ಜಾತಿ ಪ್ರಜ್ಞೆಯ ಬೇರುಗಳೂ ಮಾರುಕಟ್ಟೆಯ ಒತ್ತಡಗಳೂ | ವ್ಯವಸ್ಥೆಯನ್ನು ವಿಭಜಿಸುವ ಆಹಾರ ಶೋಷಿತರನ್ನು ಒಗ್ಗೂಡಿಸಲೂ ಸಾಧ್ಯ - Mahanayaka
1:06 AM Friday 20 - September 2024

ಜಾತಿ ಪ್ರಜ್ಞೆಯ ಬೇರುಗಳೂ ಮಾರುಕಟ್ಟೆಯ ಒತ್ತಡಗಳೂ | ವ್ಯವಸ್ಥೆಯನ್ನು ವಿಭಜಿಸುವ ಆಹಾರ ಶೋಷಿತರನ್ನು ಒಗ್ಗೂಡಿಸಲೂ ಸಾಧ್ಯ

hamsalekha
25/11/2021

  • ನಾ ದಿವಾಕರ

ತಮ್ಮ ಒಂದು ವಿವಾದಾಸ್ಪದ ಹೇಳಿಕೆಯ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಜಾತಿ ವ್ಯವಸ್ಥೆಯ ಕರಾಳ ಮುಖವಾಡವನ್ನು ಒಮ್ಮೆಲೆ ಹೊರಗೆಳೆದುಬಿಟ್ಟಿದ್ದಾರೆ. ಹಂಸಲೇಖ ಒಂದು ಸಾರ್ವಜನಿಕ ಸಭೆಯಲ್ಲಿ ಆಡಿದ ಮಾತುಗಳು, ಒಂದು ಸ್ವಸ್ಥ ಸಮಾಜದಲ್ಲಾಗಿದ್ದರೆ ಎಂದೋ ಮರೆಯಾಗಿಹೋಗುತ್ತಿದ್ದವು. ಸಾಮಾಜಿಕ ಸಂವೇದನೆ ಮತ್ತು ನೈತಿಕ ಸ್ವಾಸ್ಥ್ಯವನ್ನು ಉಳಿಸಿಕೊಂಡಿದ್ದಲ್ಲಿ ನಮ್ಮ ಸಮಾಜವೂ, ಅವರ ಮಾತುಗಳನ್ನು ಲೋಕಾಭಿರಾಮ ನುಡಿಗಳೆಂದು ನಿರ್ಲಕ್ಷಿಸಿಬಿಡಬಹುದಿತ್ತು. ಆದರೆ 21ನೆಯ ಶತಮಾನದ ಮೂರನೆಯ ದಶಕದಲ್ಲಿರುವ ಆಧುನಿಕ ಭಾರತ ದಿನದಿಂದ ದಿನಕ್ಕೆ ಮಾನಸಿಕ/ನೈತಿಕ ಅಸ್ವಸ್ಥತೆಯತ್ತ ಜಾರುತ್ತಿದೆ. ನೈತಿಕವಾಗಿ ತನ್ನೊಳಗಿರಬಹುದಾಗಿದ್ದ ಎಲ್ಲ ಸೂಕ್ಷ್ಮ ಸಂವೇದನೆಗಳನ್ನೂ ಕಳೆದುಕೊಂಡು ಬೆತ್ತಲಾಗುತ್ತಿದೆ. ಜಾತಿ ವ್ಯವಸ್ಥೆಯ ಬೇರುಗಳು ಸಡಿಲಗೊಳ್ಳುವ ಬದಲು ಮತ್ತಷ್ಟು ಗಟ್ಟಿಯಾಗುತ್ತಿದೆ. ಈ ಶ್ರೇಣೀಕರಣವನ್ನು ಮತ್ತು ಅದರೊಟ್ಟಿಗೇ ಬೆಸೆದುಕೊಂಡು ಬರುವ ಶ್ರೇಷ್ಠ-ಕನಿಷ್ಠ ಪರಿಕಲ್ಪನೆಯ ಸಾಂಸ್ಕೃತಿಕ ಭೂಮಿಕೆಗಳನ್ನು ಮತ್ತಷ್ಟು ಗಟ್ಟಿಯಾಗಿಸುವ ನಿಟ್ಟಿನಲ್ಲಿ, ಜಾತಿ ಶ್ರೇಷ್ಠತೆಯ ಪರಿಚಾರಕರು ಇನ್ನೂ ಹೆಚ್ಚಿನ ವ್ಯಾಪ್ತಿಯ ಮತ ಮತ್ತು ಧರ್ಮದ ಆಸರೆ ಪಡೆಯುತ್ತಿದ್ದಾರೆ.

ಹಂಸಲೇಖ ಅವರ ಆಕ್ಷೇಪಾರ್ಹ ಎನ್ನಬಹುದಾದ ಮಾತುಗಳು ಒಂದು ನಿರ್ದಿಷ್ಟ ಜಾತಿಯ ಕರ್ಮಠರನ್ನು ಸಹಜವಾಗಿಯೇ ಕೆರಳಿಸಿದೆ. ಏಕೆಂದರೆ ಅವರು ಪ್ರಶ್ನಿಸಿದ್ದು ಜಾತಿ ಶ್ರೇಷ್ಠತೆಯ ಮೂಲ ಆಕರವನ್ನು ಮತ್ತು ಈ ಆಕರವನ್ನು ಮತ್ತಷ್ಟು ಆಳವಾಗಿ ಬೇರೂರಿಸಿ ಸಾಮಾಜಿಕ ಅಸಮಾನತೆಯನ್ನು ಪೋಷಿಸುವ ವೈದಿಕಶಾಹಿಯ ಧೋರಣೆಯನ್ನು. ಈ ವೈದಿಕಶಾಹಿಯ ಧೋರಣೆ ಇಂದು ಒಂದು ನಿರ್ದಿಷ್ಟ ಜಾತಿ ಅಥವಾ ಗುಂಪಿಗೆ ಸೀಮಿತವಾಗಿಲ್ಲ. ಶ್ರೇಣೀಕೃತ ವ್ಯವಸ್ಥೆಯ ಎಲ್ಲ ಹಂತಗಳಲ್ಲೂ ಇದು ಕ್ಯಾನ್ಸರ್ ಜೀವಕೋಶಗಳಂತೆ ಹರಡಿಕೊಂಡಿದೆ. ಮೇಲು ಕೀಳಿನ ತರತಮಗಳನ್ನು ಹಿಗ್ಗಿಸುತ್ತಲೇ ಸಮಾಜದಲ್ಲಿ ಶೋಷಿತ ಸಮುದಾಯಗಳನ್ನು ನಿರಂತರ ಶೋಷಣೆಗೊಳಪಡಿಸುವ ವರ್ಗ ಹಿತಾಸಕ್ತಿಗಳಿಗೆ ಪೂರಕವಾಗಿಯೇ ಈ ಕ್ಯಾನ್ಸರ್ ಜೀವಕೋಶಗಳು ಸಮಾಜದ ಅಂಗಾಂಗಗಳನ್ನು ಊನಗೊಳಿಸುತ್ತಿದೆ. ಈ ಊನ ಎಷ್ಟರ ಮಟ್ಟಿಗೆ ವ್ಯಾಪಿಸಿದೆ ಎನ್ನುವುದನ್ನು ಪ್ರಸ್ತುತ ವಿವಾದದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.

ಭಾರತದ ಬಹುತ್ವ ಸಂಸ್ಕೃತಿಯಲ್ಲಿ ಮನುಜ ಸಂಬಂಧಗಳನ್ನು ಬೆಸೆಯುವ ಒಂದು ಸಾಧನವಾಗಿರುವಂತೆಯೇ ಆಹಾರ ಪದ್ಧತಿ ವಿಭಜಕ ಶಕ್ತಿಗಳ ಅಸ್ತ್ರವೂ ಆಗಿರುವುದನ್ನು ಈ ವಿವಾದ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ದಲಿತರ ಮತ್ತು ಬಲಿತವರ ಆಹಾರ ಪದ್ಧತಿಗಳ ಬಗ್ಗೆ ಪ್ರಸ್ತಾಪಿಸುವ ಮೂಲಕ ಮಾನ್ಯ ಹಂಸಲೇಖ ಅವರು, ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯಂತಹ ಕ್ರೂರ ಆಚರಣೆಯನ್ನು ಹೋಗಲಾಡಿಸಲು ಇರುವ ಬಹುಮುಖ್ಯ ಅಡ್ಡಗೋಡೆಗಳನ್ನು ಮುನ್ನೆಲೆಗೆ ತಂದು ನಿಲ್ಲಿಸಿದ್ದಾರೆ. ಈ ಅಡ್ಡಗೋಡೆಗಳನ್ನು ದಾಟಿ ನಮ್ಮ ಸಮಾಜ ಮಾನವೀಯತೆಯೆಡೆಗೆ ಸಾಗಲು ಸಾಧ್ಯವೇ ಎಂಬ ಪ್ರಶ್ನೆಗೆ ನಮ್ಮನ್ನು ಮುಖಾಮುಖಿಯಾಗಿಸಿದ್ದಾರೆ. ಶ್ರೇಣೀಕೃತ ಸಮಾಜದಲ್ಲಿ ಅಂತರ್ಗತವಾಗಿರುವ ತರತಮದ ಧೋರಣೆಗಳನ್ನು ಮೀರಿ ನಡೆಯಲಾಗದಿದ್ದರೆ ಈ ಗೋಡೆಗಳನ್ನು ದಾಟಲಾಗುವುದಿಲ್ಲ ಎನ್ನುವುದು ಮೇಲ್ಜಾತಿ ಮನಸುಗಳ ಅಭಿವ್ಯಕ್ತಿಯಿಂದಲೇ ಗ್ರಹಿಸಬಹುದಾಗಿದೆ.


Provided by

ನಿಜ, ಆಹಾರ ಪದ್ಧತಿ ಸಾಮುದಾಯಿಕವಾಗಿದ್ದಷ್ಟೇ ವ್ಯಕ್ತಿಗತವೂ ಹೌದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಆಹಾರ ಪದ್ಧತಿಯನ್ನನುಸರಿಸುತ್ತಾ ಸಾಮಾಜಿಕ ಸಂಬಂಧಗಳನ್ನು ಬೆಸೆಯುತ್ತಾ ಹೋಗುತ್ತಾನೆ. ಯಾವುದೇ ವ್ಯಕ್ತಿಯನ್ನು, ಯಾವುದೇ ಸಂದರ್ಭದಲ್ಲೂ ಒಪ್ಪಿತ ಆಹಾರ ಪದ್ಧತಿಯ ಚೌಕಟ್ಟಿನಿಂದ ಹೊರತರುವುದು ಸುಲಭವಲ್ಲ. ಏಕೆಂದರೆ ವ್ಯಕ್ತಿಗತ ಆಹಾರದ ಆಯ್ಕೆ ನಿರ್ಧಾರವಾಗುವುದು ಸಾಮುದಾಯಿಕ ನೆಲೆಯಲ್ಲಿ ಅಥವಾ ಸಾಂಸ್ಥಿಕವಾದ ಸಾಂಸ್ಕೃತಿಕ ನೆಲೆಯಲ್ಲಿ. ಈ ಸಾಂಸ್ಕೃತಿಕ ನೆಲೆಯನ್ನು ಸುರಕ್ಷಿತವಾಗಿ ಕಾಪಾಡುತ್ತಲೇ ಕೇವಲ ಔದಾರ್ಯದ ಮುಖವಾಡದೊಂದಿಗೆ ತಾವೇ ನಿರ್ಮಿಸಿಕೊಂಡ ಗೋಡೆಗಳನ್ನು ದಾಟುವ ಪ್ರಯತ್ನಗಳನ್ನು ಮಠ ಮಾನ್ಯಗಳು, ಮತ ಕೇಂದ್ರಗಳು ಮಾಡುತ್ತವೆ. ಸಮುದಾಯಕ್ಕೆ ಸೇರಿದ ಪ್ರತಿಯೊಬ್ಬ ವ್ಯಕ್ತಿಯೂ ಈ ಚೌಕಟ್ಟಿನ ಒಳಗೇ ತನ್ನ ಆಯ್ಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಜಾತಿ ಶ್ರೇಷ್ಠತೆ ಮತ್ತು ಈ ಶ್ರೇಷ್ಠತೆಯಿಂದ ಅಂತರ್ಗತವಾಗುವ ಅಸ್ಮಿತೆ ವ್ಯಕ್ತಿಯನ್ನು ಸಮುದಾಯಕ್ಕೆ ಕಟ್ಟಿಹಾಕುತ್ತದೆ. ತನ್ನ ಮೂಲ ಜಾತಿ ಪ್ರಜ್ಞೆಯನ್ನು ತೊಡೆದುಹಾಕದ ಹೊರತು, ಈ ದಿಗ್ಬಂಧನವನ್ನು ತೊಡೆದುಹಾಕಲಾಗುವುದಿಲ್ಲ.

ಸಹಭೋಜನವನ್ನು ಜಾತಿ ತಾರತಮ್ಯಗಳನ್ನು ಹೋಗಲಾಡಿಸುವ ಒಂದು ಅಸ್ತ್ರವನ್ನಾಗಿ ಬಳಸಲು ಡಾ ಬಿ ಆರ್ ಅಂಬೇಡ್ಕರ್ ಸಹ ಬಯಸಿದ್ದುದನ್ನು ಇಲ್ಲಿ ಗಮನಿಸಬೇಕು. ಹಾಗಾಗಿ ಜಾತಿ ಅಸ್ಮಿತೆಯ ಚೌಕಟ್ಟನ್ನು ಧಿಕ್ಕರಿಸಿ ಹೊರಬೀಳದ ಹೊರತು, ಆಹಾರ ಪದ್ಧತಿಯ ಸುತ್ತ ನಿರ್ಮಾಣವಾಗಿರುವ ತರತಮದ ಮನೋಭಾವದಿಂದ ಹೊರಬರುವುದು ಕಷ್ಟವಾಗುತ್ತದೆ. ಹಂಸಲೇಖ ಈ ವ್ಯಕ್ತಿಗತ ಪ್ರತಿಷ್ಠೆಗೆ ಮತ್ತು ಅಹಮಿಕೆಗೆ ನೇರವಾಗಿಯೇ ಪೆಟ್ಟು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಪೇಜಾವರರು ಒಂದು ವಾಹಕವಾಗಿ ಬಳಕೆಯಾಗಿದ್ದಾರೆ. ಏಕೆಂದರೆ ಜಾತಿ ಅಸ್ಮಿತೆ ಮತ್ತು ಶ್ರೇಷ್ಠತೆ ಎರಡನ್ನೂ ಪೋಷಿಸಿ ಸಂರಕ್ಷಿಸುವ ನಿಟ್ಟಿನಲ್ಲಿ ಪೇಜಾವರರು ಪ್ರತಿನಿಧಿಸುವ ವೈದಿಕಶಾಹಿಯ ನೆಲೆಗಳು ಹೆಚ್ಚು ಸಕ್ರಿಯವಾಗಿವೆ. ದಲಿತ ಕೇರಿಯನ್ನು ಪ್ರವೇಶಿಸುವ ಮೂಲಕ ಅಸ್ಪೃಶ್ಯತೆಯ ಕಳಂಕವನ್ನು ನಿವಾರಿಸಲು ಮುಂದಾಗುವ ಶ್ರೀಗಳು, ಅಸ್ಪೃಶ್ಯತೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ನೆರವಾಗುವ ಆಹಾರ ಪದ್ಧತಿಯನ್ನು ಉಲ್ಲಂಘಿಸಲು ಸಾಧ್ಯವೇ ಎಂಬ ಪ್ರಶ್ನೆಯೇ ಕರ್ಮಠರನ್ನು ಕೆರಳಿಸುವುದು ಸಹಜವೇ ಅಲ್ಲವೇ ?

ಶ್ರೇಣೀಕೃತ ಜಾತಿ ವ್ಯವಸ್ಥೆಯ ಬಾಹುಗಳು ಹೇಗೆ ನಮ್ಮ ಸಮಾಜದ ಶೂದ್ರ ಪ್ರಜ್ಞೆಯನ್ನು ಮತ್ತು ದಲಿತ ಪ್ರಜ್ಞೆಯನ್ನು ಆವರಿಸಿವೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುವುದು ಈ ಸಂದರ್ಭದಲ್ಲಿ ಅತ್ಯವಶ್ಯ. ಮೇಲ್ಜಾತಿಯ ಮಠಗಳಲ್ಲಿ, ದೇವಸ್ಥಾನಗಳಲ್ಲಿ ಇಂದಿಗೂ ಆಚರಿಸಲಾಗುವ ಪಂಕ್ತಿಭೇದ ಮತ್ತು ಮಡೆಸ್ನಾನದಂತಹ ಅಮಾನುಷ ಪದ್ಧತಿಗಳನ್ನು ಪ್ರಶ್ನಿಸದೆ ಹೋದರೆ ಶೂದ್ರ ಪ್ರಜ್ಞೆಯನ್ನು, ದಲಿತ ಪ್ರಜ್ಞೆಯನ್ನು ಜಾಗೃತಗೊಳಿಸುವುದೂ ಸಾಧ್ಯವಿಲ್ಲ. ಅನ್ನದಾಸೋಹಗಳ ಮೂಲಕ ಮರೆಮಾಚಲಾಗುವ ಪಂಕ್ತಿ ಭೇದದ ಭೇದಭಾವಗಳನ್ನು ಸಂಪ್ರದಾಯದ ಹೆಸರಿನಲ್ಲಿ ಅಥವಾ ದೈವ ಭಕ್ತಿಯ ಸೋಗಿನಲ್ಲಿ ಒಪ್ಪಿಕೊಳ್ಳುತ್ತಲೇ ಬಂದಿದ್ದೇವೆ. ದಲಿತರು ಮತ್ತು ಅಸ್ಪೃಶ್ಯರನ್ನು ಹೊರತುಪಡಿಸಿದ ಶೂದ್ರ ಜಾತಿಗಳೂ ಸಹ ಸಹಭೋಜನವನ್ನು ಸಾಮೂಹಿಕ ಭೋಜನದೊಂದಿಗೆ ಸಮೀಕರಿಸುತ್ತಾ ತಮ್ಮ ಮಠಗಳಲ್ಲಿ, ಅಧ್ಯಾತ್ಮ ಕೇಂದ್ರಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಪ್ರತ್ಯೇಕ ಭೋಜನ ವ್ಯವಸ್ಥೆಯನ್ನು ಒಪ್ಪಿಕೊಂಡು ಬಂದಿರುತ್ತಾರೆ.

ಇಲ್ಲಿ ಆಹಾರ ಪದ್ಧತಿ ಒಂದೇ ಆಗಿದ್ದರೂ, ಸಸ್ಯಾಹಾರವೇ ಸರ್ವಾಹಾರವಾಗಿದ್ದರೂ, ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುವ ಮೂಲಕ ಜಾತಿ ಶ್ರೇಷ್ಠತೆಯನ್ನು ಮೆರೆಸುವ ಒಂದು ಪ್ರವೃತ್ತಿಯನ್ನು ಗುರುತಿಸಬಹುದು. ಪ್ರತ್ಯೇಕ ಭೋಜನ ಶಾಲೆ ಅಥವಾ ಪ್ರತ್ಯೇಕ ಭೋಜನದ ಸಾಲನ್ನು ನಿರ್ವಹಿಸುವಾಗ ಈ ಮತಕೇಂದ್ರಗಳಲ್ಲಿ ಮತ್ತು ಅಧ್ಯಾತ್ಮ ಮಠ ಕೇಂದ್ರಗಳಲ್ಲಿ ಜನ್ಮಾಧಾರಿತ ಜಾತಿಯೇ ಮಾನದಂಡವಾಗುವುದೇ ಹೊರತು ಮತ್ತೇನಲ್ಲ. ಶೂದ್ರ ಜಾತಿಗಳೂ ಸಹ ಇಲ್ಲಿ ತಮ್ಮದೇ ಆದ ಜಾತಿ ಶ್ರೇಷ್ಠತೆಯನ್ನು, ಅಹಮಿಕೆಯನ್ನು ಕಾಪಾಡಿಕೊಳ್ಳಲು ಅಸ್ಪೃಶ್ಯರನ್ನು ಮತ್ತು ದಲಿತ ಸಮುದಾಯಗಳನ್ನು ಪ್ರತ್ಯೇಕಿಸುತ್ತವೆ. ಸರ್ವಧರ್ಮ ಸಮಭಾವದ ಸೌಹಾರ್ದತೆಯನ್ನು ಭೋಧಿಸುವ ಮಠಗಳಲ್ಲೂ ಇದು ಸರ್ವೇಸಾಮಾನ್ಯವಾಗಿ ಕಾಣುವಂತಹ ದೃಶ್ಯ. ಇಲ್ಲಿಯೂ ಸಹ ಯಾವುದೇ ರೀತಿಯ ಸಂಭಾವ್ಯ ಪ್ರತಿರೋಧಗಳನ್ನು ಸಂಪ್ರದಾಯ ಮತ್ತು ಆಚರಣೆಗಳ ನೆಲೆಯಲ್ಲಿ ಹತ್ತಿಕ್ಕಲಾಗುತ್ತದೆ.

ಕೂಡ ಕುಳಿತು ಆಹಾರ ಸೇವಿಸುವುದನ್ನೇ ವಿರೋಧಿಸುವ ಜಾತಿ ಮನಸುಗಳು ನಮ್ಮ ಸಮಾಜದಲ್ಲಿ ಇಂದಿಗೂ ಜೀವಂತವಾಗಿರುವುದನ್ನು ಸಾರ್ವಜನಿಕ ವಲಯದಲ್ಲಿ ಕಾಣಲಾಗದಿದ್ದರೂ, ಜಾತಿ ವ್ಯವಸ್ಥೆಯನ್ನು ಪೋಷಿಸುವ ಮತಕೇಂದ್ರಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಹಂಸಲೇಖ ಅವರು ಮೂಲತಃ ಪ್ರಶ್ನಿಸಬೇಕಾದ್ದು ಈ ಮನಸುಗಳನ್ನು .  ಆಹಾರ ಎನ್ನುವುದು ವ್ಯಕ್ತಿಗತ ಜಿಹ್ವಾಗುಣ ಮತ್ತು ಮನಸ್ಥಿತಿಯನ್ನು ಅವಲಂಬಿಸಿದರೆ, ಆಹಾರ ಪದ್ಧತಿ ಎನ್ನುವುದು ಸಾಮುದಾಯಿಕ ಲಕ್ಷಣಗಳು ಮತ್ತು ಸಾಂಸ್ಕೃತಿಕ ಧೋರಣೆಗಳನ್ನು ಅವಲಂಬಿಸುತ್ತದೆ. ಹಂಸಲೇಖ ಅವರ ಮಾತುಗಳನ್ನು ಇಬ್ಭಾಗ ಮಾಡಿದಾಗ ಎರಡು ಅಂಶಗಳನ್ನು ಗುರುತಿಸಬಹುದು. ಮೊದಲನೆಯದಾಗಿ ಪೇಜಾವರ ಶ್ರೀಗಳು ದಲಿತರ ಮನೆಗೆ ಭೇಟಿ ನೀಡಿದಾಗ ಅವರೊಡನೆ ಕುಳಿತು ಭೋಜನ ಸ್ವೀಕರಿಸುವರೇ ? ಎಂಬ ಪ್ರಶ್ನೆ. ಎರಡನೆಯದು ಅವರು ಮಾಂಸಾಹಾರವನ್ನು ಸ್ವೀಕರಿಸಲು ಸಾಧ್ಯವೇ ಎನ್ನುವುದು. ಎರಡನೆಯ ಪ್ರಶ್ನೆ ಮೇಲ್ಜಾತಿಯ ಕರ್ಮಠರನ್ನು ಕೆರಳಿಸಿದೆ. ಆದರೆ ಮೊದಲನೆಯ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸಬಹುದಿತ್ತಲ್ಲವೇ ? ಮಾಂಸಾಹಾರವನ್ನೇ ತ್ಯಾಜ್ಯ ಎನ್ನುವಂತೆ ಅಥವಾ ಮಾಂಸಾಹಾರಿಗಳನ್ನು ಅಮಾನುಷರೆನ್ನುವಂತೆ ಬಿಂಬಿಸುವ ಮನಸ್ಥಿತಿಯನ್ನಷ್ಟೇ ಇಲ್ಲಿ ಕಾಣಬಹುದಾಗಿದೆ.

ಇಲ್ಲಿ ಸಹಜವಾಗಿಯೇ ಉದ್ಭವಿಸುವ ಮತ್ತೊಂದು ಗಂಭೀರ ಪ್ರಶ್ನೆ ದಲಿತರ, ಅಸ್ಪೃಶ್ಯರ ಮನೆಗೆ ಭೇಟಿ ನೀಡುವ ಯಾವುದೇ ಯತಿಗಳಿರಲಿ, ರಾಜಕೀಯ ನಾಯಕರುಗಳಿರಲಿ ತಮ್ಮ ವರ್ಗ ಭೇದಗಳನ್ನು ಬದಿಗೊತ್ತಿ ಕೆಳವರ್ಗದ ಅಸೃಶ್ಯರಿಗೆ ತಮ್ಮ ಮನೆಗಳಲ್ಲಿ, ಮಠಗಳಲ್ಲಿ ಮುಕ್ತ ಪ್ರವೇಶ ನೀಡಲು           ಸಾಧ್ಯವೇ ? ಮಠಮಾನ್ಯಗಳಲ್ಲಿ, ದೇವಾಲಯಗಳಲ್ಲಿರುವಂತೆಯೇ ಮನೆಗಳಲ್ಲೂ ಕೆಲವು ನಿಷಿದ್ಧ ಪ್ರದೇಶಗಳನ್ನು ಗುರುತಿಸಲಾಗಿರುವುದನ್ನು ಬಹುಪಾಲು ಎಲ್ಲೆಡೆಯೂ ಕಾಣಬಹುದಲ್ಲವೇ ? ದೇವಾಲಯದ ಗರ್ಭಗುಡಿಯ ಪ್ರವೇಶವನ್ನು ನಿಷೇಧಿಸಿದಂತೆಯೇ, ಮನೆಗಳಲ್ಲಿರುವ “ ದೇವರ ಕೋಣೆ ” ಯೂ ಸಹ ಅನಪೇಕ್ಷಿತರಿಗೆ ನಿಷಿದ್ಧವೇ ಆಗಿರುತ್ತದೆ. ಇದಕ್ಕೆ ಶುಚಿತ್ವ ಅಥವಾ ಸ್ವಚ್ಚತೆ ಮಾತ್ರವೇ ಕಾರಣ ಎನ್ನುವುದು ಅರ್ಧಸತ್ಯ. ಮೂಲತಃ ತಾವು ಪೂಜನೀಯ ಎಂದು ಭಾವಿಸುವ ಒಂದು ನಿರ್ದಿಷ್ಟ ವಲಯವನ್ನು ‘ ಮಲಿನ ’ ಮುಕ್ತವಾಗಿಟ್ಟುಕೊಳ್ಳುವ ಮನಸ್ಥಿತಿಯಿಂದಲೇ ಈ ವಲಯಗಳು ‘ ಮಿಲನ ’ ಮುಕ್ತವೂ ಆಗಿಬಿಡುತ್ತದೆ.

ಡಾ ಬಿ ಆರ್ ಅಂಬೇಡ್ಕರ್ ಪರಿಕಲ್ಪನೆಯ ಸಹಭೋಜನದಲ್ಲಿ ಆಹಾರ ಪ್ರಧಾನವಾಗಿರಲಿಲ್ಲ. ಬದಲಾಗಿ ಮನುಷ್ಯರನ್ನು ಸ್ಪರ್ಶಿಸುವುದನ್ನೇ ‘ ಮಾಲಿನ್ಯ ’ ಎಂದು ಭಾವಿಸುವ ಮನಸ್ಥಿತಿಗೆ ಇದು ಸವಾಲಾಗಿತ್ತು. ‘ನಿಷಿದ್ಧ ವಲಯ’ಗಳಿಂದ ಹೊರಗೆ ಸಹಭೋಜನ ಇಂದು ಸಾಧ್ಯವಾಗಿದ್ದರೆ ಅದಕ್ಕೆ ಕಾರಣ ನಗರೀಕರಣ ಮತ್ತು ಅದು ಸೃಷ್ಟಿಸುವ ಅನಿವಾರ್ಯತೆಗಳು. ಅಷ್ಟರಮಟ್ಟಿಗೆ ಜಾತಿ ತಾರತಮ್ಯಗಳ ನಿವಾರಣೆಯಾಗಿದೆ ಎಂದು ಹೇಳಬಹುದು. ಆದರೆ ಸಾರ್ವಜನಿಕ ವಲಯದಿಂದ ಮನೆಯೊಳಗೆ ಹೊಕ್ಕ ಕೂಡಲೇ ಮನುಷ್ಯನೊಳಗಿನ ಜಾತಿ ಪ್ರಜ್ಞೆ ಜಾಗೃತವಾಗುತ್ತದೆ. ತನ್ನನ್ನು ತಾನು ಶುದ್ಧೀಕರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗುವಂತಹ ಕರ್ಮಠ ಮನಸ್ಥಿತಿ ಇಂದಿಗೂ ಜೀವಂತವಾಗಿಯೇ ಇದೆ. ತಮ್ಮ ಖಾಸಗಿ ವಲಯದಲ್ಲಿ ಎಲ್ಲ ರೀತಿಯ ಶುದ್ಧ-ಮಲಿನ ಪರಿಕಲ್ಪನೆಗಳನ್ನೂ ಜೀವಂತವಾಗಿಟ್ಟುಕೊಂಡು, ಹೊರಜಗತ್ತಿನಲ್ಲಿ ಸ್ಪೃಶ್ಯಾಸ್ಪೃಶ್ಯತೆಯ ಚೌಕಟ್ಟಿನಿಂದ ಹೊರಗಿರುವ ಮನೋಭಾವವೇ, ತಮ್ಮ ಆವರಣದೊಳಗೆ ದಲಿತರ ಪ್ರವೇಶವನ್ನು ನಿಷೇಧಿಸುವುದಕ್ಕೂ ಕಾರಣವಾಗುತ್ತದೆ. ಹಂಸಲೇಖ ಅವರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಪ್ರಶ್ನೆ ಕಾಣುತ್ತದೆ.

ಜಾತಿ ತಾರತಮ್ಯಗಳಿಗೆ-ಅಸ್ಪೃಶ್ಯತೆಗೆ ಮಾಂಸಾಹಾರವೊಂದೇ ಮಾನದಂಡವಲ್ಲ. ಅದನ್ನೂ ಮೀರಿದ ಜಾತಿ ವ್ಯವಸ್ಥೆಯ ನಿಯಮಗಳು ಇಲ್ಲಿ ಸಕ್ರಿಯವಾಗುತ್ತವೆ. ಈ ನಿಯಮಗಳನ್ನು “ ನಿಷಿದ್ಧ ವಲಯಗಳಲ್ಲಿ ” ಸಂರಕ್ಷಿಸಲಾಗುತ್ತದೆ. ಇತ್ತೀಚೆಗೆ ಹಲವು ಪ್ರಕರಣಗಳಲ್ಲಿ ದೇವಸ್ಥಾನಗಳನ್ನೂ ಸಹ ಈ ನಿಷಿದ್ಧ ವಲಯದ ವ್ಯಾಪ್ತಿಗೊಳಪಡಿಸಿರುವುದನ್ನು ಕಾಣುತ್ತಿದ್ದೇವೆ. ಸ್ಪರ್ಶವನ್ನೇ ಧಿಕ್ಕರಿಸುವ ಮನಸುಗಳು ಅಸ್ಪೃಶ್ಯರ ಮನೆಗೆ, ಕೇರಿಗೆ, ಬೀದಿಗೆ ಭೇಟಿ ನೀಡಿ ತಮ್ಮ ಔದಾರ್ಯವನ್ನು ತೋರಿಸುವುದೇ ಆದರೆ, ಅದೇ ಮನಸುಗಳು ತಮ್ಮ ಆವರಣದೊಳಗೆ ಅಸ್ಪೃಶ್ಯರಿಗೆ ಹೆಜ್ಜೆಯೂರಲು ಅವಕಾಶ ನೀಡುವುದು ಏಕೆ ಸಾಧ್ಯವಾಗಬಾರದು ? ಸಹಪಂಕ್ತಿ ಭೋಜನಕ್ಕೆ ಅವಕಾಶ ನೀಡುವ ಮಠ, ದೇವಸ್ಥಾನ, ಮತಕೇಂದ್ರ, ಅಧ್ಯಾತ್ಮ ಕೇಂದ್ರಗಳಲ್ಲಿ ಒಂದೇ ಭೋಜನಶಾಲೆ ಎಲ್ಲಾದರೂ ಕಾಣಲು ಸಾಧ್ಯವೇ ? ಸಸ್ಯಾಹಾರಿಗಳ ನಡುವೆಯೂ ಗೋಡೆ ಕಟ್ಟುವ ಈ ಪ್ರವೃತ್ತಿಗೆ ಮೂಲ ಕಾರಣ ಜಾತಿ ವ್ಯವಸ್ಥೆಯ ಸ್ಪೃಶ್ಯಾಸ್ಪೃಶ್ಯತೆಯ ಪರಿಕಲ್ಪನೆಯಲ್ಲಿದೆ ಅಲ್ಲವೇ ? ಹಂಸಲೇಖ ಅವರ ವಿರುದ್ಧ ಪ್ರತಿಭಟಿಸುತ್ತಿರುವವರು ಈ ಪ್ರಶ್ನೆಗೆ ಉತ್ತರಿಸಬೇಕಿದೆ.

ಸಾವಿರಾರು ಹಾಡುಗಳ ಮೂಲಕ ಕರ್ನಾಟಕದ ಜನಮಾನಸದಲ್ಲಿ ಮನೆಮಾಡಿರುವ ಒಬ್ಬ ಸಂಗೀತ ನಿರ್ದೇಶಕ, ಹಂಸಲೇಖ ಇಂದು ಜಾತಿ ಶ್ರೇಷ್ಠತೆಯ ಸಂರಕ್ಷಕರಿಂದ ತೀವ್ರ ಬೌದ್ಧಿಕ ಧಾಳಿಗೊಳಗಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಸುವಾಸನೆಗಿಂತಲೂ ದುರ್ವಾಸನೆಯೇ ಹೆಚ್ಚಾಗಿ ಕಾಣುತ್ತಿದೆ. ಶೂದ್ರ ಪ್ರಜ್ಞೆ, ದಲಿತ ಪ್ರಜ್ಞೆಯನ್ನು ಜನ್ಮತಃ ಪ್ರತಿನಿಧಿಸಬೇಕಾದ ಚಿತ್ರರಂಗದ ಯಾವೊಬ್ಬ ಕಲಾವಿದರೂ ಹಂಸಲೇಖ ಅವರಿಗೆ  ಹೆಗಲು ನೀಡಲು ಮುಂದಾಗಿಲ್ಲ. ವರ್ಗ ಪ್ರಜ್ಞೆ ಮತ್ತು ಸಾಮಾಜಿಕಾರ್ಥಿಕ ಸ್ಥಾನಮಾನಗಳು ಹೇಗೆ ಜಾತಿ ಪ್ರಜ್ಞೆಯನ್ನು ಮಸುಕಾಗಿಸುತ್ತವೆ ಎನ್ನುವುದು ಸ್ಪಷ್ಟವಾಗುತ್ತದೆ. ಮಾರುಕಟ್ಟೆಯ ಅನಿವಾರ್ಯತೆಗಳು ಮತ್ತು ಮೇಲ್ವರ್ಗಕ್ಕೆ ಸೇರಿರುವ ಒತ್ತಡಗಳು ತಾವು ಜನ್ಮತಃ ಪ್ರತಿನಿಧಿಸುವ ಜಾತಿ ಸಮುದಾಯಗಳು ಎದುರಿಸುವ ಅಪಮಾನಗಳನ್ನೂ ಲೆಕ್ಕಿಸದಂತೆ ಮಾಡಿಬಿಡುತ್ತವೆ. ಇದು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಹಜವಾಗಿ ಕಂಡುಬರುವ ವಿದ್ಯಮಾನ.

ಈ ಬಂಡವಾಳಶಾಹಿಯ ಒಂದು ಭಾಗವಾಗಿಯೇ ಬೆಳೆದುಬಂದಿರುವ ಚಿತ್ರರಂಗವೂ ಈ ಕಾರಣಕ್ಕಾಗಿಯೇ ಸಾಮಾಜಿಕ ಸ್ಪಂದನೆ ಇಲ್ಲದೆ ಸೊರಗಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಾಮಾಜಿಕ ಅನಿಷ್ಠಗಳನ್ನು ವಿರೋಧಿಸುವುದಿರಲಿ, ಪರಿಣಾಮಕಾರಿಯಾಗಿ ಬಿಂಬಿಸುವ ಚಿತ್ರಗಳೂ ಬೆರಳೆಣಿಕೆಯಷ್ಟು ಮಾತ್ರವೇ ಇದೆ. ಡಾ ರಾಜಕುಮಾರ್ ಅವರನ್ನೂ ಸೇರಿದಂತೆ ಚಿತ್ರರಂಗದ ದಿಗ್ಗಜರು ಈ ಸಂವೇದನಾಶೀಲ ಸ್ಪಂದನೆಗೆ ಮುಂದಾಗಲೇ ಇಲ್ಲ ಎನ್ನುವುದನ್ನೂ ಗಮನಿಸಬೇಕು. ಶೋಷಿತ ಜನಸಮುದಾಯಗಳ ಅಪಮಾನಗಳನ್ನು ರಂಜನೀಯವಾಗಿ ಬಿತ್ತರಿಸುವ ಮೂಲಕ ಮಾರುಕಟ್ಟೆಯನ್ನು ವೃದ್ಧಿಸಿಕೊಳ್ಳುವ ಒಂದು ವಲಯದಲ್ಲಿ ಹಂಸಲೇಖ ಎದುರಿಸುತ್ತಿರುವ ಧಾಳಿಯನ್ನು ಎದುರಿಸಿ ನಿಲ್ಲುವಂತಹ ಸಂವೇದನಾಶೀಲ ಮನಸ್ಥಿತಿಯನ್ನು ನಿರೀಕ್ಷಿಸುವುದಾದರೂ ಹೇಗೆ ? ಬಂಡವಾಳ ಮತ್ತು ಮಾರುಕಟ್ಟೆ ಇಂತಹ ಪ್ರಯತ್ನಗಳಿಗೆ ಅವಕಾಶವನ್ನೇ ನೀಡುವುದಿಲ್ಲ. ಹೆಚ್ಚೆಂದರೆ ಈ ಪ್ರಸಂಗ ಮತ್ತೊಂದು ಚಿತ್ರದ ಕಥಾಹಂದರವಾಗಿ ತೆರೆಯ ಮೇಲೆ ಬರಬಹುದು.

ಬಂಡವಾಳ ಮತ್ತು ಮಾರುಕಟ್ಟೆಯ ಒಂದು ಭಾಗವಾಗಿರುವ ಚಲನಚಿತ್ರರಂಗದಿಂದ ಹೆಚ್ಚಿನದನ್ನು ನಿರೀಕ್ಷಿಸಲೂ ಆಗುವುದಿಲ್ಲ. ಮಾನ್ಯ ಹಂಸಲೇಖ ಅವರು ಹಲವು ಟಿವಿ ಷೋಗಳಲ್ಲಿ, ತಮ್ಮ ಹಾಡುಗಳ ಮೂಲಕ ಶೋಷಿತರ ಪರವಾದ, ಶೂದ್ರ-ದಲಿತ ಪ್ರಜ್ಞೆಯನ್ನು ಬಿಂಬಿಸುವ ಚಿಂತನೆಗಳನ್ನು ಹೊರಗೆಡಹಿದ್ದಾರೆ. ದೇಶದಲ್ಲಿ, ರಾಜ್ಯದಲ್ಲಿ ನಿರಂತರವಾಗಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಮತ್ತು ಅನ್ಯಾಯಗಳ ಪರ ಸಾರ್ವಜನಿಕವಾಗಿ ಒಮ್ಮೆಯೂ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದಂತೆ ಕಾಣುವುದಿಲ್ಲ. ಇದು ಸ್ವಾಭಾವಿಕವೂ ಹೌದು, ಏಕೆಂದರೆ ಮಾರುಕಟ್ಟೆ ಮತ್ತು ಬಂಡವಾಳ ಸಂವೇದನೆಯನ್ನು ಕಟ್ಟಿಹಾಕುತ್ತದೆ. ಹಂಸಲೇಖ ಅವರ ಕ್ಷಮಾಯಾಚನೆಗೂ  ಈ ಅನಿವಾರ್ಯತೆಗಳೇ ಕಾರಣವಾಗಿರುತ್ತದೆ. ಇಂತಹ ಸಂದಿಗ್ಧತೆಯನ್ನು ಮೀರಿ ನಿಲ್ಲುವಂತಹ ತಾತ್ವಿಕ ತಳಹದಿಯಾಗಲೀ, ಸೈದ್ಧಾಂತಿಕ ಬದ್ಧತೆಯಾಗಲೀ ಕಲಾವಿದರಲ್ಲಿ ಇರುವುದಾದರೆ ಆಗ ಸಾಂಸ್ಕೃತಿಕ ಲೋಕದಲ್ಲಿ ಒಂದು ಹೊಸ ಬೆಳಕಿನ ಕಿಂಡಿಯನ್ನು ಕಾಣಲು ಸಾಧ್ಯ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ