ಜಾಧವ್ ಪುರ ವಿಶ್ವವಿದ್ಯಾಲಯದಲ್ಲಿ ರ‍್ಯಾಗಿಂಗ್: 17 ವರ್ಷದ ವಿದ್ಯಾರ್ಥಿಯನ್ನು ವಿವಸ್ತ್ರಗೊಳಿಸಿದ್ದ ದುರುಳರು..!

ಜಾಧವ್ ಪುರ ವಿಶ್ವವಿದ್ಯಾಲಯದಲ್ಲಿ 17 ವರ್ಷದ ವಿದ್ಯಾರ್ಥಿಯ ದುರಂತ ಸಾವಿನ ಬಗ್ಗೆ ಪೊಲೀಸರು ನಡೆಸಿದ ತನಿಖೆಯು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ರ‍್ಯಾಗಿಂಗ್ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಯನ್ನು ಹುಟ್ಟುಹಾಕಿದ ಮೊದಲ ವರ್ಷದ ಪದವಿಪೂರ್ವ ವಿದ್ಯಾರ್ಥಿಯ ಸಾವು ಭಯಾನಕ ಘಟನೆಯನ್ನು ಬಯಲು ಮಾಡಿದೆ.
ಆಗಸ್ಟ್ 9 ರಂದು ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಎರಡನೇ ಮಹಡಿಯಿಂದ ಬಿದ್ದು ದುರಂತವಾಗಿ ಸಾವನ್ನಪ್ಪಿದ್ದಾನೆ. ಹಾಸ್ಟೆಲ್ ನಲ್ಲಿ ರ‍್ಯಾಗಿಂಗ್ ಮತ್ತು ಲೈಂಗಿಕ ಕಿರುಕುಳದ ಬಗ್ಗೆ ವಿದ್ಯಾರ್ಥಿಯ ಕುಟುಂಬದ ಹೇಳಿಕೆಗಳು ಈ ಪ್ರಕರಣದ ಮೇಲೆ ಬೆಳಕನ್ನು ಚೆಲ್ಲಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 13 ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಪೊಲೀಸ್ ಇಲಾಖೆಯು ಹಾಸ್ಟೆಲ್ ನಿವಾಸಿಗಳು ಮತ್ತು ಸಿಬ್ಬಂದಿ ಸದಸ್ಯರನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿವೆ. ಇದೇ ವೇಳೆ ತಿಳಿದ ವಿಷಯವೇನೆಂದರೆ, ವಿದ್ಯಾರ್ಥಿಯನ್ನು ರ‍್ಯಾಗಿಂಗ್ ಮಾಡಿರುವುದು ತಿಳಿದು ಬಂದಿದೆ. ಅವನನ್ನು ಬೆತ್ತಲೆಗೊಳಿಸಿ ಹಾಸ್ಟೆಲ್ ಆವರಣದ ಸುತ್ತಲೂ ಮೆರವಣಿಗೆ ಮಾಡಲು ಒತ್ತಾಯಿಸಲಾಯಿತು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಘಟನೆ ಒಂದು ಗಂಟೆಗೂ ಹೆಚ್ಚು ಕಾಲ ನಡೆದಿತ್ತು. ಈ ಸಮಯದಲ್ಲಿ ವಿದ್ಯಾರ್ಥಿ ಕೋಣೆಯಿಂದ ಕೋಣೆಗೆ ಓಡುವ ಮೂಲಕ ಪೀಡಕರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ದುರದೃಷ್ಟವಶಾತ್ ವಿದ್ಯಾರ್ಥಿ ಮಹಡಿಯಿಂದ ಬಿದ್ದು ದುರಂತವಾಗಿ ಸಾವನ್ನಪ್ಪಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 13 ಮಂದಿಯಲ್ಲಿ ಕನಿಷ್ಠ 12 ಜನರ ವಿರುದ್ಧ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಲಾಗಿದೆ.