ಈ ದೇಶ ಮಾರಾಟಕ್ಕಿದೆಯೇ ?
- ಧಮ್ಮಪ್ರಿಯ, ಬೆಂಗಳೂರು
ಭಾರತ ದೇಶವನ್ನು ಹಲವಾರು ರಾಜಮನೆತನಗಳು ಆಳ್ವಿಕೆ ನಡೆಸಿ ಬಹುಜನರ ಬದುಕಿಗೆ ಸಾಧ್ಯವಾದ ಸವಲತ್ತುಗಳನ್ನು ನೀಡಲು ಶ್ರಮಿಸಿರುವುದನ್ನು ನಾವು ಇತಿಹಾಸದ ಪುಟಗಳಿಂದ ತಿಳಿಯಬಹುದು. ಆದರೆ ಪರಕೀಯರ ಆಕ್ರಮಣವಾದ ಮೇಲೆ ಭಾರತದ ಸಂಪತ್ತನ್ನು ರಾಶಿರಾಶಿಯಾಗಿ ವಿದೇಶಕ್ಕೆ ರವಾನಿಸಲಾಯಿತು ಎಂಬುದನ್ನು ಸಹ ಓದಿದ್ದೇವೆ. ಇಂತಹ ಲೂಟಿ ಕೋರರಿಂದ ದೇಶವನ್ನು ರಕ್ಷಣೆ ಮಾಡಲು ಸ್ವಾತಂತ್ರ್ಯ ಹೋರಾಟವನ್ನು ಮಾಡಬೇಕಾಯಿತು. ರಾಜಮನೆತನಗಳು ತಮ್ಮ ಶ್ರೇಷ್ಠತೆಯ ಆಧಾರದ ಮೇಲೆ ಆಳ್ವಿಕೆ ಮಾಡಿದ್ದರು. ಇದರ ಪ್ರತಿಫಲವಾಗಿ ಭಾರತೀಯ ಮುಂಚೂಣಿ ಹಿಂದೂ ನಾಯಕರು ಭಾರತದ ಸ್ವಾತಂತ್ರ್ಯದ ಹೋರಾಟಕ್ಕೆ ಮುಂದಾಗಿರಲಿಲ್ಲ ಎನಿಸುತ್ತಿದೆ. ಆದರೆ ಅಲ್ಲಲ್ಲಿ ರಾಜ ಮನೆತನಗಳ ವಿರುದ್ಧವಾಗಿ ಸಣ್ಣ ಪುಟ್ಟ ದಂಗೆಗಳು ನಡೆಯುತ್ತಿದ್ದವು ಎನ್ನುವುದನ್ನು ಸೂಕ್ಷ್ಮವಾಗಿ ಇತಿಹಾಸದ ಪುಟಗಳಲ್ಲಿ ದಾಖಲಿಸಲಾಗಿದೆ. ಇಂತಹ ದಂಗೆಗಳು ಅಲ್ಲಿನ ಶೋಷಿತರ, ಅಸಮಾನತೆಯ,ಜಾತಿ, ಧರ್ಮ, ಕೋಮು ಗಲಭೆ, ಮಡಿವಂತಿಕೆಯ ಶಿಕ್ಷಣ ವ್ಯವಸ್ಥೆಯ ವಿರುದ್ಧ ಅಸಮಾಧಾನ ಗೊಂಡವರ ಬದುಕಿನ ಹೋರಾಟಗಳು ಎನ್ನಬಹುದು. ಇಂತಹ ಶ್ರೇಷ್ಠತೆಯ ರಾಜಮನೆತನಗಳಿಂದ ಬಿಡುಗಡೆಗೊಂಡು ಪರಕೀಯರ ಕಪಿಮುಷ್ಠಿಗೆ ಸಿಲುಕುವಂತಾಯಿತು.
ಬ್ರಿಟೀಷರು ಭಾರತಕ್ಕೆ ಬಂದಂತಹ ಸಂದರ್ಭದಲ್ಲಿ ಭಾರತದಲ್ಲಿನ ಸಾಮಾಜಿಕ ಅಸಮಾನತೆ, ಜಾತಿ ತಾರತಮ್ಯ, ಧರ್ಮ ರಾಜಕಾರಣ, ಜಾತಿಯ ಶ್ರೇಷ್ಠತೆಯ ಮನೋಭಾವ, ವಿದ್ಯೆಯಲ್ಲಿನ ವಂಚನೆ. ಲಿಂಗತಾರತಮ್ಯ, ಸಂಪತ್ತಿನ ಅಸಮಾನತೆ ಇವೆಲ್ಲವೂ ನಿಧಾನವಾಗಿ ತನ್ನ ಕೊಂಡಿಯನ್ನು ಕಳಚಿಕೊಳ್ಳಲಾರಂಭಿಸಿದವು. ಇದಲ್ಲದೆ ಬ್ರಿಟೀಷರೂ ಸಹ ಭಾರತೀಯ ರಾಜಮನೆತನಗಳ ನಡುವೆ ರಾಜಕಾರಣ ಮಾಡಲಾರಂಭಿಸಿದರು.
ಒಬ್ಬರನ್ನೊಬ್ಬರ ವಿರುದ್ಧ ಎತ್ತಿಕಟ್ಟಿ ತನ್ನ ವ್ಯಾಪಾರ ವ್ಯವಸ್ಥೆಯನ್ನು ಬಂಡವಾಳವಾಗಿಸಿಕೊಂಡರು. ಕಂಪನಿಗೆ ಬೇಕಾದ ಕಾರ್ಮಿಕರಿಗೆ ಸಾಮಾನ್ಯ ಶಿಕ್ಷಣದ ಅಗತ್ಯವಿದೆ ಎಂದು ಅರಿತರು. ಅಲ್ಲದೆ ಎಲ್ಲಾ ಜನಾಂಗಗಳಿಗೂ ತಾರತಮ್ಯವಿಲ್ಲದೆ ಶಿಕ್ಷಣ ನೀಡಲು ಪ್ರಾರಂಭಿಸಿದರು.ಇದರಿಂದ ಇಲ್ಲಿನ ಬಹುಜನರಿಗೆ ಶೋಷಿತರಿಗೆ ಸ್ವಲಮಟ್ಟಿನ ಬಿಡುಗಡೆಯ ದಾರಿ ಕಾಣಲು ಪ್ರಾರಂಭವಾಯಿತು. ಇದನ್ನರಿತ ಶ್ರೇಷ್ಠತೆಯ ಸನಾತನಿಗಳಿಗೆ,ಕುಲೀನರಿಗೆ ಬದುಕಿನಲ್ಲಿ ಅಭದ್ರತೆ ಕಾಡತೊಡಗಿತು. ಅಂದಿಗೆ ಭಾರತೀಯ ಮುಂಚೂಣಿ ನಾಯಕರು, ಹಿಂದೂಪರ ಸಂಘಟನೆಕಾರರು ಧರ್ಮದ ಶ್ರೇಷ್ಠತೆಗೆ ದಕ್ಕೆಯಾಗದಂತೆ ಕಾಪಾಡಿಕೊಳ್ಳಲು ಜಾಗೃತರಾಗಿ ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಮುಂದಾದರು. ಇದರ ಪರಿಣಾಮವಾಗಿ 1857 ರ ಹೊತ್ತಿಗೆ ಭಾರತದಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹಚ್ಚಲಾಯಿತು.
ಇಂತಹ ಸ್ವಾತಂತ್ರ್ಯದ ಕಾಡ್ಗಿಚ್ಚಿನ ಕಿಡಿ ಎಷ್ಟರ ಮಟ್ಟಿಗೆ ತನ್ನ ತೀವ್ರತೆಯನ್ನು ಪಡೆಯಿತೆಂದರೆ 1927 ರ ಹೊತ್ತಿಗೆ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡಲು ಮುಂದಾಗಿಬಿಟ್ಟರು ಎನ್ನುವಷ್ಟರ ಮಟ್ಟಿಗೆ ತೀವ್ರತೆಯನ್ನು ಪಡೆದುಕೊಂಡಿತ್ತು. ಕಾಲಕ್ರಮೇಣ ಭಾರತದಲ್ಲಾದ ನಿಮ್ನವರ್ಗಗಳ ಸಮಾನತೆಯ ಚಳುವಳಿಯ ಪರಿಣಾಮವಾಗಿ ಭಾರತಕ್ಕೆ ಸ್ವಾತಂತ್ರ್ಯ ನೀಡುವುದನ್ನು ಕೆಲವು ವರ್ಷಗಳಿಗೆ ಮುಂದೂಡಲಾಯಿತು.
ಅದಕ್ಕೆ ಸೈಮನ್ ಕಮಿಷನ್, “ಸೈಮನ್ ಗೋ ಬ್ಯಾಕ್” ಚುಳುವಳಿಯೇ ಇದಕ್ಕೆ ದೊಡ್ಡ ಕಾರಣವಾಗಿತ್ತು ಎನ್ನಬಹುದು. ಇದಾದ ನಂತರ ಲಂಡನ್ನಿನ ದುಂಡು ಮೇಜಿನ ಸಮ್ಮೇಳನದಲ್ಲಾದ ಬಹಳ ಮಹತ್ವ ಪೂರ್ಣ ಬೆಳವಣಿಗೆ ಮತ್ತೊಂದು ಇತಿಹಾಸ ಸೃಷ್ಠಿಯಾಗಲು ಪ್ರಾರಂಭವಾಯಿತು.
ಬಾಬಾಸಾಹೇಬರ ಹೋರಾಟದ ಪ್ರತಿಫಲವಾಗಿ ಭಾರತೀಯ ಶೋಷಿತರಿಗೆ ಸಮಾನ ಅವಕಾಶಗಳು ದೊರೆಯಲು ನಾಂದಿಯಾಯಿತು. ಅಂತಿಮವಾಗಿ 1947 ರಂದು ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡಲಾಯಿತು. ನಂತರ 1950 ರಂದು ಬಾಬಾಸಾಹೇಬ್ ಡಾ ಅಂಬೇಡ್ಕರ್ ರವರು ಭಾರತಕ್ಕೆ ಬೃಹತ್ ಸಮಾನತೆಯ ಸಂವಿಧಾನವನ್ನು ಬರೆದು ಅದನ್ನು ಜಾರಿಮಾಡಲು ಸಾಧ್ಯವಾಯಿತು. ಆದರೆ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯವನ್ನು ಬಾಬಾಸಾಹೇಬರು “ಭಾರತದ ಸ್ವಾತಂತ್ರ್ಯ ಎನ್ನುವುದು ಬಿಳಿಯರಿಂದ ಈ ದೇಶದ ಮೇಲುವರ್ಗಗಳಿಗೆ ಸಿಕ್ಕ ಸ್ವಾತಂತ್ರ್ಯ, ಈ ದೇಶದ ಪಟ್ಟಭದ್ರ ಹಿತಾಶಕ್ತಿಯ ಶ್ರೇಷ್ಠತೆಯ ಮನಸ್ಸುಳ್ಳವರ ಕೈಗೆ ಸಿಕ್ಕಿರುವ ಸ್ವಾತಂತ್ರ್ಯವೇ ಹೊರತು ಶೋಷಿತರಿಗೆ ಸಿಕ್ಕಿರುವ ಸ್ವಾತಂತ್ರ್ಯವಲ್ಲಾ” ಎಂದು ಹೇಳಿದ್ದಾರೆ. ಇದು ಪ್ರಸ್ತುತ ರಾಜಕೀಯ ರಂಗದಲ್ಲಾಗುತ್ತಿರುವ ತೀವ್ರ ಬದಲಾವಣೆಯನ್ನು ಗಮನಿಸಿದರೆ ಭಾರತದಲ್ಲಿ ಶೋಷಣೆಗೊಳಗಾದವರು ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜಾಗಬೇಕಿದೆ ಎನಿಸುತ್ತಿದ್ದೆ.
ಬಂಧುಗಳೇ, ಭಾರತಕ್ಕೆ ಸ್ವಾತಂತ್ರ್ಯ ಬಂದು ಸುಮಾರು 75 ವರ್ಷಗಳು ಕಳೆದು ಸುವರ್ಣ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ ಆಚರಿಸಿದ್ದು ಆಯಿತು. ಆದರೆ ಪರಕೀಯರ ಆಳ್ವಿಕೆಯಲ್ಲಿ ಎಷ್ಟರ ಮಟ್ಟಿಗೆ ಗುಲಾಮರಂತೆ ಬದುಕಿದ್ದೆವೋ, ಅದಕ್ಕಿಂತಲೂ ಹೆಚ್ಚಾಗಿ ಇಂದಿನ ಖಾಸಗೀ ಕಂಪನಿಗಳ ಮಾಲೀಕರ ಒಡೆತನದಲ್ಲಿ ಸಿಲುಕಿ ಹಗಲಿರುಳೆನ್ನದೆ ದುಡಿದು ಬೇಸತ್ತು ಚಾಕರಿ ಮಾಡುತ್ತಿದ್ದೇವೆ ಎನ್ನುವುದು ಅಷ್ಟೇ ಸತ್ಯವೆನಿಸುತ್ತಿದೆ. ಆದರೆ ಭಾರತದೇಶ ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರೆಯುತ್ತಿದೆ ಎನ್ನುವುದು ಸಹ ಅಷ್ಟೇ ಮುಖ್ಯವಾದ ವಿಚಾರವೆನಿಸುತ್ತಿದೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಪ್ರಕಾರ ಭಾರತ ದೇಶದಲ್ಲಿದ್ದ ಎಲ್ಲಾ ಸರ್ಕಾರಿ ಒಡೆತನದ ಸಂಸ್ಥೆಗಳು ಖಾಸಗಿಯವರ ಪಾಲಾಗುತ್ತಿರುವುದು ಬಹಳ ನೋವಿನ ಸಂಗಾತಿ ಯಾಗಿದೆ. ಇಂತಹ ಖಾಸಗೀಕರಣದ ಹಿಂದಿರುವ ಹುನ್ನಾರಗಳಾದರು ಏನು ಎನ್ನುವುದನ್ನು ಇಂದಿನ ಯುವಜನತೆಯು ಅರ್ಥ ಮಾಡಿಕೊಳ್ಳಬೇಕಿದೆ. ಖಾಸಗೀ ಕಂಪನಿಗಳಿಂದ ಆಡಳಿತದ ದಕ್ಷತೆ, ಕರ್ತವ್ಯದಲ್ಲಿ ಬದ್ಧತೆ, ಆರ್ಥಿಕ ಅಭಿವೃದ್ಧಿಯ ಸಾಧನೆ, ಅರಾಜಕತೆಯ ತಡೆಗೆ ಪ್ರಾಮುಖ್ಯತೆ, ಎಲ್ಲವೂ ಸಾಧ್ಯ ಎಂದು ಹೇಳಲು ಹೊರಟಿರುವ ಆಡಳಿತ ರೂಢ ಸರ್ಕಾರಗಳು ತಮ್ಮ ಆಡಳಿತ ವೈಕರಿಯನ್ನೇ ವಿಪುಲಗೊಳಿಸಿಕೊಂಡಿವೆ, ಇವರ ದಕ್ಷತೆಯಲ್ಲಿ ಯಾವುದೇ ಬದ್ಧತೆಯಿಲ್ಲಾ, ಇವರ ಸರ್ಕಾರಗಳು ಸಂಪೂರ್ಣ ಅರಾಜಕತೆಯ ತೊಟ್ಟಿಲುಗಳು ಎಂದು ತಮ್ಮನ್ನು ತಾವೇ ಒಪ್ಪಿಕೊಂಡಂತೆ ಎಂದರು ತಪ್ಪಾಗಲಾರದು.ಇದು ಇಂದಿನ ಸರ್ಕಾರಗಳು ತನ್ನ ಹಿಡಿತದಲ್ಲಿನ ಸರ್ಕಾರಿ ಸಂಸ್ಥೆಗಳನ್ನು ನಿಭಾಯಿಸುವ ಅನುಭವವಿಲ್ಲದ ನಾಯಕರಿಂದ ಕೂಡಿದೆ ಎಂದು ತಮ್ಮನ್ನು ತಾವೇ ಒಪ್ಪಿಕೊಂಡಂತಾಗಿ ಸರ್ಕಾರಿ ಸಂಸ್ಥೆಗಳೆಲ್ಲವನ್ನು ಖಾಸಗಿಯವರ ಕೈಗೊಪ್ಪಿಸುತ್ತಿದೆ.
ಆತ್ಮೀಯರೇ ಖಾಸಗೀಕರಣ ವಿಷಯದಲ್ಲಿ ಮೇಲು ಜಾತಿಯ ವ್ಯಕ್ತಿಯೊಬ್ಬರು ಹೀಗೆ ಬರೆದುಕೊಂಡಿದ್ದರು ದಲಿತರನ್ನು , ದಲಿತರ ಮೀಸಲಾತಿಯ ವ್ಯವಸ್ಥೆಯಯನ್ನು ಮಟ್ಟ ಹಾಕಬೇಕಾದರೆ ಸರ್ಕಾರಿ ಸಂಸ್ಥೆಗಳು ಖಾಸಗಿಯವರ ಕೈಗಳಿಗೆ ವರ್ಗಾವಣೆ ಯಾಗಬೇಕು.ಅಂತಹ ಕೆಲಸವನ್ನು ಇಂದಿನ ರಾಜಕೀಯ ಆಡಳಿತಾರೂಢ ಪಕ್ಷಗಳು ಮಾಡುತ್ತಿವೆ. ಇದಕ್ಕಾಗಿ ದಲಿತೇತರರು ಒಂದಾಗಿ ಇಂತಹ ಪಕ್ಷವನ್ನೇ ಬೆಂಬಲಿಸಬೇಕು,ಇದು ನಮ್ಮೆಲ್ಲರ ಮುಂದಿನ ಅಜೆಂಡಾ ಕೂಡ, ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದನ್ನು ಓದಿದಾಗ ಬಹಳ ದಿಗ್ಭ್ರಮೆಯಾಯಿತು.ಜೊತೆಗೆ ಯಾವ ಜನಾಂಗದವರು ಮೀಸಲಾತಿ ಪ್ರಕ್ರಿಯೆಯನ್ನು ವಿರೋದಿಸಿದ್ದರೋ ಅವರ ಬಂಧುಗಳಿಗೆ ಸರ್ಕಾರ ಶೇಕಡಾ10% ಮೀಸಲಾತಿ ನೀಡಿದ್ದನ್ನು ಬಹಳ ಖುಷಿಯಾಗಿ ಅನುಭವಿಸಲು ಪ್ರೋತ್ಸಾಹ ನೀಡಲಾಯಿತು.ಇದು ಇಂದಿನ ರಾಜಕೀಯ ನಾಯಕರ ಜಾತಿನಿಷ್ಠ ದೋರಣೆಗಳು ಎಂದರೆ ತಪ್ಪಾಗಲಾರದು.
ಭಾರತದ ಇಂದಿನ ರಾಜಕೀಯ ಬೆಳವಣಿಗೆಯಲ್ಲಿ ಕಳೆದ 8-10 ವರ್ಷಗಳಲ್ಲಿ ಸುಮಾರು 23 ಸರ್ಕಾರಿ ಒಡೆತನದ ಸಂಸ್ಥೆಗಳು ಖಾಸಗಿಯವರ ಪಾಲಾಗಿದ್ದು,ಯಾವುದೇ ಖಾಸಗೀ ಒಡೆತನದ ಸಂಸ್ಥೆಗಳು ಸರ್ಕಾರಿ ಒಡೆತನಕ್ಕೆ ಬಾರದಿರುವುದು ಈ ದೇಶದ ಬಹುಜನರ, ದುಡಿಯುವ ಕೈಗಳಿಗೆ ಉದ್ಯೋಗವಿಲ್ಲದ ದುರಂತದ ಬದುಕಾಗಿದೆ. ಪ್ರತಿ ಖಾಸಗೀ ಕಂಪನಿಗಳು ಭಾರತದ ಸಂವಿಧಾನದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿವೆ ಎನ್ನುವುದಾದರೆ ಖಾಸಗೀ ಕಂಪೆನಿಗಳಲ್ಲಿ ಮೀಸಲಾತಿ ನೀತಿ ಜಾರಿಯಾಗಬೇಕು ಎನ್ನುವುದು ಬಹುಜನರ ಒತ್ತಾಸೆಯಾಗಿದೆ. ಭಾರತ ಸರ್ಕಾರವು ನಿಜವಾದ ಜನಪರ,ಬಹುಜನರ ಪರವಾದ ಸರ್ಕಾರವಾಗಿದ್ದರೆ ಜನರ ಪರವಾಗಿಯೇ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಜಾತಿ ಜನಸಂಖ್ಯಾವಾರು ಮೀಸಲಾತಿ ನೀಡಲು ಆದೇಶಿಸಬೇಕಾದದ್ದು ಮೂಲಭೂತ ಕರ್ತವ್ಯವಾಗಿದೆ. ಇದನ್ನೇ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆ ಎಂತಲೂ ಗೌರವಿಸಬಹುದು. ಮೀಸಲು ಕ್ಷೇತ್ರದಿಂದ ಗೆದ್ದು ಹೋದ ನಾಯಕರು ಇದರ ಬಗ್ಗೆ ಮಾತನಾಡದೆ ಸುಮ್ಮನೆ ಕುಳಿತಿರುವುದನ್ನು ನೋಡಿದರೆ ಇವರೇ ನಿಜವಾದ ಬಹುಜನ ಏಳಿಗೆಯ ವಿರೋಧಿಗಳು ಎನಿಸುತ್ತಿದೆ. ಇವರುಗಳನ್ನು ಬಾಬಾಸಾಹೇಬರ ದೃಷ್ಠಿಯಲ್ಲಿ ಹೇಳುವುದಾದರೆ ಇವರೆಲ್ಲಾ ಬಾಯಿಕಟ್ಟಿದ ನಾಯಿಗಳಾಗಿದ್ದಾರೆ. ಬೇರೆಯವರು ಕಟ್ಟಿರುವ ಪಕ್ಷದ ಕೊಟ್ಟಿಗೆಯಲ್ಲಿ ಮೂಗು ದಾರ ಹಾಕಿದ ಎತ್ತುಗಳಾಗಿದ್ದಾರೆ ಎನಿಸುತ್ತಿದೆ.
ಸಾಹಿತ್ಯದ ತಾತ್ವಿಕ ಚಿಂತಕರು, ಹೊಸ ಆಯಾಮಗಳ ಜೊತೆಗೆ ಹೊಸ ಓದುಗ ತಂಡವನ್ನೇ ಕಟ್ಟಲು ಹೊರಟಿರುವ ಡಾ ಡೊಮಿನಿಕ್ ಡಿ. ರವರು ಬರೆದಿರುವ “ಈ ಜಗತ್ತು ಮಾರಾಟಕ್ಕಿಲ್ಲಾ” ಎನ್ನುವ ಲೇಖನವನ್ನು ಓದಿದಾಗ ಅದರಲ್ಲಿನ ವಿಚಾರಗಳು ನನ್ನಲ್ಲಿ ಬಹಳಷ್ಟು ತಲ್ಲಣಗಳನ್ನು ಸೃಷ್ಠಿಸಿದವು.ಇಂದಿನ ಖಾಸಗೀ ಬದುಕಿನ ಜಗತ್ತಿಗೆ ನನ್ನನ್ನು ನಾನು ಅರಿತುಕೊಳ್ಳುವಾಗ ನನ್ನಲ್ಲಿ ಸಿಟ್ಟು ಆಕ್ರೋಶದ ಅಲೆಯನ್ನು ಎಬ್ಬಿಸುವುದರ ಜೊತೆಗೆ “ಭಾರತವು ಸಹ ಮಾರಾಟಕ್ಕಿದೇಯಾ “ಎನ್ನುವಷ್ಟರ ಮಟ್ಟಿಗೆ ನನ್ನನ್ನು ಅರ್ಥೈಸಿಕೊಳ್ಳಲು ಬಹಳ ಕಷ್ಟಕರವಾಯಿತು. ಇಂತಹ ಹೊಸ ವಿಚಾರಗಳನ್ನು ಒಳಗೊಂಡ ಈ ಲೇಖನ ನನಗೆ ಇನ್ನೊಂದು ಸಾಹಿತ್ಯ ಲೋಕದ ಹೊಸ ಜಗತ್ತನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ ಎನಿಸಿತು.ಇತ್ತೀಚೆಗೆ ಖಾಸಗೀಕರಣ ಮತ್ತು ಆಧುನಿಕ ಮುಕ್ತ ಮಾರುಕಟ್ಟೆಯ ವ್ಯವಸ್ಥೆಯನ್ನು ಅರ್ಥೈಸಿಕೊಳ್ಳುವಲ್ಲಿ ಬಹಳ ಸಹಕಾರಿಯಾಯಿತು. ನನ್ನ ಮನದಲ್ಲಿ ಬಂದ ಆಲೋಚನೆಗಳು ಇದು ಸಾಮಾಜಿಕ ಪರಂಪರೆಯ ಭಾರತವಾಗಿದೆ ಎನಿಸಿತು. ಹಾಗಾಗಿ “ಭಾರತ ಎನ್ನುವುದು ಮಾರಾಟಕ್ಕಿಲ್ಲಾ” ಎನ್ನುವಷ್ಟರ ಮಟ್ಟಿಗೆ ನನ್ನನ್ನು ಮತ್ತಷ್ಟು ಗಟ್ಟಿಗೊಳಿಸತೊಡಗಿತು. ಇದು ಇಂದಿಗೂ ನಿರಂತರ ಹೋರಾಟದ ಅಲೆಯಾಗಿ ಸಾಮಾನ್ಯ ಜನರನ್ನು ಎಚ್ಚರಗೊಳಿಸುವ ಅಸ್ತ್ರವಾಗಿ ನನ್ನಲ್ಲಿ ರೂಪುಗೊಳ್ಳುತ್ತಿದೆ. ಇದನ್ನು ಪ್ರತಿಯೋರ್ವ ಯುವಜನತೆಯು ಅರ್ಥಮಾಡಿಕೊಳ್ಳುವ ಅನಿವಾರ್ಯತೆ ಬಂದೊದಗಿದೆ. “ಈ ದೇಶ ಎನ್ನುವುದು ಮಾರಾಟದ ವಸ್ತುವೂ ಅಲ್ಲಾ, ಜೊತೆಗೆ ಅದೊಂದು ಮಾರಾಟ ಮಳಿಗೆಯೂ ಅಲ್ಲಾ” ಇದರ ರಕ್ಷಣೆ ಇಂದಿನ ಯುವ ಜನತೆಯ ಮೇಲಿದೆ ಎನ್ನುವ ಜವಾಬ್ದಾರಿಯನ್ನು ಹೊರಬೇಕಾಗಿದೆ.
1991 ರ ಹೊಸ ಆರ್ಥಿಕ ನೀತಿಯ ಪರಿಣಾಮವಾಗಿ ಜಾಗತಿಕ ಪಲ್ಲಟಗಳು ಪ್ರಾರಂಭಗೊಂಡು ಶೋಷಿತರ ಬದುಕು ಮತ್ತಷ್ಟು ಕ್ಷೀಣಿಸಲು ಪ್ರಾರಂಭವಾಯಿತು. ಖಾಸಗೀಕರಣದ ನೆಪದಲ್ಲಿ ದಲಿತರಿಗೆ ಅದರಲ್ಲೂ ದಲಿತ ಹೆಣ್ಣುಮಕ್ಕಳಿಗೆ ಕೇವಲ ಶೇಕಡಾ 1% ಕ್ಕಿಂತಲೂ ಕಡಿಮೆ ಉದ್ಯೋಗಗಳು ಸಿಕ್ಕದಂತಾಯಿತು. ಸಿಕ್ಕಿದ್ದರು ಕೇವಲ ಕಸ ಗುಡಿಸುವ, ಮಲಮೂತ್ರ ವಿಸರ್ಜನೆಯ ಸ್ಥಳಗಳನ್ನು ಸ್ವಚ್ಛಮಾಡುವ ಕೆಲಸಕಷ್ಟೆ ಸೀಮಿತವಾದವು. ಇವರುಗಳು ಉತ್ತಮ ಪೌಷ್ಠಿಕ ಆಹಾರ ಮತ್ತು ಸುಖಕರ ಜೀವನ ನಡೆಸಲು ಕಷ್ಟವಾಗಿದ್ದು ಅಪೌಷ್ಠಿಕತೆಯಿಂದ ಸಾಯುವ ಸ್ಥಿತಿಗೆ ತಲುಪಿರುವ ಎಷ್ಟೋ ಘಟನೆಗಳು ಗತಿಸಿರುವುದನ್ನು ನಾವು ಕಾಣಬಹುದಾಗಿದೆ. ಇದು ಖಾಸಗಿ ಕಂಪನಿಗಳಿಗೆ ಅರಿವಾಗದಿದ್ದರು, ಶ್ರೇಷ್ಠತೆಯ ಕುಲೀನ ಜನಾಂಗದ ಬಹು ದೊಡ್ಡ ಅಜೆಂಡ ಎಂದರೆ ತಪ್ಪಾಗಲಾರದು, ಇಂತಹ ಮನಸ್ಥಿತಿ ಖಾಸಗಿ ಹೊಡೆತನದವರ ಮನದಾಳ ದಲ್ಲಿಯೂ ಬೇರುಬಿಟ್ಟಿರಬೇಕು ಎನಿಸುತ್ತಿದೆ. ಸರ್ಕಾರಿ ಉದ್ಯೋಗಗಳು ಎಂದಾಗ ಮೇಲ್ವರ್ಗದ ಜಾತಿಯ ಜನಗಳು ಕಸಗುಡಿಸುವ ಕೆಲಸಕ್ಕೆ ಅರ್ಜಿ ಹಾಕದಿರುವುದೇ ಅವರ ಶ್ರೇಷ್ಠತೆಯನ್ನು ಕಾಪಾಡಿದಂತೆ ಎಂದಾದರೆ, ದಲಿತರು ಇಂತಹ ಕೆಲಸಗಳಿಗೆ ಮಾತ್ರ ಸೀಮಿತರು ಎನ್ನುವ ಮಾನಸಿಕ ಶ್ರೇಷ್ಠತೆಯನ್ನು ಖಾಸಗೀ ಕಂಪನಿಗಳು ಕಾಪಾಡಿಕೊಂಡು ಬಂದಿವೆ, ಬರುತ್ತಲೂ ಇವೆ ಎಂದರೆ ತಪ್ಪಾಗಲಾರದು.
ಇಂತಹ ಮನಸ್ಥಿತಿಯನ್ನು ಹೊಂದಿರುವ ಆಳುವ ಸರ್ಕಾರಗಳು ಸಹ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರ ಕೈಗೊಪ್ಪಿಸಿ ಭಾರತೀಯ ಶೋಷಿತರನ್ನು ಜೀವಂತ ಶವಗಳನ್ನಾಗಿ ಮಾಡಲು ಹೊರಟಿರುವುದು ಈ ದೇಶದ ಕಂಡಂತಹ ನಿಜವಾದ ದುರಂತವಾಗಿದೆ. ಇತ್ತೀಚೆಗೆ ಭಾರತೀಯ ಆರ್ಥಿಕತೆಯ ರಂಗದಲ್ಲಿ ಆದ ಬದಲಾವಣೆಗಳಿಂದ ಬ್ಯಾಂಕ್ ನೌಕರರೆಲ್ಲರೂ ಬಹಳ ಖುಷಿಪಡುತ್ತಿರುವ ವಿಚಾರವೆಂದರೆ “ಇತ್ತೀಚೆಗಷ್ಟೇ ಬಹಳ ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಿಸಿ ಬಿಸಿ ಸುದ್ದಿ ಎಂದರೆ, ಇನ್ನುಮುಂದೆ ಬ್ಯಾಂಕುಗಳು ಸಹ ವಾರದಲ್ಲಿ 5 ದಿನಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತವೆ” ಪ್ರತೀ ಶನಿವಾರ ಭಾನುವಾರ ರಜೆ, ತಮ್ಮ ಕುಟುಂಬಗಳ ಜೊತೆ ನಾವು ಖುಷಿಯಾಗಿರಬಹುದು ಎಂದು ತಮ್ಮ ಹರ್ಷವನ್ನು ವ್ಯಕ್ತಪಡಿಸುತ್ತಿವೆ. ಬಹಳ ಸಂತೋಷದ ವಿಚಾರವೇನೋ ಹೌದು. ಹಾಗಾದರೆ ಕಳೆದ 8-10 ವರ್ಷಗಳಿಂದ ಪ್ರತೀ ವರ್ಷ 15 ರಿಂದ 25 ದಿನಗಳಷ್ಟು ಕಾಲ ಒತ್ತಾಯಪೂರ್ವಕವಾಗಿ ಬ್ಯಾಂಕ್ ನೌಕರರು ಮುಷ್ಕರ ನಡೆಸಿದರು ಮಣಿಯದ ಸರ್ಕಾರ ಅಥವಾ ಅದರ ಅಂಗ ಸಂಸ್ಥೆಯು ಈ ವರ್ಷದಲ್ಲಿ ಯಾವುದೇ ಮುಷ್ಕರ ನಡೆಸದಿದ್ದರು ತಕ್ಷಣ ನಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳಲು ಹೇಗೆ ಸಾಧ್ಯ ಒಮ್ಮೆ ಯೋಚಿಸಬೇಕಾಗಿದೆ.
ಈಗಾಗಲೇ ಭಾರತ ಸರ್ಕಾರ, ದೇಶದಲ್ಲಿದ್ದ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರ ಕೈಗೊಪ್ಪಿಸಿದ್ದಾಯಿತು. ಇನ್ನು ಉಳಿದಿರುವುದು ಬ್ಯಾಂಕುಗಳು ಮಾತ್ರ 2019 ರ ಚುನಾವಣೆಗೂ ಮುನ್ನ ದೇಶದ ಪ್ರತಿಷ್ಠಿತ ಲಾಭದಾಯಕ ಬ್ಯಾಂಕನ್ನು ಇತರೆ ಬ್ಯಾಂಕುಗಳಿಗೆ ವಿಲೀನಮಾಡಲಾಯಿತು.ನಂತರ ಒಂದು ವರ್ಷವಾಗುವಷ್ಟರಲ್ಲೇ ಉಳಿದ ಬ್ಯಾಂಕುಗಳನ್ನು ವಿಲೀನಗೊಳಿಸಲಾಯಿತು. ಹೆಚ್ಚು ಬ್ಯಾಂಕುಗಳಿದ್ದರೆ ಖಾಸಗಿಯವರನ್ನು ಸರ್ಕಾರದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟಕರವೆಂದು ತಿಳಿದ ನಮ್ಮ ಘನಸರ್ಕಾರಗಳು ಬ್ಯಾಂಕುಗಳ ವಿಲೀನೀಕರಣ ಮಾಡಿ ಕಡಿಮೆ ಬ್ಯಾಂಕುಗಳಾಗಿ ಪರಿವರ್ತಿಸಿ ಖಾಸಗಿಯವರನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳಲು ಮುಂದಾಯಿತು.
ಈಗ ಎಲ್ಲಾ ಖಾಸಗೀ ಕಂಪನಿಗಳು ವಿದೇಶಿ ಬಂಡವಾಳಿಗರೊಡನೆ ಕೈ ಜೋಡಿಸಿ ತನ್ನ ಕಾರ್ಯವೈಖರಿ ಪ್ರಾರಂಭಿಸಿವೆ. ಇವುಗಳಿಗೆ ಬೇಕಾಗಿರುವ ಕರ್ತವ್ಯದ ದಿನಗಳು ವಾರದಲ್ಲಿ ಕೇವಲ 5 ದಿನಗಳಾಗಿರುವುದರಿಂದ ಸರ್ಕಾರ ಈಗ ಬ್ಯಾಂಕುಗಳನ್ನು 5 ದಿನಗಳು ಮಾತ್ರ ಕರ್ತವ್ಯ ನಿರ್ವಹಿಸಲು ಹಸಿರು ನಿಶಾನೆ ಸೂಚಿಸಿದೆ ಎನ್ನುವುದೇ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ. ಇದಕ್ಕೆ ಎಲ್ಲಾ ಬ್ಯಾಂಕರುಗಳು ಸಂತೋಷ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಮುಂದೆ ಚುನಾವಣೆ ಮುಗಿದು ಮತ್ತೆ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಬ್ಯಾಂಕುಗಳನ್ನು ಖಾಸಗೀಯವರ ಕೈಗೊಪ್ಪಿಸಿ ಸರ್ಕಾರ ತಲೆ ತೊಳೆದುಕೊಳ್ಳುವ ಕೆಲಸಕ್ಕೆ ಮುಂದಾಗಿರುವುದು ಯಾರಿಗೂ ಅರ್ಥವಾಗುತ್ತಿಲ್ಲಾ. ಒಂದು ವೇಳೆ ಅರ್ಥವಾದರೂ ಏನು ಮಾಡದ ಅಸಹಾಯಕ ಪರಿಸ್ಥಿತಿಯಲ್ಲಿ ನೌಕರರು ಮೌನಿಗಳಾಗಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಹಾಗಾದರೆ ಈ ದೇಶದ ಯಾವ ಸಂಸ್ಥೆಗಳನ್ನು ಆಳುವ ಸರ್ಕಾರಗಳು ಖಾಸಗಿಯವರ ಕೈಗೊಪ್ಪಿಸಿಲ್ಲಾ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಮುಂದೊಂದು ದಿನ ಭಾರತ ಎನ್ನುವ ದೇಶವೇ ಮಾರಾಟಕ್ಕಿದೆಯಾ? ಅಥವಾ ಮತ್ತೊಂದು ವಿದೇಶಿ ಅಕ್ರಮಣವಾಗಬಹುದಾ? ಭಾರತ ಮಾರಾಟಕ್ಕಿಲ್ಲಾ ಎನ್ನುವುದಾದರೆ ನಮ್ಮ ಯುವ ಜನತೆಯ ಮುಂದಿರುವ ಸವಾಲುಗಳೇನು? ಎಂದು ಚಿಂತಿಸಬೇಕಾಗಿದೆ.
ಒಮ್ಮೆ ಖಾಸಗೀ ಸಂಸ್ಥೆಯಾದರೆ ಈಗಾಗಲೇ ಪಿಂಚಿಣಿ ಇಲ್ಲವಾಗಿದೆ. ಮುಂದೊಂದು ದಿನ ಉದ್ಯೋಗ ಖಾತ್ರಿಯೂ ಇಲ್ಲವಾಗುತ್ತದೆ. ಅದರಲ್ಲೂ ಈ ದೇಶದ ಶೋಷಿತ ಜನಾಂಗಕ್ಕೆ ಮೀಸಲಾತಿ ಆಧಾರದಿಂದ ಸಿಗುತ್ತಿದ್ದ ಉದ್ಯೋಗವಕಾಶಗಳು ನಮ್ಮ ಮುಂದಿನ ಪೀಳಿಗೆಗೆ ಮರೀಚಿಕೆಯಾಗಿಬಿಟ್ಟಿವೆ. ಕೇವಲ ಕಸ ಗುಡಿಸುವ, ಟಾಯ್ಲೆಟ್ ತೊಳೆಯುವ ಕೆಲಸಕ್ಕೆ ಸೀಮಿತಗೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಹ ಎಲ್ಲಾ ಸೂಚನೆಗಳು ಕಣ್ಣ ಮುಂದೆ ಕಾಣುತ್ತಿವೆ. ಅದಕ್ಕಾಗಿ ಈ ದೇಶದ ಶೋಷಿತರು,ಧಾರ್ಮಿಕ ಅಲ್ಪ ಸಂಖ್ಯಾತರು, ಶೂದ್ರರು, ಮುಂದಿನ ದಿನಗಳಲ್ಲಿ ಯಾವ ರೀತಿಯ ಜಾಗರೂಕತೆಯ ಕ್ರಮವನ್ನು ವಹಿಸಬೇಕಾಗಿದೆ. ನಮ್ಮ ಯುವ ಜನತೆಯನ್ನು ಎಷ್ಟರ ಮಟ್ಟಿಗೆ ಜಾಗರೂಕರನ್ನಾಗಿ ಮಾಡಬೇಕಾಗಿದೆ. ದುಡಿಯುವ ಕೈಗಳಿಗೆ ಬೇಕಾಗಿರುವುದು ಖಾಸಗೀ ಉದ್ಯೋಗವೋ, ಸಾರ್ವಜನಿಕ ಸರ್ಕಾರಿ ಭದ್ರತೆಯ ಉದ್ಯೋಗವೋ ಯೋಚಿಸಬೇಕಾಗಿದೆ.
ಖಾಸಗೀಕರಣದ ವ್ಯವಸ್ಥೆಗೆ ಒತ್ತುಕೊಡುವ ಸರ್ಕಾರಗಳು ಈ ದೇಶದ ಶೇಕಡಾ 85%, ಮತದಾರರಿಗೆ ಬೇಕಾಗಿದೆಯೇ ಎಂದು ಚಿಂತಿಸಬೇಕಾಗಿದೆ. ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ಅತ್ಯಾಚಾರಿಗಳಿಗೆ ಬೆಂಬಲ ನೀಡುವ ಸರ್ಕಾರಗಳು ಬೇಕಾಗಿವೆಯೇ ಎಂದು ಆಲೋಚಿಸಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಕೋಮುಗಲಭೆ ಸೃಷ್ಠಿಸುವ ನಾಯಕರನ್ನು ನಾವು ಆರಿಸಬೇಕಾಗಿದೆಯೇ ಚಿಂತಿಸಬೇಕಾಗಿದೆ. ಜಾತಿಯ ನಿಂದನೆ ಮಾಡಿ ಬಾಬಾಸಾಹೇಬರಿಗೆ ಅವಮಾನಿಸಿದವರನ್ನು ಶಿಕ್ಷೆಗೆ ಒಳಪಡಿಸದೆ ತನ್ನ ಮಡಿಲಲ್ಲಿ ಬೆಚ್ಚನೆಯ ಕಾವು ಕೊಟ್ಟು ಕಾಪಾಡುವ ಸರ್ಕಾರ ಈ ದೇಶಕ್ಕೆ ಬೇಕಾಗಿದೆಯೇ ಯೋಚಿಸಿ. ಅಮಾಯಕ ಕಾರ್ಮಿಕ ಕಂಟ್ರಾಕ್ಟರ್ ಗಳ ಜೀವವನ್ನು ಬಲಿತೆಗೆದುಕೊಂಡ ಆಡಳಿತ ವ್ಯವಸ್ಥೆ ನಮಗೆ ಮತ್ತೊಮ್ಮೆ ಬೇಕಾಗಿದೆಯೇ? ದಿನನಿತ್ಯ ಬಳಕೆಯ ವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸಿ ಜನರನ್ನು ಕಂಗೆಡಿಸುತ್ತಿರುವ ಈ ರೋಗಗ್ರಸ್ತ ಸಮಾಜಕ್ಕೆ ಒಳ್ಳೆಯ ಚಿಕಿತ್ಸಕ ಯಾರೂ ಎಂದು ನೀವೇ ಯೋಚಿಸಿ.
ಬಂಧುಗಳೇ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ, ಇದು ಸ್ವಾತಂತ್ರ್ಯ ಭಾರತ ಎನ್ನುವ ಕುಲೀನ ಬಲಿಷ್ಠ ಜನರಿಗೆ ಈ ದೇಶದೊಳಗೆ ನಡೆಯುತ್ತಿರುವ ಜಾತಿನಿಂದನೆ, ಅತ್ಯಾಚಾರ, ದೇವಾಲಯಗಳಿಗೆ ಇಂದಿಗೂ ಪ್ರವೇಶವಿಲ್ಲಾ, ಬೆಂಗಳೂರಿನಂಥಹ ಮಾಯಾನಗರಿಯಲ್ಲಿ ಅದೆಷ್ಟೋ ದಲಿತರು ಜಾತಿಯನ್ನು ಹೇಳಿಕೊಂಡರೆ ಮನೆಗಳನ್ನು ಬಾಡಿಗೆಗೆ ಕೊಡಲು ತಯಾರಿಲ್ಲದ ಪೀತ ಮನಸ್ಸುಗಳು ಇಂದಿಗೂ ಜೀವಂತವಾಗಿವೆ. ಇದು ಎಲ್ಲಿಯವರೆವಿಗೂ ತೊಲಗುವುದಿಲ್ಲವೋ ಅಲ್ಲಿಯವರೆವಿಗೂ ಈ ದೇಶದ ಭವಿಷ್ಯವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲಾ. ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿದವರು ಇಂದು ತನ್ನ ಬಟ್ಟೆಯನ್ನೇ ಬದಲಾಯಿಸಿಕೊಳ್ಳದ ಪರಿಸ್ಥಿತಿಗೆ ಬಂದಿದ್ದಾರೆ, ಇದು ಈ ದೇಶದ ಮಣ್ಣಿನ ಮಕ್ಕಳ (ಮೂಲನಿವಾಸಿಗಳ) ಮೇಲೆ ಪ್ರಕೃತಿ ಇಟ್ಟಿರುವ ಪ್ರೀತಿ ಎಂದರು ತಪ್ಪಾಗಲಾರದು. ಬುದ್ಧ ಅದಕ್ಕಾಗಿಯೇ ಹೇಳಿದ್ದು ವಿಜ್ಞಾನದ ಹಾದಿಯಲ್ಲಿ ನಡೆಯಿರಿ. ಸೂರ್ಯ, ಚಂದ್ರ, ನಕ್ಷತ್ರಗಳನ್ನು ನಂಬಿ. ಅಮಾವಾಸ್ಯೆ ಹುಣ್ಣಿಮೆ ಜಗದ ನಿಯಮವೆಂದ. “ನಿಮಗೆ ನೀವೇ ಬೆಳಕು” ಎಂದರು.
“ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಠಿಸಲಾರರು” – ಬಾಬಾಸಾಹೇಬ್ ಡಾ.ಅಂಬೇಡ್ಕರ್
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw