ಲೆಬನಾನ್ ನ ಹಿಝ್ಬುಲ್ಲಾದ ಮುಖಂಡ ಹಸನ್ ನಸ್ರುಲ್ಲಾರನ್ನು ಹತ್ಯೆ ಮಾಡಿದ್ದೀವಿ ಎಂದ ಇಸ್ರೇಲ್
ಲೆಬನಾನ್ ನ ಹಿಝ್ಬುಲ್ಲಾದ ಮುಖಂಡ ಹಸನ್ ನಸ್ರುಲ್ಲಾ ಅವರನ್ನು ಹತ್ಯೆಗೈದಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಪ್ರತಿರೋಧ ಸಂಘಟನೆಯಾಗಿ ಅತ್ಯಂತ ಉನ್ನತ ಮಟ್ಟಕ್ಕೆ ಹಿಝ್ಬುಲ್ಲಾವನ್ನು ಕೊಂಡೊಯ್ದವರಲ್ಲಿ ಹಸನ್ ನಸ್ರುಲ್ಲಾರಿಗೆ ಬಹಳ ದೊಡ್ಡ ಪಾತ್ರ ಇದೆ. ಇದೀಗ ಹಿಝ್ಬುಲ್ಲಾದ ಪ್ರಮುಖ ನೆಲೆಯ ಮೇಲೆ ತಾನು ಬಾಂಬು ಹಾಕಿ ನಸ್ರುಲ್ಲಾ ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
ಆದರೆ ಈ ಸುದ್ದಿಯನ್ನು ಹಿಝ್ಬುಲ್ಲ ಆಗಲಿ ಲೆಬನಾನ್ ಸರಕಾರ ವಾಗಲಿ ದೃಢೀಕರಿಸಿಲ್ಲ. ಲೆಬನಾನ್ ರಾಜಧಾನಿ ಬೈರೂತಿನಲ್ಲಿರುವ ಆರು ಬಹು ಮಹಡಿ ಕಟ್ಟಡಗಳ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಲೆಬನಾನ್ ಮೇಲೆ ಇಸ್ರೇಲ್ ನ ದಾಳಿಯ ಬಗ್ಗೆ ವಿಶ್ವಸಂಸ್ಥೆ ತೀವ್ರ ವಿಷಾದ ವ್ಯಕ್ತಪಡಿಸಿದೆ.
ಇದೇ ವೇಳೆ ಅಮೆರಿಕ ಮತ್ತು ಫ್ರಾನ್ಸ್ ಜೊತೆ ಸೇರಿ ನೀಡಿದ 21 ದಿನಗಳ ಕದನ ವಿರಾಮ ಪ್ರಸ್ತಾಪವನ್ನು ಇಸ್ರೇಲ್ ತಳ್ಳಿ ಹಾಕಿದೆ. ಲೆಬನಾನ್ ವಿರುದ್ಧ ಕಳೆದ ಒಂದು ವಾರದಿಂದ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸಲಾರೆ ಎಂದು ಇಸ್ರೇಲ್ ಪ್ರಧಾನಿ ನೆತಾನ್ಯಾಹು ವಿಶ್ವಸಂಸ್ಥೆಯಲ್ಲಿ ಘೋಷಿಸಿದ್ದಾರೆ.
2006ರಲ್ಲಿ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಸಂದರ್ಭದಲ್ಲಿ ನಸ್ರುಲ್ಲಾ ಹತ್ಯೆಗೀಡಾಗಿದ್ದಾರೆ ಎಂದು ಇಸ್ರೇಲ್ ಹೇಳಿತ್ತು. ಆದರೆ ದಿನಗಳ ಬಳಿಕ ನಸ್ರುಲ್ಲಾ ಅವರು ಮಾಧ್ಯಮದ ಮುಂದೆ ಪ್ರತ್ಯಕ್ಷರಾಗಿ ಇಸ್ರೇಲ್ ಗೆ ಮುಖಭಂಗವನ್ನು ಉಂಟುಮಾಡಿದ್ದರು. ಕಳೆದ 32 ವರ್ಷಗಳಿಂದ ನಸ್ರುಲ್ಲಾ ಅವರು ಹಿಝ್ಬುಲ್ಲಾಗೆ ನೇತೃತ್ವವನ್ನು ನೀಡುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth