ಜನ ಕೇಳಿದ್ದು ಉದ್ಯೋಗ, ಇವರು ಕೊಡುತ್ತಿರುವುದು ಪಾಲಿಸ್ಟಾರ್ ಬಾವುಟ: ಜೆಡಿಎಸ್ ಮುಖಂಡ ಪ್ರವೀಣ್ ಕುಮಾರ್
ಹಾಸನ: ಹಾಸನದ ರಸ್ತೆಗಳಲ್ಲಿ ಹೊಂಡಗುಂಡಿಗಳಿಂದಾಗಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಒಂದೆಡೆ ಮಳೆಯಿಂದ ಜನರ ಮನೆಗಳು ಕುಸಿದು ಬೀಳುತ್ತಿವೆ. ಇಂತಹ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯ ಮಾಡುವುದು ಬಿಟ್ಟು ಬಿಜೆಪಿ ಸರ್ಕಾರ ಪಾಲಿಸ್ಟಾರ್ ಬಾವುಟ ಹಂಚಿ ಜನರ ಕಣ್ಣೀಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ ಎಂದು ಹಾಸನ ಜೆಡಿಎಸ್ ಮುಖಂಡ ಪ್ರವೀಣ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನದ ರಸ್ತೆ ಅವ್ಯವಸ್ಥೆ ಹಾಗೂ ಮಳೆ ಹಾನಿ ಸಂಬಂಧ ಪ್ರತಿಕ್ರಿಯಿಸಿದ ಅವರು, ಕಳೆದ ಮೂರು ತಿಂಗಳ ಹಿಂದೆ ರಸ್ತೆ ದುರಸ್ತಿ ಮಾಡಿದರೂ, ರಸ್ತೆಗಳು ಹೊಂಡಮಯವಾಗಿದೆ. ಈ ಬಗ್ಗೆ ಮಾಧ್ಯಮಗಳು ನಿರಂತರ ವರದಿ ಮಾಡುತ್ತಿದ್ದರೂ, ರಸ್ತೆ ಸರಿಪಡಿಸದೇ ನಿರ್ಲಕ್ಷ್ಯವಹಿಸಲಾಗಿದೆ ಎಂದು ಆರೋಪಿಸಿದರು.
ಹಾಸನದ ರಸ್ತೆ ಕಾಮಗಾರಿಗಳನ್ನು 4 ವರ್ಷಗಳ ಹಿಂದೆಯೇ ಮಾಡಲಾಗಿದೆ. ಆದರೆ, ಇದೀಗ ಇರುವ ರಸ್ತೆಗಳನ್ನು ಕಿತ್ತು, ಮತ್ತೆ ರಸ್ತೆ ಕಾಮಗಾರಿ ಮಾಡಿ ಜನರ ವಿಶ್ವಾಸಗಳಿಸಲು ಹೊರಟಿದ್ದೀರಿ. ಪದೇ ಪದೇ ರಸ್ತೆ ಕೀಳುವುದಕ್ಕಿಂತ ಗುಣಮಟ್ಟ ರಸ್ತೆ ಕಾಮಗಾರಿಯನ್ನು ಮೊದಲು ಮಾಡಿ ಎಂದು ಪ್ರವೀಣ್ ಕುಮಾರ್ ಒತ್ತಾಯಿಸಿದರು.
ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದಾಗಿ ವಾಹನ ಸವಾರರ ಪ್ರಾಣಕ್ಕೆ ಗ್ಯಾರೆಂಟಿ ಇಲ್ಲದಾಗಿದೆ. ಮಧ್ಯಮ ವರ್ಗದ, ಬಡ ಜನರು ಅತೀ ಹೆಚ್ಚು ಬೈಕ್ ಗಳಲ್ಲಿ ಓಡಾಡುತ್ತಿದ್ದಾರೆ. ಬೈಕ್ ಸವಾರರೇ ರಸ್ತೆಗುಂಡಿಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಜನರು ಸತ್ತ ಮೇಲೆ ಪರಿಹಾರ ನೀಡುವುದಕ್ಕಿಂತ, ರಸ್ತೆಯ ಗುಂಡಿಗಳನ್ನು ಮುಚ್ಚಿ ಜನರ ಪ್ರಾಣ ಕಾಪಾಡಿ. ಬಡವರ ಜೀವದ ಜೊತೆಗೆ ಆಟವಾಡಬೇಡಿ ಎಂದು ಅವರು ಮನವಿ ಮಾಡಿದರು.
ಮನೆಯ ಮೇಲೆ ಹಾರಿಸಿ ಎಂದು ಧ್ವಜ ನೀಡುತ್ತಿದ್ದೀರಿ. ಆದರೆ ಸಾಕಷ್ಟು ಸಂಖ್ಯೆಯ ಜನರ ಮನೆಗಳು ಮಳೆಯಿಂದಾಗಿ ಕುಸಿದು ಬಿದ್ದಿವೆ. ಅಂತಹವರಿಗೆ ಪರಿಹಾರ ಒದಗಿಸುವ ಕೆಲಸ ಮೊದಲು ಮಾಡಿ. ಸಾಕಷ್ಟು ಜನರಿಗೆ ಮನೆಯೇ ಇಲ್ಲ. ಅಂತಹವರು ಎಲ್ಲಿ ಧ್ವಜ ಹಾರಿಸಬೇಕು ಎಂದು ಜನ ಪ್ರಶ್ನೆ ಕೇಳುತ್ತಿದ್ದಾರೆ. ಅವರಿಗೆ ನೀವು ನಿಮ್ಮ ಕೆಲಸ ಮೂಲಕ ಉತ್ತರಿಸುವಿರಾ? ಎಂದು ಅವರು ಸವಾಲು ಹಾಕಿದರು.
ಜನರು ವಾಸಿಸಲು ಮನೆ, ಉದ್ಯೋಗ ಕೇಳಿದರೆ, ನೀವು ಧ್ವಜ ಕೊಡುತ್ತಿದ್ದೀರಿ. ಧ್ವಜ ಕೊಡುವ ಬದಲು ಪ್ರತಿ ಮನೆಗೂ ಉದ್ಯೋಗ ಕೊಡಿ. ಪ್ರತಿ ಮನೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿ. ದೇಶದ ನಗರಗಳಲ್ಲಿ ಆಶ್ರಯವಿಲ್ಲದೇ ರಸ್ತೆ ಬದಿ ಮಲಗುವ ನೂರಾರು ಬಡ ನಿರಾಶ್ರಿತರಿಗೆ ಆಶ್ರಯ ನೀಡಿ. ಇದರಿಂದ ಭಾರತದ ಅಭಿವೃದ್ಧಿ ಸಾಧ್ಯವೇ ಹೊರತು, ಬಾವುಟ ಕೊಡುವುದರಿಂದಲ್ಲ. ಭಾರತ ಎಂದರ ಜನ ಎನ್ನುವುದನ್ನು ಮೊದಲು ಅರಿತು ಅಭಿವೃದ್ಧಿ ಕೆಲಸ ಮಾಡಿ ಎಂದು ಅವರು ಒತ್ತಾಯಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka