ಫೇಸ್ ಬುಕ್ ನಲ್ಲಿ ಜನಾರ್ದನ ಪೂಜಾರಿಯ ಅವಹೇಳನ | ಬಿರುವೆರ್ ಕುಡ್ಲ ಸಂಘಟನೆಯಿಂದ ದೂರು

janardana poojari
26/06/2021

ಮಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರ ಬಗ್ಗೆ  ಫೇಸ್ ಬುಕ್ ನಲ್ಲಿ ಅವಹೇಳನಾಕಾರಿ ಪೋಸ್ಟ್ ಹಾಕಿರುವುದರ ವಿರುದ್ಧ ಬಿರುವೆರ್ ಕುಡ್ಲ ಸಂಘಟನೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ರಶೀದ್ ಟಿಪ್ಪು ಎಂಬ ವ್ಯಕ್ತಿಯು ಮಾಡಿರುವ ಪೋಸ್ಟ್ ನಲ್ಲಿ ರಾಜಕೀಯ ಟೀಕೆಗಳು ಹಾಗೂ ವೈಯಕ್ತಿಕ ಅವಹೇಳನ ಮಾಡಲಾಗಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಜನಾರ್ದನ ಪೂಜಾರಿ ಅವರ ಫೋಟೋವನ್ನು ಬಳಸಿ ಅವಹೇಳನಾಕಾರಿ ಪದಗಳನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ವ್ಯಕ್ತಿ ಹಾಕಿರುವ ಪೋಸ್ಟ್ ನಲ್ಲಿ,  “ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಜನಾರ್ದನ ಪೂಜಾರಿಯವರು ಸ್ವಂತ ಪಕ್ಷದಲ್ಲಿ ನಿರಂತರ ಅಧಿಕಾರ ಅನುಭವಿಸಿ, ಬಿಜೆಪಿ ಪರ ಬ್ಯಾಟಿಂಗ್ ಮಾಡುವ ವಿಚಿತ್ರ ವ್ಯಕ್ತಿ. ಈವರೆಗೆ ಈತನನ್ನು ಹೈಕಮಾಂಡ್ ಕೂಡ ವಿರೋಧಿಸಿಲ್ಲ. ಈ ತರಹ ಯಾರಾದರೂ ಅಲ್ಪಸಂಖ್ಯಾತ ವ್ಯಕ್ತಿ ಮಾತನಾಡಿದ್ದರೆ, ಕ್ಷಣ ಮಾತ್ರದಲ್ಲಿ ಕಾಂಗ್ರೆಸ್ ವಜಾಗೊಳಿಸುತ್ತಿತ್ತು.  ಹೈಕಮಾಂಡ್ ಬೆದರಿಕೆ ಕರೆಗಳು, ವಜಾಗೊಳಿಸುವ ಪತ್ರ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಲಭಿಸುತ್ತಿತ್ತು. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ಸಿದ್ಧಾಂತ ನಿಲ್ಲಿಸಿ” ಎಂದು ರಶೀದ್ ಪೋಸ್ಟ್ ಮಾಡಿದ್ದು, ಇನ್ನೂ ಮುಂದುವರಿದು. ಜನಾರ್ದನ ಪೂಜಾರಿ ಅವರ ಫೋಟೋ ಅಪ್ ಲೋಡ್ ಮಾಡಿ,  ಎಣ್ಣೆಯಲ್ಲಿ ಕರಿದ ಗೋಲಿಬಜೆ, ಬೆಂಕಿಯಲ್ಲಿ ಕರಿದ ಗೋಲಿಬಜೆ ಎಂದು ಅವಹೇಳನಾಕಾರಿಯಾಗಿ ಪೋಸ್ಟ್ ಮಾಡಿರುವುದಾಗಿ  ತಿಳಿಸಲಾಗಿದೆ ಎಂದು ವರದಿಯಾಗಿದೆ.

ಬಿರುವೆರ್ ಕುಡ್ಲ ಸಂಘಟನೆ ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರು ದಾಖಲಾದ ಬಳಿಕ ಈ ಪೋಸ್ಟ್ ನ್ನು ಆರೋಪಿ ಡಿಲೀಟ್ ಮಾಡಿದ್ದಾನೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ

Exit mobile version