ಕರ್ನಾಟಕದಲ್ಲಿ ಹುಟ್ಟಿಕೊಂಡ ‘ಜೈಭೀಮ್’ ಪರಂಪರೆಯ ಹಿನ್ನೆಲೆ
- ಅಪ್ಪಗೆರೆ ಡಿ.ಟಿ.ಲಂಕೇಶ್, ಚನ್ನಪಟ್ಟಣ
ಮೊಟ್ಟ ಮೊದಲ ಬಾರಿಗೆ ಈ ನೆಲದಲ್ಲಿ ಲಕ್ಷಾಂತರ ಜನ ಜೈಭೀಮ್ ಅಂತ ಹೇಳುವಂತೆ ಮಾಡಿದ ಕೀರ್ತಿ ಬಹುಜನ ಚಳುವಳಿಯನ್ನು ಕಟ್ಟಿದ ಗೋಪಿನಾಥ್ ಅಣ್ಣ, ಮಹೇಶಣ್ಣ, ಬಿ.ಗೋಪಾಲ್ ಮುಂತಾದ ನಾಯಕರಿಗೆ ಸಲ್ಲಲೇಬೇಕು. 1990–91 ದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ 100ನೇ ವರ್ಷದ ‘ಶತಮಾನೋತ್ಸವ’ ಆಚರಣೆಯ ಪ್ರಯುಕ್ತ ಗೋಪಿನಾಥ್ ಅಣ್ಣ, ಲಕ್ಷ್ಮಕ್ಕ ಅವರೊಡನೆ ಕೋಲಾರ, ಬೆಂಗಳೂರಿನ ಸುಮಾರು ಹದಿನೈದು ಜನರು ‘ಸ್ವಾಭಿಮಾನ ಜಾಥಾ’ ಹೆಸರಿನಲ್ಲಿ ಬೆಂಗಳೂರಿನಿಂದ ಪ್ರಾರಂಭಿಸಿ ಮಹಾರಾಷ್ಟದ ಅಂಚಿನ ಗ್ರಾಮಗಳವರೆಗೆ ಸೈಕಲ್ ಗಳಲ್ಲಿ ನಡೆಸಿದ ಯಾತ್ರೆಯಲ್ಲಿ ಮೊಳಗಿದ್ದೆ ‘ಜೈಭೀಮ್’ ಘೋಷಣೆ. ಜಾಥಾ ನಾನಾ ಕಾರಣಗಳಿಂದ ಎರಡು ಮೂರು ವಿಭಾಗಗಳಲ್ಲಿ ಮುನ್ನಡೆದಾಗ ಗೋಪಿನಾಥ್ ಅಣ್ಣ, ಲಕ್ಷ್ಮಕ್ಕ ಅವರ ನೇತೃತ್ವದಲ್ಲಿ ‘ಭೀಮ್ ಮಾರ್ಚ್’ ಹೆಸರಿನಲ್ಲಿ 13 ತಿಂಗಳುಗಳ ಕಾಲ ಮುಂದುವರೆಯಿತು. ಸೈಕಲ್ ಮುಂದೆ ಭೀಮ್ ಮಾರ್ಚ್ ಬೋರ್ಡು, ಹಿಂದೆ ಜೈಭೀಮ್ ಘೋಷಣೆಯ (ಇಂಗ್ಲೀಷ್ ನಲ್ಲಿ ಬರೆದಿದ್ದು) ಬಟ್ಟೆ ಹಾಕಿಕೊಂಡು ಜನರಿಗೆಲ್ಲಾ ಜೈಭೀಮ್ ಘೋಷಣೆಯನ್ನು ಇವರು ಅವಿರತ ಪ್ರಚಾರ ಮಾಡಿದರು. ನಮ್ಮವರು ಎಲ್ಲಿಯೇ ಸಿಕ್ಕರು ‘ಜೈಭೀಮ್’ ಎಂದು ಹೇಳಿ ಮಾತನಾಡುವ ಅಭ್ಯಾಸ ಪ್ರಾರಂಭವಾಯಿತು.
ಈ ವೇಳೆಗೆ ಬಾಬಾಸಾಹೇಬರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಇದ್ದಂತಹ ಅಂದಿನ ದಲಿತ ಸಂಘಟನೆಗಳ ಮುಖಂಡರು ‘ಜೈಭೀಮ್’ ಎಂಬುದನ್ನ ಆಡಿಕೊಂಡು ನಗಾಡುತ್ತಾ ‘ಜೈ ಭೀಮ್, ಭೀಮ್ ಎಂದರೇನು? ಯಾರು ಈ ಭೀಮ್ ಎಂದು ಅಪಹಾಸ್ಯ ಮಾಡಿದ್ದೂ ಉಂಟು, ಆದರೆ ಯಾರು ಹಾಗೆ ಅಪಹಾಸ್ಯ ಮಾಡಿದ್ದರೋ ಅವರೇ ನಂತರ ‘ಜೈಭೀಮ್’ ಎಂದು ಹೆಮ್ಮೆಯಿಂದ ಹೇಳಲು ಪ್ರಾರಂಭ ಮಾಡಿದರು. ಹೀಗೆ ‘ಜೈಭೀಮ್’ ಎಂಬುದು ಅಂದಿಗೇ ದೊಡ್ಡ ಘೋಷಣೆಯೂ, ಆತ್ಮಗೌರವವೂ ಆದ ಸಂಗತಿಯಾಗಿತ್ತು. ನಂತರದ ವರ್ಷಗಳಲ್ಲಿ ದೊಡ್ಡಬಳ್ಳಾಪುರ, ಕೋಲಾರ, ಕನಕಪುರ, ಹಾಲನಾಥ, ಮುತ್ತತ್ತಿ ಮುಂತಾದ ಕಡೆಗಳಲ್ಲಿ ನಡೆದ ಭೂ ಹೋರಾಟಗಳಲ್ಲಿ ‘ಜೈ ಭೀಮ್’ ಘೋಷಣೆ ಸಹ ರೂಢಿಯಾಯಿತು. ಕರ್ನಾಟಕದಲ್ಲಿ ಬಿಎಸ್ಪಿಯನ್ನು ನೆಲೆಗೊಳಿಸಲು ಮುಂದಾದ ಪ್ರೊ.ಬಿ.ಕೃಷ್ಣಪ್ಪ ಅವರು ಜೈಭೀಮ್ ಅನ್ನುವುದನ್ನು ವಿಫುಲವಾಗಿ ಪ್ರಚಾರಗೊಳಿಸಿದರು. ಆ ಕಾಲಕ್ಕಾಗಲೇ ಮಧ್ಯೆ ಕರ್ನಾಟಕ ದಾಟಿ ಮುಂಬೈವರೆಗೂ ಸಹ ಜೈಭೀಮ್ ಎನ್ನುವುದು ಚೆನ್ನಾಗಿ ರೂಢಿಗೆ ಬಂದಿತ್ತು. ಹೈದರಾಬಾದ್ ಕರ್ನಾಟಕದವರೆಗೂ ಆಗಲೇ ಪರಿಚಯವಿತ್ತು. ಆದರೆ ದಕ್ಷಿಣ ಕರ್ನಾಟಕ, ಹಳೆ ಮೈಸೂರಿನಲ್ಲಿ ಇದು ಚಾಲ್ತಿಗೆ ಬರಲು ಬಹುಜನ ಚಳವಳಿ ಬುನಾದಿಯಾಯಿತು.
ವೈಯುಕ್ತಿಕವಾಗಿ ನಾನು ಜೈಭೀಮ್ ಅಂತ ಹೇಳಲು ಪ್ರಾರಂಭಿಸಿದ್ದು ನನಗೆ ಮೊದಲ BVS ಶಿಬಿರ ಮುಗಿಸಿ ಬಂದಾಗ, ಅದು 2001–2002 ನೇ ಇಸವಿಯ ಸುಮಾರಿನಲ್ಲಿ. ಹಳೆಮೈಸೂರು ಭಾಗದಲ್ಲಿ ಉನ್ನತ ಹುದ್ದೆ ತೊರೆದು ಚಳುವಳಿಯನ್ನು ಹೆಗಲಿಗೆ ಹಾಕಿಕೊಂಡಿದ್ದ ಮಹೇಶಣ್ಣ ಅವರು, ಜೊತೆಯಲ್ಲಿ ಮೋಹನಣ್ಣ ಅವರು ಒಂದಷ್ಟು ಶಿಸ್ತನ್ನು ನಮಗೆಲ್ಲರಿಗೂ ಕಲಿಸಿಕೊಟ್ಟಿದ್ದರು. ಯಾರು ಎಲ್ಲಿಯೇ ಎದುರು ಸಿಕ್ಕರೂ ಸಹ ಕಡ್ಡಾಯವಾಗಿ ನಾವು ಕೈ ಮುಷ್ಟಿ ಹಿಡಿದು ಮೇಲಕ್ಕೆತ್ತಿ ‘ಜೈಭೀಮ್’ ಎಂದು ಹೇಳಲೇಬೇಕಾಗಿತ್ತು. ಅದೊಂದು ಪ್ರೀತಿ, ಅಭಿಮಾನದ ಸಂಕೇತವೂ ಆಯಿತು. ಅಂದಿನಿಂದ ಯಾವುದೇ ಕಾರ್ಯಕ್ರಮಗಳಿರಲಿ, ಯಾರೇ ಮಾತನಾಡಲಿ ಪ್ರಾರಂಭದಲ್ಲಿ ‘ಜೈಭೀಮ್’, ಮುಗಿದ ಮೇಲೂ ‘ಜೈಭೀಮ್’, ಹಾಡು ಹಾಡುವವರಿದ್ದರೂ ಅಷ್ಟೇ ಹಾಡಿನ ಪ್ರಾರಂಭದಲ್ಲಿಯೂ ‘ಜೈಭೀಮ್’, ಮುಗಿದ ಮೇಲೂ ‘ಜೈಭೀಮ್’, ಇಷ್ಟು ಮಾತ್ರವಲ್ಲದೆ ಸ್ವಾಗತ ಕೋರುವಾಗ ‘ಭೀಮಸ್ವಾಗತ’, ವಂದನೆ ಹೇಳುವಾಗ ‘ಭೀಮವಂದನೆಗಳು’ ಈ ಪದಗಳು ಕ್ರಮೇಣ ನಮಗೆ ಔಪಚಾರಿಕ ಬಳಕೆಗೆ ನಿಗದಿಯೂ ಆಗಿಹೋದವು. ಹಾಗೆಯೇ ಇದೊಂಥರ ನಿಯಮವೂ ಆಗಿಹೋಯಿತು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ‘ಜೈಭೀಮ್’ ಎಂಬ ದೀಕ್ಷೆ ಕೊಟ್ಟಿದ್ದು ಸಹ BVS ಎಂಬುದು ಗೊತ್ತೆ? ಜೈಭೀಮ್ ಘೋಷಣೆ ಎಷ್ಟರಮಟ್ಟಿಗೆ ಚಾಲ್ತಿಗೆ ಬಂತೆಂದರೆ BVS 2005 ರಲ್ಲಿ ಮೈಸೂರಿನ ಟೌನ್ ಹಾಲ್ ನಲ್ಲಿ ಏರ್ಪಡಿಸಿದ್ದ ಸೆಮಿನಾರ್ ಗೆ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಶ್ವಾನಾಥ್, ಸಿ.ಎಂ.ಇಬ್ರಾಹಿಂ ಮುಂತಾದವರೆಲ್ಲರೂ ಸಹ ಅಂದು ಹೇಳಿದ್ದು ‘ಜೈಭೀಮ್’ ಅಂತಲೇ. 2005 ರ ನಂತರಲ್ಲಿ ರಾಜ್ಯದ ತುಂಬೆಲ್ಲಾ ಹುಟ್ಟಿಕೊಂಡ ಸಾವಿರಾರು ಅಂಬೇಡ್ಕರ್ ವಾದಿಗಳು, ಜೈಭೀಮ್ ಅಂತ ಹೇಳುವ ಜೊತೆಗೆ ತಾವು ಅಪ್ಪಟ ‘ಅಂಬೇಡ್ಕರೈಟ್ಸ್’ ಎಂದು ಹೇಳಿಕೊಳ್ಳುವಲ್ಲಿ ಇದೆಲ್ಲಾ ಬುನಾದಿಯಾಯಿತು. ಈಗಲೂ ನಾವು ಯಾರಿಗೆ ಫೋನ್ ಮಾಡಿದರೂ ಅಷ್ಟೇ, ಸಿಕ್ಕಾಗಲೂ ಅಷ್ಟೇ ನಮಗೆ ಅರಿವಿರದಂತೆಯೇ ದಿನಕ್ಕೆ ಕನಿಷ್ಟ ಇಪ್ಪತ್ತು ಸಾರಿಯಾದರೂ ‘ಜೈಭೀಮ್’ ಅನ್ನುತ್ತೇವೆ. ಅಂದು ಮಾರ್ಕ್ಸ್, ಚೆಗುವೆರಾ, ಲೆನಿನ್, ಲೋಹಿಯಾ, ಜೆ.ಪಿ, ಗಾಂಧಿಯ ಜಪದಲ್ಲಿ ಇದ್ದ ದಲಿತಮಿತ್ರರು ಕಳೆದ ಕೆಲವು ವರ್ಷಗಳಿಂದ ‘ಜೈಭೀಮ್’ ಎಂದು ಹೇಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಹಾಗೆಯೇ ಎಲ್ಲಾ ದಲಿತ ಸಂಘಟನೆಯವರು, ಚಳುವಳಿಗಾರರು, ರಾಜಕಾರಣಿಗಳು, ಎಲ್ಲಾ ಕ್ಷೇತ್ರದವರೂ ಸಹ ಜೈಭೀಮ್ ಘೋಷಣೆ ಬಳಸುತ್ತಿದ್ದಾರೆ.
ಇಂದು ಕರ್ನಾಟಕದ ನೆಲದಲ್ಲಿ ಜನಪ್ರಿಯವಾಗಿರುವ, ಎಲ್ಲರೂ ಹೆಮ್ಮೆಯಿಂದ ಬಳಸುವ ‘ಜೈಭೀಮ್’ ಎಂಬುದು ಒಂದು ಪರಂಪರೆಯಾಗಿ ಹುಟ್ಟಿ, ಬೆಳೆಯಲು ಕಾರಣರಾದವದಲ್ಲಿ ಪ್ರಮುಖರು ಮಹೇಶಣ್ಣ, ಅವರ ಇಂದಿನ ರಾಜಕೀಯ ಸ್ಥಾನ, ಅವರು ಅನಿವಾರ್ಯವಾಗಿ ತಲುಪಿರುವ ಯಾವುದೋ ‘ನೆಲೆ’ಯ ಕಾರಣಕ್ಕಾಗಿ ಜೈಭೀಮ್ ಎಂಬ ದೊಡ್ಡ ಪರಂಪರೆಯ ಹುಟ್ಟಿಗೆ ಕಾರಣರಾದ ಅವರ ಶ್ರಮ, ಶ್ರದ್ಧೆ, ಬೆವರು, ಸಮಯ, ವಯಸ್ಸನ್ನು ಟೀಕಿಸುವುದು ಬೇಡ. ಅವರ ಬಗ್ಗೆ ಅಸಮಾಧಾನ, ವೈಮನಸ್ಯ, ಸೈದ್ದಾಂತಿಕ ಭಿನ್ನಾಭಿಪ್ರಾಯ ಇದ್ದವರು ಸಹ ‘ಜೈಭೀಮ್’ ಪರಂಪರೆಯ ಕಾರಣಕ್ಕಾಗಿ ಅವರನ್ನು ಗೌರವಿಸಬೇಕಾದದು ನಮ್ಮ ಆದ್ಯತೆಯಾಗಬೇಕು. ಕಡೆಯದಾಗಿ ಒಂದು ಮಾತು, ಕಳೆದ ವಾರ ಮಹೇಶಣ್ಣ ಅವರಿಗೆ ಯಾವುದೋ ವಿಚಾರಕ್ಕೆ ಫೋನ್ ಮಾಡಿದ್ದೆ, ಆ ಕಡೆಯಿಂದ ‘ಜೈಭೀಮ್’, ಹೇಳಪ್ಪ ಲಂಕೇಶ್.., ಎಂಬ ಧ್ವನಿ ಬಂತು. ನಾನು ಜೈಭೀಮ್ ಅಣ್ಣ ಎಂದು ಮಾತು ಮುಂದುವರೆಸಿದೆ…
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka