ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮಕ್ಕೆ ನಕ್ಸಲರು ಬಂದಿದ್ದು ನಿಜನಾ?: ಇಲ್ಲಿದೆ ಸತ್ಯಾಂಶ
ಬೆಳ್ತಂಗಡಿ: ನವೆಂಬರ್ 21ರ ರಾತ್ರಿ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಪೂಂಕಾಜೆ ಮನೆಗೆ ನಕ್ಸಲರು ಬಂದಿದ್ದಾರೆ ಎನ್ನುವ ಸುದ್ದಿಗಳು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಘಟನೆಯ ಸತ್ಯಾಂಶ ಬಯಲಾಗಿದೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಜೋಸ್ಸಿ ಅಂತೋನಿ ಎಂಬವರ ವಿರುದ್ಧ ದೂರೊಂದು ದಾಖಲಾಗಿತ್ತು. ಹೀಗಾಗಿ ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಪೊಲೀಸರು ಮುಂದಾಗಿದ್ದಾರೆ. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಅವರ ಮನೆಗೆ ದೂರುದಾರರ ಜೊತೆಗೆ ಜೋಸ್ಸಿ ಅವರ ಮನೆಗೆ ತೆರಳಿದಾಗ ಅವರು ಮನೆಯಲ್ಲಿ ಇರಲಿಲ್ಲ. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು.
ಜೋಸ್ಸಿ ಅಂತೋನಿ ಸಂಪರ್ಕಕ್ಕೆ ಸಿಗದ ಕಾರಣ ಅವರ ಬಗ್ಗೆ ಸ್ಥಳೀಯವಾಗಿ ವಿಚಾರಿಸಿದಾಗ ಅವರು ಬೆಳಗ್ಗೆ ಮನೆಯಲ್ಲಿ ಇರುವುದಿಲ್ಲ ರಾತ್ರಿ ವೇಳೆ 9 ಗಂಟೆಯ ಬಳಿಕ ಮನೆಗೆ ಬರುತ್ತಾರೆ ಎನ್ನುವುದು ತಿಳಿದು ಬಂದಿದೆ.
ಹೀಗಾಗಿ ಮೂಡುಬಿದಿರೆ ಪೊಲೀಸ್ ಠಾಣಾ ಸಿಬ್ಬಂದಿ ಮತ್ತು ಓರ್ವ ಮಹಿಳಾ ಸಿಬ್ಬಂದಿ ನವೆಂಬರ್ 21ರಂದು ರಾತ್ರಿ 9 ಗಂಟೆಯ ನಂತರ ಜೋಸ್ಸಿ ಅಂತೋನಿ ಅವರ ಮನೆಗೆ ತೆರಳಿದ್ದಾರೆ. ಬಾಗಿಲು ತೆರೆಯಿರಿ ಎಂದು ಹೇಳಿದಾಗ ಅವರು ಬಾಗಿಲು ತೆರೆದಿಲ್ಲ. ಹೀಗಾಗಿ ಸಿಬ್ಬಂದಿ ನೋಟಿಸ್ ನೀಡದೇ ವಾಪಸ್ ಆಗಿದ್ದಾರೆ.
ಈ ವಿಚಾರವನ್ನು ಜೋಸ್ಸಿ ಅಂತೋನಿ ಅವರು ತಪ್ಪಾಗಿ ಗ್ರಹಿಸಿ, ಮನೆಗೆ ನಕ್ಸಲರು ಬಂದಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.