ಉತ್ತರ ಪ್ರದೇಶದ ಪೊಲೀಸರಿಗೆ ಕಾನೂನಂದ್ರೆ ತಮಾಷೆನಾ..? ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಉತ್ತರ ಪ್ರದೇಶದ ಪೊಲೀಸರಿಗೆ ಕಾನೂನು ಮತ್ತು ಸುವ್ಯವಸ್ಥೆ ಎನ್ನುವುದು ತಮಾಷೆಯಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಅಮಾಯಕರನ್ನು ಹಿಂಸಿಸಿ, ಅಪರಾಧಿಗಳನ್ನು ರಕ್ಷಿಸುವುದು ಉತ್ತರ ಪ್ರದೇಶ ಆಡಳಿತದ ಮೂಲ ಮಂತ್ರ’ ಎಂದು ಕುಟುಕಿದ್ದಾರೆ.
‘ರಾಯ್‌ಬರೇಲಿಯಲ್ಲಿ ರವಿ ಚೌರಾಸಿಯಾ ಎನ್ನುವವರ ₹8 ಲಕ್ಷವಿದ್ದ ಬ್ಯಾಗ್ ಕಳುವಾಗಿತ್ತು. ಈ ಬ್ಯಾಗ ರಸ್ತೆ ಬದಿಯಲ್ಲಿ ದೀಪು ಎನ್ನುವ ಉದ್ಯಮಿಗೆ ಸಿಕ್ಕಿತ್ತು. ದೀಪು ಅದನ್ನು ಪೊಲೀಸ್ ಠಾಣೆಗೆ ನೀಡಲು ಹೋದರೆ ಅವರನ್ನೇ ಜೈಲಿಗೆ ಹಾಕಿದ್ದಾರೆ. ದೀಪು ಅವರನ್ನು ಜೈಲಿನಲ್ಲಿ ಹಾಕಿರುವುದರ ವಿರುದ್ಧ ಪ್ರತಿಭಟನೆಗಳು ನಡೆದ ಕಾರಣ ಪ್ರಕರಣದ ವಿಚಾರಣೆಯನ್ನು ಬೇರೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ತನಿಖೆಯ ವೇಳೆ ದೀಪು ಅವರು ನಿರಪರಾಧಿ ಎಂದು ತಿಳಿದುಬಂದ ಕಾರಣ ನ್ಯಾಯಾಲಯ ಅವರಿಗೆ ಜಾಮೀನು ನೀಡಿ ಬಿಡುಗಡೆ ಮಾಡಿದೆ. ಆದರೆ ಪೊಲೀಸರು ಮಾತ್ರ ಅವರ ಮೇಲೆ ಆರೋಪ ಮಾಡಿದ್ದಾರೆ’ ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.
ಗೌರವ್ ಅಲಿಯಾಸ್ ದೀಪು ರಾಯ್‌ಬರೇಲಿಯ ನಿವಾಸಿಯಾಗಿದ್ದರು, ಆ.20ರಂದು ರಸ್ತೆ ಬದಿ ಸಿಕ್ಕ ದುಡ್ಡಿನ ಬ್ಯಾಗ್ ಅನ್ನು ಪೊಲೀಸರಿಗೆ ನೀಡಲು ಆ.26ರಂದು ಠಾಣೆಗೆ ತೆರಳಿದ್ದಾಗ ಅವರನ್ನು ಜೈಲಿಗೆ ಹಾಕಲಾಗಿತ್ತು. ಇದರ ವಿರುದ್ಧ ದೀಪು ಗ್ರಾಮಸ್ಥರು ಮತ್ತು ಸ್ಥಳೀಯ ಉದ್ಯಮಿಗಳು ತೀವ್ರವಾಗಿ ಪ್ರತಿಭಟನೆ ನಡೆಸಿ, ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth