ಜಾತಿಯ ಸಂಕೋಲೆಗಳಿಂದ ಶಿಕ್ಷಣ ಹೊರ ಬರಬೇಕು | ರಮೇಶ್ ಕುಮಾರ್
ಕೋಲಾರ: ಜಾತಿಯ ಸಂಕೋಲೆಗಳಿಂದ ಶಿಕ್ಷಣ ಹೊರಬಾರದಿದ್ದರೆ ಆರೋಗ್ಯಕರ ಸಮಾಜ ನಿರ್ಮಿಸಲು ಸಾಧ್ಯವಿಲ್ಲ ಎಂದು ಮಾಜಿ ಸ್ಪೀಕರ್, ಶಾಸಕ ರಮೇಶ್ ಕುಮಾರ್ ಹೇಳಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿ ವೈದಿಕ ಪರಂಪರೆಯ ಪದ್ದತಿಗಳಾಗಿವೆ ಎಂದು ಅವರು ಹೇಳಿದರು.
ಶನಿವಾರ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸರ್ಕಾರಿ ನೌಕರರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಪ್ರಾಮುಖ್ಯತೆ ಕಳೆದುಕೊಂಡಿದ್ದಾರೆ. ಸಂಘಟನೆಗಳೂ ಕೂಡ ಉದ್ದೇಶ ಈಡೇರಿಕೆಯೇ ಮರೆತು ಹೋಗಿವೆ. ಸರ್ಕಾರ ಸಾರ್ವಜನಿಕ ಸಂಸ್ಥೆಯಾಗಿದೆ. ಬದುಕಿನ ಎಲ್ಲಾ ವಿಚಾರಗಳು ಇಂದು ಪ್ರಾಮುಖ್ಯತೆ ಕಳೆದುಕೊಂಡಿವೆ. ಬಡವನಿಗೆ ಸೈಟ್ ನೀಡಲು ನೂರಾರು ವಿಘ್ನಗಳು ಎದುರಾಗುತ್ತವೆ, ನಿರ್ಗತಿಕನಿಗೆ ತೊಂದರೆ ನೀಡದೇ ನೆರವು ನೀಡುವ ಕಾರ್ಯ ನೌಕರರು ಮಾಡಬೇಕು ಎಂದು ಸಲಹೆ ನೀಡಿದರು.
ಅಕ್ಷರ ಜ್ಞಾನ ಇರುವಂತಹ ಜವಾಬ್ದಾರಿಯುತ ಸ್ಥಾನದ ವರ್ಚಸ್ಸು ನಿರ್ಗತಿಕರಿಗೆ ತೊಂದರೆ ಮಾಡುವುದಾದರೆ ಸಂಘಟನೆಗಳು ಏಕೆ ಬೇಕು ಎಂದು ಪ್ರಶ್ನಿಸಿದ ಅವರು, ಸಂಘಟನೆಗಳು ನಿರಾಶ್ರಿತರಿಗೆ, ನಿರ್ಗತಿಕರಿಗೆ ಅನುಕೂಲ ಮಾಡಿಕೊಡುವಂತಾಗಬೇಕು. ದಿಕ್ಕಿಲ್ಲದವರ ಪ್ರತಿಭೆಗಳನ್ನು ಗುರುತಿಸುವವರು ಯಾರು ಎಂದು ಮರು ಪ್ರಶ್ನೆ ಹಾಕಿದರು.