ಸಾಮಾಜಿಕ ವ್ಯಾಧಿಗೆ ಕಾನೂನಾತ್ಮಕ ಚಿಕಿತ್ಸೆ ಸಾಧ್ಯವೇ ? | ಸಹಬಾಳ್ವೆಯ ಸಂಯಮ  ಕಳೆದುಕೊಂಡಿರುವ ಸಮಾಜದಲ್ಲಿ ʼ ಸೌಜನ್ಯ ʼ ಕಾಣುವುದಾದರೂ ಹೇಗೆ ? - Mahanayaka

ಸಾಮಾಜಿಕ ವ್ಯಾಧಿಗೆ ಕಾನೂನಾತ್ಮಕ ಚಿಕಿತ್ಸೆ ಸಾಧ್ಯವೇ ? | ಸಹಬಾಳ್ವೆಯ ಸಂಯಮ  ಕಳೆದುಕೊಂಡಿರುವ ಸಮಾಜದಲ್ಲಿ ʼ ಸೌಜನ್ಯ ʼ ಕಾಣುವುದಾದರೂ ಹೇಗೆ ?

sowjanya
17/07/2023

  • ನಾ ದಿವಾಕರ

ಪ್ರಜಾಪ್ರಭುತ್ವ, ಸಂವಿಧಾನ, ಆಳ್ವಿಕೆಯ ಆಡಳಿತ ನೀತಿಗಳು ಹಾಗೂ ಅಧಿಕಾರ ಕೇಂದ್ರದ ವಾರಸುದಾರರಾಗಿರುವ ಜನಪ್ರತಿನಿಧಿಗಳ ಒಕ್ಕೂಟಗಳು (ಇದನ್ನು ನಾವು ರಾಜಕೀಯ ಪಕ್ಷಗಳೆಂದೇ ಗುರುತಿಸುತ್ತಿದ್ದೇವೆ) ಈ ಎಲ್ಲ ಸಾಂಸ್ಥಿಕ ಚೌಕಟ್ಟುಗಳನ್ನು ಮೀರಿದಂತೆ ಮನುಷ್ಯ ಒಂದು ಸಮಾಜದ ಅಥವಾ ಸಮುದಾಯದ ಸದಸ್ಯನಾಗಿ ಜೀವನ ನಡೆಸುತ್ತಾನೆ. ಮಾನವ ಪ್ರಪಂಚ ಇತಿಹಾಸ ಕಾಲದಿಂದಲೂ ಇದೇ ಮಾದರಿಯನ್ನು ಅನುಸರಿಸಿಕೊಂಡು ಬಂದಿದ್ದು ಚರಿತ್ರೆಯ ಪ್ರತಿಯೊಂದು ಕಾಲಘಟ್ಟದಲ್ಲೂ ಸಮಾಜಗಳು ವಿಭಿನ್ನ ನೆಲೆಗಳಲ್ಲಿ, ವೈವಿಧ್ಯಮಯ ಆಯಾಮಗಳೊಂದಿಗೆ ಉಗಮಿಸಿವೆ, ಊರ್ಜಿತವಾಗಿವೆ ಹಾಗೂ ಆಧುನಿಕತೆ-ನಾಗರಿಕತೆಯನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿವೆ. ಈ ಸಮಾಜದ ಒಳಗೇ ಮನುಜ ಕುಲ ತನ್ನದೇ ಆದ ಪರಂಪರಾಗತ ರೂಢಿಗಳನ್ನು ಸಂಸ್ಕೃತಿಯ ಹೆಸರಿನಲ್ಲಿ ಅನುಸರಿಸುವ ಮೂಲಕ ವೈವಿಧ್ಯತೆಯನ್ನೂ ಕಂಡುಕೊಂಡಿದೆ.

ಈ ವೈವಿಧ್ಯತೆಯ ನಡುವೆಯೇ ಭಿನ್ನತೆಯನ್ನೂ ಕಾಣುವ ಮೂಲಕ ಉನ್ನತ ಆದರ್ಶಗಳ, ಉದಾತ್ತ ಚಿಂತನೆಗಳ ಒಂದು ಆರೋಗ್ಯಕರ ಸಮಾಜವನ್ನು ನಿರ್ಮಿಸುವ ಪ್ರಯತ್ನಗಳು ನಡೆಯುತ್ತಲೇ ಇದ್ದರೂ ಈ ಪ್ರಕ್ರಿಯೆಗೆ ಸಮಾನಾಂತರವಾಗಿ ಸಮಾಜದ ಆಂತರ್ಯದಲ್ಲಿ ಇರಬಹುದಾದ ಸೂಕ್ಷ್ಮ ಒಳಬಿರುಕುಗಳನ್ನು ಬಳಸಿಕೊಂಡು ವಿವಿಧ ಸಮುದಾಯಗಳ ನಡುವೆ ಅಥವಾ ವಿಭಿನ್ನ ಸಾಂಸ್ಕೃತಿಕ ನೆಲೆಗಳ ನಡುವೆ ಕೆಡವಲಾರದ ಗೋಡೆಗಳನ್ನು ಕಟ್ಟುವ ಪ್ರಯತ್ನಗಳೂ ನಡೆಯುತ್ತಿರುತ್ತವೆ. ಸಮಾಜದ ಮೇಲ್ಪದರದ ಪ್ರಬಲ ವರ್ಗಗಳು ಜಾತಿ-ಪಂಥ-ಮತ-ಧರ್ಮ-ಭಾಷೆ ಹಾಗೂ ಪ್ರಾಂತೀಯ ನೆಲೆಗಳಲ್ಲಿ ನಿರ್ಮಿಸುವ ಬೇಲಿಗಳು ಈ ಗೋಡೆಗಳನ್ನು ಅಸ್ಮಿತೆಯ ಕವಚಗಳನ್ನಾಗಿ ಪರಿವರ್ತಿಸಲು ಸಹಾಯಕವಾಗುತ್ತವೆ. ಸಾಮಾನ್ಯ ಜನತೆಯಲ್ಲಿ, ವಿಶೇಷವಾಗಿ ತಳಮಟ್ಟದ ಜನಸಮುದಾಯಗಳಲ್ಲಿ, ಸಹಜವಾಗಿಯೇ ಇರುವ ಸಮನ್ವಯ, ಸಹಿಷ್ಣುತೆ ಮತ್ತು ಸಹಬಾಳ್ವೆಯ ಆಲೋಚನೆಗಳ ಮೇಲೆ ಈ ಕವಚಗಳು ಅಗಾಧ ಪ್ರಮಾಣ ಬೀರುತ್ತವೆ. ಕ್ರಮೇಣ ಸಮಷ್ಟಿ ಚಿಂತನೆಯನ್ನು ಕಳೆದುಕೊಳ್ಳುವ ಸಮುದಾಯಗಳು ಅಸ್ಮಿತೆಯ ಚೌಕಟ್ಟುಗಳೊಳಗೆ ಸಿಲುಕಿ ಅಭೇದ್ಯ ಕೋಶಗಳಲ್ಲಿ ಬಂದಿಯಾಗುತ್ತವೆ.

ಅಸ್ಮಿತೆಗಳ ಚೌಕಟ್ಟಿನೊಳಗೆ ಸಮಾಜ :

ಬಹುಶಃ ಭಾರತ ಇಂತಹ ಒಂದು ಸಾಮಾಜಿಕ ಸನ್ನಿವೇಶವನ್ನು ಎದುರಿಸುತ್ತಿದೆ. ಅಸ್ಮಿತೆಗಳ ಕೋಶಗಳಲ್ಲಿ ಬಂದಿಯಾಗುವ ಯಾವುದೇ ಒಂದು ಸಮಾಜ ಬಾಹ್ಯ ಜಗತ್ತಿನ ಆಗುಹೋಗುಗಳಿಗೆ ವಿಮುಖವಾಗುವುದೇ ಅಲ್ಲದೆ, ತಾನೇ ರೂಪಿಸಿಕೊಂಡ ಭದ್ರ ಕೋಟೆಯಲ್ಲಿ ತನ್ನದೇ ಆದ ಜಗತ್ತನ್ನು ಸೃಷ್ಟಿಸಿಕೊಂಡು ಅದರಿಂದಾಚೆಗಿನ ಮಾನವ ಸಮಾಜವನ್ನು ಪರಕೀಯ ಎಂದೇ ಭಾವಿಸುತ್ತದೆ. ಆಧುನಿಕ ಭಾರತ ತನ್ನೆಲ್ಲಾ ಆಧುನಿಕತೆ ಮತ್ತು ಉದಾತ್ತ ಚಿಂತನಾ ವಾಹಿನಿಗಳ ನಡುವೆಯೂ ಇಂತಹ ಒಂದು ಕೋಶಗಳನ್ನು ತನ್ನೊಳಗೇ ಸೃಷ್ಟಿಸಿಕೊಂಡಿದೆ. ಶತಮಾನಗಳಿಂದ ಬೇರೂರಿರುವ ಜಾತಿ ಶ್ರೇಣೀಕರಣ, ಪಿತೃಪ್ರಧಾನತೆ ಹಾಗೂ ಊಳಿಗಮಾನ್ಯ ಧೋರಣೆಗಳು ಈ ಕೋಶಗಳ ಸಂರಕ್ಷಕ ಸಾಧನಗಳಾಗಿ ಬೌದ್ಧಿಕವಾಗಿಯೂ ಸಹ ಸಕ್ರಿಯವಾಗಿವೆ. ಇದರೊಟ್ಟಿಗೆ ಕಳೆದ ಮೂರು ನಾಲ್ಕು ದಶಕಗಳಲ್ಲಿ ಮುನ್ನೆಲೆಗೆ ಬಂದಿರುವ ಮತೀಯವಾದ ಹಾಗೂ ಮತಧಾರ್ಮಿಕ ಅಸ್ಮಿತೆಗಳ ಸಾಂಸ್ಕೃತಿಕ ರಾಜಕಾರಣವು ಅಧಿಕಾರ ಕೇಂದ್ರಗಳನ್ನೂ ವ್ಯಾಪಿಸಿ ಸಾಮಾಜಿಕ ವಿಘಟನೆ ಮತ್ತು ಸಾಂಸ್ಕೃತಿಕ ವಿಮುಖತೆಗೆ ಕಾರಣವಾಗಿದೆ. ಈ ಬೆಳವಣಿಗೆಗಳ ಪರಿಣಾಮವಾಗಿ ದೃಷ್ಟಿ ಮಬ್ಬಾಗಿರುವ ಭಾರತೀಯ ಸಮಾಜ ತನ್ನೊಳಗಿನ ವೈರುಧ್ಯಗಳನ್ನೂ ಗುರುತಿಸಲಾಗದಂತಹ ಬೌದ್ಧಿಕ ದಾರಿದ್ರ್ಯವನ್ನು ಮೈಗೂಡಿಸಿಕೊಳ್ಳುತ್ತಿದೆ.

ಇಂತಹ ಒಂದು ಸನ್ನಿವೇಶದಲ್ಲಿ ನಮಗೆ 12 ವರ್ಷಗಳ ಹಿಂದೆ ಅತ್ಯಾಚಾರ ಮತ್ತು ಹತ್ಯೆಗೀಡಾದ ಸೌಜನ್ಯ ಎಂಬ ಅಪ್ರಾಪ್ತ ಬಾಲಕಿ ಎದುರಾಗುತ್ತಾಳೆ. ಇತ್ತೀಚೆಗೆ ಹತ್ಯೆಗೊಳಗಾದ ಓರ್ವ ಜೈನಮುನಿ ಸಹಿಷ್ಣುತೆಯ ಶಿಥಿಲ ಬೇರುಗಳನ್ನು ಕದಡುವ ರೀತಿಯಲ್ಲಿ ಎದುರಾಗುತ್ತಾರೆ. ಮತ್ತೊಂದೆಡೆ ಅಸಹಿಷ್ಣುತೆಯ ಫಲವತ್ತತೆಯ ನೆಲೆಯಲ್ಲಿ ಟಿ ನರಸೀಪುರದ ಅಮಾಯಕ ಯುವಕ ವೇಣುಗೋಪಾಲ್‌ ಕಣ್ಮುಂದೆ ಬರುತ್ತಾನೆ. ಈ ಎಲ್ಲ ಪ್ರಸಂಗಗಳಲ್ಲಿ ವ್ಯಕ್ತಿಗಳನ್ನು ಹೊರಗಿಟ್ಟು ನೋಡುವುದಾದರೆ ನಮಗೆ ಅಲ್ಲೊಂದು ಭೀಕರ ಸಮಾಜ ಕಾಣುತ್ತದೆ. ಅಸಹನೆಯ ಬೀಜಗಳನ್ನು ನೆಟ್ಟು ಪೋಷಿಸುವ ಒಂದು ಸಾಂಸ್ಕೃತಿಕ ವ್ಯವಸ್ಥೆ, ಪಿತೃಪ್ರಧಾನತೆ ಮತ್ತು ಪುರುಷಾಹಮಿಕೆಯನ್ನು ಮೆರೆಸುವ ಊಳಿಗಮಾನ್ಯ ಸಮಾಜ ಮತ್ತು ಸಾಂಸ್ಥಿಕ ರಕ್ಷಣೆಗಾಗಿ ಮತಾಂಧತೆಯ ಕವಚ ತೊಟ್ಟು ಹಿಂಸಾತ್ಮಕ ಮಾರ್ಗ ಅನುಸರಿಸುವ ಒಂದು ಯುವ ಸಮಾಜ ನಮ್ಮ ಅಂತಃಪ್ರಜ್ಞೆಯನ್ನು ಕದಡುವ ರೀತಿಯಲ್ಲಿ ಮುಖಾಮುಖಿಯಾಗುತ್ತದೆ.

ನಮ್ಮ ಸುಶಿಕ್ಷಿತ-ಮುಂದುವರೆದ ಸಮಾಜವೇ ರೂಪಿಸಿಕೊಂಡಿರುವ ಸಾಂಸ್ಕೃತಿಕ ವಾತಾವರಣದಲ್ಲಿ ಈ ಹತ್ಯೆಗಳು ಮತ್ತು ನಿರಂತರವಾಗಿ ನಡೆಯುತ್ತಿರುವ ಇಂತಹ ದೌರ್ಜನ್ಯಗಳು ಸಾಪೇಕ್ಷ ನೆಲೆಯಲ್ಲಿ ವಿಂಗಡಿಸಲ್ಪಡುತ್ತವೆ. ಅತ್ಯಾಚಾರಿ-ಹಂತಕ-ಹಲ್ಲೆಕೋರರ ಅಸ್ಮಿತೆಗಳಷ್ಟೇ ಪರಿಣಾಮಕಾರಿಯಾಗಿ ಸಂತ್ರಸ್ತ ವ್ಯಕ್ತಿಗಳ ಸಾಮುದಾಯಿಕ/ಮತಧಾರ್ಮಿಕ ಅಸ್ಮಿತೆಗಳೂ ಸಹ ನಮ್ಮ ಸಾರ್ವಜನಿಕ ಚರ್ಚೆಗಳನ್ನು ಆಕ್ರಮಿಸಿಕೊಳ್ಳುತ್ತವೆ. ಈ ಚರ್ಚೆಗಳಲ್ಲಿ ಸುತ್ತಲಿನ ಸಮಾಜದಲ್ಲಿ  ದಿನನಿತ್ಯ ನಡೆಯುತ್ತಲೇ ಇರುವ ಅಮಾನುಷ ಘಟನೆಗಳೆಲ್ಲವೂ ಯಾವುದೋ ಒಂದು ನಿರ್ದಿಷ್ಟ ಅಸ್ಮಿತೆಗಳ ಚೌಕಟ್ಟಿನೊಳಗೇ ನಿಷ್ಕರ್ಷೆಗೊಳಪಡುತ್ತದೆ. ಸಾಂಸ್ಕೃತಿಕ ಅಸ್ಮಿತೆಗಳು ಎಷ್ಟೇ ವಿಶಾಲ ನೆಲೆಯನ್ನು ಹೊಂದಿದ್ದರೂ ದೌರ್ಜನ್ಯಕ್ಕೊಳಗಾದ-ದೌರ್ಜನ್ಯ ಎಸಗುವ ವ್ಯಕ್ತಿಯ ಸಾಮಾಜಿಕ ಅಂತಸ್ತು ಮತ್ತು ಸಾಂಸ್ಕೃತಿಕ ಶ್ರೇಣಿಗಳು ನಿರ್ಣಾಯಕವಾಗಿಬಿಡುತ್ತವೆ. ಸಾರ್ವಜನಿಕ ಸಂಕಥನಗಳೂ ಸಹ ಸಾಪೇಕ್ಷತೆಯ ಚೌಕಟ್ಟಿನೊಳಗೇ ನಡೆದು ಘಟನೆಯ ಪರ ವಿರೋಧಿ ಧ್ವನಿಗಳು ಕೇಳಿಬರುತ್ತವೆ. ಸಂತ್ರಸ್ತ ವ್ಯಕ್ತಿಯನ್ನು ಅಥವಾ ಪಾತಕ ಪ್ರವೃತ್ತಿಯನ್ನು ವ್ಯಕ್ತಿಗತ ನೆಲೆಯಲ್ಲಿ ಅಥವಾ ಸಾಮುದಾಯಿಕ ನೆಲೆಯಲ್ಲಿ ವಿಂಗಡಿಸಿ ನೋಡುವ ತಾತ್ವಿಕ ನೆಲೆಗಳಿಗೆ ಮತೀಯ-ಜಾತಿ ರಾಜಕಾರಣ ಒಂದು ಸ್ಪಷ್ಟ ನೆಲೆಯನ್ನೂ ಒದಗಿಸಿದೆ.

ದೌರ್ಜನ್ಯ ಮತ್ತು ಸಾಮಾಜಿಕ ಪ್ರಜ್ಞೆ:

ಈ ನೆಲೆಯಲ್ಲಿ ನಿಂತು ನೋಡಿದಾಗ ನಮಗೆ ಸೌಜನ್ಯ ಅನಾಥೆಯಾಗಿ ಕಾಣುತ್ತಾಳೆ. ಘಟನೆ ನಡೆದು 12 ವರ್ಷಗಳೇ ಕಳೆದಿದ್ದರೂ ಆಕೆಯ ಸಾವಿಗೆ ನ್ಯಾಯ ಒದಗಿಬಂದಿಲ್ಲ, ಆಕೆಯ ಕುಟುಂದವರಿಗೆ ಪರಿಹಾರವೂ ದಕ್ಕಿಲ್ಲ. ಇತ್ತ ಒಂದು ಧರ್ಮದ ಅಸ್ಮಿತೆಯೂ ಇಲ್ಲದೆ, ಜಾತಿಯ ಅಸ್ಮಿತೆಯೂ ಇಲ್ಲದೆ ಸೌಜನ್ಯ ನಮ್ಮ ಸಮಾಜವನ್ನು ಕವಿದಿರುವ ಕರಾಳ ಸಾಂಸ್ಕೃತಿಕ ಮುಸುಕಿನ ಸಂಕೇತವಾಗಿ ಕಾಣುತ್ತಾಳೆ. ಸಮಾಜದಲ್ಲಿ ಸಂಭವಿಸುವ ಯಾವುದೇ ಪಾತಕಿ ಕೃತ್ಯಗಳಲ್ಲಿ ಸಂತ್ರಸ್ತರ ಅಸ್ಮಿತೆಯಷ್ಟೇ ಪ್ರಭಾವಶಾಲಿಯಾಗಿ ಪಾತಕಿಗಳ ಅಸ್ಮಿತೆಗಳೂ ಮುಖ್ಯವಾಗುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಭಕ್ತಿಭಾವದೊಂದಿಗೆ ಹನುಮಾನ್‌ ಜಯಂತಿಯಲ್ಲಿ ಭಾಗವಹಿಸಿ ಕ್ಷುಲ್ಲಕ ಕಾರಣಕ್ಕಾಗಿ ಮತ್ತೊಬ್ಬರನ್ನು ಹತ್ಯೆ ಮಾಡುವ ಮನಸ್ಥಿತಿ ಯುವ ಸಮೂಹದಲ್ಲಿ ಮೂಡುತ್ತದೆ ಎಂದರೆ ಅಲ್ಲಿ ನಮಗೆ ಕಾಣಬೇಕಿರುವುದು ಸಾಮಾಜಿಕ ಕ್ಷೋಭೆಯೇ ಹೊರತು ಯಾವುದೇ ಸಾಂಸ್ಕೃತಿಕ ಲೇಪನ ಅಲ್ಲ.

ನಿರ್ಭಯಾಳಿಂದ ಸೌಜನ್ಯಳವರೆಗೆ, ವಾಸ್ತುತಜ್ಞ ಚಂದ್ರಶೇಖರ ಗುರೂಜಿಯಿಂದ ಜೈನಮುನಿಯವರೆಗೆ, ಪ್ರವೀಣ್‌ ನೆಟ್ಟಾರು-ಇದ್ರಿಸ್‌ ಪಾಷಾ ನಿಂದ ವೇಣುಗೋಪಾಲನವರೆಗೆ ನಮಗೆ ಕಾಣಬೇಕಿರುವುದು ನಮ್ಮ ಸಮಾಜದಲ್ಲಿ ದಿನದಿಂದ ದಿನಕ್ಕೆ ಕಳೆದುಹೋಗುತ್ತಿರುವ ಮನುಜ ಸೂಕ್ಷ್ಮತೆ ಮತ್ತು ಜೀವಪ್ರೀತಿ ಮತ್ತು ಹೆಚ್ಚಾಗುತ್ತಿರುವ ಅಮಾನುಷತೆ.  ಈ ಸೂಕ್ಷ್ಮತೆ ಇಲ್ಲದಿರುವುದರಿಂದಲೇ ವಿಶಾಲ ಸಮಾಜದ ದೃಷ್ಟಿಯಲ್ಲಿ ಸೌಜನ್ಯಳಂತಹ vulnerable ಜೀವಗಳು ನಿಕೃಷ್ಟವಾಗಿಬಿಡುತ್ತವೆ. ಸೌಜನ್ಯ ಸಹ ಅತ್ಯಾಚಾರ-ಹತ್ಯೆಗೀಡಾದ ಓರ್ವ ಹಿಂದೂ ಬಾಲಕಿಯೇ ಆದರೂ, ಆಕೆಯ ಮನೆಗೆ ಆರ್ಥಿಕ ನೆರವು ಒತ್ತಟ್ಟಿಗಿರಲಿ, ಸಾಂತ್ವನದ ಮಾತುಗಳೂ ಧಾವಿಸುವುದಿಲ್ಲ. ಆ ಮುಗ್ಧೆಯ ನೊಂದ ತಾಯಿಯ ಕಂಬನಿಗೆ ನಮ್ಮ ಸಮಾಜ ಅಥವಾ ಸಂಸ್ಕೃತಿ ಮರುಗುವುದಿಲ್ಲ. ಮತ್ತೊಂದೆಡೆ ಆಕೆಯ ಕುಲಬಾಂಧವರನ್ನೂ ಸಹ ಈ ಬರ್ಬರ ಘಟನೆ ವಿಚಲಿತಗೊಳಿಸುವುದಿಲ್ಲ. ಏಕೆಂದರೆ ಇಲ್ಲಿ ಪಾತಕಿಗಳ ಅಸ್ಮಿತೆ ಮತ್ತು ಅಂತಸ್ತು ಮುಖ್ಯವಾಗುತ್ತದೆ.

ಅಂದರೆ ಅಮಾನುಷ ಕೃತ್ಯಗಳಿಗೆ ಮಿಡಿಯುವ ಸಮಾಜದ ಮೇಲೂ ಸಹ ವ್ಯಕ್ತಿ ಕೇಂದ್ರಿತ ಅಥವಾ ಸಮುದಾಯ ಕೇಂದ್ರಿತ ಅಸ್ಮಿತೆಗಳು ಪ್ರಭಾವ ಬೀರುತ್ತವೆ. ಸಾಮಾಜಿಕ ಅನ್ಯಾಯಗಳಿಗೆ, ದೌರ್ಜನ್ಯ ತಾರತಮ್ಯಗಳಿಗೆ ಬಲಿಯಾಗುವ ವ್ಯಕ್ತಿಗಳನ್ನು ಮನುಷ್ಯರನ್ನಾಗಿ ನೋಡದೆ ಒಂದು ನಿರ್ದಿಷ್ಟ ಸಮುದಾಯದ ಸದಸ್ಯರಾಗಿ ಮಾತ್ರವೇ ನೋಡುವ ಸಂಕುಚಿತ ಮನಸ್ಥಿತಿಯನ್ನು ಸಮಾಜದಲ್ಲಿ ಸೃಷ್ಟಿಸಲಾಗಿದೆ. ಹಾಗಾಗಿ ಅನ್ಯಾಯ ಎಸಗುವ ಅತ್ಯಾಚಾರಿಗಳು-ಹಂತಕರನ್ನೂ ಸಹ ಸಾಮುದಾಯಿಕ ಅಸ್ಮಿತೆಯ ಚೌಕಟ್ಟಿನಲ್ಲಿಟ್ಟು ಗೌರವಿಸುವುದನ್ನು, ಸನ್ಮಾನಿಸುವುದನ್ನು ಕಾಣುತ್ತಿದ್ದೇವೆ. ಸಾಮಾಜಿಕ-ಆರ್ಥಿಕ ಸ್ಥಾನಮಾನಗಳು ರಾಜಕೀಯ ಪ್ರಭಾವಿ ವಲಯವನ್ನೂ ಸೃಷ್ಟಿಸುವುದರಿಂದ ಧಾರ್ಮಿಕ-ಸಾಂಸ್ಕೃತಿಕ ಪರಿಸರದಲ್ಲೂ ಪಾತಕ ಕೃತ್ಯಗಳು ಸದ್ದಿಲ್ಲದೆ ನಡೆದುಹೋಗುತ್ತಿರುವುದಕ್ಕೆ ಇದೂ ಒಂದು ಕಾರಣವಾಗಿದೆ. ಹತ್ಯೆಗೀಡಾದ ಜೈನ ಮುನಿಗಳು ಸಾಂಸ್ಕೃತಿಕ ರಾಜಕಾರಣದ ಹತಾರವಾಗುವಂತೆಯೇ ವೇಣುಗೋಪಾಲ್‌ ಎಂಬ ಅಮಾಯಕ ಯುವಕನೂ ಆಗುತ್ತಾನೆ. ಆದರೆ ಸೌಜನ್ಯ ಅನಾಥಳಾಗಿಯೇ ಉಳಿದುಬಿಡುತ್ತಾಳೆ. ಈ ಜಟಿಲ ಸಿಕ್ಕು ಬಿಡಿಸುವುದಾದರೂ ಹೇಗೆ ?

ಸಾಮಾಜಿಕ ಅಂತಃಸಾಕ್ಷಿಯ ಪ್ರಶ್ನೆ:

ಒಂದು ಪ್ರಬುದ್ಧ ಸಮಾಜ ನೋಡಬೇಕಿರುವುದು ಈ ಪಾತಕ ಕೃತ್ಯಗಳನ್ನು ಸೃಷ್ಟಿಸುವಂತಹ ವಾತಾವರಣದತ್ತ ಅಲ್ಲವೇ ? ಹತ್ಯೆಗಿಂತಲೂ ಘೋರವಾಗಿ ಮೃತ ದೇಹವನ್ನು ತುಂಡರಿಸಿ ಎಸೆಯುವ ಪ್ರಕರಣಗಳು ದೆಹಲಿಯ ಶ್ರದ್ಧಾ ವಾಲ್ಕರ್‌ ಘಟನೆಯ ನಂತರ ಹೆಚ್ಚಾಗುತ್ತಿರುವುದನ್ನು ಅತಿಸೂಕ್ಷ್ಮತೆಯಿಂದ ಗಮನಿಸಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಹಾಗೆಯೇ ಯುವ ಸಮೂಹವು ಮಾರಣಾಂತಿಕ ಆಯುಧಗಳನ್ನು ಬಳಸುವ ಪ್ರವೃತ್ತಿಯೂ ಹೆಚ್ಚಾಗುತ್ತಿರುವುದನ್ನೂ ಗಮನಿಸಬೇಕಿದೆ.  ಸಾಂಸ್ಥಿಕವಾಗಿ ಒಂದು ನಿರ್ದಿಷ್ಟ ಧರ್ಮದ ಉಳಿವಿಗಾಗಿ ಹೋರಾಡಲು ಸಜ್ಜಾಗುವ ಯುವ ಮನಸುಗಳು ಅದೇ ಧರ್ಮದ ತಾತ್ವಿಕ ಮೂಲ ನೆಲೆಗಳನ್ನು ಉಲ್ಲಂಘಿಸುತ್ತಿರುವುದನ್ನು ಕಂಡೂ ಕಾಣದಂತೆ ಸಮಾಜ ಮೌನವಾಗಿದೆ. ಈ ಯುವ ಮನಸುಗಳನ್ನು ನೆಟ್ಟಾರು, ಇದ್ರಿಸ್‌ ಪಾಷ, ಹರ್ಷ, ವೇಣುಗೋಪಾಲ್‌ ಅವರ ಹತ್ಯೆಗಳ ಹಿಂದೆ ಗುರುತಿಸಬಹುದಾಗಿದೆ. ಇಂತಹ ಒಂದು ವಿಕೃತ ಮನಸ್ಥಿತಿಯಿಂದಲೇ ಇಡೀ ಸಮಾಜವೇ ಹಿಂಸಾತ್ಮಕ ಮಾರ್ಗ ಹಿಡಿಯುವ ವಿದ್ಯಮಾನಗಳನ್ನು ಸಮಕಾಲೀನ ಚರಿತ್ರೆಯಲ್ಲೇ ಜಗತ್ತಿನ ಇತರೆಡೆ ಗುರುತಿಸಬಹುದು.

ಧರ್ಮ ರಕ್ಷಣೆಗಾಗಿ ನಡೆಯುವ ಹತ್ಯೆಗಳನ್ನು ಸಮರ್ಥಿಸಿಕೊಳ್ಳುವ ಯಾವುದೇ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳನ್ನೂ ಸಹ ಸಮರ್ಥಿಸಿಕೊಳ್ಳಲು ಅದೇ ಸಾಂಸ್ಥಿಕ ಧರ್ಮದ ನೆರಳಲ್ಲೇ ಸೃಷ್ಟಿಯಾಗುವ ಪಿತೃಪ್ರಧಾನತೆ ಮತ್ತು ಪುರುಷಾಧಿಪತ್ಯವೂ ನೆರವಾಗುತ್ತದೆ. ಹಾಗಾಗಿಯೇ ನಾವು ಯಾವುದೇ ಕೋಮುಗಲಭೆಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳನ್ನೂ ಹೆಚ್ಚಾಗಿ ಕಾಣುತ್ತೇವೆ. ಬಿಲ್ಕಿಸ್‌ ಬಾನೋ ಪ್ರಕರಣದಲ್ಲಿ ಪಾತಕಿಗಳಿಗೆ ಸಮ್ಮಾನ ನೀಡುವ ಸಮಾಜವೇ ಮತ್ತೊಂದೆಡೆ ಮಗದೊಂದು ರೂಪದಲ್ಲಿ ಸೌಜನ್ಯ ಪ್ರಕರಣದಲ್ಲೂ ಜೀವಂತವಾಗಿರುತ್ತದೆ. ಪಿತೃಪ್ರಧಾನತೆ, ಸಾಮಾಜಿಕ-ಆರ್ಥಿಕ ಅಂತಸ್ತು ಮತ್ತು ಜಾತಿ-ಧರ್ಮ ಶ್ರೇಷ್ಠತೆಯ ತಾತ್ವಿಕ ಚಿಂತನೆಗಳೇ ದುರ್ಬಲರ ಅಥವಾ ಅಮಾಯಕರ ಮೇಲೆ ನಡೆಯುವ ಎಲ್ಲ ರೀತಿಯ ಅನ್ಯಾಯಗಳ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಬಾಹ್ಯ ಸಮಾಜವೂ ಸಹ ಈ ಪ್ರವೃತ್ತಿಗೆ ಕುರುಡಾಗಿರುತ್ತದೆ.

ಇಂದಿಗೂ ನಮ್ಮ ಸಮಾಜದಲ್ಲಿ ಕಾಣಬಹುದಾದ ಜೀವಪರ ಮನಸುಗಳನ್ನು ಕಾಡಬೇಕಿರುವುದು ಈ ಪ್ರವೃತ್ತಿಯ ಉಗಮ, ಪೋಷಣೆ ಮತ್ತು ಅದರ ಹಿಂದಿನ ವಿಕೃತಿಗಳು. ಸಾಂಸ್ಥಿಕ ಧರ್ಮ ಅಥವಾ ಜಾತಿಯ ನೆಲೆಗಳನ್ನು ಸಂರಕ್ಷಿಸುವ ನೆಪದಲ್ಲಿ ಯುವ ಮನಸುಗಳನ್ನು ಹಿಂಸೆಗೆ ಪ್ರೇರೇಪಿಸುವುದರಿಂದ  ಒಂದು ಸಮಾಜ ತನ್ನ ಒಡಲನ್ನೇ ಸೀಳುವಂತಹ ದೊಡ್ಡ ಪಡೆಗಳನ್ನೇ ಸೃಷ್ಟಿಸಿಬಿಡುತ್ತದೆ. ಈ ಬೆಳವಣಿಗೆಯನ್ನು ನಿರ್ದಿಷ್ಟ ಸೈದ್ಧಾಂತಿಕ ಚೌಕಟ್ಟುಗಳಲ್ಲಿಟ್ಟು ನೋಡುವುದರ ಬದಲು ವಿಶಾಲ ಸಮಾಜದ ನೆಲೆಯಲ್ಲಿಟ್ಟು ಪರಾಮರ್ಶಿಸಿದಾಗ ನಮಗೆ ಈ ಎಲ್ಲ ಪಾತಕಿ ಕೃತ್ಯಗಳು ಒಂದು ಸಾಮಾಜಿಕ ವ್ಯಾಧಿಯಂತೆ ಕಾಣುತ್ತವೆ. ಈ ವ್ಯಾಧಿಯು ಉಲ್ಬಣಿಸುವಂತೆ ಮಾಡುವ ದುಷ್ಟ ಶಕ್ತಿಗಳು ಇರುವಂತೆಯೇ ಶಮನ ಮಾಡುವ ಮಾನವೀಯ ಮನಸುಗಳೂ ಇದ್ದೇ ಇವೆ. ಈ ಮಾನವೀಯ ಮನಸುಗಳು ತಮ್ಮ ಸಾಮುದಾಯಿಕ ಅಸ್ಮಿತೆಗಳನ್ನು ಕೊಡವಿಕೊಂಡು ಸಮಷ್ಟಿ ಪ್ರಜ್ಞೆಯೊಂದಿಗೆ ಮುನ್ನಡೆದಾಗ, ವ್ಯಾಧಿಯು ವ್ಯಸನವಾಗಿ ಪರಿಣಮಿಸುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.

ಚಿಕಿತ್ಸಕ ಸಮಾಜದ ಅಗತ್ಯತೆ:

ಸಾಮಾಜಿಕ ಅಪರಾಧಗಳನ್ನು ಸಾಂಸ್ಕೃತಿಕ ಚೌಕಟ್ಟಿನಲ್ಲಿಟ್ಟು ನೋಡುವುದರ ಬದಲು ನಮ್ಮ ನಿತ್ಯ ಬದುಕಿನ ವಾತಾವರಣದ ನಡುವೆಯೇ ಗುರುತಿಸಲು ಪ್ರಯತ್ನಿಸಿದಾಗ ಸಮಾಜದ ಆಂತರ್ಯದೊಳಗೇ ನಮಗೆ ಹಲವು ವಿಕೃತಿಗಳು ಕಂಡುಬರುತ್ತವೆ. ವಿಶಾಲ ನೆಲೆಯಲ್ಲಿ ಈ ವಿಕೃತಿಗಳನ್ನು ಪುರುಷಾಧಿಪತ್ಯ, ಮತಾಂಧತೆ, ಜಾತಿ ಶ್ರೇಷ್ಠತೆ ಮುಂತಾಗಿ ಗುರುತಿಸಬಹುದಾದರೂ, ಮಾನವ ಸಮಾಜವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಸದಸ್ಯನಲ್ಲೂ ಅಂತರ್ಗತವಾಗಿರಬಹುದಾದ ಮೌಲ್ಯಗಳನ್ನು ಉದ್ಧೀಪನಗೊಳಿಸುವ ಪ್ರಯತ್ನಗಳು ವರ್ತಮಾನದ ತುರ್ತು. ಈ ಮಾನವೀಯ ಮೌಲ್ಯಗಳಿಗೆ ಯಾವುದೇ ಧರ್ಮ-ಸಿದ್ಧಾಂತ-ತತ್ವಗಳಿಗಿಂತಲೂ ಹೆಚ್ಚಾಗಿ ನೆರವಾಗುವುದು ಮನುಜ ಪ್ರೀತಿ ಮತ್ತು ಜೀವಪರ ಚಿಂತನೆ. ಈ ಮೌಲ್ಯಗಳ ಬೀಜಗಳನ್ನು ನೆಡುವ ಕೆಲಸವನ್ನು ಇಡೀ ಸಮಾಜವೇ ಮಾಡಬೇಕಿದೆ.

ಕಾನೂನು ಮತ್ತು ಆಡಳಿತ ವ್ಯವಸ್ಥೆ ಪ್ರತಿಯೊಂದು ಅಪರಾಧವನ್ನೂ ಸಾಕ್ಷ್ಯಾಧಾರಗಳ ನೆಲೆಯಲ್ಲಿ ನಿಷ್ಕರ್ಷೆ ಮಾಡುತ್ತದೆ. ಅಲ್ಲಿ ಆರೋಪಿಗಳು ಅಪರಾಧಿಗಳಾಗಿ ಸಾಬೀತಾಗುವ ಸುದೀರ್ಘ ಪ್ರಕ್ರಿಯೆಯಲ್ಲಿ ಸತ್ಯ ಎಲ್ಲೊ ಮರೆಯಾಗಿಹೋಗುತ್ತದೆ. ಸೌಜನ್ಯ ಪ್ರಕರಣ ಇದನ್ನು ನಮ್ಮೆದುರು ಇಟ್ಟಿದೆ. ಆದರೆ ಸದಾ ಕಣ್ತೆರೆದಿರುವ ಸಮಾಜಕ್ಕೆ ಈ ಪಾತಕ ಕೃತ್ಯಗಳು ಏಕೆ ಸಂಭವಿಸುತ್ತವೆ ಎಂದು ಖಚಿತವಾಗಿಯೂ ತಿಳಿದಿರುತ್ತದೆ. ಸಾಮಾಜಿಕ ವ್ಯಾಧಿ ಎಂದೇ ಗುರುತಿಸಬಹುದಾದ ಈ ವಿಕೃತ ಮನಸ್ಥಿತಿಗೆ ಕಾರಣಗಳೂ ತಿಳಿದಿರುತ್ತದೆ. ಇದನ್ನು ಶಮನ ಮಾಡಲು ಕಾನೂನಾತ್ಮಕ ಮದ್ದು ಅರೆಯಲಾಗುವುದಿಲ್ಲ. ಸಮಾಜವೇ ಮದ್ದು ಕಂಡುಕೊಳ್ಳಬೇಕಿದೆ. ರಾಜಕೀಯ-ಸೈದ್ಧಾಂತಿಕ ಅಸ್ಮಿತೆ-ಒಲವುಗಳಿಂದಾಚೆಗೆ ನೋಡುವ ದಾರ್ಷ್ಟ್ಯವನ್ನು ಸಮಾಜವೊಂದು ಬೆಳೆಸಿಕೊಳ್ಳುವುದೇ ಆದರೆ ಹಾದಿ ತಪ್ಪುತ್ತಿರುವ ಯುವ ಸಮೂಹವನ್ನು, ಮೌಲಿಕವಾಗಿ ಅವನತಿಯತ್ತ ಸಾಗುತ್ತಿರುವ ಸಮಾಜವನ್ನು ಸರಿಪಡಿಸಲು ಸಾಧ್ಯವಾದೀತು.

ಯಾರಿಗೂ ಸಲ್ಲದವಳಾಗಿರುವ ಸೌಜನ್ಯ ಬರ್ಬರ ಅತ್ಯಾಚಾರ-ಹತ್ಯೆಗೀಡಾದರೂ ಯಾವುದೇ ಅಸ್ಮಿತೆಗಳ ಸೋಂಕಿಲ್ಲದೆ ಅನಾಥೆಯಾಗಿಯೇ ಉಳಿದಿರುವುದೇ ನಮ್ಮ ಸಾಮಾಜಿಕ ವ್ಯಾಧಿಯ ಸಂಕೇತವಾಗಿಯೂ ಕಾಣುತ್ತದೆ. ಕಳೆದ ಒಂದು ದಶಕದಲ್ಲಿ ಧಾನಮ್ಮಳನ್ನೂ ಒಳಗೊಂಡಂತೆ ಹತ್ತು ಹಲವು ಜೀವಗಳು ಈ ವ್ಯಾಧಿಗೆ ಬಲಿಯಾಗಿವೆ. ಚಿಕಿತ್ಸಕ ಗುಣ ಹೊಂದಿರುವ ಯಾವುದೇ ಚಿಂತನಾ ವಾಹಿನಿ ಅಥವಾ ಸಮಾಜ ಈ ವ್ಯಾಧಿಯನ್ನು ಗುಣಪಡಿಸಲು ಸಾಧ್ಯ. ಆದರೆ ಕಲುಷಿತಗೊಂಡಿರುವ ಮನಸುಗಳಲ್ಲಿ ಮಾನವತೆಯ ಮೌಲ್ಯಗಳನ್ನು ಬಿತ್ತುವ, ಸಹಬಾಳ್ವೆ ಮತ್ತು ಸಮನ್ವಯದ ಸಂಯಮವನ್ನು ಮೂಡಿಸುವ ಬಹುದೊಡ್ಡ ಜವಾಬ್ದಾರಿಯೊಂದಿಗೆ ಇದನ್ನು ನಿಭಾಯಿಸಬೇಕಾಗುತ್ತದೆ. ಒಂದು ಸುಶಿಕ್ಷಿತ-ಆಧುನಿಕ-ನಾಗರಿಕತೆಯುಳ್ಳ ಸಮಾಜವಾಗಿ ನಾವು ಇದಕ್ಕೆ ಸಜ್ಜಾಗಿದ್ದೇವೆಯೇ ? ಉತ್ತರ ಶೋಧಿಸಬೇಕಿದೆ.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿhttps://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿhttps://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿhttps://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ