ಲೆಬನಾನ್ ಗೆ 50,000 ಯೋಧರನ್ನು ಕಳುಹಿಸಿದ ಇಸ್ರೇಲ್: ಒಂದೇ ಒಂದು ಗ್ರಾಮ ವಶ ಮಾಡಲು ಇಸ್ರೇಲ್ ವಿಫಲ - Mahanayaka

ಲೆಬನಾನ್ ಗೆ 50,000 ಯೋಧರನ್ನು ಕಳುಹಿಸಿದ ಇಸ್ರೇಲ್: ಒಂದೇ ಒಂದು ಗ್ರಾಮ ವಶ ಮಾಡಲು ಇಸ್ರೇಲ್ ವಿಫಲ

04/11/2024

50,000 ಯೋಧರನ್ನು ಕಳುಹಿಸಿ ಒಂದು ತಿಂಗಳಾದ ಬಳಿಕವೂ ಇಸ್ರೇಲ್ ಗೆ ಲೆಬನಾನ್ ನ ಒಂದೇ ಒಂದು ಗ್ರಾಮವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಇಸ್ರೇಲಿನ ಹಿಬ್ರು ಭಾಷೆಯ ಪತ್ರಿಕೆ ಎದಿಯೋತ್ ಅಹನೋತ್ ವರದಿ ಮಾಡಿದೆ. 2006ರಲ್ಲಿ ಹಿಝ್ಬುಲ್ಲಾ ವಿರುದ್ಧ ಯುದ್ಧ ಮಾಡಿದಾಗ ಕಳುಹಿಸಿದ್ದ ಸೈನಿಕರಿಗಿಂತ ಮೂರು ಪಟ್ಟು ಅಧಿಕ ಸೈನಿಕರನ್ನು ಈ ಬಾರಿ ಇಸ್ರೇಲ್ ಕಳುಹಿಸಿಕೊಟ್ಟಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಪತ್ರಿಕೆ ಬರೆದಿದೆ ಎಂದು ಮಿಡಲ್ ಈಸ್ಟ್ ಮಾನಿಟರ್ ಪತ್ರಿಕೆಯು ಎದಿಯೋತ್ ಅಹನೋತ್ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಇಸ್ರೇಲ್ ನ ಈ ಹಿನ್ನಡೆಗೆ ಹಿಝ್ಬುಲ್ಲ ಮಾಡಿದ ತಂತ್ರವೇ ಕಾರಣ ಎಂದು ಇಸ್ರೇಲ್ ನ ಮಾಜಿ ಅಧ್ಯಕ್ಷ ಇಜಾಕ್ ರಬಿನ್ ಅವರ ಸಲಹೆಗಾರ ಕರ್ನಲ್ ಜಾಕ್ ನರಿಯ ಹೇಳಿದ್ದಾರೆ.
ಆರಂಭದಲ್ಲಿ ಹಿಝ್ಬುಲ್ಲ ಇಸ್ರೇಲಿ ಸೈನಿಕರನ್ನು ಒಳ ನುಗ್ಗುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಇಸ್ರೇಲ್ ಸೈನಿಕರು ಅದನ್ನು ನಂಬಿದರು. ಆದರೆ ಇದು ಹಿಝ್ಬುಲ್ಲಾದ ರಣತಂತ್ರವಾಗಿತ್ತು. ಒಳಬಂದ ಇಸ್ರೇಲ್ ಸೈನಿಕರ ವಿರುದ್ಧ ನಾಲ್ಕೂ ಕಡೆಯಿಂದ ಹಿಝ್ಬುಲ್ಲ ಸೈನಿಕರು ಮುಗಿಬಿದ್ದರು. ಹಠಾತ್ ಆಕ್ರಮಣ ನಡೆಸಿದರು. ಇದರಿಂದಾಗಿ ಇಸ್ರೇಲಿ ಸೇನೆಯ ಮುಂಚೂಣಿ ಪಡೆಯೇ ವಿಚಲಿತಗೊಂಡಿತು ಎಂದವರು ಹೇಳಿದ್ದಾರೆ.

ಈವರೆಗೆ ಇಸ್ರೇಲ್ ನ 42 ಮರ್ಕಾವ ಟ್ಯಾಂಕುಗಳನ್ನು, ನಾಲ್ಕು ಬುಲ್ಡೋಜರ್ ಗಳನ್ನು, ಹಲವಾರು ಶಸ್ತ್ರಾಸ್ತ್ರ ವಾಹನಗಳನ್ನು ಹಿಝ್ಬುಲ್ಲ ದ್ವಂಸಗೊಳಿಸಿದೆ ಎಂದು ಹೇಳಲಾಗಿದೆ. ಈ ನಡುವೆ 95 ಇಸ್ರೇಲಿ ಯೋಧರು ಹತ್ಯೆಗೀಡಾಗಿದ್ದಾರೆ. 900 ಯೋಧರು ಗಾಯಗೊಂಡಿದ್ದಾರೆ ಎಂದು ಹಿಝ್ಬುಲ್ಲ ಈಗಾಗಲೇ ಹೇಳಿದೆ. ಕೇವಲ ಕಳೆದ ತಿಂಗಳೊಂದರಲ್ಲೇ 64 ಇಸ್ರೇಲಿ ಯೋಧರು ಮತ್ತು 24 ಅಕ್ರಮ ವಲಸಿಗರು ಹತ್ಯೆಗೀಡಾಗಿದ್ದಾರೆ. ಈ ನಡುವೆ ಇಸ್ರೇಲ್ ಒಳಗೆ ಹಿಝ್ಬುಲ್ಲ ಸಾವಿರಾರು ಡ್ರೋನ್ ಗಳನ್ನು ಹಾರಿಸಿದೆ ಮತ್ತು 14,000 ಅಪಾಯದ ಸೈರನ್ ಇಸ್ರೇಲ್ ಒಳಗೆ ಮೊಳಗಿದೆ ಎಂದು ಹೇಳಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ