ಇಸ್ರೇಲ್ ಗೆ ಚೀನಾ ಶಾಕ್: ಆನ್‌ಲೈನ್ ನಕ್ಷೆಯಿಂದ ‘ಇಸ್ರೇಲ್’ ಪದವನ್ನು ತೆಗೆದು ಹಾಕಿದ ಚೀನಾ; ಫೆಲೆಸ್ತೀನ್ ಗೆ ಚೀನಾ ಬೆಂಬಲ

ಫೆಲೆಸ್ತೀನ್ ಮೇಲೆ ಇಸ್ರೇಲ್ ತನ್ನ ಕ್ರೂರ ದಾಳಿಯನ್ನು ಮುಂದುವರಿಸಿದೆ. ಕದನ ವಿರಾಮ ಸಾಧ್ಯವೇ ಇಲ್ಲ ಎಂದ ಇಸ್ರೇಲ್ ಗೆ ಚೀನಾ ಶಾಕ್ ನೀಡಿದೆ. ಹೌದು. ಫೆಲೆಸ್ತೀನ್ ಬೆಂಬಲಕ್ಕೆ ನಿಂತಿರುವ ಚೀನಾದ ಕೆಲವು ಕಂಪನಿಗಳು ತಮ್ಮ ಆನ್‌ಲೈನ್ ನಕ್ಷೆಯಿಂದ ‘ಇಸ್ರೇಲ್’ ಪದವನ್ನು ತೆಗೆದು ಹಾಕಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಅಲಿಬಾಬ ಮತ್ತು ಬೈದು ನಂತಹ ಕಂಪನಿಗಳ ಈ ನಡೆಯು ತಿರುಗೇಟು ನೀಡುವಂತಿದೆ.
ನಕ್ಷೆಯಲ್ಲಿ ಅತಿ ಚಿಕ್ಕ ರಾಷ್ಟ್ರವನ್ನೂ ಸ್ಪಷ್ಟವಾಗಿ ನಮೂದಿಸಲಾಗಿದೆ. ಇಸ್ರೇಲ್ ಮತ್ತು ಫೆಲೆಸ್ತೀನ್ ಗಡಿ ಗುರುತಿಸಲಾಗಿದ್ದರೂ ಅದರಲ್ಲಿ ಇಸ್ರೇಲ್ ಹೆಸರನ್ನು ನಮೂದಿಸಿಲ್ಲ. ಚೀನಾ ಇಂಟರ್ ನೆಟ್ ಬಳಕೆದಾರರು ಈ ಬದಲಾವಣೆಯನ್ನು ಗುರುತಿಸಿದ್ದು ಅಲಿಬಾಬ, ಬೈದು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಸಂಘರ್ಷದ ಆರಂಭದಿಂದಲೂ ಕದನ ವಿರಾಮವನ್ನು ಬೆಂಬಲಿಸಿದ್ದ ಚೀನಾ ಶಾಂತಿ ಸ್ಥಾಪನೆಗೆ ಸಲಹೆ ನೀಡಿತ್ತು.
ಆದರೆ ಇತ್ತೀಚೆಗೆ ಇಸ್ರೇಲ್‌ಗೆ ಹಮಾಸ್‌ನಿಂದ ತನ್ನನ್ನ ತಾನು ರಕ್ಷಿಸಿಕೊಳ್ಳುವ ಹಕ್ಕಿದೆ ಎಂದು ಹೇಳಿಕೆ ನೀಡಿತ್ತು. ಈಗ ನಕ್ಷೆ ಬದಲಾವಣೆ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗುರಿಯಾಗಿದೆ. ಈ ಮೂಲಕ ಇಸ್ರೇಲ್ ಗೆ ಚೀನಾ ತಿರುಗೇಟು ನೀಡಿದೆ ಎನ್ನಲಾಗುತ್ತಿದೆ.