ಧರ್ಮದ ಆಧಾರದಲ್ಲಿ ಮೀಸಲಾತಿ: ಹಸಿ ಹಸಿ ಸುಳ್ಳನ್ನು ಪ್ರಧಾನಿ ಹೇಳಿರುವುದು ವಿಷಾದನೀಯ: ಸಿಎಂ ಸಿದ್ದರಾಮಯ್ಯ - Mahanayaka
10:17 AM Wednesday 16 - April 2025

ಧರ್ಮದ ಆಧಾರದಲ್ಲಿ ಮೀಸಲಾತಿ: ಹಸಿ ಹಸಿ ಸುಳ್ಳನ್ನು ಪ್ರಧಾನಿ ಹೇಳಿರುವುದು ವಿಷಾದನೀಯ: ಸಿಎಂ ಸಿದ್ದರಾಮಯ್ಯ

siddaramaiah
16/04/2025

ಬೆಂಗಳೂರು: ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬಾರದು ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ ಎನ್ನುವ ಹಸಿ ಹಸಿ ಸುಳ್ಳನ್ನು ದೇಶದ ಪ್ರಧಾನಿಯಾಗಿರುವ ಮೋದಿಯವರು ಹೇಳಿರುವುದು ಅತ್ಯಂತ ವಿಷಾದನೀಯವಾದುದು. ಮತೀಯ ದ್ವೇಷ ಹುಟ್ಟಿಸಬೇಕೆಂಬ ಏಕೈಕ ದುರುದ್ದೇಶದಿಂದ ಈ ರೀತಿಯ ಸುಳ್ಳುಗಳನ್ನು ಹೇಳುವ ಮಟ್ಟಕ್ಕೆ ದೇಶದ ಪ್ರಧಾನಿ ಇಳಿಯಬಾರದಿತ್ತು ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Provided by

ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ನೀಡಿರುವ ಅವರು,  ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾಷಣ ಮತ್ತು ಬರವಣಿಗೆಗಳ ಹನ್ನೆರಡು ಸಂಪುಟಗಳನ್ನು ಮಹಾರಾಷ್ಟ್ರ ಸರ್ಕಾರ ವರ್ಷಗಳ ಹಿಂದೆಯೇ ಪ್ರಕಟಮಾಡಿದೆ. ಅವುಗಳ ಕನ್ನಡ ಅನುವಾದವನ್ನು ನಮ್ಮ ಸರ್ಕಾರವೇ ಮುದ್ರಿಸಿದೆ. ಅಲ್ಲೆಲ್ಲಾದರೂ ಧರ್ಮಾಧಾರಿತ ಮೀಸಲಾತಿ ಬೇಡ ಇಲ್ಲವೇ ಬೇಕು ಎನ್ನುವ ಅಂಬೇಡ್ಕರ್ ಅವರ ಅಭಿಪ್ರಾಯದ ಉಲ್ಲೇಖ ಇದ್ದರೆ ಅದನ್ನು ಪ್ರಧಾನಿ ಮೋದಿಯವರು ದೇಶದ ಜನರ ಮುಂದಿಡಬೇಕು, ಇಲ್ಲವಾದರೆ ಇಂತಹದ್ದೊಂದು ಸುಳ್ಳನ್ನು ಹೇಳಿರುವುದಕ್ಕಾಗಿ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡಲಾಗಿರುವ ಮೀಸಲಾತಿ ಖಂಡಿತ ಧರ್ಮಾಧಾರಿತವಾದುದ್ದಲ್ಲ ಎನ್ನುವ ಸರಳವಾದ ಸತ್ಯವನ್ನು ಮೋದಿ ಅವರು ಅರ್ಥಮಾಡಿಕೊಳ್ಳದೆ ಹೋಗಿರುವುದು ದುರಂತವೇ ಸರಿ. ಮುಸ್ಲಿಮರಿಗೆ ಅವರೊಳಗಿನ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಯನ್ನು ಆಧಾರವಾಗಿಟ್ಟುಕೊಂಡು ಮೀಸಲಾತಿ ನೀಡಲಾಗಿದೆಯೇ ಹೊರತು ಅದು ಧರ್ಮಾಧರಿತವಾದುದ್ದಲ್ಲ. ಇದನ್ನು ನಾನು ಹಲವು ಬಾರಿ ವಿಧಾನಮಂಡಲದ ಒಳಗೆ ಮತ್ತು ಹೊರಗೆ ಹೇಳಿದ್ದೇನೆ.

ಬಿಜೆಪಿ ಮಿತ್ರ ಪಕ್ಷವಾದ ತೆಲುಗುದೇಶಂ ಪಕ್ಷದ ನಾಯಕರು ಮತ್ತು ಆಂದ್ರಪ್ರದೇಶದ ಮುಖ್ಯಮಂತ್ರಿಗಳಾದ ದ್ರಬಾಬು ನಾಯ್ಡು ಅವರೇ ಬಹಿರಂಗವಾಗಿ ಮುಸ್ಲಿಂ ಮೀಸಲಾತಿಯನ್ನು ಬೆಂಬಲಿಸುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಪ್ರಾಯ ಏನು ಎನ್ನುವುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ.ಮುಸ್ಲಿಂಮರಲ್ಲಿನ ಹಿಂದುಳಿಯುವಿಕೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಸನ್ಮಾನ್ಯ ನರೇಂದ್ರ ಮೋದಿ ಅವರು ತಿಳಿದುಕೊಳ್ಳಲು ಬಯಸುವುದಾದರೆ ಈ ಬಗ್ಗೆಯೇ ಅಧ್ಯಯನ ಮಾಡಿರುವ ಸಾಚಾರ್ ಸಮಿತಿಯ ವರದಿಯನ್ನು ಪರಿಶೀಲಿಸುವ ಕಷ್ಟ ತೆಗೆದುಕೊಳ್ಳಬೇಕು. ಆ ವರದಿಯ ಪ್ರಕಾರ ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರಗಳಲ್ಲಿ ಮುಸ್ಲಿಂಮರ ಪ್ರಾತಿನಿಧ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಿಂತಲೂ ಕಡಿಮೆ ಇದೆ.

ಮುಸ್ಲಿಂ ಸಮುದಾಯದ ಹಿತರಕ್ಷಣೆಗಾಗಿಯೇ ತಲಾಖ್ ನಿಷೇಧ ಮಾಡಿದ್ದೇವೆ, ವಕ್ಪ್ ಕಾಯ್ದೆಗೆ ತಿದ್ದುಪಡಿ ಮಾಡಿದ್ದೇವೆ ಎಂದು ಒಂದೆಡೆ ತಮ್ಮನ್ನು ಮುಸ್ಲಿಂ ಸಮುದಾಯದ ಸುಧಾರಕರಂತೆ ತಮ್ಮನ್ನು ಬಿಂಬಿಸಿಕೊಳ್ಳುತ್ತಿರುವ ಮೋದಿ ಅವರು ಇನ್ನೊಂದೆಡೆ ಬಜರಂಗ ದಳದ ಕಾರ್ಯಕರ್ತನಂತೆ ಕೋಮುದ್ವೇಷವನ್ನು ಉಗುಳುತ್ತಿರುವುದು ಅವರು ಕೂತಿರುವ ಕುರ್ಚಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಟೀಕಿಸಿದ್ದಾರೆ.

ವಕ್ಪ್ ಬೋರ್ಡಿನಲ್ಲಿ ಮುಸ್ಲಿಂಮೇತರರನ್ನು ಕಡ್ಡಾಯವಾಗಿ ಸದಸ್ಯರನ್ನಾಗಿ ಮಾಡುವ ತಿದ್ದುಪಡಿ ಕೋಮುದ್ವೇಷದಿಂದ ಕೂಡಿರುವುದು ಮೇಲ್ನೋಟದಲ್ಲಿಯೇ ಸಾಬೀತಾಗುತ್ತದೆ. ಇದೇ ಮಾನದಂಡವನ್ನು ಮುಂದಿನ ದಿನಗಳಲ್ಲಿ ಹಿಂದೂ ಮಠ-ಮಂದಿರಗಳಿಗೂ ವಿಸ್ತರಿಸಬೇಕೆಂಬ ಬೇಡಿಕೆ ಹುಟ್ಟಿಕೊಂಡರೆ ಸಮಾಜದಲ್ಲಿ ಅನವಶ್ಯಕವಾಗಿ ಧರ್ಮ-ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವುದಿಲ್ಲವೇ? ದೇಶದ ಪ್ರಧಾನಿಯಾದವರು ಇಂತಹ ಸಂಘರ್ಷಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕೇ ಹೊರತು ಹುಟ್ಟುಹಾಕುವುದಲ್ಲ ಎಂದು ಸಲಹೆ ನೀಡಿದ್ದಾರೆ.

ಕರ್ನಾಟಕದಲ್ಲಿ ದಲಿತರ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಂಮರಿಗೆ ನೀಡಲಾಗಿದೆ ಎನ್ನುವ ಇನ್ನೊಂದು ಸುಳ್ಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇಂತಹ ಆಧಾರ-ತಲೆಬುಡ ಇಲ್ಲದ ಆರೋಪಗಳನ್ನು ಮಾಡುವಾಗ ಪ್ರಧಾನಿಯವರು ಕನಿಷ‍್ಠ ವಾಸ್ತವಾಂಶಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನಾದರೂ ಮಾಡಬೇಕಲ್ಲವೇ? ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆಯೇ ಹೊರತು ಕಡಿಮೆ ಮಾಡಿಲ್ಲ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ಶಿಫಾರಸಿನ ಆಧಾರದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇಕಡಾ 15ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡಾ ಮೂರರಿಂದ ಏಳಕ್ಕೆ ಹೆಚ್ಚಿಸಲಾಗಿದೆ. ಹೀಗಿರುವಾಗ ಅವರಿಂದ ಕಿತ್ತುಕೊಳ್ಳುವುದೇನು ಬಂತು? ಇಂತಹ ಮೂಲಭೂತ ಮಾಹಿತಿಯೂ ಇಲ್ಲದ ಪ್ರಧಾನಿ ಮೋದಿಯವರು ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ತಮ್ಮ ಘನತೆಯನ್ನು ತಾವೇ ಹಾಳುಗೆಡಹುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ