ಮದುವೆ ದಿನದಂದೇ ಆತ್ಮಹತ್ಯೆಗೆ ಶರಣಾದ ಜೋಡಿ | ಜಾತಿ ಪೀಡೆಗೆ ಇಬ್ಬರು ಬಲಿ
ವಿಶಾಖಪಟ್ಟಣಂ: ಜಾತಿಯ ಕಾರಣಕ್ಕಾಗಿ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ನೊಂದ ಪ್ರೇಮಿಗಳು ತಮ್ಮ ಮದುವೆಯ ದಿನದಂದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಗಜುವಾಕಾ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರಯ್ಯ ಕಾಲನಿಯಲ್ಲಿ ನಡೆದಿದೆ.
ಶುಕ್ರವಾರ ಈ ಘಟನೆ ನಡೆದಿದೆ. ಬಿ.ಅವಿನಾಶ್(33) ಅವರು ವಿಧವೆಯಾಗಿದ್ದ ಎಂ.ನಾಗಮಣಿ ಎಂಬವರನ್ನು ಪ್ರೀತಿಸಿ ವಿವಾಹವಾಗಲು ಮುಂದಾಗಿದ್ದಾರೆ. ಆದರೆ, ಅವಿನಾಶ್ ಮನೆಯಲ್ಲಿ ಆಕೆ ವಿಧವೆ ಎಂದು ವಿರೋಧ ವ್ಯಕ್ತಪಡಿಸಿದರೆ, ಇತ್ತ ನಾಗಮಣಿ ಮನೆಯಲ್ಲಿ ಜಾತಿಯ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಗುರುವಾರವಷ್ಟೇ ಪ್ರೇಮಿಗಳು ಇಲ್ಲಿನ ಪರವಾಡ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಆದರೆ ಪೊಲೀಸರು ಜಾತಿ ಹಾಗೂ ವಿಧವ ವಿವಾಹಕ್ಕೆ ವಿರೋಧ ಅಡಿಯಲ್ಲಿ ಪೋಷಕರ ಮೇಲೆ ದೂರು ದಾಖಲಿಸುವುದನ್ನು ಬಿಟ್ಟು ಸಂಧಾನ ಮಾಡಿ ಕಳುಹಿಸಿದ್ದಾರೆ. ಇದರಿಂದಾಗಿ ಇಬ್ಬರ ಸಾವಿಗೆ ಪರೋಕ್ಷವಾಗಿ ಪೊಲೀಸರೇ ಕಾರಣರಾಗಿದ್ದಾರೆ.
ಗಜುವಾಕಾದ ಬಾಡಿಗೆ ಮನೆಯಲ್ಲಿ ವಾಸವಿದ್ದ ಅವಿನಾಶ್ ಮತ್ತು ನಾಗಮಣಿ ಶುಕ್ರವಾರ(ಡಿ.18)ರಂದು ಮದುವೆಯಾಗಲು ಮುಂದಾಗಿದ್ದರು. ವಿವಾಹ ನೋಂದಣಿಗೂ ತಯಾರಿ ನಡೆಸಿದ್ದರು. ಆದರೆ ಮದುವೆಯಾಗಬೇಕಾದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಸದ್ಯ ಹಲವು ಅನುಮಾನಗಳಿಗೂ ಕಾರಣವಾಗಿದೆ.
ಎರಡೂ ಕುಟುಂಬಗಳು ಕೂಡ ಮದುವೆಗೆ ಒಪ್ಪದ ಕಾರಣ ಈ ಜೋಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸ್ಥಳೀಯರು ಕೂಡ ಹೇಳುತ್ತಿದ್ದಾರೆ. ನಾಗಮಣಿ ವಿಧವೆಯಾಗಿದ್ದು, ಆಕೆಯನ್ನು ವಿವಾಗವಾಗುವುದಕ್ಕೆ ಅವಿನಾಶ್ ಮನೆಯವರು ವಿರೋಧ ಮಾಡಿದ್ದು, ಅವಿನಾಶ್ ನ ಜಾತಿಯ ಕಾರಣಕ್ಕಾಗಿ ನಾಗಮಣಿ ಮನೆಯವರು ವಿರೋಧ ಮಾಡಿದ್ದಾರೆ. ಯಾರು ಸತ್ತರೂ ಪರವಾಗಿಲ್ಲ, ಇವರಿಗೆ ಇವರ ಜಾತಿ, ಪಾವಿತ್ರ್ಯತೆ ಉಳಿಯಬೇಕು ಎನ್ನುವ ದುಷ್ಟ ಮನಸ್ಥಿತಿಯಿಂದಾಗಿ ಅನ್ಯಾಯವಾಗಿ ಎರಡು ಜೀವಗಳನ್ನು ಬಲಿ ನೀಡಿದ್ದಾರೆ. ಇಂತಹ ದುಷ್ಟ ಜಾತಿ ಪದ್ಧತಿಯನ್ನೂ ಬೆಂಬಲಿಸುವವರು ಎಷ್ಟೊಂದು ಕ್ರೂರಿಗಳು ಎನ್ನುವುದನ್ನು ಜನರು ಒಮ್ಮೆ ಯೋಚಿಸಬೇಕಿದೆ.