ಪತಿಗೆ ಹಲ್ಲೆ ನಡೆಸಿ ಪತ್ನಿಯ ಅತ್ಯಾಚಾರಕ್ಕೆ ಯತ್ನ | ಜಾತ್ರೆಗೆ ತೆರಳಿದ್ದ ದಂಪತಿ ಮೇಲೆ 6 ಜನರಿಂದ ಕೃತ್ಯ
ಚಿಕ್ಕಮಗಳೂರು: ಜಾತ್ರೆಗೆ ತೆರಳಿದ್ದ ದಂಪತಿಯ ಮೇಲೆ ದಾಳಿ ನಡೆಸಿದ ಆರು ಜನರ ತಂಡವೊಂದು ಪತಿಗೆ ಹಲ್ಲೆ ನಡೆಸಿ, ಪತ್ನಿಯನ್ನು ಅತ್ಯಾಚಾರ ನಡೆಸಲು ಯತ್ನಿಸಿದ ಅಮಾನವೀಯ ಘಟನೆ ಅಜ್ಜಂಪುರ ತಾಲೂಕಿನ ಅಂತರಘಟ್ಟೆಯಲ್ಲಿ ಬುಧವಾರ ನಡೆದಿದ್ದು, ಈ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಅಜ್ಜಾಂಪುರ ನಿವಾಸಿಗಳಾದ ಯೋಗೇಶ್, ಸಂತೋಷ್, ಮನು, ಶಿವಕುಮಾರ್, ಶಶಿಕುಮಾರ್ ಬಂಧಿತ ಆರೋಪಿಗಳಾಗಿದ್ದು, ಅಂಬೇಡ್ಕರ್ ಬಡವಣೆ ನಿವಾಸಿಯಾಗಿರುವ ಮಂಜನಾಯ್ಕ್, ಬುಧವಾರ ಸಂಜೆ ಇಲ್ಲಿನ ಅಂತರಘಟ್ಟೆಯ ದುರ್ಗಾಂಬ ದೇವಳದ ಜಾತ್ರೆಗೆಂದು ತೆರಳಿದ್ದು, ಈ ವೇಳೆ ದೇವಳದ ಬಳಿಯಿದ್ದ 6 ಮಂದಿ ದುಷ್ಕರ್ಮಿಗಳು ಮಂಜ ನಾಯ್ಕರ ಪತ್ನಿಯನ್ನು ಚುಡಾಯಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಕಲ್ಲು ಮತ್ತು ದೊಣ್ಣೆಗಳಿಂದ ದಂಪತಿಗೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಮಂಜ ನಾಯ್ಕರ ಮೇಲೆ ಆರೋಪಿಗಳು ಇದೇ ಸಂದರ್ಭದಲ್ಲಿ ಹಲ್ಲೆ ನಡೆಸಿದ್ದು, ಹಲ್ಲೆಯಿಂದಾಗಿ ಅವರ ಕೈ ಮುರಿದು ಹೋಗಿದೆ. ಪತಿಯ ಮೇಲಿನ ಹಲ್ಲೆಯನ್ನು ತಡೆಯಲು ಯತ್ನಿಸಿದಾಗ ಪತ್ನಿಯ ಮೇಲೆ ಅತ್ಯಾಚಾರ ನಡೆಸಲು ಆರೋಪಿಗಳು ಯತ್ನಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ 6 ಮಂದಿಯ ಪೈಕಿ ಐವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.