಅವರು ಬರೆದ ಸಂವಿಧಾನವನ್ನು ಹೇಗೆ ಗೌರವಿಸಲು ಸಾಧ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೇಗೆ ಗೌರವಿಸಲು ಸಾಧ್ಯ? ಪ್ರಜೆಗಳ ಮುಂದೆ ತಾವುಗಳು ತಮ್ಮ ಪಕ್ಷದ ನಾಯಕರು ಹೇಗೆ ತಮ್ಮ ಹೇಳಿಕೆಗಳನ್ನು ಜನರ ಪರವಾಗಿ ನೀಡಲು ಸಾಧ್ಯ, ಮಾನ್ಯ ಗೃಹಮಂತ್ರಿಗಳೇ ನೀವು ನಿಜವಾಗಿಯೂ ಜನ ನಾಯಕರೋ ಅಥವಾ ದೇವಸ್ಥಾನದಲ್ಲಿ ಕುಳಿತ ಪೂಜಾರಿಯೋ ಒಮ್ಮೆ ಜನಸಾಮಾನ್ಯರು ಆಲೋಚಿಸಬೇಕಿದೆ.
ಅಂಬೇಡ್ಕರ್ ಅನ್ನುವ ಹೆಸರು ಫ್ಯಾಷನ್ ಆಗಿಬಿಟ್ಟಿದೆ ಎನ್ನುವ ನಿಮಗೆ ಮಾನ್ಯ ಪ್ರಧಾನಿಯವರು ಅಧಿಕಾರ ಹಿಡಿದಾಗ ಸಂವಿಧಾನಕ್ಕೆ ತಲೆ ಬಾಗಿ ಶರಣಾಗಿದ್ದು ಫ್ಯಾಷನ್ ಅನಿಸಲಿಲ್ಲವೇ ? ದಲಿತರ ಓಟಿಗಾಗಿ ಅವರ ಪರವಾಗಿ ಪ್ರಚಾರ ಮಾಡಿದ್ದು ನಿಮಗೆ ಫ್ಯಾಷನ್ ಅನಿಸಲಿಲ್ಲವೇ ? ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ ದಲಿತರನ್ನು ದೇವಾಲಯದ ಒಳಗಡೆ ಬಿಡುತ್ತಿಲ್ಲ, ಆಗ ದಲಿತರು ದೇವರ ಹೆಸರೇಳಿದರೆ ಸ್ವರ್ಗಕ್ಕೆ ಹೋಗಲು ಸಾಧ್ಯವೇ ? ಮಾನ್ಯ ಪ್ರಧಾನಿ ಹೈದರಾಬಾದಿಗೆ ಬಂದಾಗ ದಲಿತ ಸಮಾವೇಶದಲ್ಲಿ ಭಾಗವಹಿಸಿ ಬಾಬಾಸಾಹೇಬರ ಭಾವಚಿತ್ರಕ್ಕೆ ನಮನ ಸಿಲ್ಲಿಸಿದ್ದು ಫ್ಯಾಷನ್ ಅನಿಸಲಿಲ್ಲವೇ? ಸಂವಿಧಾನ ಅಪಾಯದಲ್ಲಿದೆ ಅದರ ರಕ್ಷಣೆ ಆಗಬೇಕು ಎಂದು ಪ್ರತಿಪಕ್ಷಗಳು ಬಾಬಾಸಾಹೇಬರ ಭಾವಚಿತ್ರ ಹಿಡಿದು ನ್ಯಾಯ ಸಮ್ಮತವಾಗಿ ಮಾತನಾಡಿದರೆ ಮಾತ್ರ ಫ್ಯಾಷನ್ ಅನಿಸುತ್ತಿದೆ ಎನ್ನುವುದು ನಿಮ್ಮ ಮಾತು. ಹೌದು ಬಾಬಾಸಾಹೇಬರ ಮೊಮ್ಮಕ್ಕಳಿಗೆ ಬಾಬಾಸಾಹೇಬರ ಹೆಸರು ಹೇಳುವುದೇ ಒಂದು ಫ್ಯಾಷನ್ ! ಏನಿವಾಗ ? ನಿಮಗಾಗುವ ನೋವು ಏನು? ಯಾವ ದೇವರುಗಳು ಶೋಷಿತರಿಗೆ ವಿದ್ಯೆಯನ್ನು, ಅಧಿಕಾರವನ್ನು, ಸಮಾನತೆಯನ್ನು, ಆರ್ಥಿಕವಾಗಿ ಬೆಳವಣಿಗೆಯನ್ನು, ರಾಜಕೀಯ ಹಕ್ಕನ್ನು, ಮಹಿಳೆಗೆ ಸಮಾನತೆಯನ್ನು, ಉದ್ಯೋಗ ವ್ಯವಸ್ಥೆಯನ್ನು ನೀಡಿದ್ದವು? ಒಮ್ಮೆ ಹೇಳಬಹುದೇ ? ನಮಗೆ ಕಾಣದ ದೇವರ ಹೆಸರನ್ನು ಹೇಳುವ ಹುಚ್ಚು ಫ್ಯಾಷನ್ ಬೇಡ ! ನಿಜವಾಗಿಯೂ ಅಂಬೇಡ್ಕರ್ ರವರ ಹೆಸರನ್ನು ಹೇಳುವುದೇ ನಮಗೊಂದು ಫ್ಯಾಷನ್.
ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಗುಡಿ ಗೋಪುರಗಳ ಹೆಸರಿನಲ್ಲಿ, ಗೋಮಾತೆಯ ಹೆಸರಿನಲ್ಲಿ ಧರ್ಮದ ಕಲಹ ಸೃಷ್ಠಿಸಿ, ದೇವಾಲಯ ಪ್ರವೇಶದ ನೆಪದಲ್ಲಿ ಜಾತಿಯ ಕಲಹ ಸೃಷ್ಟಿಸಿ, ಲಿಂಗ ತಾರತಮ್ಯ ಶಾಶ್ವತವಾಗಿ ಕಾಪಾಡಿಕೊಳ್ಳಲು ಸಂಸ್ಕೃತಿಯ ನೆಪದಲ್ಲಿ ಇಡೀ ಸಮಾಜ ವ್ಯವಸ್ಥೆಯನ್ನು ರೋಗಗ್ರಸ್ತ ಸಮಾಜವನ್ನಾಗಿ ರೂಪಿಸುವ ಹುನ್ನಾರಗಳನ್ನು ಹೆಣೆಯುವುದು ನಿಮಗೆ ಫ್ಯಾಷನ್ ಆಗಿಬಿಟ್ಟಿದೆ. ಇದು ನಿಮ್ಮ ಭ್ರಷ್ಟಾಚಾರದ, ಕೋಮುವಾದದ ಫ್ಯಾಷನ್ ಮನಸ್ಥಿತಿಯಲ್ಲವೇ ? ಕಳೆದ 75 ವರ್ಷಗಳ ಕಾಲ ದೇಶದ ಸಾಲ ಕೇವಲ 56 ಸಾವಿರ ಕೋಟಿ, ಆದರೆ ಇಂದು 165 ಸಾವಿರ ಕೋಟಿಗೂ ಹೆಚ್ಚಾಗಿದೆ. ನಿರುದ್ಯೋಗ ಸೃಷ್ಠಿಯಾಗಿದೆ. ರೈತರ ಆತ್ಮಹತ್ಯೆಯಾಗುತ್ತಿವೆ. ರೈತರ ಮೇಲೆ ದಾಳಿ ಮಾಡಿಸಲಾಗುತ್ತಿದೆ. ಭಾರತದ ರೂಪಾಯಿ ಮೌಲ್ಯ ಬೇರೆ ದೇಶದ ಕರೆನ್ಸಿ ಮುಂದೆ ಕುಸಿದಿದೆ, ಇವೆಲ್ಲವೂ ನಿಮ್ಮ ರಾಜಕೀಯ ಅವಧಿಯಲ್ಲಿ ಫ್ಯಾಷನ್ ಗಾಗಿ ನಡೆದ ಬದಲಾವಣೆಗಳೇ ? ಮಾನ್ಯ ಪ್ರಧಾನಿಯವರು ಬಳಸುವ ಅಣಬೆ ಊಟ, ಧರಿಸುವ ಕೋಟು, ಬರೆಯುವ ಪೆನ್ನು, ತಿರುಗಾಡುವ ದುಬಾರಿ ಬೆಲೆಯ ಕಾರು, ಎಲಿಕ್ಯಾಪ್ಟರ್ ಇವೆಲ್ಲವು ದೇಶಕ್ಕೆ ಯಾವುದೇ ಲಾಭ ನೀಡದಿದ್ದರೂ ಅವುಗಳನ್ನು ಬಳಸುವುದು ನಿಜವಾಗಿಯೂ ನಿಮಗೆ ಫ್ಯಾಷನ್ ಅನಿಸಲಿಲ್ಲವೇ,?
ಬಾಬಾಸಾಹೇಬರ ಹೆಸರು ಹೇಳಿದರೆ ಫ್ಯಾಷನ್ ! ಆಗಾದರೆ ನೀವು ಬಳಸುವ ರಾಷ್ಟ್ರನಾಯಕರು ಎನಿಸಿಕೊಂಡವರ ಹೆಸರುಗಳು ಫ್ಯಾಷನ್ ಗಾಗಿಯೇ ಹೊರತು, ಅವರುಗಳು ನಿಜವಾದ ದೇಶಭಕ್ತರೇ ಅಲ್ಲ ಎಂದು ತಿಳಿಯಬಹುದೇ ? ದೇಶದಲ್ಲಿ ಕೋಮುಗಲಭೆ ಸೃಷ್ಠಿ ಮಾಡುವುದು, ಕೇಸರಿ ಜಂಡ ಹಾರಾಡಿಸುವುದು ನಿಮ್ಮ ಫ್ಯಾಷನ್ ಅಲ್ಲವೇ ? ಇವುಗಳ ಬಗ್ಗೆ ನಿಮಗೆ ಕಿಂಚಿತ್ತಾದರೂ ಪರಿಜ್ಞಾನ ಇದೆಯೇ ? ಅಂಬೇಡ್ಕರ್ ಹೆಸರೇಳುವುದು ಅವರ ಅನುಯಾಯಿಗಳಿಗೆ ಫ್ಯಾಷನ್ ಆಗಿದೆ, ಯಾಕೆಂದರೆ ದೈಹಿಕ ಮತ್ತು ಮಾನಸಿಕ ಗಿಲಾಮಗಿರಿತನದಿಂದ ಬಿಡುಗಡೆಗೊಳಿಸಿ, ವೈಜ್ಞಾನಿಕ ಹಾದಿಯಲ್ಲಿ ನಡೆಯಲು ಬಿಡುಗಡೆ ತೋರಿದ ಮಹಾನ್ ಜ್ಞಾನಿಯ, ಅರ್ಥ ತಜ್ಞರ ಹೆಸರೇಳುವುದು ಒಂದು ಫ್ಯಾಷನ್ ! ಅದರಿಂದ ನಿಮಗೇನು ನೋವಾಗುತ್ತದೆ ? ನಿಮ್ಮ ದೇಹದ ಯಾವ ಭಾಗದಲ್ಲಿ ಉರಿಯಲು ಪ್ರಾರಂಭವಾಗುತ್ತದೆ.
ಬಾಬಾಸಾಹೇಬರ ಅನುಯಾಯಿಗಳಿಗೆ, ಅವರ ಹಿಂಬಾಲಕರಿಗೆ ಅವರೇ ಬದುಕು, ಬರಹ, ಉಸಿರು. ನಮಗೆ ಎಲ್ಲವೂ ಅವರೇ !! ಯಾವ ದೇವರು, ಶಾಸ್ತ್ರ, ಪುರಾಣ, ಮನುಧರ್ಮಶಾಸ್ತ್ರ ನೀಡದ ಬಿಡುಗಡೆಯನ್ನು ಬಾಬಾಸಾಹೇಬರು ಮತ್ತು ಅವರು ನೀಡಿದ ಸಂವಿಧಾನ ಕೊಟ್ಟಿದೆ. ಜಗತ್ತೇ ಹೇಳುವಂತೆ, ಶ್ರೇಷ್ಠ ಸಮಾನತೆಯ ಸಂತ, ಮಾನವೀಯತೆಯ ಮೌಲ್ಯಗಳ ಹರಿಕಾರ, ಮಹಿಳಾ ವಿಮೋಚಕ, ಪ್ರಜೆಗಳ ಪ್ರಭುತ್ವವನ್ನು ಎತ್ತಿಹಿಡಿಯುವ ಸಂವಿಧಾನವನ್ನು ನೀಡಿದ್ದಾರೆ. ನಾವುಗಳು ದಿನನಿತ್ಯ ಅವರ ಹೆಸರನ್ನು ಹೇಳುವುದೇ ನಮ್ಮ ಫ್ಯಾಷನ್. ಇದಕ್ಕಾಗಿ ನಾವು ಯಾರಿಗೂ ಅಂಜಬೇಕಿಲ್ಲಾ !!
ಬಾಬಾಸಾಹೇಬರ ಹೆಸರನ್ನು ಫ್ಯಾಷನ್ ಗಾಗಿ ಬಳಸುವವರು ಕೇವಲ ಅಧಿಕಾರದ ಚುಕ್ಕಾಣಿ ಹಿಡಿಯಲು, ಅಧಿಕಾರದ ದಾಹ ಇರುವವರು ಮಾತ್ರ. ಆ ಕಾಲಕ್ಕೆ ಬಾಬಾಸಾಹೇಬರಿಗೆ ತದ್ವಿರುದ್ಧವಾಗಿ ಇದ್ದದ್ದು ಕಾಂಗ್ರೇಸ್ ಪಕ್ಷ ಮಾತ್ರ, ಅದಕ್ಕಾಗಿ ಅವರು ಅದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆಯೇ ಹೊರತು ಬೇರೆ ಏನು ಅಲ್ಲ. ಒಂದು ವೇಳೆ ಅದೇ ಕಾಲದಲ್ಲಿ ಆ ಪಕ್ಷದ ಜಾಗದಲ್ಲಿ ಬಿಜೆಪಿ ಪಕ್ಷ ಇದಿದ್ದಿದ್ದರೆ, ಉರಿಯುತ್ತಿರುವ ಮನೆ ಎನ್ನುವ ಬದಲು ” ಗಾಳಿಯಲ್ಲಿಯೂ ವಿಷ ಉಣಿಸುವ, ದಲಿತರ, ಮಹಿಳೆಯರ, ಶೋಷಿತರ ಪಾಲಿನ ಶವಾಗಾರ” ಎಂದು ಹೇಳುತ್ತಿದ್ದರೇನೋ !!
ಬಾಬಾಸಾಹೇಬರ ಸಿದ್ಧಾಂತವನ್ನು ಓದಿ ಅರಿತವರಿಗಿಂತ ಅವರ ಹೆಸರನ್ನು ಬಂಡವಾಳ ಮಾಡಿಕೊಂಡು ತಮ್ಮ ಬೇಳೆಕಾಳು ಬೇಯಿಸಿಕೊಂಡವರೇ ಈ ದೇಶದಲ್ಲಿ ಹೆಚ್ಚು ಜನರಿದ್ದಾರೆ. ಎಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಹೆಸರೇಳಿದರೆ ಇವನು ಆ ಜಾತಿಗೆ ಸೇರಿರಬಹುದೇನೋ ಅಂದುಕೊಳ್ಳುತ್ತಾರೆ ಎಂದು ಹೆಸರೇಳಲು ಭಯಪಡುತ್ತಿದ್ದವರು, ಇಂದು ಅಂಬೇಡ್ಕರ್ ರವರ ಹೆಸರನ್ನೇ ಬಂಡವಾಳ ಮಾಡಿಕೊಂಡುಬಿಟ್ಟಿದ್ದಾರೆ. ಅವರಿಗೆ ಅದು ಫ್ಯಾಷನ್ ಆಗಿದೆಯೇ ಹೊರತು ಬಾಬಾಸಾಹೇಬರ ನಿಜವಾದ ಹಿಂಬಾಲಕರಿಗೆ ಹೃದಯಪೂರ್ವಕವಾಗಿ ಬಾಬಾಸಾಹೇಬ್ ಹೆಸರೇಳುವುದೇ ಒಂದು ಫ್ಯಾಷನ್. ಇದನ್ನು ಯಾವ ಅರೆಜ್ಞಾನಿಯು ಅಲ್ಲಗಳೆಯುವಂತಿಲ್ಲ.
ಈ ದೇಶದಲ್ಲಿ ಬಾಬಾಸಾಹೇಬರ ಹೆಸರನ್ನು ಮೂಲೆ ಗುಂಪು ಮಾಡಿ, ಬೇರೆ ಯಾರನ್ನೋ ಬೆಳಕಿಗೆ ತರಲು ಹೊರಟವರಿಗೆ, ನಿಜವಾಗಿಯೂ ಮುಖಭಂಗ ಆಗಿದ್ದು, ಡಾ. ಅಂಬೇಡ್ಕರ್ ರವರ ಜ್ಞಾನಕ್ಕೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕ ಮನ್ನಣೆಯಾಗಿತ್ತು. ಇಂತಹ ಮಹಾನ್ ವ್ಯಕ್ತಿಯ ಹೆಸರನ್ನು ಈಗಲೂ ಬಳಸದಿದ್ದರೆ ನಮ್ಮ ಸರ್ಕಾರಕ್ಕೆ, ಪಕ್ಷಕ್ಕೆ ನಿಜವಾಗಿಯೂ ನಾಚಿಕೆಯಾಗುತ್ತದೆ ಎನ್ನುವ ಅರಿವು ಇಂದಿನ ರಾಜಕಾರಣಿಗಳಲ್ಲಿ ಮೂಡಿತು. ಅಧಿಕಾರದ ದಾಹಕ್ಕಾಗಿ ಆತೋರೆಯುವ ಯಾವುದೇ ಪಕ್ಷಕ್ಕೂ ಇಂದು ಬಾಬಾಸಾಹೇಬರು ನಿಜವಾಗಿಯೂ ಒಂದು ಫ್ಯಾಷನ್ ಆಗಿಯೇ ಉಳಿದುಬಿಡುತ್ತಿದ್ದಾರೆ.
ಅವರ ಆಶಯಗಳು, ಆಲೋಚನೆಗಳು ನಿಜವಾಗಿಯೂ ಇಡೇರಿಸುವುದರಲ್ಲಿ ಎಲ್ಲಾ ರಾಜಕೀಯ ನಾಯಕರು ಸೋತಿದ್ದಾರೆ. ನಿಜವಾಗಿಯೂ ಎಲ್ಲರು ಅಂಬೇಡ್ಕರ್ ರವರನ್ನು ಅರಿತ್ತಿದ್ದರೆ. ಅಂಬೇಡ್ಕರ್ ಹೆಸರೇಳುವ ಬದಲು ದೇವರ ಹೆಸರೇಳಿದರೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎನ್ನುವ ಮಾತುಗಳು ಬರುತ್ತಿರಲಿಲ್ಲ. ಅವರ ವ್ಯಕ್ತಿತ್ವವನ್ನು ಅವಮಾನಿಸುವ ಮಟ್ಟಕ್ಕೆ ಒಬ್ಬ ಗೃಹ ಮಂತ್ರಿ ಬಂದಿಳಿಯುತ್ತಿರಲಿಲ್ಲ.
ಪುರಾಣವೆಂಬುದೊಂದು ಪುಂಡರ ಗೋಷ್ಠಿ, ಕೈಲಾಸವೆಂಬುದೊಂದು ಹಾಳು ಬೆಟ್ಟ, ಅಲ್ಲಿರುವ ಶಿವನು ದಟ್ಟ, ಅಲ್ಲಿರುವ ಗಣಂಗಳು ಮೈಗಳ್ಳರು, ಬೇಡೆನಗೆ ಕೈಲಾಸ, ಮಾಡುವುದು ಕಾಯಕ, ಕಾಯಕ ದೀಕ್ಷೆಯನು ನೀಡು, ನಾಡ ಹಂದರಕ್ಕೆ ಹಬ್ಬಿಸುವೆ ಕಾಯಕವೇ ಕೈಲಾಸ ಎಂದ ಬಸವಣ್ಣ ದೇವರ ಕುರಿತಾದ ಮಾತುಗಳು ನಮಗೆ ಅರ್ಥವಾಗಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: