ಜನಸಂಖ್ಯೆಯ ಹೆಚ್ಚಳ ಅಸಮಾನತೆಗೆ ಕಾರಣ | ಯೋಗಿ ಆದಿತ್ಯನಾಥ
ನವದೆಹಲಿ: ಸಮಾಜದ ಪ್ರಮುಖ ಸಮಸ್ಯೆಗಳಿಗೆ ಜನಸಂಖ್ಯೆ ಹೆಚ್ಚಳವೇ ಕಾರಣವಾಗಿದ್ದು, ಇದರ ಬಗ್ಗೆ ಜನರು ಜಾಗೃತರಾಗಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಹೇಳಿದ್ದಾರೆ.
ವಿಶ್ವ ಜನಸಂಖ್ಯಾ ದಿನವನ್ನುದ್ದೇಶಿಸಿ ಮಾತನಾಡಿರುವ ಯೋಗಿ, ಜನಸಂಖ್ಯೆಯ ಹೆಚ್ಚಳವು ಅಸಮಾನತೆಯಂತಹ ಸಮಸ್ಯೆಗಳಿಗೆ ಕಾರಣವಾಗಿದೆ. ಮುಂದುವರಿದ ಸಮಾಜ ಕಟ್ಟಲು ಜನಸಂಖ್ಯೆಯನ್ನು ನಿಯಂತ್ರಿಸುವುದೇ ಪ್ರಾಥಮಿಕ ಕಟ್ಟುಪಾಡಾಗಬೇಕು ಎಂದು ಹೇಳಿದರು.
ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ನಮ್ಮನ್ನು ನಾವು ಮತ್ತು ಸಮಾಜವನ್ನು ಜಾಗೃತಗೊಳಿಸುವ ಪ್ರತಿಜ್ಞೆಯನ್ನು ಈ ಬಾರಿಯ ʼವಿಶ್ವ ಜನಸಂಖ್ಯಾ ದಿನʼದಂದು ಮಾಡೋಣʼ ಎಂದು ಅವರು ಕರೆ ನೀಡಿದ್ದಾರೆ.
ಜಾತಿ ಆಧಾರಿತ ಸಮಾಜ ವ್ಯವಸ್ಥೆ ಭಾರತದಲ್ಲಿ ಅಸಮಾನತೆಯನ್ನು ಸೃಷ್ಟಿಸಿರುವುದು ಜಗಜ್ಜಾಹೀರಾಗಿರುವ ವಿಚಾರವಾದರೂ, ಈ ಬಾರಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಜನಸಂಖ್ಯೆಯ ವಿಚಾರದಲ್ಲಿ ಬೇಧ ಭಾವ ಸೃಷ್ಟಿಸುವ ಅಜೆಂಡಾವನ್ನು ಯೋಗಿ ನೇತೃತ್ವದ ಬಿಜೆಪಿ ಸರ್ಕಾರ ಹೊಂದಿದೆ. ಆದರೆ ಇದು ಬಿಜೆಪಿ ತೀವ್ರವಾದ ಹಾನಿಯನ್ನುಂಟು ಮಾಡಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಉತ್ತರಪ್ರದೇಶದಂತಹ ರಾಜ್ಯದಲ್ಲಿ ಕೇವಲ ಮುಸ್ಲಿಮರು ಮಾತ್ರವಲ್ಲ, ಹಿಂದೂಗಳು ಕೂಡ 2ಕ್ಕಿಂತ ಅಧಿಕ ಮಕ್ಕಳನ್ನು ಹೊಂದಿದ್ದಾರೆ. ಹೀಗಾಗಿ ಸರ್ಕಾರದ ವಿರುದ್ಧ ಜನಸಂಖ್ಯೆಯ ಆಧಾರದಲ್ಲಿ ಸರ್ಕಾರಿ ಸೌಲಭ್ಯವನ್ನು ಹಂಚುವ ನಿರ್ಧಾರ ಸಂವಿಧಾನ ಬಾಹಿರವಾಗಿದೆ. ಜನಸಂಖ್ಯೆ ಇಳಿಕೆಗೆ ಜಾಗೃತಿ ಮೂಡಿಸಬೇಕೇ ಹೊರತು, ಒತ್ತಡ ಹೇರಬಾರದು. ಈ ರೀತಿಯ ಈ ರೀತಿಯ ಒತ್ತಡ ಹೇರುವುದರಿಂದ, ಸರ್ಕಾರಿ ಉದ್ಯೋಗಕ್ಕಾಗಿ, ಸರ್ಕಾರಿ ಸೌಲಭ್ಯಕ್ಕಾಗಿ ಮಕ್ಕಳನ್ನು ಕೊಲ್ಲುವ, ಹಿಂಸಿಸುವ ಕೃತ್ಯಕ್ಕೆ ಜನರನ್ನು ಸರ್ಕಾರ ಪ್ರೇರೇಪಿಸಿದಂತಾಗುತ್ತದೆ ಎನ್ನುವುದು ವಾಸ್ತವಾಂಶವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.