27 ನೇ ದಿನಕ್ಕೆ ಕಾಲಿಟ್ಟ ಇಸ್ರೇಲ್-ಹಮಾಸ್ ಯುದ್ಧ: ಗಾಝಾ ನಗರದ ಪ್ರಮುಖ ದ್ವಾರಗಳಲ್ಲಿ, ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ಪಡೆಗಳ ದಾಳಿ; ಮತ್ತೆ 195 ಮಂದಿ ಸಾವು
ಇಸ್ರೇಲಿ ಪಡೆಗಳು ಗಾಝಾದಲ್ಲಿ ಹಮಾಸ್ ವಿರುದ್ಧ ತಮ್ಮ ದಾಳಿಯನ್ನು ಮುಂದುವರಿಸಿದ್ದು, ಫೆಲೆಸ್ತೀನ್ ಎನ್ ಕ್ಲೇವ್ ನ ಮುಖ್ಯ ನಗರಕ್ಕೆ ಪ್ರವೇಶಿಸುತ್ತಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಮತ್ತೊಂದೆಡೆ ಗಾಝಾವನ್ನು ನಿಯಂತ್ರಿಸುವ ಹಮಾಸ್ ಪ್ರದೇಶದ ಅತಿದೊಡ್ಡ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 195 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.
ಇಸ್ರೇಲಿ ಸೇನೆಯು ಹಮಾಸ್‌ನ ಮುಂಚೂಣಿ ರಕ್ಷಣಾ ರೇಖೆಗಳನ್ನು ಮುರಿದಿದೆ. ಅಲ್ಲದೇ ಹಮಾಸ್ ಬಂಡುಕೋರರ ಗುಂಪಿನ ಟ್ಯಾಂಕ್ ವಿರೋಧಿ ಕ್ಷಿಪಣಿ ಶ್ರೇಣಿಯ ಕಮಾಂಡರ್ ಅನ್ನು ಕೊಂದಿರುವುದಾಗಿ ಇಸ್ರೇಲ್ ಘೋಷಿಸಿದೆ. ಗಾಝಾದ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಮಂಗಳವಾರ ಮತ್ತು ಬುಧವಾರ ಇಸ್ರೇಲ್ ಬಾಂಬ್ ದಾಳಿ ನಡೆಸಿದ ನಂತರ ಕನಿಷ್ಠ 195 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ಗಾಝಾದಲ್ಲಿನ ಹಮಾಸ್ ನಡೆಸುತ್ತಿರುವ ಕಚೇರಿ ಹೇಳಿಕೊಂಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಇಸ್ರೇಲ್-ಹಮಾಸ್ ಯುದ್ಧವು 27 ನೇ ದಿನಕ್ಕೆ ಕಾಲಿಟ್ಟಿದೆ. ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಮಾತನಾಡಿ, ಗಾಝಾದಲ್ಲಿ ನಮ್ಮ ಕಾರ್ಯಾಚರಣೆಯು ಯೋಜಿಸಿದಂತೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಮುಂಚಿತ ಯೋಜನೆ, ನಿಖರವಾದ ಗುಪ್ತಚರ ಮತ್ತು ಜಂಟಿ ದಾಳಿಗಳಿಂದ (ಭೂಮಿ, ವಾಯು ಮತ್ತು ಸಮುದ್ರದಿಂದ), ನಮ್ಮ ಪಡೆಗಳು ಗಾಜಾ ಪಟ್ಟಿಯ ಉತ್ತರದಲ್ಲಿರುವ ಹಮಾಸ್ ನ ಮುಂಚೂಣಿ ರಕ್ಷಣಾ ರೇಖೆಗಳನ್ನು ಮುರಿದಿದೆ” ಎಂದು ಹಗರಿ ಹೇಳಿದ್ದಾರೆ.
ಹಮಾಸ್ ವಿರುದ್ಧದ ಯುದ್ಧವು “ಭಾರಿ ಮತ್ತು ನೋವಿನ ಬೆಲೆ” ಎಂದು ಐಡಿಎಫ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೇವಿ ಒಪ್ಪಿಕೊಂಡಿದ್ದಾರೆ. ಆದರೆ ಇದು “ಅಗತ್ಯ” ಎಂದು ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ. ಇದು “ದೀರ್ಘ ಯುದ್ಧ” ಎಂದು ಅವರು ಪುನರುಚ್ಚರಿಸಿದ ಅವರು ಇಸ್ರೇಲಿ ಪಡೆಗಳ ಹೋರಾಟ ಮುಂದುವರಿದ ಹಂತದಲ್ಲಿದೆ ಎಂದು ಹೇಳಿದ್ದಾರೆ.