ಹಮಾಸ್ ನವರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದರು: ಒತ್ತೆಯಾಳಾಗಿ ಬಿಡುಗಡೆಗೊಂಡ ಇಸ್ರೇಲ್ ವೃದ್ದೆ ಹೇಳಿಕೆ
![](https://www.mahanayaka.in/wp-content/uploads/2023/10/1245897c87bf4a88138fe3b06be21c7f912fcf7f6b11bc452603d8de84fce7d0.0.jpg)
ಹಮಾಸ್‌ನವರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಬಿಡುಗಡೆಗೊಂಡ ಬಳಿಕ ಒತ್ತೆಯಾಳಾಗಿದ್ದ ಮಹಿಳೆ ಯೋಚೆವೆಡ್ ಲಿಫ್‌ಶಿಟ್ಜ್ ತಿಳಿಸಿದ್ದಾರೆ. ಇಸ್ರೇಲ್‌ನಿಂದ ಅಪಹರಿಸಲ್ಪಟ್ಟಿದ್ದ ಇಬ್ಬರು ಮಹಿಳೆಯರನ್ನು ಹಮಾಸ್ ಬಂಡುಕೋರರು ಬಿಡುಗಡೆಗೊಳಿಸಿದ್ದಾರೆ.
ಬಿಡುಗಡೆಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ 85 ವರ್ಷದ ವೃದ್ಧೆ ಯೋಚೆವೆಡ್ ಲಿಫ್‌ಶಿಟ್ಜ್ ಅವರು, ಅ.7ರಂದು ನಮ್ಮನ್ನು ಹಮಾಸ್‌ನವರು ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲಿ ಕೋಲುಗಳಿಂದ ಥಳಿಸಿದ್ದರು. ಆ ಬಳಿಕ ಜೇಡರ ಬಲೆಗಳಿಂದ ಕೂಡಿದ್ದ ಬಂಕರ್‌ನೊಳಗೆ ಅವರು ನಮ್ಮನ್ನು ಕೂಡಿ ಹಾಕಿದರು. ಅಲ್ಲಿ ಅವರು ನಮ್ಮನ್ನು ಚೆನ್ನಾಗಿ ಉಪಚರಿಸಿದರು. ಪ್ರತಿ ಎರಡು, ಮೂರು ದಿನಗಳಿಗೊಮ್ಮೆ ಬಂಧಿತರ ಆರೋಗ್ಯವನ್ನು ಪರೀಕ್ಷಿಸಲು ವೈದ್ಯರನ್ನು ಕರೆ ತರುತ್ತಿದ್ದರು ಎಂದು ವಿವರಿಸಿದರು.
ಸುರಂಗ ಮಾರ್ಗಗಳ ಒಳಗೆ ಒದ್ದೆಯಾದ ನೆಲವಿತ್ತು. ಅದರ ಮೇಲೆ ಹಲವಾರು ಕಿ.ಮೀ ನಡೆಯುವಂತೆ ಒತ್ತಾಯಿಸಿದರು. ಸೆರೆಯಾಳುಗಳ ಸುತ್ತಲೂ ನೋಡಿಕೊಳ್ಳಲು ಕೂಡ ಜನರಿದ್ದರು. ಅವರು ಆಗಾಗ ನಾವು ಕುರಾನ್ ಅನ್ನು ನಂಬುವ ಜನಗಳು. ಅದರಂತೆ ನಾವು ನಿಮಗೆ ನೋಯಿಸುವುದಿಲ್ಲ ಎಂದು ನಮಗೆ ಹೇಳುತ್ತಿದ್ದರು ಎಂದು ಮಾಹಿತಿ ನೀಡಿದರು.
ನಮ್ಮೊಂದಿಗೆ ಹಮಾಸ್‌ನವರು ಕರುಣೆಯಿಂದ ವರ್ತಿಸಿದರು. ಬಂಕರ್‌ನೊಳಗೆ ಬಹಳಷ್ಟು ಶುಚಿತ್ವ ಕಾಯ್ದುಕೊಂಡಿದ್ದರು. ಅವರು ವೈದ್ಯರನ್ನು ಕರೆಸಿ, ಔಷಧಿ ಸೇರಿದಂತೆ ವೈದ್ಯಕೀಯ ಆರೈಕೆಯನ್ನು ನೀಡಿ ನಮ್ಮೊಂದಿಗೆ ಚೆನ್ನಾಗಿ ನಡೆದುಕೊಂಡಿದ್ದರು. ಅದಕ್ಕಾಗಿ ನಾನು ಬಿಡುಗಡೆಗೊಂಡಾಗ ಧನ್ಯವಾದ ತಿಳಿಸಿದೆ ಎಂದು ಹೇಳಿದರು.