ಜನರ ಮನೆ ಬಾಗಿಲಿಗೆ ಸರ್ಕಾರದಿಂದ ರೇಷನ್ | ಹೊಸ ಯೋಜನೆ ಘೋಷಿಸಿದ ಈ ರಾಜ್ಯದ ಸಿಎಂ
ವಿಜಯವಾಡ: ಈಗಾಗಲೇ ಹಲವು ಜನಪ್ರಿಯ ಯೋಜನೆಗಳ ಮೂಲಕ ದೇಶದ ಗಮನ ಸೆಳೆದಿರುವ ಆಂಧ್ರಪ್ರದೇಶದ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ, ಇದೀಗ ಜನರ ಮನೆ ಬಾಗಿಲಿಗೆ ರೇಷನ್ ಗಳನ್ನು ತಲುಪಿಸುವ ಯೋಜನೆಗೆ ಮುಂದಾಗಿದ್ದಾರೆ.
2,500 ಮೊಬೈಲ್ ವಿತರಣಾ ಘಟಕಗಳ ನೆರವಿನಿಂದ ಈ ಕಾರ್ಯಕ್ರಮವನ್ನು ನಡೆಸಲು ಅವರು ತೀರ್ಮಾನಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, ನಾನು ದಿವ್ಯಾಂಗ ಹಾಗೂ ವೃದ್ಧರನ್ನ ಪಡಿತರಕ್ಕಾಗಿ ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತಿರೋದನ್ನ ಕಂಡಿದ್ದೇನೆ. ಹೀಗಾಗಿ ನಮ್ಮ ಸರ್ಕಾರ ಪಡಿತರವನ್ನ ಮನೆ ಬಾಗಿಲಿಗೇ ತಲುಪಿಸುವ ವಿಶೇಷ ಯೋಜನೆಯೊಂದನ್ನ ಆರಂಭಿಸಿದೆ ಎಂದು ಹೇಳಿದ್ದಾರೆ.
ವಾಹನಗಳ ಮುಖಾಂತರ ಉತ್ತಮ ಗುಣಮಟ್ಟದ ಅಕ್ಕಿ, ಸಕ್ಕರೆ ಸೇರಿದಂತೆ ವಿವಿಧ ಧಾನ್ಯಗಳು ನಿಮ್ಮನೆಗೆ ಬರಲಿದೆ. ಈ ಯೋಜನೆಯಿಂದ ಸರ್ಕಾರಕ್ಕೆ ಪ್ರತಿ ವರ್ಷ 830 ಕೋಟಿ ಅಧಿಕ ಖರ್ಚು ಆಗಲಿದೆ ಎಂದು ಸಿಎಂ ಜಗನ್ ತಿಳಿಸಿದ್ದಾರೆ.
ಪಡಿತರದಲ್ಲಿ ವಿತರಿಸಲಾಗುವ ಅಕ್ಕಿ ಹಾಗೂ ಇತರೆ ಧಾನ್ಯಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬ ಆರೋಪವಿದೆ. ಹೀಗಾಗಿ ಅನೇಕರು ಪಡಿತರ ಧಾನ್ಯಗಳನ್ನ ತಿರಸ್ಕರಿಸುತ್ತಿದ್ದಾರೆ. ಇದನ್ನ ಸರಿಪಡಿಸುವ ಸಲುವಾಗಿಯೂ ಕ್ರಮಕೈಗೊಳ್ಳಲಾಗಿದ್ದು, ಉತ್ತಮ ಗುಣಮಟ್ಟದ ಅಕ್ಕಿ ಜನರ ಮನೆ ಬಾಗಿಲಿಗೆ ತಲುಪಲಿದೆ ಎಂದು ಅವರು ಹೇಳಿದರು.