ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಪತಿ ಜೀವನಾಂಶ ಕೊಡಬೇಕೆಂಬ ಸುಪ್ರೀಂ ತೀರ್ಪಿಗೆ ಜಮಾಅತೆ ಇಸ್ಲಾಮಿ ಹಿಂದ್ ಶರೀಅತ್ ಕೌನ್ಸಿಲ್ ನ ಕಾರ್ಯದರ್ಶಿ ಆಕ್ಷೇಪ
ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಪತಿ ಜೀವನಾಂಶ ಕೊಡಬೇಕು ಎಂಬ ಸುಪ್ರೀಂ ಕೋರ್ಟ್ ನ ತೀರ್ಪನ್ನು ಜಮಾಅತೆ ಇಸ್ಲಾಮಿ ಹಿಂದ್ ಶರೀಅತ್ ಕೌನ್ಸಿಲ್ ನ ಕಾರ್ಯದರ್ಶಿ ಡಾ.ರಝಿಉಲ್ ಇಸ್ಲಾಮ್ ನದ್ವಿ ಆಕ್ಷೇಪಿಸಿದ್ದಾರೆ. ಇದು ಮುಸ್ಲಿಂ ಪರ್ಸನಲ್ ಲಾದ ಮೇಲಿನ ಹಸ್ತಕ್ಷೇಪ ಎಂದವರು ಹೇಳಿದ್ದಾರೆ.
ಶರಿಯಾ ಅಪ್ಲಿಕೇಶನ್ ಆಕ್ಟ್ 1937 ಮುಸ್ಲಿಮರಿಗೆ ವೈಯಕ್ತಿಕ ಕಾನೂನಿನ ಸ್ವಾತಂತ್ರ್ಯವನ್ನು ನೀಡುತ್ತದೆ. ಈ ಮೂಲಕ ಮದುವೆ,ವಿಚ್ಛೇದನ, ಉತ್ತರಾಧಿಕಾರ ಸಹಿತ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಈ ಕಾಯ್ದೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಅನುಮತಿ ನೀಡಲಾಗಿದೆ ಎಂದವರು ಹೇಳಿದರು. ನ್ಯಾಯಾಲಯದ ಈ ತೀರ್ಪು ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಕಸಿಯುತ್ತದೆ.
ಇದು ಮಹಿಳೆಯರ ಪರ ನೀಡಲಾದ ತೀರ್ಪು ಅಲ್ಲ. ತಾನು ಬದುಕಿನುದ್ದಕ್ಕೂ ತನ್ನ ವಿಚ್ಛೇದಿತ ಪತ್ನಿಗೆ ಮಾಸಾಶನ ನೀಡಬೇಕಾಗುತ್ತದೆ ಎಂದು ಗೊತ್ತಾದ ಪತಿ ವಿಚ್ಛೇದನ ನೀಡದೆಯೇ ಪತ್ನಿಯನ್ನು ಸತಾಯಿಸುವುದಕ್ಕೆ ಈ ತೀರ್ಪು ಅವಕಾಶ ಮಾಡಿಕೊಡಬಹುದು. ಇದರಿಂದಾಗಿ ಮಹಿಳೆಯೇ ತೊಂದರೆಗೆ ಒಳಗಾಗಬಹುದು ಎಂದವರು ಹೇಳಿದ್ದಾರೆ. ವಿಚ್ಛೇದಿತ ಮಹಿಳೆಗೆಜೀವನ ಸಾಗಿಸಲು ತನ್ನ ಕುಟುಂಬದ ಬೆಂಬಲ ಸಿಗದೇ ಇದ್ದರೆ ಸಮಾಜ ಅದರ ಹೊಣೆಗಾರಿಕೆಯನ್ನು ವಹಿಸಬೇಕೆ ಹೊರತು ತನ್ನಿಂದ ಬೇರ್ಪಟ್ಟ ಪತಿ ಜೀವನಪೂರ್ತಿ ಆಕೆಯ ಪೋಷಣೆಯ ಹೊಣೆ ಹೊತ್ತುಕೊಳ್ಳುವುದು ಸರಿಯಾಗುವುದಿಲ್ಲ. ಅಲ್ಲದೆ ಇದು ಹೆಣ್ಣಿನ ಘನತೆಗೆ ಮಾಡುವ ಅವಮಾನ ಎಂದು ಕೂಡ ಅವರು ಹೇಳಿದ್ದಾರೆ. ಇಸ್ಲಾಮಿನಲ್ಲಿ ಮದುವೆ ಎಂಬುದು ಒಪ್ಪಂದವಾಗಿದೆ. ಆದರೆ ಹಿಂದೂ ಧರ್ಮದಲ್ಲಿ ಜನ್ಮಜನ್ಮದ ಅನುಬಂಧವಾಗಿದೆ. ಒಪ್ಪಂದ ರದ್ದುಗೊಂಡ ಬಳಿಕ ಪತಿ ಯಾಕೆ ವಿಚ್ಛೇದಿತ ಪತ್ನಿಗೆ ಜೀವನಪೂರ್ತಿ ಜೀವನಾಂಶ ನೀಡಬೇಕು ಎಂದವರು ಪ್ರಶ್ನಿಸಿದ್ದಾರೆ.
ಇತರ ಯಾವುದೇ ಒಪ್ಪಂದ ಪ್ರಕರಣಗಳಲ್ಲಿ ಒಪ್ಪಂದ ಮುರಿದಾಗ ಇಂತಹ ನಿಯಮ ಪಾಲನೆಯಲ್ಲಿ ಇದೆಯೇ ಎಂದವರು ಪ್ರಶ್ನಿಸಿದ್ದಾರೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಮೇಲೆ ನ್ಯಾಯಾಲಯ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ಕೂಡ ಅವರು ಹೇಳಿದ್ದಾರೆ. ಈ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ, ವಿಸ್ತೃತ ಪೀಠದಲ್ಲಿ ಇದರ ವಿಚಾರಣೆಯಾಗುವಂತೆ ಮನವಿ ಮಾಡಲಾಗುವುದು ಎಂದವರು ಹೇಳಿದ್ದಾರೆ.