ಕೋಟಿ-ಚೆನ್ನಯ್ಯರ ಅವಹೇಳನ: ಬಿಜೆಪಿ ಮುಖಂಡನ ವಿರುದ್ಧ ಎಫ್ ಐಆರ್
ಮಂಗಳೂರು: ಕೋಟಿ-ಚೆನ್ನಯ್ಯ, ಬಿಲ್ಲವ ಸಮುದಾಯ ಹಾಗೂ ಜನಾರ್ದನ ಪೂಜಾರಿ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ವಿರುದ್ಧ ದೂರು ದಾಖಲಾಗಿದ್ದು, ಮೂಡುಬಿದಿರೆ ಪೊಲೀಸರು ಎಫ್ ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಮೂಡಬಿದಿರೆ ಇದರ ಅಧ್ಯಕ್ಷರು ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಜಗದೀಶ್ ಅಧಿಕಾರಿ ವಿರುದ್ಧ ಭಾರತೀಯ ದಂಡ ಸಂಹಿತೆಯ 295(A), 505 ಹಾಗೂ ಇತರ ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ.
ಬಿಲ್ಲವ ಸಮುದಾಯದ ಮೂಲ ಪುರುಷರಾದ ಕೋಟಿ-ಚೆನ್ನಯ್ಯರ ಬಗ್ಗೆ ಹಾಗೂ ಬಿಲ್ಲವ ಸಮುದಾಯದ ಹಿರಿಯ ನಾಯಕ ಜನಾರ್ದನ ಪೂಜಾರಿ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿರುವ ಕುರಿತು ಬಿಲ್ಲವ ಸಮುದಾಯದಲ್ಲಿ ಭಾರೀ ಆಕ್ರೋಶ ಕೇಳಿ ಬಂದಿದೆ.
ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಜಗದೀಶ್ ಅಧಿಕಾರಿ ವಿರುದ್ಧ ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿ, ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿಯುವ ಬಿಲ್ಲವ ಯುವಕರಿಗೆ 1 ಲಕ್ಷ ರೂ. ತಾನು ನೀಡುವುದಾಗಿ ಘೋಷಿಸಿದ್ದರು. ಇದೀಗ ಸಮುದಾಯದ ಇತರರೂ ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.