ಕ್ಯಾಶ್ ಲೆಸ್ ದುನಿಯಾದಲ್ಲಿ ಸೈಬರ್ ವಂಚಕರದೇ ದರ್ಬಾರ್ ?

- ದಮ್ಮಪ್ರಿಯ, ಬೆಂಗಳೂರು
2014 ರಲ್ಲಿ ಭಾರತೀಯ ಜಾಲತಾಣಗಳ (2ಜಿ) ಬಳಕೆ ಬಹಳ ಮಂದಗತಿಯಲ್ಲಿತ್ತು. ನಂತರ 2 ಜಿ ಯಲ್ಲಿದ್ದ ಮೊಬೈಲ್ ಬಳಕೆಯು 4 ಜಿಗೆ ಜಿಗಿಯಿತು. ಭಾರತ ಮುಂದುವರೆಯುತ್ತಿದೆ, ಎಲ್ಲರೂ ಬಹಳಷ್ಟು ಅಪ್ಡೇಟ್ ಆಗಬೇಕಿದೆ ಎಂದು ಮಾತನಾಡತೊಡಗಿದರು. ಮೊದಲು ವಾಟ್ಸಾಪ್, ಫೇಸ್ಬುಕ್, ಬಳಕೆಗೆ ಸೀಮಿತವಾಗಿದ್ದ ಜನರು ಟ್ವಿಟ್ಟರ್, ಇನ್ಸ್ಟಾಗ್ರಾಮ್ ಬಳಕೆ ನೋಡಿ ಭಾರತ ದೇಶ ವಿಜ್ಞಾನದಲ್ಲಿ ಅತೀ ವೇಗವಾಗಿ ಬೆಳೆಯುತ್ತಿದೆ ಎಂದು ಮಾತನಾಡಿದವರೇ ಹೆಚ್ಚಾದರು. ಇನ್ನು ಕೆಲವರು ಬೇರೆ ದೇಶದೊಡನೆ ಬಹಳ ಪೈಪೋಟಿಯಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಮಾತನಾಡಲು ಪ್ರಾರಂಭಿಸಿದರು. ಅದಕ್ಕೆ ಸರಿಯಾಗಿ ಕರೋನ ಎನ್ನುವ ಮಹಾಮಾರಿಯು ಉಪಯೋಗಕ್ಕೆ ಬಂದಿತೇನೋ ಎನಿಸುವಂತಿತ್ತು. ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ, ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಬಂಧ ಮಾಯವಾಗಿ ಅಂತರ್ಜಾಲದ ಸಂಬಂಧ ಹೆಚ್ಚಾಯಿತು. ದೇಶ 2 ಜಿ ಯಿಂದ ದೇಶ 4 ಜಿ ಗೆ ಜಿಗಿಯಿತು. ಕೇವಲ 15 ರಿಂದ 20 ಪೈಸೆಯಲ್ಲಿ ತಯಾರಾದ ಜಿಯೋ ಸಿಮ್ ಕಾರ್ಡ್ ಎಲ್ಲರಿಗೂ ಪುಕ್ಕಟೆಯಾಗಿ ದೊರೆಯಿತು. ಪುಕ್ಕಟೆಯಾಗಿ ಸಿಕ್ಕ ಸಿಮ್ ಕಾರ್ಡ್ ತೆಗೆದುಕೊಂಡ ಗ್ರಾಹಕರು ಅದನ್ನು ಮೊಬೈಲ್ ಗೆ ಹಾಕಿಕೊಳ್ಳಬೇಕಾದರೆ ಸುಮಾರು 10 ರಿಂದ 12 ಸಾವಿರ ರೂಪಾಯಿಯ (2014ರಲ್ಲಿ) ಮೊಬೈಲ್ ತೆಗೆದುಕೊಳ್ಳಬೇಕಾಯಿತು. ಇದರಿಂದ ಜಿಯೋ ಕಂಪನಿಗೆ ಕೋಟ್ಯಾಂತರ ರೂಪಾಯಿ ಆದಾಯ ಹೆಚ್ಚಿತೇ ಹೊರತು,ಮೊಬೈಲ್ ಬಳಕೆದಾರರ ಜೇಬಿಗೆ ಕತ್ತರಿ ಬಿದ್ದಿತು. ಇದನ್ನೇ ದೊಡ್ಡ ಉದ್ದಿಮೆಯಾಗಿ ಮಾಡಿಕೊಂಡ ಕಂಪನಿ ಅದರ ಮೇಲಿನ ರಿಚಾರ್ಜ್ ಶುಲ್ಕವನ್ನು ಹೆಚ್ಚಿಸಿ ಗ್ರಾಹಕರಿಂದ ಹೆಚ್ಚು ಹಣವನ್ನು ರಿಚಾರ್ಜ್ ರೂಪದಲ್ಲಿ ವಸೂಲಿ ಮಾಡಲು ಪ್ರಾರಂಭಿಸಿತು. ಇದೇ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೂ ಆನ್ಲೈನ್ ಕ್ಲಾಸ್ ಪ್ರಾರಂಭವಾಯಿತು. ಕೊನೆಗೂ ಇಡೀ ದೇಶದ ಜನರು ಆನ್ಲೈನ್ ಗೆ ಗೀಳು ಬೀಳುವಂತಾಯಿತು. ಮೊದಲು ಮಕ್ಕಳಿಗೆ ಆನ್ಲೈನ್ ಗಾಗಿ ಮೊಬೈಲ್ ಕೊಡಿಸಿ ಎಂದು ಹೇಳುತ್ತಿದ್ದ ಜನರು, ಇಂದು ಮಕ್ಕಳಿಗೆ ಮೊಬೈಲ್ ಕೊಡಬೇಡಿ, ಎನ್ನುವಂತಾಗಿದೆ.
ಭಾರತದ ಸರ್ಕಾರ ಎಲ್ಲರು ತಮ್ಮ ಹಣಕಾಸು ವ್ಯವಹಾರವನ್ನು ಕ್ಯಾಶ್ ಲೆಸ್ ಮಾಡಿದರೆ ದೇಶದಲ್ಲಿರುವ ಅರಾಜಕತೆಯನ್ನು ತಡೆಯಬಹುದೆನ್ನುವ ಮನಸ್ಥಿತಿಯನ್ನು ಸೃಷ್ಟಿ ಮಾಡಿತು. ಕೊನೆಗೆ ಎಲ್ಲರೂ ಆನ್ಲೈನ್ ಬಳಕೆಯನ್ನು ಮಾಡಲೇಬೇಕೆನ್ನುವಂತಹ ಒತ್ತಾಯಪೂರ್ವಕ ಸಂದೇಶಗಳನ್ನು ಸಹ ಬಿತ್ತರಿಸಲಾಯಿತು. ಪ್ರತಿಯೊಬ್ಬರು ಆನ್ಲೈನ್ ಬಳಕೆಯಲ್ಲಿ ಮುಳುಗುವಂತಾಯಿತು. ಒಂದು ಕಾಲದಲ್ಲಿ ಆನ್ಲೈನ್ ಬಳಕೆ ಮಾಡಿ ಎಂದು ಹೇಳುತ್ತಿದ್ದವರು. ಇಂದು ಸೈಬರ್ ವಂಚನೆಗಳಿಂದ ಜಾಗೃತರಾಗಿರಿ, ಅಪರಿಚಿತ ವ್ಯಕ್ತಿಗಳ ಜೊತೆಯಲ್ಲಿ ಮಾತನಾಡಬೇಡಿ, ನಿಮ್ಮ ಸಂದೇಶಗಳನ್ನು ರವಾನಿಸಬೇಡಿ. ನಿಮ್ಮ ನಿಮ್ಮ ಮೊಬೈಲ್ ಗೆ ಬರುವ ಗೌಪ್ಯವಾದ ನಂಬರ್ ಗಳನ್ನು ಯಾರಿಗೂ ಶೇರ್ ಮಾಡಬೇಡಿ ಎಂದು ಪ್ರಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗಾದರೆ ಈ ಆನ್ಲೈನ್ ಬಳಕೆಗೆ ಮೂಲ ಕಾರಣವೇನು ? ಈಗ ನಡೆಯುತ್ತಿರುವ ಸೈಬರ್ ವಂಚನೆಗಳಿಗೆ ಯಾರು ಹೊಣೆಗಾರರು ? ಯಾರಿಗೆ ಇದರಿಂದೆ ಹೆಚ್ಚು ಲಾಭವಾಗುತ್ತಿದೆ ? ಯಾವ ಕಂಪನಿಗಳು ಈ ಸೈಬರ್ ವಂಚನೆಗಳ ಹಿಂದೆ ತಮ್ಮ ಕೈಚಳಕವನ್ನು ತೋರಿಸುತ್ತಿವೆ ? ಗ್ರಾಹಕರ ಖಾತೆಯಲ್ಲಿರುವ ಮೊತ್ತ ಸೈಬರ್ ವಂಚಕರಿಗೆ ಹೇಗೆ ಗೊತ್ತಾಗುತ್ತಿದೆ ? ಗ್ರಾಹಕರ ಮೊಬೈಲ್ ಬಳಕೆ ಆಗುತ್ತಿರುವುದು ಇವರ ಗಮನಕ್ಕೆ ತರುತ್ತಿರುವವರು ಯಾರು ? ಏನು ಇದರ ಹಿಂದಿರುವ ಹುನ್ನಾರಗಳು ಇಂತಹ ಹತ್ತು ಹಲವು ವಿಚಾರಗಳಿಂದ ಜನಸಾಮಾನ್ಯರು ಇಂದು ಬೇಸತ್ತಿದ್ದಾರೆ. ಸೈಬರ್ ವಂಚನೆಗಳನ್ನು ಅನುಭವಿಸಿದ ಸಾಮಾನ್ಯ ಜನರಿಂದ ಯಾವ ಮೊಕದ್ದಮೆಗಳನ್ನು ತೆಗೆದುಕೊಳ್ಳದೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಭಾಯಿಸುವ ಇಲಾಖೆಗೆ ಇದೊಂದು ದೊಡ್ಡ ತಲೆನೋವಾಗಿ ಪರಿಣಾಮಿಸಿದೆ. ದಿನ ನಿತ್ಯ ಸೈಬರ್ ವಂಚನೆಗಳಿಂದ ಅನ್ಯಾಯವಾದ ಸಾವಿರಾರು ಗ್ರಾಹಕರು ಎಚ್ಚೆತ್ತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಈ ಸೈಬರ್ ವಂಚನೆಗಳಿಗೆ ಯಾರನ್ನು ನಾವು ಹೊಣೆ ಮಾಡಬೇಕು, ಬ್ಯಾಂಕ್ ಖಾತೆಯಲ್ಲಿ ಇದ್ದಕ್ಕಿದ್ದ ಹಾಗೆ ಹಣ ಡೆಬಿಟ್ ಆಗುತ್ತಿರುವುದಕ್ಕೆ ಬ್ಯಾಂಕ್ ಹೊಣೆಗಾರರೇ ಅಥವಾ OTPಯನ್ನು ಮುಂಚೂಣಿಗೆ ತಂದಂತಹ ಖಾಸಗಿ ಕಂಪನಿಗಳೇ ಅಥವಾ ಸೈಬರ್ ಕಂಪನಿಗಳೇ ಅಥವಾ ಅವುಗಳಿಗೆ ಪರವಾನಗಿ ನೀಡಿದ ಸರ್ಕಾರಗಳೆ !! ಒಂದು ಅರ್ಥವಾಗದಾಗಿದೆ !! ಯಾರು ಹೊಣೆಗಾರರು ? ಬ್ಯಾಂಕುಗಳು ಹೊಣೆಯಾಗದಿದ್ದರೂ, ಎಲ್ಲರು ಬೈಯುವುದು ಬ್ಯಾಂಕ್ ನೌಕರರನ್ನೇ! ಎಲ್ಲಾ ಸೈಬರ್ ವಂಚನೆಗಳು ನಡೆಯಲು ನನ್ನ ಪ್ರಕಾರ ಬ್ಯಾಂಕ್ ಗಳೇ ಹೊಣೆಯಾಗಬೇಕಿದೆ ಎನ್ನುವುದು ಗ್ರಾಹಕರ ಅಭಿಪ್ರಾಯ. ಜನಸಾಮಾನ್ಯರು ಬ್ಯಾಂಕುಗಳನ್ನು ನಂಬಿ ಹಣ ಹೂಡಿಕೆ ಮಾಡಿಟ್ಟಿರುತ್ತಾರೆ, ಆದರೆ ಇಂದು ಎಲ್ಲರು ಆತಂಕದಲ್ಲಿ ಬದುಕಬೇಕಾದ ಪರಿಸ್ಥಿತಿಯನ್ನು ಈ OTP ಎನ್ನುವ ಮಹಾಮಾರಿ ನಿರ್ಮಾಣಮಾಡಿಬಿಟ್ಟಿದೆ. ಪ್ರತೀ ಗ್ರಾಹಕರಿಗೂ ಪ್ರತಿಯೊಂದಕ್ಕೂ OTP ಯನ್ನು ನೀಡುವಂತೆ ನಿಯಮಗಳನ್ನು ಜಾರಿಗೆ ತಂದದ್ದು ಬ್ಯಾಂಕ್, OTP ಯನ್ನು ಬ್ಯಾಂಕಿನವರು ಕೇಳುತ್ತಾರೋ, ಸೈಬರ್ ಕಳ್ಳರು ಕೇಳುತ್ತಾರೋ ಒಂದು ತಿಳಿಯದಾಗಿದೆ. ಒಂದು ಮೊಬೈಲ್ ನಂಬರ್ ಚೇಂಜ್ ಮಾಡಲು OTP ! ಒಂದು ಇನಿಶಿಯಲ್ ಚೇಂಜ್ ಮಾಡಲು ಓಟಿಪಿ ! ಪ್ರತಿ ಟ್ರಾನ್ಸಾಕ್ಷನ್ನಿಗೂ ಓಟಿಪಿ ! ಸಾಯುತ್ತಿರುವ ಮುದುಕ ಪೆನ್ಷನ್ ಪಡೆಯಲು ಓಟಿಪಿ ! ಸತ್ತವರ ಹಣವನ್ನು ಹಿಂಪಡೆಯುವ ನಾಮಿನಿಗೂ ಓಟಿಪಿ ! ಒಂದು ಚಿಕ್ಕ ಅಕ್ಷರವನ್ನು ಬದಲಿಸಲು ಓಟಿಪಿ ! ಪಡೆದಿರುವ ಎಟಿಎಂ ಕಾರ್ಡನ್ನು ಚಾಲನೆ ಮಾಡಲು ಓಟಿಪಿ ! ತಾನು ಡ್ರಾ ಮಾಡಿದ ಹಣವನ್ನ ತನ್ನ ಕೈಗೆ ತೆಗೆದುಕೊಳ್ಳಲು ಓಟಿಪಿ ! ಕೊನೆಗೆ ತಾನು ಬದುಕಿದ್ದೇನೆ ಎನ್ನುವುದನ್ನು ಸಾಬೀತುಪಡಿಸಲು ಓಟಿಪಿ ಹೇಳಬೇಕಾದ ಪರಿಸ್ಥಿತಿ ಬಂದೊದಗಿದೆ.! ಎಲ್ಲದಕ್ಕೂ ಓಟಿಪಿ ಓಟಿಪಿ ಓಟಿಪಿ !!!
ಈ ಓಟಿಪಿ ದುನಿಯಾದಲ್ಲಿ ಯಾರಿಗೆ ಎಷ್ಟು ಲಾಭವಾಗಿದೆ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಇಂತಹ ನಿಯಮಗಳನ್ನು ಮೊದಲು ಸೃಷ್ಟಿ ಮಾಡಿದ್ದೆ ಬ್ಯಾಂಕುಗಳು , ಮತ್ತು ಇತರೆ ಸರ್ಕಾರಿ ಸಂಸ್ಥೆಗಳು ಎಂದರೆ ತಪ್ಪಾಗಲಾರದೆನೋ !!!. ಹಾಗಾದರೆ ಈ ಎರಡು ಸಂಸ್ಥೆಗಳ ಮಧ್ಯೆ ಒಂದು ಮ್ಯೂಚುಯಲ್ ಅಂಡರ್ಸ್ಟ್ಯಾಂಡಿಂಗ್ ಇದೆಯೇನೋ ಎನ್ನುವಂತಹದ್ದಾಗಿದೆ. ಎಷ್ಟೋ ಬಾರಿ ಹಣ ಕಳೆದುಕೊಂಡ ಗ್ರಾಹಕರು ಬಂದು ಬ್ಯಾಂಕ್ ಅಧಿಕಾರಿಗಳ ಮುಂದೆ ಕಿರುಚಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಓಟಿಪಿ ಎನ್ನುವ ಮಹಾಮಾರಿ ಬಳಕೆಯಲ್ಲಿ ಗ್ರಾಹಕರು ನಿಜವಾಗಿಯೂ ಬೇಸತ್ತಿದ್ದಾರೆ. ಓಟಿಪಿ ಎನ್ನುವ ಮಹಾಮಾರಿಯ ಸೋಂಕು ತಗಲಿದ ಜನರು ಮಾನಸಿಕವಾದ ಯಾತನೆಯನ್ನು ಪಡುವಂತಾಗಿದೆ ಇದಕ್ಕೆಲ್ಲ ಯಾರು ಹೊಣೆಗಾರರಗಬೇಕು !!! ? ಯಾರಿಂದ ಬಿಡುಗಡೆ ಸಿಗಬೇಕು ? ಎನ್ನುವುದೇ ಒಂದು ದೊಡ್ಡ ಪ್ರಶ್ನೆಯಾಗಿದೆ !!
ಸಾಮಾನ್ಯ ಜನರ ಹಣದ ದುರ್ಬಳಕೆಗೆ ಒಂದು ಕಡೆಯಾದರೆ, ಸೈಬರ್ ವಂಚನೆಗಳಿಂದ ಮೋಸವಾಗಲು ಈ ಓಟಿಪಿಯು ದೊಡ್ಡ ಕಾರಣವಾಗಿದೆ. ಆ ಕಾರಣಕ್ಕಾಗಿ ಓಟಿಪಿಯಿಂದ ದುರ್ಬಳಕೆಯಾದ ಹಣಕ್ಕೆ ಹೊಣೆಗಾರರಾಗಿ ಬ್ಯಾಂಕುಗಳೇ ನಿಲ್ಲಬೇಕೇ ಅಥವಾ ಸಂಬಂಧಪಟ್ಟ OTP ಯನ್ನು ಪ್ರಸ್ತುತಪಡಿಸಿದ ಕಂಪನಿ ನಿಲ್ಲಬೇಕೆ, ಅಥವಾ ಕ್ಯಾಶ್ ಲೆಸ್ ದುನಿಯಾ ಮಾಡಬೇಕು ಎಂದು ಹೊರಟ ಸರ್ಕಾರ ಇದರ ನೇರ ಹೊಣೆಗಾರಿಕೆಯನ್ನು ಹೊರಬೇಕೆ ಎನ್ನುವುದನ್ನು ಸಾಮಾನ್ಯ ಗ್ರಾಹಕನ ಪ್ರಶ್ನೆಯಾಗಿದೆ . ಇಂತಹ ಪ್ರಶ್ನೆಗಳು ಹಣವನ್ನು ಕಳೆದುಕೊಂಡ ಸಾವಿರಾರು ಗ್ರಾಹಕರನ್ನು ಸದಾ ಕಾಡುತ್ತ ಜಾಲತಾಣಗಳ ರೋಗಗ್ರಸ್ಥ ಸಮಾಜ ನಿರ್ಮಾಣವಾಗುತ್ತಿದೆ. !!!!!
ಎಷ್ಟೋ ಸಾರಿ ಬ್ಯಾಂಕ್ ನೌಕರರು ತಮ್ಮ ಗ್ರಾಹಕರ ಕೆಲಸವನ್ನು ಪೂರೈಸಲು ಓಟಿಪಿ ಕೇಳಿದಾಗ ಬಾಯಿಗೆ ಬಂದಂತೆ ಬೈಸಿಕೊಳ್ಳುವುದು ಉಂಟು. ಓಟಿಪಿ ಇಲ್ಲದೆ ಇರುವಂತಹ ಕಾಲದಲ್ಲಿ ಎಷ್ಟೋ ಚೆನ್ನಾಗಿ ಬ್ಯಾಂಕ್ ವಹಿವಾಟುಗಳು ನಡೆಯುತ್ತಿದ್ದವು, ಓಟಿಪಿ ಎನ್ನುವ ಮಹಾಮಾರಿಯನ್ನು ಅವುಗಳನ್ನು ನುಂಗಿದ್ದಲ್ಲದೆ ಉದ್ಯಮೆದಾರನ ಲಾಭಕ್ಕಾಗಿ ಮಾಡಿದಂತಹ ಒಂದು ವೈರಸ್ ಆಗಿ ಪರಿಣಾಮಿಸಿದೆ. ಇದರಿಂದ ಓಟಿಪಿಯನ್ನ ಕಂಟ್ರೋಲ್ ಮಾಡುವ ಉದ್ದಿಮೆಗಾರನಿಗೆ ಲಾಭವಾಗಿದೆ ಹೊರತು ಯಾವ ಗ್ರಾಹಕನಿಗೂ ಇದರಿಂದ ಲಾಭವಿಲ್ಲ. ಇತ್ತೀಚಿಗೆ ಗ್ರಾಹಕರು ಬ್ಯಾಂಕಿನಲ್ಲಿ ಬಹುದೊಡ್ಡ ಮೊತ್ತದ ಹಣವನ್ನು ಇಡುವುದರಲ್ಲೂ ಭಯಪಡುವಂತಾಗಿದೆ. ಯಾವ ಬ್ಯಾಂಕ್ ನಿಂದ ಕರೆ ಬಂದರು ಓಟಿಪಿ ಯನ್ನು ಕೇಳಿದಾಗ ಹೇಳಬೇಕೋ ಬೇಡವೋ ಎನ್ನುವ ಆತಂಕದಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗಾಗಿ ಜನಸಾಮಾನ್ಯರು ಹೇಳುವಂತೆ ಬ್ಯಾಂಕುಗಳಿಗೆ ಓಟಿಪಿಯೇ ಮುಖ್ಯವಾಗಿರುವುದರಿಂದ ಬ್ಯಾಂಕುಗಳೇ ಸೈಬರ್ ವಂಚನೆಗೆ ಕಾರಣವಾಗುತ್ತವೆ ಎನ್ನುತ್ತಾರೆ. ಇದು ಬಹುದೊಡ್ಡ ಮಟ್ಟಿಗೆ ಜವಾಬ್ದಾರಿ ಅಲ್ಲದಿದ್ದರೂ ಒಂದು ರೀತಿಯ ಮೂಲ ಕಾರಣಕರ್ತರಾಗುತ್ತಾರೆ. ಆದರೆ ತಮಗೆ ಲಾಭ ಬರುವಾಗ ಗ್ರಾಹಕರು ನಮ್ಮ ಪರಿಶ್ರಮ ನಮ್ಮ ಬುದ್ಧಿವಂತಿಕೆ ಎನ್ನುತ್ತಾರೆ. ನಷ್ಟವನ್ನು ಅನುಭವಿಸುವಾಗ ಬ್ಯಾಂಕುಗಳೇ ಕಾರಣ ಎನ್ನುವುದು ಇವತ್ತಿನ ಗ್ರಾಹಕರ ವಾಡಿಕೆಯಾಗಿದೆ. ಇಲ್ಲಿ ಸಂಪೂರ್ಣವಾಗಿ ಬ್ಯಾಂಕುಗಳೇ ಹೊಣೆಗಾರಿಕೆಯನ್ನು ಹೊರುವ ಅಗತ್ಯವಿಲ್ಲ, ಗ್ರಾಹಕರಿಗೂ ಜವಾಬ್ದಾರಿ ಇರಬೇಕಾಗುತ್ತದೆ. ಮೊದಲು ಕ್ಯಾಶ್ ಲೆಸ್ ದುನಿಯಾ ಎನ್ನುತ್ತಿದ್ದವರು ಈಗ ಮತ್ತೊಂದು ಜಾಹೀರಾತು ನೀಡುತ್ತಾ ಸೈಬರ್ ವಂಚನೆಗಳಿಗೆ ಒಳಗಾಗಬೇಡಿ ಓಟಿಪಿಯನ್ನು ಯಾರಿಗೂ ಶೇರ್ ಮಾಡಬೇಡಿ ಎಂದು ಜಾಹೀರಾತು ನೀಡುವ ಪರಿಸ್ಥಿತಿ ಬಂದೋದಗಿದೆ.
OTP ಯಿಂದ ಜಾಗರೂಕರಾಗಿ, ನಿಮ್ಮ ಎಲ್ಲಾ ಹಣದ ವ್ಯವಹಾರಗಳಿಗೂ ನೀವೇ ಜವಾಬ್ದಾರರಂತೆ ವರ್ತಿಸಿ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/Ci8F6ckDmAbCBQyqgLqOPx