ಬಿಗ್ ಬಾಸ್ ಕಾರ್ಯಕ್ರಮದ ಪ್ರಚಾರಕ್ಕಾಗಿ ಉದ್ದೇಶಪೂರ್ವಕ ಜಾತಿ ನಿಂದನೆ: ಸಿಹಿಕಹಿ ಚಂದ್ರು, ಚೈತ್ರಾ ಕೊಟ್ಟೂರು ಇದೀಗ ತನಿಷಾ ಕುಪ್ಪಂಡ
ಬೆಂಗಳೂರು: ಬಿಗ್ ಬಾಸ್ ಕಾರ್ಯಕ್ರಮ ಮತ್ತೆ ಜಾತಿನಿಂದನೆಗೆ ಸುದ್ದಿಯಾಗಿದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಜಾತಿ ನಿಂದನೆ ವಿಚಾರವಾಗಿ ಹಾಲಿ ಸ್ಪರ್ಧಿ ತನಿಷಾ ವಿರುದ್ಧ ದೂರು ದಾಖಲಾಗಿದೆ.
ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದಲ್ಲಿ ಬೋವಿ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪದಡಿ ನಟಿ ತನಿಷಾ ಕುಪ್ಪಂಡ ವಿರುದ್ಧ ದೂರು ದಾಖಲಾಗಿದೆ. 8/11/2023ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ಡ್ರೋಣ್ ಪ್ರತಾಪ್ ವಿರುದ್ಧ ನಡೆಸಿದ ಸಂಭಾಷಣೆಯಲ್ಲಿ’ ನೀನು ವಡ್ಡನ ತರ ಆಡುತ್ತಿದ್ದೀಯಾ’ ಎಂಬ ಪದ ಬಳಕೆ ಮಾಡಲಾಗಿದೆ ಎಂದು ವಿರೋಧಿಸಿ ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ. ಪದ್ಮಾ ಇವರು ತನಿಷಾ ವಿರುದ್ಧ ಕುಂಬಳ ಗೋಡು ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಜಾತಿನಿಂದನೆ ಇದು ಮೊದಲಲ್ಲ:
ಬಿಗ್ ಬಾಸ್ ಶೋನಲ್ಲಿ ಇತ್ತೀಚೆಗಿನ ಕೆಲವು ಸೀಸನ್ ಗಳಲ್ಲಿ ನಿರಂತರವಾಗಿ ಜಾತಿ ನಿಂದನೆ ಪ್ರಕರಣಗಳು ನಡೆಯುತ್ತಿವೆ. ಆದ್ರೆ, ಈ ಬಗ್ಗೆ ಪೊಲೀಸರು ಸರಿಯಾದ ಕ್ರಮಕೈಗೊಳ್ಳುವಲ್ಲಿ ಎಡವಿದ್ದಾರೆ. ಹೀಗಾಗಿ ನಿರಂತರವಾಗಿ ಜಾತಿ ನಿಂದನೆ ಪ್ರಕರಣಗಳು ಮುಂದುವರಿಯುತ್ತಿವೆ.
ಬಿಗ್ ಬಾಸ್ ನ ಸ್ಪರ್ಧಿಗಳಾಗಿದ್ದ ಸಿಹಿಕಹಿ ಚಂದ್ರು, ಚೈತ್ರಾ ಕೊಟ್ಟೂರು ಇದೀಗ ತನಿಷಾ ಕುಪ್ಪಂಡ ಜಾತಿ ನಿಂದನೆ ಮಾಡಿದ್ದಾರೆ. ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ಉದ್ದೇಶ ಪೂರ್ವಕವಾಗಿ ಜಾತಿ ನಿಂದನೆ ಮಾಡಲಾಗುತ್ತಿದೆ ಎನ್ನುವ ಅನುಮಾನಗಳು ಕೇಳಿ ಬಂದಿವೆ. ಪ್ರತಿ ಬಾರಿಯೂ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಜಾತಿ ನಿಂದನೆ ಒಂದು ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿರುವುದು ಸೂಕ್ಷ್ಮ ವಿಚಾರವಾಗಿದೆ. ಮೇಲ್ವರ್ಗದ ವೀಕ್ಷಕರನ್ನು ಮೆಚ್ಚಿಸಲು ಬಿಗ್ ಬಾಸ್ ಕಾರ್ಯಕ್ರಮ ಆಯೋಜಕರು ಸ್ಪರ್ಧಿಗಳಿಂದ ಉದ್ದೇಶಪೂರ್ವಕವಾಗಿ ಜಾತಿ ನಿಂದನೆ ಮಾಡಿಸುತ್ತಿದ್ದಾರೆಯೇ? ಎನ್ನುವುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.