ಜಾತಿ ಹುತ್ತಕ್ಕೆ ಕೈ ಹಾಕಿದ ಯಡಿಯೂರಪ್ಪ | ಜಾತಿಯಲ್ಲಿ ದೊಡ್ಡವರು ಅನ್ನೋವವರಿಗೂ ಅಭಿವೃದ್ಧಿ ನಿಗಮ ಬೇಕಂತೆ!
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರು ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ತೀರ್ಮಾನ ಕೈಗೊಂಡ ಬೆನ್ನಲ್ಲೇ ಇದೀಗ ಎಲ್ಲ ಜಾತಿಗಳೂ ನಮಗೂ ನಿಗಮ ಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡಿದೆ.
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯಾಗುತ್ತಿದ್ದಂತೆಯೇ ಒಕ್ಕಲಿಗರು ನಮಗೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ಎಲ್ಲ ಜಾತಿಗಳೂ ಪ್ರತ್ಯೇಕ ಅಭಿವೃದ್ಧಿ ನಿಗಮಕ್ಕೆ ಒತ್ತಾಯಿಸಿವೆ.
ಇರುವ ನಿಗಮಗಳನ್ನೇ ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ, ಇನ್ನು ಹೊಸ ಅಭಿವೃದ್ಧಿ ನಿಗಮಗಳ ಅಗತ್ಯ ಇದೆಯೇ ಎನ್ನುವ ಪ್ರಶ್ನೆಗಳು ಈ ನಡುವೆ ಕೇಳಿ ಬಂದಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮ ರಾಜ್ಯದಲ್ಲಿ ಪಾಳು ಬಿದ್ದ ಸ್ಥಿತಿಯಲ್ಲಿದೆ. ಯಾವುದೋ ಕಾಟಾಚಾರಕ್ಕೆ ಇದೊಂದು ನಿಗಮ ಎಂಬಂತೆ ಸರ್ಕಾರ ಮಾಡಿ ಬಿಟ್ಟಿದೆ. ಅದು ಎಸ್ ಸಿ, ಎಸ್ಟಿಗಳು ಅಭಿವೃದ್ಧಿ ಆಗಬಾರದು ಎನ್ನುವ ದೃಷ್ಟಿಯಲ್ಲಿ ಆ ರೀತಿ ಮಾಡಿದೆಯೋ ಗೊತ್ತಿಲ್ಲ. ಆದರೆ ಇದರ ನಡುವೆಯೇ ಯಡಿಯೂಪ್ಪನವರು ಮರಾಠರಿಗೊಂದು ಅಭಿವೃದ್ಧಿ ಪ್ರಾಧಿಕಾರ ರಚನೆ, ವೀರಶೈವ-ಲಿಂಗಾಯಿತರಿಗೊಂದು ಅಭಿವೃದ್ಧಿ ನಿಗಮ ಮಾಡಿದ್ದಾರೆ.
ಸಾಮಾಜಿಕವಾಗಿ ಬಹಿಷ್ಕಾರಕ್ಕೊಳಗಾದ ಎಸ್ ಸಿ, ಎಸ್ಟಿಗಳಿಗೆ ಅಂಬೇಡ್ಕರ್ ನಿಗಮಗಳಿಂದ ಸರ್ಕಾರ ಸಹಾಯ ನೀಡುತ್ತಿದೆ. ಆದರೆ, ಅದರಿಂದ ಎಷ್ಟು ದಲಿತರು ಉದ್ಧಾರ ಆಗಿದ್ದಾರೆ ಎಂದು ಕೇಳಿದರೆ, ಏನೂ ಇಲ್ಲ ಎಂದೇ ಹೇಳಬಹುದು. ಅರ್ಜಿಗಳನ್ನು ಹಾಕಿ ಬ್ಯಾಂಕ್ ಮುಂದೆ ಕುಳಿತುಕೊಂಡು ಸುಸ್ತಾಗಿ ಮನೆ ಸೇರಿದವರ ಸಂಖ್ಯೆಯನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಇದನ್ನು ಮೊದಲು ಸರಿಪಡಿಸಿ, ಸರ್ಕಾರ ಆ ಬಳಿಕ ಇತರ ನಿಗಮಗಳನ್ನು ಸ್ಥಾಪಿಸಬಹುದಿತ್ತು.
ಸದ್ಯ ಇತ್ತ ಯಡಿಯೂರಪ್ಪನವರು ಅಡ್ಡಕತ್ತರಿಯಲ್ಲಿ ಸಿಲುಕಿ ಬಿಟ್ಟಿದ್ದಾರೆ. ತಮ್ಮ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮಾಡಿ, ಸ್ವಾರ್ಥಿ ಅನ್ನಿಸಿಕೊಂಡಿದ್ದಾರೆ. ಇದರಿಂದ ಹೊರ ಬರಲೂ ಆಗದೇ ಒದ್ದಾಡುತ್ತಿದ್ದಾರೆ.ಯಾವ ಜಾತಿಗಳಿಗೆಲ್ಲ, ಅಭಿವೃದ್ಧಿ ನಿಗಮ ಬೇಕೋ ಅವರೆಲ್ಲರೂ, ನಾವು ಕೆಳ ಜಾತಿಯವರು ಎನ್ನುವ ಸರ್ಟಿಫಿಕೆಟ್ ತೆಗೆದುಕೊಂಡು ಬನ್ನಿ ಎಂಬ ಒಂದು ಆದೇಶವನ್ನ ಯಡಿಯೂರಪ್ಪನವರು ನೀಡಿದರೆ ಸಾಕು, ಈಗ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಹಿಡಿದು ನಿಂತ ಎಲ್ಲ ಜಾತಿಯವರೂ ಸುಮ್ಮನಿರುತ್ತಾರೆ. ಯಾಕೆಂದರೆ, ಜಾತಿ ಅನ್ನೋ ಪೀಡೆಗೆ ಅಷ್ಟೊಂದು ಆಳವಾಗಿ ಬೇರೂರಿದೆ.