ಕದನ ವಿರಾಮ ಒಪ್ಪಂದ ಮುರಿದ ಇಸ್ರೇಲ್: ಕ್ರೂರ ದೇಶದ ದಾಳಿಗೆ ಮಕ್ಕಳು ಸೇರಿದಂತೆ 200ಕ್ಕೂ ಅಧಿಕ ಜನರು ಸಾವು

ಕದನ ವಿರಾಮ ಒಪ್ಪಂದ ಮುರಿದಿರುವ ಇಸ್ರೇಲ್, ಇಂದು ನಸುಕಿನಲ್ಲಿ ಗಾಝಾ ಪಟ್ಟಿಯಾದ್ಯಂತ ಭಾರೀ ವೈಮಾನಿಕ ದಾಳಿ ನಡೆಸಿದ್ದು, ಮಕ್ಕಳು ಸೇರಿದಂತೆ 200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಜನವರಿ 19ರಿಂದ ಕದನ ವಿರಾಮ ಜಾರಿಯಾದ ಬಳಿಕ ಇಸ್ರೇಲ್ ನಡೆಸಿದ ಅತಿ ದೊಡ್ಡ ದಾಳಿ ಇದಾಗಿದೆ.
ವೈದ್ಯಕೀಯ ಅಧಿಕಾರಿಗಳ ಪ್ರಕಾರ, ದಾಳಿಯಲ್ಲಿ 66 ಜನರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಉತ್ತರ ಗಾಜಾ, ಧೀರ್ ಆಲ್ ಬಲಹಾ, ಖಾನ್ ಯೂನಿಸ್, ರಫಾ ಮತ್ತು ಗಾಜಾ ನಗರದ ಮೇಲೆ ದಾಳಿ ನಡೆಸಲಾಗಿದೆ.
ದಾಳಿಯ ಕುರಿತು ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಒತ್ತೆಯಾಳುಗಳ ಬಿಡುಗಡೆ ಸಂಬಂಧ ಹಮಾಸ್ ಪದೇ ಪದೇ ನಿರಾಕರಣೆ ಮಾಡುತ್ತಿದೆ. ಹಾಗೇ ಕದನ ವಿರಾಮ ವಿಸ್ತರಣೆ ಕುರಿತ ಮಾತುಕತೆಯಲ್ಲಿ ಉಂಟಾದ ಪ್ರಗತಿ ಕೊರತೆ ಹಿನ್ನೆಲೆ ದಾಳಿಗೆ ಆದೇಶ ನೀಡಲಾಯಿತು ಎಂದು ತಮ್ಮ ಸೇನೆಯ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹಮಾಸ್ ಮೇಲೆ ದಾಳಿ ನಡೆಸುವ ಮೂಲಕ ಬೆದರಿಕೆ, ಒತ್ತಡ ಹಾಕುವ ತಂತ್ರವೋ ಅಥವಾ ಮತ್ತೆ ಯುದ್ಧ ಆರಂಭಿಸಲಿದೆಯಾ ಎಂಬ ಕುರಿತು ಇಸ್ರೇಲ್ ತಕ್ಷಣಕ್ಕೆ ಯಾವುದನ್ನು ಸ್ಪಷ್ಟಪಡಿಸಿಲ್ಲ. ಇಸ್ರೇಲ್ ಕದನ ವಿರಾಮ ಉಲ್ಲಂಘಿಸಿ ನಡೆಸಿರುವ ದಾಳಿಗೆ ಎಚ್ಚರಿಕೆ ನೀಡಿರುವ ಹಮಾಸ್, ಇದು ಒತ್ತೆಯಾಳುಗಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಲಿದೆ ಎಂದಿದೆ.
ಇದು ಅಂತ್ಯವಿಲ್ಲದ ಕಾರ್ಯಾಚರಣೆ ಆಗಿದ್ದು, ಇದನ್ನು ವಿಸ್ತರಿಸುವ ನಿರೀಕ್ಷೆ ಇದೆ. ಇಸ್ರೇಲ್ ಹಮಾಸ್ ವಿರುದ್ಧ ಮಿಲಿಟರಿ ಶಕ್ತಿಯನ್ನು ಮತ್ತಷ್ಟು ಬಲಗೊಳಿಸಲಿದೆ ಎಂದು ನೆತನ್ಯಾಹು ಕಚೇರಿ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj