ಇಸ್ರೇಲ್ ಕ್ರೌರ್ಯ ಮತ್ತಷ್ಟು ಕ್ರೂರ: ಕಾಲು‌‌ ಕಳೆದುಕೊಂಡ ಇಬ್ಬರು ಪುಟ್ಟ ಮಕ್ಕಳು - Mahanayaka
10:52 AM Wednesday 12 - March 2025

ಇಸ್ರೇಲ್ ಕ್ರೌರ್ಯ ಮತ್ತಷ್ಟು ಕ್ರೂರ: ಕಾಲು‌‌ ಕಳೆದುಕೊಂಡ ಇಬ್ಬರು ಪುಟ್ಟ ಮಕ್ಕಳು

24/12/2024

ಮೂರು ವರ್ಷದ ಹನಾನ್ ಅಲ್ ದಕ್ಕಿ ಎಂಬ ಬಾಲೆ ತನ್ನ ಸಹೋದರಿ 22 ತಿಂಗಳ ಮಿಸ್ಕಿ ಜೊತೆ ಆಸ್ಪತ್ರೆಯಲ್ಲಿ ಮಲಗಿದ್ದಾಳೆ ಮತ್ತು ಆಗಾಗ ಪ್ರಶ್ನಿಸುತ್ತಾಳೆ, ಎಲ್ಲಿ ನನ್ನ ಅಮ್ಮ? ನನ್ನ ಕಾಲುಗಳು ಎಲ್ಲಿ ಹೋದವು? ಆದರೆ ಈ ಪ್ರಶ್ನೆಗೆ ಉತ್ತರ ಕೊಡಲು ಅಲ್ಲಿಯ ದಾದಿಯರಿಗಾಗಲಿ ವೈದ್ಯರಿಗೆ ಆಗಲಿ ಸಾಧ್ಯವಾಗುತ್ತಿಲ್ಲ. ಇಸ್ರೇಲ್ ನ ಬಾಂಬ್ ದಾಳಿಗೆ ಗಾಯಗೊಂಡ ಈ ಇಬ್ಬರು ಮಕ್ಕಳ ಕಾಲನ್ನು ಕತ್ತರಿಸಲಾಗಿದೆ. ನಾಲ್ಕು ತಿಂಗಳಿನಿಂದ ಈ ಮಕ್ಕಳು ಆಸ್ಪತ್ರೆಯಲ್ಲಿದ್ದಾರೆ. ಈ ಮಕ್ಕಳ ತಂದೆಯ ಸಹೋದರಿ ಶೆಫಾ ಅಲ್ದಕಿ ಈ ಮಕ್ಕಳ ಜೊತೆಗಿದ್ದಾರೆ. ಈ ಮಕ್ಕಳ ತಾಯಿ ಬಾಂಬ್ ದಾಳಿಗೆ ಬಲಿಯಾಗಿದ್ದಾರೆ.

ಸೆಪ್ಟಂಬರ್ ಎರಡರಂದು ಈ ಇಬ್ಬರು ಮಕ್ಕಳ ತಾಯಿಯಾದ ಶೈಮಾ ಅಲ್ ದಕ್ಕಿ ಅವರು ಬೆಳಿಗ್ಗೆ ಬೇಗನೆ ಎದ್ದರು. ಮತ್ತು ಪೋಲಿಯೋ ವ್ಯಾಕ್ಸಿನ್ ಗಾಗಿ ಈ ಮಕ್ಕಳಿಬ್ಬರನ್ನೂ ಕೊಂಡುಹೋಗಿ ವ್ಯಾಕ್ಸಿನ್ ಹಾಕಿಸಿದರು. ಹೀಗೆ ವ್ಯಾಕ್ಸಿನ್ ಹಾಕಿಸಿದ ಮರುದಿನ ಈ ತಾಯಿ ಮತ್ತು ಮಕ್ಕಳು ಮಧ್ಯಾಹ್ನದ ಊಟ ಮಾಡಿದ್ದಾರೆ. ಇವರ ಮನೆ ದಾರುಲ್ ಬಲ ಎಂಬಲ್ಲಿದೆ. ಈ ಮಧ್ಯಾಹ್ನದ ಊಟವೇ ಆ ಮಕ್ಕಳ ಮತ್ತು ತಾಯಿಯ ಪಾಲಿನ ಮನೆಯ ಊಟವಾಗಿತ್ತು.

ಇಸ್ರೇಲ್ ಆ ಮಧ್ಯಾಹ್ನ ಆ ಮನೆಗೆ ಬಾಂಬ್ ಹಾಕಿತು. ಇದರಲ್ಲಿ 25 ವರ್ಷದ ಆ ತಾಯಿ ಹತ್ಯೆಗೀಡಾದರು. ಅವರ ಪತಿ ಮೊಹಮ್ಮದ್ ಅಲ್ ದಕಿ ಸಹಿತ ಅವರ ಕುಟುಂಬದ ಇತರ ಸದಸ್ಯರಿಗೆ ಗಂಭೀರ ಗಾಯಗಳಾದವು. ಇಬ್ಬರು ಮಕ್ಕಳ ಕಾಲುಗಳು ಕತ್ತರಿಸಿದ ರೀತಿಯಲ್ಲಿತ್ತು.


Provided by

ಮೂರು ವರ್ಷದ ಹನಾನಳಿಗೆ ಗಂಭೀರ ಗಾಯಗಲಾದುವು. ಅವಳ ಎರಡು ಕಾಲುಗಳನ್ನು ಕತ್ತರಿಸಲಾಯಿತು. ಒಂದು ಕಾಲನ್ನು ಮಂಡಿಯಿಂದ ಕತ್ತರಿಸಿದರೆ ಇನ್ನೊಂದು ಕಾಲನ್ನು ತುಸು ಕೆಲಗಿನಿಂದ ಕತ್ತರಿಸಲಾಯಿತು. ಮುಖ ಮತ್ತು ದೇಹದ ಇನ್ನಿತರ ಭಾಗಗಳಿಗೆ ಗಂಭೀರ ಗಾಯಗಳಾದವು. ಇದೆ ವೇಳೆ 22 ವಾರಗಳ ಪುಟ್ಟ ಶಿಶು ಮಿಸ್ಕಿಯ ಎಡಕಾಲನ್ನು ಕತ್ತರಿಸಬೇಕಾಯಿತು. ಈ ಮಕ್ಕಳ ತಂದೆ ಎರಡು ವಾರಗಳ ಕಾಲ ಗಂಭೀರ ಸ್ಥಿತಿಯಲ್ಲಿ ಇದ್ದರು.

ಇಬ್ಬರು ಮಕ್ಕಳು ತೀವ್ರ ಆತಂಕದಲ್ಲಿದ್ದಾರೆ. ಭಯದಲ್ಲಿದ್ದಾರೆ. ಆಗಾಗ ತನ್ನ ಅಮ್ಮನನ್ನು ಕೂಗಿ ಕರೆಯುತ್ತಾರೆ ಎಂದು ಈ ಮಕ್ಕಳ ಬಳಿ ಇರುವ ಚಿಕ್ಕಮ್ಮ ಶೆಫಾ ಹೇಳುತ್ತಾರೆ.
ಈ ಮಕ್ಕಳನ್ನು ನೋಡುವಾಗ ಆತಂಕವಾಗುತ್ತದೆ ಅವರ ಭವಿಷ್ಯವೇನು ಎಂದು ಚಿಂತೆಯಾಗುತ್ತದೆ. ನಿನ್ನ ಅಮ್ಮ ಸ್ವರ್ಗದಲ್ಲಿದ್ದಾರೆ ಎಂದಷ್ಟೇ ನಾನೀಗ ಹೇಳುತ್ತಿದ್ದೇನೆ.

ಬೆಳೆದಾಗ ಇವರ ಮನಸ್ಥಿತಿ ಏನಾಗಿರಬಹುದು? ಅವರದೇ ಪ್ರಾಯದ ಇತರ ಮಕ್ಕಳು ನಡೆದಾಡುವಾಗ ಈ ಮಕ್ಕಳ ಮನಸ್ಸು ಏನಂದೀತು? ಈ ಹನಾನ್ ಳ ಇಷ್ಟದ ಉಡುಪನ್ನು ಆಕೆ ಇನ್ನು ಹೇಗೆ ಧರಿಸಬಲ್ಲಳು? ಚಂದದ ಉಡುಪನ್ನೂ ಶೂ ವನ್ನೂ ಆಕೆ ಕೇಳಿದರೆ ನಾನು ಏನು ಮಾಡಲಿ? ತೊಡಿಸುವ ವಿಧಾನ ಹೇಗೆ ಎಂದು ಶೆಫಾ ಕಣ್ಣೀರು ಹಾಕುತ್ತಾರೆ.

ಈ ಶೆಫಾ ಅವರಿಗೆ ಮೂವರು ಮಕ್ಕಳಿದ್ದಾರೆ. ಆ ಮಕ್ಕಳ ಮಧ್ಯೆ ಈ ಮಕ್ಕಳ ಆರೈಕೆಯನ್ನು ಅವರು ಆಸ್ಪತ್ರೆಯಲ್ಲಿದ್ದು ಮಾಡುತ್ತಿದ್ದಾರೆ. ಕೆಲವೊಮ್ಮೆ ಆಟಿಕೆಗಳನ್ನು ಕೇಳುತ್ತಾರೆ ಇನ್ನು ಕೆಲವೊಮ್ಮೆ ಬೇರೆ ಏನನ್ನಾದರೂ ಕೇಳುತ್ತಾರೆ. ಆದರೆ ಅವರಿಗೆ ಒದಗಿಸುವುದಾದರೂ ಹೇಗೆ? ಒಂದು ಕಡೆ ಇಸ್ರೇಲಿ ಸೇನೆ ದಾಳಿ ಮಾಡುತ್ತಿದೆ, ಬಾಂಬ್ ಹಾಕುತ್ತಿದೆ. ಇನ್ನೊಂದು ಕಡೆ ದಟ್ಟ ದಾರಿದ್ರವಿದೆ. ಇದರ ನಡುವೆ ಈ ಮಕ್ಕಳನ್ನು ನೋಡುವಾಗ ಹೃದಯ ಒಡೆದು ಬರುತ್ತದೆ ಎಂದು ಶೆಫಾ ಹೇಳುತ್ತಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ