“ಜಾತಿ ಗರ್ಭದೊಳಗಿನ ಸತ್ಯ” | ನೀತಿ ಕಥೆ: ಸಂಚಿಕೆ-1 - Mahanayaka
1:06 PM Thursday 12 - December 2024

“ಜಾತಿ ಗರ್ಭದೊಳಗಿನ ಸತ್ಯ” | ನೀತಿ ಕಥೆ: ಸಂಚಿಕೆ-1

22/11/2020

ಅದೊಂದು ಕತ್ತಲ ಕೂಪ. ಸುತ್ತಲೂ ಕತ್ತಲು. ಅಲ್ಲಿ ಏನೂ ಕಾಣುತ್ತಿಲ್ಲ. ಆದರೆ, ಸ್ವಚ್ಛಂದ ಪ್ರದೇಶ ಅದು. ಯಾರ ಕಿರುಚಾಟವಿಲ್ಲ, ಅರಚಾಟವಿಲ್ಲ. ಅಲ್ಲಿ ಒಂದು ಪುಟ್ಟಮಗು ಜೀವ ತಳೆಯುತ್ತಿತ್ತು. ಆ ಮಗುವಿಗೆ ತಾಯಿಯನ್ನು ನೋಡಬೇಕು ಎನ್ನುವ ಕುತೂಹಲ. ತಾಯಿಗೂ ತನ್ನನ್ನು ನೋಡಬೇಕು ಎನ್ನುವ ಕುತೂಹಲ ಇರಬಹುದು ಎಂದು ಆ ಮಗು ಅಂದುಕೊಂಡಿದೆ. ಮಗು ಬೆಳೆಯುತ್ತಾ ಸದೃಢವಾಗುತ್ತಿದೆ. ಹೊರ ಪ್ರಪಂಚಕ್ಕೆ ಬರಬೇಕು ಎನ್ನುವ ತವಕ ಆ ಮಗುವಿನಲ್ಲೂ ಕಾಣುತ್ತಿದೆ. ಈ ಕತ್ತಲಿನಲ್ಲಿ ಕುಳಿತು ನನಗೆ ಸಾಕಾಗಿದೆ. ಒಮ್ಮೆ ಅಮ್ಮನ ಬಳಿಗೆ ಹೋಗಬೇಕು ಎಂದು ಅಂದುಕೊಳ್ಳುತ್ತಲೇ, ಮಗು ಸ್ವಲ್ಪ ಸ್ವಲ್ಪವೇ ಸರಿದು, ಹೊರ ಪ್ರಪಂಚಕ್ಕೆ ಬರಲು ಸಿದ್ಧವಾಯಿತು. ಮಗು ತನ್ನ ತಾಯಿಯ ಗರ್ಭದಿಂದ ಮೆಲ್ಲನೆ ಹೊರ ಬರಲು ಆರಂಭಿಸಿತು. ತನ್ನ ಬರುವಿಕೆಯ ವೇಳೆ ತಾಯಿ ಯಾಕೆ ಹೀಗೆ ಸಂಕಟಪಡುತ್ತಿದ್ದಾಳೆ ಎನ್ನುವುದೂ ಆ ಮಗುವಿಗೆ ತಿಳಿಯಲಿಲ್ಲ. ತಾಯಿ ನೋವಿನಿಂದ ನರಳಾಡುತ್ತಿರುವಾಗಲೇ [www.mahanayaka.in] ಮಗು ಹೊರ ಪ್ರಪಂಚಕ್ಕೆ ಬಂದೇ ಬಿಟ್ಟಿತು. ಹೊರ ಪ್ರಪಂಚಕ್ಕೆ ಬಂದು ಬಿಟ್ಟೆ ಎಂಬ ಖುಷಿಯಿಂದ ಮಗು ಆಳಲು ಆರಂಭಿಸಿತು. ದಿನಗಳೂ ಕಳೆಯಿತು. ಮಗು ಸಣ್ಣಗೆ ಕಣ್ಣು ತೆರೆಯಿತು, “ಹೋ… ಹೊಸ ಪ್ರಪಂಚ, ಎಷ್ಟೊಂದು ಪ್ರಕಾಶಮಾನವಾಗಿದೆ. ತಾಯಿಯ ಗರ್ಭದಲ್ಲಿ ಎಷ್ಟೊಂದು ಕತ್ತಲು, ನಾನು ಬಹಳ ಬೇಗನೇ ಹೊರ ಬಂದು ಒಳ್ಳೆಯ ಕೆಲಸ ಮಾಡಿದೆ” ಎಂದು ಮಗು ಕಿಲಕಿಲನೆ ನಕ್ಕಿತು.

ದಿನಗಳು ಕಳೆದವು. ಮಗು ದೊಡ್ಡದಾಯಿತು. ಒಂದು ದಿನ ಮಗು ಆಟವಾಡಲು ಆರಂಭಿಸಿತು. ಆಗ ಮನೆಯಲ್ಲಿ ಚರ್ಚೆ ಆರಂಭವಾಗಿತ್ತು. ಮಗುವಿಗೆ ಯಾವ ಹೆಸರು ಇಡೋಣ ಎಂದು. ತಂದೆ ಹೇಳುತ್ತಿದ್ದ, “ಗಂಡು ಮಗುವಾಗಿದ್ದರಿಂದ ಒಳ್ಳೆಯ ಹೆಸರಿಡಬೇಕು: ಎಂದು. ಮೊದಲ ಬಾರಿಗೆ ಮಗು “ಗಂಡು” ಎಂಬ ಶಬ್ಧವನ್ನು ಕೇಳಿಸಿಕೊಂಡಿತು. ಇದೇನು? ತಾಯಿಯ ಗರ್ಭದಲ್ಲಿ ಇಂತಹದ್ದೊಂದು ಶಬ್ಧ ನಾನು ಕೇಳಲಿಲ್ಲವಲ್ಲ, ಎಂದು ಆಶ್ಚರ್ಯಪಟ್ಟಿತು. ಆಗಲೇ ಹೆಸರಿಗೆ ಸಂಬಂಧಪಟ್ಟಂತೆ ಮನೆಯಲ್ಲಿ ತಂದೆ, ತಾಯಿ ಅಜ್ಜ, ಅಜ್ಜಿ ಎಲ್ಲರೂ, ತಮ್ಮ ತಮ್ಮ ವಾದ ಮಂಡಿಸಲು ಆರಂಭಿಸಿದರು. ಅಲ್ಲಿ ರಾಶಿ, ನಕ್ಷತ್ರ, ಜಾತಿ ಇಂತಹ ಹೊಸ ಶಬ್ಧಗಳನ್ನು ಕೇಳಿ ಮಗು ಆಶ್ಚರ್ಯದಿಂದ ಕಂಗಾಲಾಯ್ತು. ಎಲ್ಲರ ಮಾತುಗಳು ಅರ್ಥವಾದರೂ ಪ್ರಶ್ನಿಸಲು ಮಗುವಿಗೆ ಅವರ ಭಾಷೆ ಬರುತ್ತಿರಲಿಲ್ಲ. ಇಲ್ಲಿ ಎಲ್ಲವೂ ಆಶ್ಚರ್ಯ ಅಲ್ಲವೇ ಎಂದು ಆ ಮಗು ಅಂದುಕೊಂಡಿತು. ತಾಯಿ ಗರ್ಭದಲ್ಲಿ ಏನೂ ಇರಲಿಲ್ಲ, ಇಲ್ಲಿ ಎಷ್ಟೊಂದು ವೈವಿದ್ಯತೆ ಇದೆಯಲ್ಲ ಎಂದು ತನಗೆ ತಾನೆ ಅಂದುಕೊಂಡಿತು.

ಮಗು ದೊಡ್ಡವನಾದ, ಅವನಿಗೆ ಈಗ 11 ವರ್ಷ, ಅವನಿಗೆ ತಂದೆ ತಾಯಿ “ಸಿದ್ಧಾರ್ಥ“ ಎಂದು ಹೆಸರಿಟ್ಟಿದ್ದರು. ಸಿದ್ಧಾರ್ಥ ಒಂದು ದಿನ ತನ್ನ ತಂದೆ ತಾಯಿಯ ಜೊತೆಗೆ ತನ್ನ ಸಂಬಂಧಿಗಳ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲೊಂದು ಮನೆಯ ಪಕ್ಕದಲ್ಲಿ ಬೋರ್ಡ್ ಕಾಣಿಸಿತು. “ಬಾಡಿಗೆಗೆ ಮನೆ ಇದೆ, ಸಸ್ಯಾಹಾರಿಗಳಿಗೆ ಮಾತ್ರ” ಎಂದು. ಸಿದ್ಧಾರ್ಥ ಆಶ್ಚರ್ಯದಿಂದ ಹುಬ್ಬೇರಿಸಿದ. “ಅಮ್ಮ ಈ ಸಸ್ಯಾಹಾರಿಗಳು ಎಂದರೆ ಯಾರು?” ಅಮ್ಮ ಹೇಳಿದರು “ಮಾಂಸ ತಿನ್ನದವರು ಸಸ್ಯಾಹಾರಿಗಳು” ಎಂದು. “ಒಹೋ…” ಎಂದು ಹೇಳುತ್ತಾ, ಬಾಲಕ ಸಿದ್ಧಾರ್ಥ ಅವನು ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಹೋಗುತ್ತಾನೆ. [www.mahanayaka.in] ಅಲ್ಲಿ ಕಾರ್ಯಕ್ರಮ ನಡೆದು ಭರ್ಜರಿ ಊಟವೂ ಆಗಿದೆ. ಆಗಲೇ ಪಕ್ಕದ ಮನೆಯಲ್ಲಿ ಒಬ್ಬ ಹುಡುಗ, ಮನೆಯ ಕಾರ್ಯಕ್ರಮವನ್ನು ನೋಡುತ್ತಾ, ಮಕ್ಕಳ ಜೊತೆಗೆ ಆಟವಾಡಬೇಕು ಎಂದು ಆಸೆಪಡುತ್ತಿದ್ದ. ಇದನ್ನು ನೋಡಿದ ಸಿದ್ಧಾರ್ಥ ಆ ಮಗುವನ್ನು ಆಟಕ್ಕೆ ಕರೆಯುತ್ತಾನೆ. ಆಗಲೇ ಆ ಮಗುವಿನ ತಂದೆ ಒಂದೇ ಬಾರಿಗೆ ಬಂದು ಮಗುವನ್ನು ತಡೆದು ಒಂದೇ ಸಮನೆ ಮಗುವಿಗೆ ಹೊಡೆದು, “ಕೀಳು ಜಾತಿಯ ಮಕ್ಕಳ ಜೊತೆಗೆ ನಿನಗೆ ಆಟವಾಡಬೇಕೇ?” ಎಂದು ಜೋರಾಗಿ ಬೈಯಲು ಆರಂಭಿಸುತ್ತಾನೆ.

 

ತಂದೆಯ ಹೊಡೆತಕ್ಕೆ ಮಗು ಜೋರಾಗಿ ಕಿರುಚಿ ಅಳಲು ಆರಂಭಿಸುತ್ತದೆ. ಸಿದ್ಧಾರ್ಥನಿಗೆ ಆಶ್ಚರ್ಯವಾಗುತ್ತದೆ. ಆತ, “ಪಾಪ ಮಗುವಿಗೆ ಹೊಡೆಯಬೇಡಿ” ಎಂದು ಮಗುವಿನ ತಂದೆಯನ್ನು ಶಾಂತವಾಗಿಸಲು ಪ್ರಯತ್ನಿಸುತ್ತಾನೆ. ಆಗಲೇ ಆ ಮಗುವಿನ ತಂದೆ ಆಕ್ರೋಶದಿಂದ ಇವನ ಮುಖ ನೋಡಿ, “ನಿನಗೆ ನಿನ್ನ ಮನೆಯವರು ಜಾತಿಗೆ ತಕ್ಕ ಸಂಸ್ಕಾರ ಕಲಿಸಿದ್ದರೆ, ಈ ರೀತಿ ನೀನು ನಮ್ಮ ಮಕ್ಕಳ ಜೊತೆಗೆ ಆಟವಾಡಬೇಕು ಎಂದು ಅಂದುಕೊಳ್ಳುತ್ತಿರಲಿಲ್ಲ” ಎಂದು ಹೇಳುತ್ತಾನೆ. ಆ ವೇಳೆ ಮನೆಯಲ್ಲಿದ್ದ ಎಲ್ಲರ ಗಮನ ಅಲ್ಲಿಗೆ ಹೋಗುತ್ತದೆ. ಎಲ್ಲರೂ ಅಲ್ಲಿ ಬಂದು ನೆರೆಯುತ್ತಾರೆ. [www.mahanayaka.in]  ಅಕ್ಕ ಪಕ್ಕ ಮನೆಗಳ  ಬೇರೆ ಬೇರೆ ಜಾತಿ ಮೇಲ್ವರ್ಗದವರೂ ಅಲ್ಲಿ ಸೇರುತ್ತಾರೆ. ಆಗ ಸಿದ್ಧಾರ್ಥ ಆ ವ್ಯಕ್ತಿಯ ಮುಖ ನೋಡಿ ಹೇಳುತ್ತಾನೆ, “ಕ್ಷಮಿಸಿ ನನಗೆ ಜಾತಿ ಎಂದರೆ ಏನು ಎಂದು ಗೊತ್ತಿಲ್ಲ, ನನಗೆ ನನ್ನ ತಂದೆ ತಾಯಿಯೂ ಹೇಳಿಕೊಟ್ಟಿಲ್ಲ, ನಿಮಗೆ ಅದರ ಬಗ್ಗೆ ಗೊತ್ತಿದೆಯಲ್ಲ, ಅದು ಏನು ಎಂದು ನನಗೆ ತಿಳಿಸಿಕೊಡಿ” ಎಂದು ಕೇಳುತ್ತಾನೆ. ಆಗ ಆತ, “ನೀವೆಲ್ಲರೂ ಕೀಳು ಜಾತಿಯವರು, ನಮ್ಮ ಮಕ್ಕಳಿಂದ ದೂರವಿರಬೇಕು. ನಮ್ಮ ಮಕ್ಕಳನ್ನು ಮುಟ್ಟಬಾರದು, ನಾವು ಬಳಸುವ ನೀರು ಬಳಸಬಾರದು, ನಮ್ಮನ್ನು ಮುಟ್ಟಬಾರದು”. ಆಗ ಸಿದ್ಧಾರ್ಥ ಕೇಳುತ್ತಾನೆ. “ಸರಿ ಹಾಗೆಯೇ ಆಗಲಿ, ನೀವು ಹಾಗೆ ಹೇಳುವುದಾದರೆ, ನಾನು ಮುಟ್ಟುವುದಿಲ್ಲ, ಆದರೆ, ನನಗೆ ಅದು ಯಾಕೆ ಎಂದು ತಿಳಿಯಬೇಕು, ನಾವು ಯಾಕೆ ಕೀಳು ನೀವು ಯಾಕೆ ಮೇಲು” ಎಂದು ಕೇಳುತ್ತಾನೆ.

ಈಗ ಜಾತಿಯ ಆರಾಧಕನಾಗಿರುವ ಆ ವ್ಯಕ್ತಿಯು ಹೇಳುತ್ತಾನೆ, “ಚತುರ್ಮುಖ ಬ್ರಾಹ್ಮಣನ ಮುಖದಿಂದ ಶ್ರೇಷ್ಠನಾದ ಬ್ರಾಹ್ಮಣನು ಜನಿಸುತ್ತಾನೆ. ಹಾಗಾಗಿ ಅವನು ಶ್ರೇಷ್ಠ. ಎದೆಯಿಂದ ಕ್ಷತ್ರೀಯ ಜನಿಸುತ್ತಾನೆ. ತೊಡೆಯಿಂದ ವೈಶ್ಯ ಜನಿಸುತ್ತಾನೆ. ಮತ್ತು ಪಾದದಿಂದ ಶೂದ್ರನು ಜನಿಸುತ್ತಾನೆ. [www.mahanayaka.in]ಬ್ರಹ್ಮನು ಬ್ರಾಹ್ಮಣನ ಸೇವೆ ಮಾಡಲು ಕ್ಷತ್ರೀಯ, ವೈಶ್ಯ, ಶೂದ್ರನನ್ನು ಸೃಷ್ಟಿಸಿದರೆ, ಪಂಚಮನನ್ನು ಇವರೆಲ್ಲರ ಸೇವೆ ಮಾಡಲು ಸೃಷ್ಟಿಸಿದ್ದಾನೆ ಎಂದು ಮನುಸ್ಮೃತಿಯಲ್ಲಿ ಬರೆದಿದೆ. ಆ ಗ್ರಂಥದ ಪ್ರಕಾರ ಎಲ್ಲರೂ ಬದುಕಬೇಕು” ಎಂದು ಆತ ಹೇಳುತ್ತಾನೆ.

ಸಿದ್ಧಾರ್ಥ ಕೇಳುತ್ತಾನೆ ಹಾಗಾದರೆ, “ನೀವು ಯಾವ ಜಾತಿ?” ಆತ,  “ನಾನು ಬ್ರಾಹ್ಮಣ ಎಂದು ಆತ ಎದೆ ಉಬ್ಬಿಸಿ” ಹೇಳುತ್ತಾನೆ. ಪಕ್ಕದಲ್ಲಿದ್ದ ವ್ಯಕ್ತಿಯನ್ನು ತೋರಿಸಿ ಸಿದ್ದಾರ್ಥ ಕೇಳುತ್ತಾನೆ, “ಮತ್ತೆ ಅವರು ಯಾವ ಜಾತಿ?” ಆ ವ್ಯಕ್ತಿ, “ಆತ ಕ್ಷತ್ರೀಯ” ಪಕ್ಕದಲ್ಲಿದ್ದ ಮತ್ತಿಬ್ಬರನ್ನು ತೋರಿಸಿ ಸಿದ್ಧಾರ್ಥ ಪ್ರಶ್ನಿಸುತ್ತಾನೆ ಮತ್ತೆ “ಅವರು ಯಾವ ಜಾತಿ”, “ಅವನು ವೈಶ್ಯ ಇವನು ಶೂದ್ರ”. ಸಿದ್ಧಾರ್ಥ ಕೇಳುತ್ತಾನೆ “ಇವರು ನಿಮ್ಮ ಸೇವೆ ಮಾಡುತ್ತಾರಾ?” ಆತ ಹೇಳುತ್ತಾನೆ “ಹಿಂದೆ ಮಾಡುತ್ತಿದ್ದರು”. ಸಿದ್ದಾರ್ಥ ಕೇಳುತ್ತಾನೆ, “ಮತ್ತೆ ಈಗ”, ಆತ ಹೇಳುತ್ತಾನೆ “ಈಗ ಜಾತಿಯ ಶ್ರೇಷ್ಠತೆ ಹಾಗೆಯೇ ಇದೆ, ಆದರೆ ನಿಮ್ಮ ಜಾತಿಗೆ ಸೇರಿದ ಅಂಬೇಡ್ಕರ್ ಬರೆದ ಸಂವಿಧಾನದಿಂದಾಗಿ ಅದೆಲ್ಲ ಹೋಗುತ್ತಿದೆ, ನಿಮ್ಮವರಿಗೆ ಅಹಂಕಾರ ಹೆಚ್ಚಾಗುತ್ತಿದೆ” ಎಂದು. [www.mahanayaka.in]

ಸಿದ್ಧಾರ್ಥ ಆತನ ಮಾತಿಗೆ ಕೋಪ ಮಾಡಿಕೊಳ್ಳದೇ, “ಸರಿ ನೀನು ಹೇಳುವುದನ್ನು ನಾನು ಒಪ್ಪುತ್ತೇನೆ, ಅಲ್ಲಿ ಒಳಗೆ ಕುಳಿತಿರುವ ವಯಸ್ಸಾದ ವೃದ್ಧೆ ಯಾರು?” ಎಂದು ಸಿದ್ಧಾರ್ಥ ಪ್ರಶ್ನಿಸುತ್ತಾನೆ. “ಅದು ನನ್ನ ತಾಯಿ” ಎಂದು ಆತ ಉತ್ತರಿಸುತ್ತಾನೆ. “ಒಹೋ… ನಿನ್ನ ಸಾಕು ತಾಯಿಯೋ?” ಎಂದು ಸಿದ್ದಾರ್ಥ ಕೇಳುತ್ತಾನೆ.  ಆತ ಕೋಪದಿಂದ, “ಅದು ನನ್ನ ಸ್ವಂತ ತಾಯಿ”. ಈಗ ಸಿದ್ಧಾರ್ಥ ನುಗುತ ಕೇಳುತ್ತಾನೆ, “ಹಾಗಿದ್ದರೆ ನೀನು ಯಾಕೆ ಬ್ರಾಹ್ಮಣ ಎಂದು ನನ್ನ ಬಳಿಯಲ್ಲಿ ಸುಳ್ಳು ಹೇಳಿದೆ?” ಆತ ಮತ್ತಷ್ಟು ಕೋಪದಿಂದ, “ನಾನು ಬ್ರಾಹ್ಮಣನೇ, ನಾನ್ಯಾಕೆ ನಿನಗೆ ಸುಳ್ಳು ಹೇಳಲಿ”. ಈಗ ಸಿದ್ಧಾರ್ಥ ಪ್ರಶ್ನಿಸುತ್ತಾನೆ,  “ಬ್ರಹ್ಮನ ಮುಖದಿಂದ ಜನಿಸಿದವನು  ಬ್ರಾಹ್ಮಣ ಹೌದಲ್ಲವೇ?” ಆತ “ಹೌದು” ಎಂದು ಹೇಳುತ್ತಾನೆ.  “ಹಾಗಿದ್ದರೆ, ನೀನು ನಿನ್ನ ತಾಯಿಯ ಗರ್ಭದಿಂದ ಜನಿಸಿದ್ದಿ ಎನ್ನುವುದು ನಿಜ ತಾನೆ? ನೀನು ಹೇಗೆ ಬ್ರಾಹ್ಮಣ? ನೀನು ಪಂಚಮನಂತೆ, ಅಸ್ಪೃಶ್ಯನಂತೆಯೇ ನಿನ್ನ ತಾಯಿಯ ಗರ್ಭದಿಂದ ಜನಿಸಿದ್ದಿ, ನೀನು ಅಸ್ಪೃಶ್ಯ ತಾನೆ?” ಎಂದು ಸಿದ್ಧಾರ್ಥ ಪ್ರಶ್ನಿಸುತ್ತಾನೆ. ಕ್ಷಣ ಕಾಲ ಮೌನ, ಸಿದ್ಧಾರ್ಥ ಮುಂದುವರಿದು ಉಳಿದವರನ್ನು ಪ್ರಶ್ನಿಸುತ್ತಾನೆ, ನಿಮಗೆಲ್ಲರಿಗೂ ತಂದೆ-ತಾಯಿ ಇದ್ದಾರಲ್ಲವೇ? ನಿಮ್ಮಲ್ಲಿ ಯಾರಾದರೂ ಬ್ರಹ್ಮನ ತಲೆಯಿಂದ, ಎದೆಯಿಂದ, ತೊಡೆಯಿಂದ, ಪಾದದಿಂದ ಜನಿಸಿದವರು ಯಾರಾದರೂ ಇದ್ದಾರೆಯೇ? ಎಂದು ಪ್ರಶ್ನಿಸಿದ. ಎಲ್ಲರೂ ತಲೆ ಕೆಳಗೆ ಹಾಕಿ, ಉತ್ತರವಿಲ್ಲದವರಂತೆ ನಿಲ್ಲುತ್ತಾರೆ. [www.mahanayaka.in]

“ಮನುಷ್ಯ ಎಂದಿಗೂ ಜಾತಿಯಿಂದ ಶ್ರೇಷ್ಠನಾಗುವುದಿಲ್ಲ, ಮಾನವೀಯತೆ, ಪ್ರೀತಿ, ಸಹಬಾಳ್ವೆ, ಸಹೋದರತೆ ಮೊದಲಾದ ಗುಣಗಳಿಂದ ಮಾನವರು ಶ್ರೇಷ್ಠರಾಗುತ್ತಾರೆ. ಯಾರು ಎಲ್ಲರನ್ನೂ ಪ್ರೀತಿಸುತ್ತಾರೋ, ಯಾರು ಇನ್ನೊಬ್ಬರ ಮೇಲೆ ಮಾನವೀಯತೆ ತೋರಿಸುತ್ತಾರೋ ಅವರು ನಿಜವಾದ ಧರ್ಮವನ್ನು ಪಾಲಿಸುತ್ತಾರೆ ಎಂದರ್ಥವೇ ಹೊರತು, ಇಂತಹ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಯಾರೂ ಶ್ರೇಷ್ಠರಾಗುವುದಿಲ್ಲ” ಎಂದು ಬಾಲಕ ಸಿದ್ಧಾರ್ಥ ಹೇಳುತ್ತಾನೆ. ಜಾತಿ ಜಾತಿ ಎಂದು ಹೊಡೆದಾಡುತ್ತಿದ್ದ ಎಲ್ಲರಿಗೂ ಬಾಲಕ ಸಿದ್ಧಾರ್ಥನ ಮಾತಿನಿಂದ ತಪ್ಪಿನ ಅರಿವಾಗುತ್ತದೆ ಅವರು, ತಮ್ಮ ಆತ್ಮಾವಲೋಕನ ಮಾಡುತ್ತಾ, ಮನೆಯೊಳಗೆ ಹೊರಟು ಹೋಗುತ್ತಾರೆ. ತಂದೆಯಿಂದ ಏಟು ತಿಂದು ದುಃಖದಲ್ಲಿದ್ದ [www.mahanayaka.in] ಆ ಪುಟ್ಟ ಮಗು, ಗೋಡೆಯ ಅಂಚಿನಲ್ಲಿ ನಿಂತು ಸಿದ್ಧಾರ್ಥನಿಗೆ ಕಿರು ನಗೆಯನ್ನು ಬೀರಿತು. ಸಿದ್ಧಾರ್ಥ ತನ್ನ ತಾಯಿ ಗರ್ಭವನ್ನು ನೆನೆಸಿಕೊಂಡ, ತಾಯಿಯ ಗರ್ಭದಲ್ಲಿ ಬಹಳ ಕತ್ತಲೆ ಇತ್ತು. ಹೊರಗಡೆ ಪ್ರಪಂಚದಲ್ಲಿ ಬಹಳ ಬೆಳಕಿತ್ತು. ಆದರೆ ತಾಯಿಯ ಗರ್ಭದಲ್ಲಿ ಮನುಷ್ಯರು ಬೆಳಕಿನಲ್ಲಿರುತ್ತಾರೆ, ಹೊರ ಪ್ರಪಂಚದಲ್ಲಿ ಪ್ರಕಾಶಮಾನವಾದ ಬೆಳಕಿದ್ದರೂ ಕತ್ತಲಿನಲ್ಲಿರುತ್ತಾರೆ ಎಂದು ಅಂದುಕೊಳ್ಳುತ್ತಾ, ತನ್ನ ತಂದೆ ತಾಯಿಯ ಜೊತೆಗೆ ಮನೆಯ ಕಡೆಗೆ ಹೆಜ್ಜೆ ಹಾಕುತ್ತಾನೆ.

ಇತ್ತೀಚಿನ ಸುದ್ದಿ