ಮರುಮದುವೆಗೆ ಒಪ್ಪದ ಸೊಸೆಯ ಮೂಗು, ನಾಲಿಗೆ ಕತ್ತರಿಸಿದ ಗಂಡನ ಮನೆಯವರು!
18/11/2020
ಜೈಪುರ: ಮರುಮದುವೆಗೆ ಸೊಸೆ ಒಪ್ಪಲಿಲ್ಲ ಎನ್ನುವ ಕಾರಣಕ್ಕಾಗಿ ಗಂಡನ ಮನೆಯವರು ಸೊಸೆಯ ಮೂಗು, ನಾಲಿಗೆಯನ್ನು ಕೊಯ್ದ ಆಘಾತಕಾರಿ ಘಟನೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆದಿದ್ದು, ಸೊಸೆ ಇದೀಗ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮಂಗಳವಾರ ಈ ಘಟನೆ ನಡೆದಿದ್ದು, 30 ವರ್ಷದ ವಿಧವೆ ಸೊಸೆಗೆ ಆಕೆಯ ಗಂಡನ ಮನೆಯವರು ತಮ್ಮ ಸಂಬಂಧಿಯನ್ನು ಮದುವೆಯಾಗುವಂತೆ ಒತ್ತಡ ಹೇರಿದ್ದರು. ಆದರೆ, ಆಕೆಗೆ ಈ ಮದುವೆ ಇಷ್ಟವಿರಲಿಲ್ಲ. ಈ ಕಾರಣಕ್ಕಾಗಿ ಹರಿತವಾದ ಆಯುಧದಿಂದ ಆಕೆಯ ನಾಲಿಗೆ ಕತ್ತರಿಸಿದ್ದು, ಮೂಗನ್ನೂ ಕೊಯ್ದು ಕ್ರೂರತೆ ಮೆರೆದಿದ್ದಾರೆ.
ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾನು ಖಾನ್ ಎಂಬಾತನನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳು ಈ ಕೃತ್ಯದಲ್ಲಿ ಶಾಮೀಲಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.