3 ಸಾವಿರ ವರ್ಷಗಳ ಹಿಂದೆ ಬದುಕಿದ್ದ ವ್ಯಕ್ತಿಯ ದೇಹದ ಬಗ್ಗೆ ಹೊಸ ಸಂಶೋಧನೆ ಆರಂಭ!
ವಿಶ್ವದಲ್ಲಿಯೇ ಈಜಿಫ್ಟಿಯನ್ ನಾಗರಿಕತೆಯ ಬಗ್ಗೆ ಹೆಚ್ಚಿನ ಕುತೂಹಲಗಳಿವೆ. ಇಲ್ಲಿನ ಪುರಾತನ ಕುರುಹುಗಳು ವಿಶ್ವವನ್ನೇ ಹುಬ್ಬೇರಿಸುವಂತೆ ಆಗಾಗ ಮಾಡುತ್ತಿರುತ್ತದೆ. ಇಂತಹ ನಾಗರಿಕತೆಯಲ್ಲಿ “ಮಮ್ಮಿ” ಕೂಡ ಒಂದಾಗಿದೆ. ಪುರಾತನ ಕಾಲದಲ್ಲಿ ಸಾವನ್ನಪ್ಪಿದವರ ದೇಹವನ್ನು ಸುರಕ್ಷಿತವಾಗಿ ಇನ್ನೂ ರಕ್ಷಿಸಿಡಲಾಗಿದೆ. ಈ ಪೈಕಿ ಆಂಖೆಕೋಂಷು ಹೆಸರಿನ ಈಜಿಫ್ಟ್ ನ ಪುರಾತನ ನಾಗರಿಕನ ದೇಹವನ್ನು ಇದೀಗ ಸಂಶೋಧನೆ ಒಳಪಡಿಸಲಾಗುತ್ತಿದೆ.
ಈಜಿಫ್ಟ್ ನ ಮಮ್ಮಿಗಳ ಬಗ್ಗೆ ಸಾಕಷ್ಟು ಸಿನಿಮಾಗಳು ಹಾಲಿವುಡ್ ಗಳಲ್ಲಿ ಬಂದಿವೆ. ಈ ದೇಹಗಳಲ್ಲಿ ವಿಶಿಷ್ಟವಾದ ಶಕ್ತಿಗಳಿವೆ ಎನ್ನುವ ಕಾಲ್ಪನಿಕ ಕಥೆಗಳನ್ನು ಅವು ಒಳಗೊಂಡಿವೆ. ಆದರೆ ಇದೀಗ ಆಂಖೆಕೋಂಷು ಹೆಸರಿನ 3 ಸಾವಿರ ವರ್ಷಗಳ ಹಿಂದಿನ ಪ್ರಾಚೀನ ಈಜಿಪ್ಟ್ ನಾಗರಿಕನ ದೇಹವನ್ನು ಬಿರ್ಗಾಮೋ ಸಾರ್ವಜನಿಕ ಪ್ರಾಚ್ಯವಸ್ತು ಸಂಗ್ರಹಾಲಯದಿಂದ ಮಿಲನ್‌ನ ಪಾಲಿಕ್ಲಿನಿಕೋ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ಸಂಶೋಧನೆ ನಡೆಸಲು ಮುಂದಾಗಿದ್ದಾರೆ.
ಈ ಪುರಾತನ ಮಾನವನ ದೇಹವನ್ನು ಹೇಗೆ ರಕ್ಷಿಸಿಡಲಾಗಿದೆ ಎಂಬ ಬಗ್ಗೆ ಹಾಗೂ ಆತನ ದೇಹದ ಅಂತ್ಯಕ್ರಿಯೆ ಹೇಗೆ ನಡೆದಿದೆ ಎಂಬಿತ್ಯಾದಿ ವಿಚಾರಗಳನ್ನು ಸಂಶೋಧನೆ ನಡೆಸಲು ಆಧುನಿಕ ಉಪಕರಣಗಳನ್ನು ಬಳಸಲು ಮುಂದಾಗಿದ್ದಾರೆ.