ಪರಿಸರ ಸ್ನೇಹಿ ಗಣಪತಿ ಮೂರ್ತಿ ಪೂಜಿಸಲು ಈಶ್ವರ ಖಂಡ್ರೆ ಕರೆ
ಬೆಂಗಳೂರು: ನೀರಿನಲ್ಲಿ ಸರಿಯಾಗಿ ಕರಗದ ಮತ್ತು ಬಾವಿ, ಕೆರೆ, ಕುಂಟೆ, ಸರೋವರ, ನದಿ ನೀರನ್ನು ಕಲುಷಿತಗೊಳಿಸುವ ರಾಸಾಯನಿಕ ಬಣ್ಣ ಲೇಪಿತ, ಪಿಓಪಿ ಗಣಪತಿ ಮೂರ್ತಿಗಳ ತಯಾರಿಕೆ, ದಾಸ್ತಾನು ಮತ್ತು ಮಾರಾಟ ಮಾಡದಂತೆ ಜನಜಾಗೃತಿ ಮೂಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಕಲುಷಿತ ನೀರು ಸೇವನೆಯಿಂದ ರಾಜ್ಯದ ವಿವಿಧೆಡೆಗಳಲ್ಲಿ ಜೀವಹಾನಿಯೂ ಆಗಿದ್ದು, ಅಮೂಲ್ಯವಾದ ಜನ, ಜಾನುವಾರುಗಳ ಜೀವ ಉಳಿಸಲು ಮತ್ತು ಆರೋಗ್ಯ ರಕ್ಷಿಸಲು ಪಾಸ್ಟರ್ ಆಫ್ ಪ್ಯಾರೀಸ್ (ಪಿ.ಓ.ಪಿ.)ನಿಂದ ತಯಾರಿಸಿದ ಹಾಗೂ ಲೋಹಯುಕ್ತ ಅಪಾಯಕಾರಿ ರಾಸಾಯನಿಕ ಬಣ್ಣ ಬಳಸಿದ ಮೂರ್ತಿಗಳ ತಯಾರಿಕೆ, ದಾಸ್ತಾನು, ಮಾರಾಟ ಮಾಡದಂತೆ ಜಾಗೃತಿ ಮೂಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದ್ದಾರೆ.
ಹಬ್ಬಕ್ಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದ್ದು, ಈಗಿನಿಂದಲೇ ಪಿಓಪಿ ಗೌರಿ, ಗಣಪತಿ ಮೂರ್ತಿಗಳನ್ನು ತಯಾರಿಸದಂತೆ, ಬೇರೆ ರಾಜ್ಯದಿಂದ ಮಾರುಕಟ್ಟೆ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲು ನಿರ್ದೇಶನ ನೀಡಿದ್ದಾರೆ.
ಈ ಬಾರಿ ಸೆಪ್ಟೆಂಬರ್ 18ರಂದು ಸಂಭ್ರಮ ಸಡಗರದಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ನಮ್ಮ ಭಕ್ತಿ, ಭಾವ, ಸಂಪ್ರದಾಯಕ್ಕೆ ಚ್ಯುತಿ ಆಗದಂತೆ ಪರಿಸರ ಸ್ನೇಹಿ ಮಣ್ಣಿನ ಗೌರಿ, ಗಣಪತಿ ತಂದು ಪೂಜಿಸಿ ಹಬ್ಬ ಆಚರಿಸೋಣ. ಆದರೆ, ನಮ್ಮ ಆಚರಣೆಯಿಂದ ಜಲ, ನೆಲ, ಗಾಳಿ ಮತ್ತು ಪರಿಸರಕ್ಕೆ ಹಾನಿ ಆಗದಂತೆ ಎಚ್ಚರಿಕೆ ವಹಿಸೋಣ ಎಂದು ಈಶ್ವರ ಖಂಡ್ರೆ ರಾಜ್ಯದ ಜನತೆಯಲ್ಲಿ ಮುಂಚಿತವಾಗಿಯೇ ಮನವಿ ಮಾಡಿದ್ದಾರೆ.
ಸಂಪ್ರದಾಯ: ಗೌರಿ ಮತ್ತು ಗಣೇಶನ ಹಬ್ಬದ ವೇಳೆ ಮಾವಿನ ತೋರಣ ಕಟ್ಟಿ, ತೆಂಗಿನ ಗರಿಯಿಂದ ಮಂಟಪ ಮಾಡಿ, ಬಾಳೆ ಕಂದು ಕಟ್ಟಿ ಮಣ್ಣಿನ ಗೌರಿ, ಗಣಪತಿ ಮೂರ್ತಿಗಳನ್ನು ತಂದು, ಹೂ, ಪತ್ರೆಗಳಿಂದ ಪೂಜಿಸಿ, ನೀರಿನಲ್ಲಿ ವಿಸರ್ಜಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ.
ನಮ್ಮ ಪೂರ್ವಿಕರು ಕೆರೆಯಲ್ಲೇ ಸಿಗುವ ಜೇಡಿಮಣ್ಣಿನಲ್ಲಿ ಗೌರಿ, ಗಣಪತಿ ವಿಗ್ರಹ ಮಾಡಿ ಅದಕ್ಕೆ ನೈಸರ್ಗಿಕ ಬಣ್ಣ ಲೇಪಿಸಿ, ಪೂಜಿಸಿ, ನೀರಲ್ಲಿ ವಿಸರ್ಜಿಸುತ್ತಿದ್ದರು. ಆ ವಿಗ್ರಹಗಳು 2-3 ದಿನದಲ್ಲಿ ಕರಗುತ್ತಿದ್ದವು. ಆದರೆ ಕಳೆದ ಕೆಲವು ದಶಕದಿಂದ ಪಿ.ಓ.ಪಿ. ಗಣಪತಿ ವಿಗ್ರಹ ಮಾಡುತ್ತಿದ್ದು, ಇದಕ್ಕೆ ರಾಸಾಯನಿಕ ಬಣ್ಣ ಲೇಪಿಸುತ್ತಾರೆ. ಈ ಬಣ್ಣಗಳಿಂದಾಗಿ ಜಲಚರಗಳು ಸಾವಿಗೀಡಾಗುತ್ತಿದ್ದು, ಈ ವಿಗ್ರಹಗಳು ನೀರಲ್ಲಿ ಕರಗುವುದೂ ಇಲ್ಲ. ಜಲ ಮೂಲಗಳನ್ನು ಕಲುಷಿತಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ.
ಗಣಪತಿಯ ಮಂಟಪದ ಅಲಂಕಾರಕ್ಕೆ ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ ಅಲಂಕಾರಿಕ ವಸ್ತು ಬಳಸದೆ ಹತ್ತಿಯಿಂದ ಮಾಡಿದ ಸಾಂಪ್ರದಾಯಿಕ ಗೆಜ್ಜೆ,ವಸ್ತ್ರ ಬಳಸುವಂತೆ ಮತ್ತು ಪರಿಸರ ಉಳಿಸವಂತೆ ಅವರು ಮನವಿ ಮಾಡಿದ್ದಾರೆ.
ಕರಗದ ವಿಗ್ರಹ: ನಾವು ಭಕ್ತಿಯಿಂದ ಪೂಜಿಸುವ ಗೌರಿ, ಗಣಪತಿಯ ಪಿ.ಓ.ಪಿ ವಿಗ್ರಹಗಳು ನೀರಲ್ಲಿ ಹತ್ತಾರು ದಿನ ಕಳೆದರೂ ಕರಗುವುದಿಲ್ಲ. ಅವುಗಳು ಕೆರೆ, ಕಟ್ಟೆಗಳ ಬಳಿ ಅರ್ಧ ಕರಗಿ, ಮುರಿದು ಬಿದ್ದಿರುವ ಸ್ಥಿತಿ ನೋಡಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದು ತಿಳಿಸಿರುವ ಅವರು ವಿಸರ್ಜನೆಯಾದ ಪಿಓಪಿ ಗಣಪತಿ ಮೂರ್ತಿಗಳ ಚಿತ್ರವನ್ನೂ ಹಂಚಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw