ಜಗದೀಶ್ ಶೆಟ್ಟರ್ ಹಲ್ಕಾ ಕೆಲಸ ಬಿಡಬೇಕು: ಯತ್ನಾಳ್ ವಾಗ್ದಾಳಿ

ಚಾಮರಾಜನಗರ: ಡಿಸಿಎಂ ಡಿ.ಕೆ.ಶಿವಕುಮಾರ್ ಈಗ ಬಂಡೆಯಲ್ಲ ಜಲ್ಲಿಕಲ್ಲು ಎಂದು ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ವ್ಯಂಗ್ಯ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ಮುಗಿಸಿದ ಬಳಿಕ ಮಾಧ್ಯಮವರೊಟ್ಟಿಗೆ ಅವರು ಮಾತನಾಡಿ, ಕಾಂಗ್ರೆಸ್ ಶಾಸಕರು ಯಾರೂ ಡಿಕೆಶಿ ಮಾತನ್ನು ಕೇಳುತ್ತಿಲ್ಲ, ರಾಜ್ಯಾಧ್ಯಕ್ಷರಿಗೆ ಯಾರೂ ಕ್ಯಾರೆ ಎನ್ನುತ್ತಿಲ್ಲ, ಡಿಕೆಶಿ ಪೂರ್ತಿ ವೀಕ್ ಆಗಿದ್ದು ಕಾಂಗ್ರೆಸ್ ಶಾಸಕರು ಬಂಡೆಯನ್ನು ಒಡೆದು ಜಲ್ಲಿಕಲ್ಲು ಮಾಡಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಇನ್ನು, ಇದೇ ವೇಳೆ ಡಿಕೆಶಿ ಅವರನ್ನು ಜೈಲಿಗೆ ಕಳುಹಿಸಲು ಅವರ ಪಕ್ಷದಲ್ಲೇ ವಕೀಲರನ್ನು ಸಂಪರ್ಕ ಮಾಡುತ್ತಿದ್ದಾರೆ, ಡಿಕೆಶಿ ಜಾಮೀನನ್ನು ರದ್ದುಪಡಿಸಲು ಕೆಲವರು ಪ್ಲೈಟ್ ನಲ್ಲಿ ತೆರಳಿದ್ದಾರೆ ಎಂದರು.
ಇದೇ ವೇಳೆ, ಅಪರೇಷನ್ ಹಸ್ತ ಸಂಬಂಧ ಮಾತನಾಡಿ, ಜಗದೀಶ್ ಶೆಟ್ಟರ್ ಬಿಜೆಪಿ ಮಾಜಿ ಶಾಸಕರನ್ನು ಸೆಳೆಯುವ ಹಲ್ಕಾ ಕೆಲಸ ಬಿಡಬೇಕು, ಗ್ರಾಪಂ ಅಧ್ಯಕ್ಷರಾಗಲು ಯೋಗ್ಯವಿಲ್ಲದಿದ್ದರೂ ಬಿಜೆಪಿ ಅವರನ್ನು ಸಿಎಂ ಮಾಡಿತ್ತು, ಮಂತ್ರಿ ಮಾಡಿತ್ತು, ಸ್ಪೀಕರ್, ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿತ್ತು. ಈಗ ಕಾಂಗ್ರೆಸ್ ಗೆ ಹೋಗಿ ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ, ಕಿರಾಣಿ ಅಂಗಡಿ ತೆರೆದು ಶಾಸಕರನ್ನು ವ್ಯಾಪಾರ ಮಾಡುವ ಕೆಲಸಕ್ಕೆ ಇಳಿದಿದ್ದಾರೆ, ಈ ಹಲ್ಕಾ ಕೆಲಸ ಮೊದಲು ಬಿಡಬೇಕು ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.
ಬಿಜೆಪಿಯಲ್ಲಿ ವಿ.ಸೋಮಣ್ಣ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಸೋಮಣ್ಣ ಅವರನ್ನು ಬಿಜೆಪಿ ಕಡೆಗಣಿಸಿಲ್ಲ. ಅವರಿಗೆ ಮುಂದೆ ಪಕ್ಷದಲ್ಲಿ ಒಳ್ಳೆಯ ಗೌರವಯುತ ಸ್ಥಾನ ಕಾದಿದೆ. ಸೋಮಣ್ಣ ಕಾಂಗ್ರೆಸ್ ಗೆ ಹೋದ್ರೆ ಮಣ್ಣು ತಿನ್ನಬೇಕು ಅಷ್ಟೇ, ಅವರೇ 136 ಜನ ಇದ್ದಾರೆ ಅವರಿಗೆ ಸರಿಯಾದ ಸ್ಥಾನ ಸಿಕ್ಕಿಲ್ಲ, ಇನ್ನ ಸೋಮಣ್ಣ ಹೋದ್ರೆ ಅವರಿಗೇನು ಸಿಗುತ್ತೆ, ಈಗ ನಮಗೆ ಲೋಕಸಭೆ ಚುನಾವಣೆ ಅಷ್ಟೇ ಬೇಕು. ಮೋದಿ ಮತ್ತೊಮ್ಮೆ ಪಿಎಂ ಆಗಲು ಹಗಲು ರಾತ್ರಿ ದುಡಿಯಬೇಕು. ಭಾರತ ಭಾರತವಾಗಿ ಉಳಿಯಬೇಕು. ಭಾರತ ಮತ್ತೊಂದು ಇಸ್ರೇಲ್ ವಿರುದ್ದ ಹೋಗಿರುವ ಹಮಾಸ್ ಆಗಬಾರದು. ಅದಕ್ಕಾಗಿ 2024ಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂದರು.
ಪರೀಕ್ಷೆ ಅಕ್ರಮದಲ್ಲಿ ಕಾಂಗ್ರೆಸ್ ಕಿಂಗ್ ಪಿನ್:
ಎಲ್ಲಾ ಅಕ್ರಮದ ಕಿಂಗ್ ಪಿನ್ ಗಳೇಲ್ಲರು ಕಾಂಗ್ರೆಸ್ ನವರು, ಪಿಎಸ್ ಐ ಹಗರಣ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ದ ಮಾತನಾಡುತ್ತಿದ್ದರು, ಈಗ ನಿಮ್ಮದೇ ಸರ್ಕಾರ ಇದೆ ಸಿಬಿಐ ತನಿಖೆ ಮಾಡಿ, ನೀವು ಐದು ತಿಂಗಳಾದರೂ ಯಾವ ತನಿಖೆ ಮಾಡಿಲ್ಲ, ನಿಮಗೆ ಧಮ್, ತಾಕತ್ ಇದ್ರೆ ತನಿಖೆ ಮಾಡ್ಸಿ ಎಂದು ಸವಾಲು ಹಾಕಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನೇನು ಮಾಡ್ತೀನಿ ಅಂತ ಹೇಳ್ತಿದ್ರು, ಈಗ ಪ್ರಿಯಾಂಕ್ ಖರ್ಗೆ ಎಲ್ಲಿಗೆ ಹೋದ್ರು, ಕಾಂಗ್ರೆಸ್ ಪಕ್ಷದವರೇ ಅಕ್ರಮದ ಕಿಂಗ್ ಪಿನ್ ಆಗಿದ್ದಾರೆ, ಇದೆಲ್ಲಾ ನೋಡಿದರೆ ಪಿಎಸ್ ಐ ಹಾಗು ಕೆಎಇ ಪರೀಕ್ಷಾ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಕೈವಾಡ ಇದೆ ಎನಿಸುತ್ತದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ನಮ್ಗೆ ಪೇ ಸಿಎಂ ಅಂತ ಹೇಳ್ತಿದ್ರು, ಇಲ್ಲಿ ಪೇ ಡಿಸಿಎಂ ಆಗಿದೆ. ಇದನ್ನ ಬಿಟ್ಟು ಸಿಎಂ ಅಕೌಂಟ್ ಓಪನ್ ಇದೆ. ಈಗ ಗುತ್ತಿಗೆದಾರರು ಎರಡು ಕಡೆ ಪರ್ಸಂಟೇಜ್ ಕೊಡ್ಬೇಕು ಎಂದು ಇದೇ ವೇಳೆ ಕೈ ಸರ್ಕಾರದ ವಿರುದ್ಧ ಆರೋಪ ಮಾಡಿದರು.