ಜಯ ಭಾರತ ಜನನಿಯ ತನುಜಾತೆ ! ಜಯಹೇ ಕರ್ನಾಟಕ ಮಾತೆ ! | ಸಿಎಂ ಬೊಮ್ಮಾಯಿ ಅವರಿಂದ ಸ್ವಾತಂತ್ರ್ಯೋತ್ಸವದ ಸಂದೇಶ
- ಬಸವರಾಜ ಬೊಮ್ಮಾಯಿ
ಇದು ಅಖಂಡ ಭಾರತದ ಕಥೆ. ಕೇವಲ ಭಾರತವಲ್ಲ. ಆಫ್ಘಾನಿಸ್ತಾನ, ಪಾಕಿಸ್ತಾನದಿಂದ ಹಿಡಿದು ಮ್ಯಾನ್ಮಾರ್‍ವರೆಗೆ ಹಾಗೂ ಹಿಮಾಲಯದಿಂದ ಹಿಡಿದು ಶ್ರೀಲಂಕಾದವರೆಗೆ ಹರಡಿಕೊಂಡಿದ್ದ ಅಖಂಡ ಭಾರತದ ಕಥೆ. ಈ ಅಖಂಡ ಭಾರತದ ಕಲ್ಪನೆಯೇ ನಮ್ಮ ಬದುಕನ್ನು ಎಷ್ಟು ವಿಶಾಲಗೊಳಿಸಿತು ಎಂದರೆ ಇಡೀ ವಿಶ್ವವನ್ನು ನಾವು ಒಂದು ಕುಟುಂಬವಾಗಿ ಕಾಣುತ್ತೇವೆ.
ನಮ್ಮಲ್ಲಿ ಮಾತ್ರ ಕುಟುಂಬ – ತಾಯಿಯ ಕಲ್ಪನೆ ತಲೆ ತಲಾಂತರದಿಂದ ಮೂಡಿ ಬಂದಿದೆ. ಇದೇ ಇಂದಿಗೂ ನಮ್ಮ ದೇಶದ ಸಂಸ್ಕೃತಿಯನ್ನು ಕಾಪಾಡಲು ಕಾರಣವಾಗಿದೆ. ಭಾರತೀಯತೆ ಮತ್ತು ರಾಷ್ಟ್ರೀಯತೆ ನಮ್ಮ ರಕ್ತದಲ್ಲಿ ಹರಿಯುತ್ತಿದೆ. ಇದರಿಂದ ಅದನ್ನು ಯಾರೂ ಕಿತ್ತುಕೊಳ್ಳಲು ಬರುವುದಿಲ್ಲ.
`ಜಯ ಭಾರತದ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ಮಾತನ್ನು ರಾಷ್ಟ್ರಕವಿ ಕೆ. ವಿ. ಪುಟ್ಟಪ್ಪ ( ಕುವೆಂಪು ) ಅವರು ನಮಗಾಗಿ ಹಾಡಿ ಹೋಗಿದ್ದಾರೆ. ನಾವು ನಮ್ಮ ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯನ್ನು ಮೀರಿದವರಲ್ಲ. ನೆಲ ಜಲ ಸಮಸ್ಯೆ ಇರಲಿ. ಎಂದೂ ನಾವು ಲಕ್ಷ್ಮಣ ರೇಖೆ ದಾಟಿದವರಲ್ಲ. ಈಗ ದೇಶದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಇದು ಬ್ರಿಟಿಷರು ಅರಸೊತ್ತಿಗೆಯನ್ನು ಬಿಟ್ಟುಕೊಟ್ಟು ಹೋದ ದಿನದ ಆಚರಣೆಯಷ್ಟೆ.
ನನ್ನ ಭಾರತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಿಂಧೂ ಸಂಸ್ಕøತಿ ಆರಂಭದಲ್ಲೇ ನನ್ನ ದೇಶದ ಹೆಸರು ಬಂದಿತ್ತು ಎಂಬುದು ಹೆಮ್ಮೆಯ ಸಂಗತಿ. ಗ್ರೀಕ್ – ರೋಮ್ ಸಂಸ್ಕøತಿಗೆ ಸಮಾನ ಹಿಂದೂ ಸಂಸ್ಕøತಿ. ನಾವು ಬೇರೆ ದೇಶಗಳಿಗೆ ಉತ್ತಮ ಬದುಕಿನ ಚಿಂತನೆಯನ್ನು ನೀಡಿದ್ದೇವೆಯೇ ಹೊರತು ಬೇರೆಯವರಿಂದ ನಾವು ಏನನ್ನೂ ತೆಗೆದುಕೊಂಡಿಲ್ಲ. ಇದೇ ನಮ್ಮ ಹೆಮ್ಮೆಯ ನಾಡಿನ ಗರಿಮೆ.
ನಮ್ಮ ದೇಶದ ಚರಿತ್ರೆಯನ್ನು ತಿಳಿದು ಕೊಳ್ಳಲು ವರ್ಷಗಳೇ ಬೇಕು. ನಮ್ಮ ದೇಶದ ಇತಿಹಾಸ ರಾಮಾಯಣ, ಮಹಾಭಾರತದಷ್ಟೇ ಪ್ರಾಚೀನ. ರಸಋಷಿಗಳ ನೆಲೆವೀಡು. ಈ ಭೂಮಿಯಲ್ಲಿ ಬೇಕಾದಷ್ಟು ಹೋರಾಟಗಳು ನಡೆದಿವೆ. ಆದರೆ, ಎಂದೂ ಭರತಖಂಡ ತನ್ನ ನೈತಿಕ ನೆಲಗಟ್ಟನ್ನು ಕಳೆದುಕೊಂಡಿಲ್ಲ. ಭಾರತದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭಗೊಂಡ 1857 ರಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತ 1947 ವರೆಗೂ ಸಾಮೂಹಿಕ ನೆಲೆಯಲ್ಲಿ 90 ವರ್ಷಗಳ ಅವಧಿಯಲ್ಲಿ ನಡೆದ ಹೋರಾಟದ ಹಲವು ಮಜಲುಗಳು ಇಂದಿಗೂ ನಮ್ಮನ್ನು ರೋಮಾಂಚನಗೊಳಿಸುತ್ತದೆ. ಈಗಲೂ ಇವುಗಳನ್ನು ನೆನಪಿಸಿಕೊಂಡರೆ ಶತಶತಮಾನಗಳವರೆಗೆ ಸ್ವಾತಂತ್ರ್ಯವನ್ನು ಎಚ್ಚರದಿಂದ ಕಾಪಾಡಿಕೊಳ್ಳಲು ಪ್ರೇರಣೆ ಮತ್ತು ಸ್ಫೂರ್ತಿಯನ್ನು ನೀಡುತ್ತದೆ.
ಅಂದಿನ ಕಾಲದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ತಮ್ಮ ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಪರಕೀಯ ಪ್ರಭುತ್ವದ ವಿರುದ್ಧ ಸೆಣೆಸಿದರು. ಅದರ ಪ್ರತಿಫಲವಾಗಿ ಛಡಿ ಏಟು, ಜೈಲುವಾಸ, ಕರಿನೀರಿನ ಶಿಕ್ಷೆ ಅಲ್ಲದೆ ಮರಣದಂಡನೆಯನ್ನು ನಗುನಗುತ್ತ ಸ್ವೀಕರಿಸಿದರು. ಅವರ ಬದುಕು ನಮ್ಮ ನಿಮ್ಮಂತೆ ಸಾಮಾನ್ಯವಾಗಿತ್ತು. ಆದರೆ, ಅಸಾಮಾನ್ಯ ಮರಣದ ಮೂಲಕ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡರು. ಅವರ ಅಪ್ರತಿಮ ತ್ಯಾಗ ಬಲಿದಾನ ಇಂದಿನ ಯುವ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆ. ಅಲ್ಲದೆ, 1757 ರಿಂದ 1857 ವರೆಗೆ ಒಂದು ನೂರು ವರ್ಷಗಳಲ್ಲಿ ಅಂದರೆ ಪ್ಲಾಸಿ ಕದನದಿಂದ ಸಿಪಾಯಿ ದಂಗೆವರೆಗೆ ದೊಡ್ಡ ಹೋರಾಟವೇ ನಡೆಯಿತು. ಬ್ರಿಟಿಷರ ಧ್ವಜ ಹಾರಾಡಿದ 50 ವರ್ಷಗಳಲ್ಲೇ ಆ ಸಾಮ್ರಾಜ್ಯದ ಅಂದರೆ 1800 ಇಸವಿಯಲ್ಲೇ ಅಡಿಗಲ್ಲುಗಳು ಅಲುಗಾಡ ತೊಡಗಿದವು. ಈ ಎಲ್ಲಾ ಹೋರಾಟದ ಮೂಲವೇ ಸ್ವಾತಂತ್ರ್ಯದ ಅಭೀಪ್ಸೆ. ಸ್ವಾತಂತ್ರ್ಯ ಸಾಧನೆಯ ಮುಂದೆ ತಮ್ಮ ಜೀವ ತೃಣ ಸಮಾನ ಎಂಬುದನ್ನು ಭಾರತೀಯರು ಜಗತ್ತಿಗೆ ತೋರಿಸಿಕೊಟ್ಟರು. ತ್ಯಾಗ ಬಲಿದಾನಕ್ಕೆ ಭಾರತೀಯರು ಇಡೀ ಮನುಕುಲಕ್ಕೆ ಮಾದರಿಯಾದರು. ಸಾವನ್ನು ಗೆದ್ದ ಜನಾಂಗಕ್ಕೆ ಸೋಲೆಂಬ ಸೊಲ್ಲಿಗೆ ಅವಕಾಶವೇ ಇಲ್ಲ ! ಅಲ್ಲವೇ ? ಇದು ಅಮೃತ ಪುತ್ರರ ಸಂಗ್ರಾಮದ ಕಥೆ.
ಭಾರತದ ಕಟ್ಟಕಡೆಯ ಮೊಗಲ್ ಚಕ್ರವರ್ತಿ ಮೊಹಮದ್ ಬಹದ್ದೂರ್ ಷಹಾ ಜಫರ್ ಅವರೇ ಮೊಟ್ಟ ಮೊದಲ ಸ್ವಾತಂತ್ರ್ಯ ವೀರ. ಭಾರತೀಯರು 1857-58 ರಲ್ಲಿ ನಡೆಸಿದ ಸಿಪಾಯಿ ದಂಗೆಗೆ ಈತನೇ ಕಾರಣ ಎಂದು ಬ್ರಿಟಿಷರು ಜೀವಾವಧಿ ಶಿಕ್ಷೆ ವಿಧಿಸಿ ರಂಗೂನ್ ಜೇಲಿಗೆ ಹಾಕಿದರು. ಹತ್ತು ವರ್ಷ ಜೈಲಿನಲ್ಲಿದ್ದ ಚಕ್ರವರ್ತಿ 1868 ರಲ್ಲಿ ಜೀವ ತ್ಯಜಿಸಿದರು. ಆತ ದೇಶದ ಎಲ್ಲಾ ರಾಜ ಮಹಾರಾಜರಿಗೆ ಪತ್ರ ಬರೆದು ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ. ಅದೇ ರೀತಿ, ನಾನಾ ಸಾಹೇಬ್ ಪೇಶ್ವೆ ಬ್ರಿಟಿಷರ ವಿರುದ್ಧ ಘರ್ಜಿಸಿದ. ದಂಗೆಯ ಮಹಾನ್ ದಂಡ ನಾಯಕ ತಾಂತ್ಯಾ ಟೋಪಿ ಬಿಹಾರದ ಕುನ್ವರ್‍ಸಿಂಹ ನಿಂದ ಆರಂಭವಾದ ದಂಗೆ ಸುರಪುರದ ವೆಂಕಟಪ್ಪ ನಾಯಕನವರೆಗೆ, ಜಬ್ಬಲ್‍ಪುರದ ರಾಜಾಶಂಕರ್ ಸಹ್ರೋಜ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ. ಒಬ್ಬರಲ್ಲ ಇಬ್ಬರಲ್ಲ ಸಾವಿರಾರು ಜನ ಪ್ರಾಣ ಕೊಟ್ಟು ಅಮರರಾದರು. ಬ್ರಿಟಿಷರು 1857 ರ ಪ್ರಯತ್ನ ವಿಫಲ ಎಂದು ಭಾವಿಸಿದರು. ಆದರೆ, ಅದು ತಣ್ಣಗಾಗದ ಕ್ರಾಂತಿ ಕಿಚ್ಚು. ಆ ಸ್ವಾತಂತ್ರ್ಯ ಚೈತನ್ಯ ಮಹಾ ಯಜ್ಞವಾಯಿತು. ಅದು ಕ್ರಾಂತಿಯ ರೂಪ ಹಾಗೂ ಶಾಂತಿ ಸ್ವರೂಪವನ್ನು ಪಡೆದುಕೊಂಡಿತು.
ಸುಮಾರು 90 ವರ್ಷಗಳ ಅಜೇಯ ಭಾರತದ ಹೋರಾಟಕ್ಕೆ ಎರಡು ಮುಖವಿತ್ತು ಎಂಬುದನ್ನು ಮರೆಯುವ ಹಾಗಿಲ್ಲ. ಈ ಎರಡೂ ಮುಖಗಳು ಒಂದಕ್ಕೊಂದು ಹೆಣೆದುಕೊಂಡು ನೂತನ ಮಹಾಭಾರತ ಕಟ್ಟಲು ಕಾರಣವಾಯಿತು. ಈ ಎರಡು ಮುಖಗಳ ನಡುವೆ ಸಾಂಸ್ಕøತಿಕ ಮುಖ ಇತ್ತು. ರಾಜಾರಾಂ ಮೋಹನ್ ರಾಯ್, ರಾಮಕೃಷ್ಣ ಪರಮಹಂಸ, ಸ್ವಾಮಿ ಶ್ರದ್ಧಾನಂದ ಮೊದಲಾದವರು ಸ್ವಾತಂತ್ರ್ಯದ ಕಿಚ್ಚಿಗೆ ಧಾರ್ಮಿಕ ಮತ್ತು ಸಾಂಸ್ಕøತಿಕ ಅಡಿಪಾಯವನ್ನು ಹಾಕಿಕೊಟ್ಟರು. ಸತ್ಯ, ಧರ್ಮಗಳೇ ಸಂಗ್ರಾಮದ ಉಸಿರಾಯಿತು. ಮಹಾತ್ಮ ಗಾಂಧಿ ಕ್ರಾಂತಿ-ಶಾಂತಿ-ಸತ್ಯ ಈ ಮೂರು ಮುಖಗಳ ಸಂಕೇತವಾದರು. ರಾಷ್ಟ್ರವನ್ನು ಧರ್ಮ ಪಥದಲ್ಲಿ ನಡೆಸಿದರು. ಈ ಮೂರು ಮುಖಗಳ ಮಹಾಯಜ್ಞವೇ ಸ್ವಾತಂತ್ರ್ಯ ಹೋರಾಟ. ಈ ಯಜ್ಞದ ಇತಿಹಾಸವನ್ನು ಹಾಗೂ ಮನೋಧರ್ಮ ತಿಳಿದುಕೊಳ್ಳುವುದು ಇಂದಿನ ಪೀಳಿಗೆಗೆ ಅಗತ್ಯ.
ಬ್ರಿಟಿಷರ ವಿರುದ್ಧ ಭಾರತದಲ್ಲೇ ಅಲ್ಲ. ಹೊರದೇಶಗಳಲ್ಲೂ ಹೋರಾಟಗಳು ನಡೆದವು. ದುರಂತ ಸಾಹಸ ಪ್ರಕರಣಗಳು ನೂರಾರು. ತಿರುವಾಂಕೂರು ಚಂಪಕರಮಣ ಪಿಳ್ಳೆ, ಗದರ್ ಪಕ್ಷವನ್ನು ಕಟ್ಟಿದ ಹರದಯಾಳ್, ಜರ್ಮನಿ-ಭಾರತದ ಹೋರಾಟದಲ್ಲಿ ಭಾಗವಹಿಸಿದ ತಾರಕನಾಥ ದಾಸ್, ಬರಕತ್ ಉಲ್ಲಾ, ಚಂದ್ರಕಾಂತ್ ಚಕ್ರವರ್ತಿ, ಹೇರಂಬಲಾಲ್ ಗುಪ್ತ ಪ್ರಮುಖರು. ಈ ಕ್ರಾಂತಿಕಾರರ ಹೋರಾಟದ ತುಟ್ಟತುದಿ ನೇತಾಜಿ ಸುಭಾಷ್‍ಚಂದ್ರ ಬೋಸರ ಆಜಾದ್ ಹಿಂದ್ ಫೌಜ್. ಇಂತಹ ಸಂಘಟನೆಗಳ ಹೋರಾಟದ ಮಜಲುಗಳನ್ನು ನೆನಪಿಸಿಕೊಳ್ಳುವುದೇ ಪವಿತ್ರ ಕಾರ್ಯ ಮುಂಬೈ ಪ್ರಾಂತ್ಯದ ಕೊಲಾಬಾ ಜಿಲ್ಲೆಯ ಶಿರಧೋರಣ ಹಳ್ಳಿಯ ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತ ಫಡ್ಕೆ ಬ್ರಿಟಷರ ವಿರುದ್ಧ ಬಂಡಾಯದ ಧ್ವಜ ಹಾರಿಸಿ ಎದುರಾಳಿಗಳ ಎದೆ ನಡುಗುವಂತೆ ಮಾಡಿದ ಧೀರ. ಬ್ರಿಟಿಷರು ಈತನನ್ನು ಏಡನ್ ನೆಲ ಮಾಳಿಗೆಯಲ್ಲಿ ಬಂಧಿಸಿಟ್ಟರು. ಆದರೆ, ಆತ ಯಾವುದಕ್ಕೂ ಜಗ್ಗಲಿಲ್ಲ. ಜೈಲಿನಲ್ಲೇ 1883 ರಲ್ಲಿ ಅಸುನೀಗಿದ.
ಇಂತಹ ವೀರಯೋಧರು ಎಲ್ಲಾ ಕಾಲಕ್ಕೂ ಜನಮಾನಸದಲ್ಲಿ ಉಳಿದಿರುತ್ತಾರೆ. ಪಂಜಾಬ್ ಪಂಚ ನದಿಗಳ ಪವಿತ್ರ ರಾಜ್ಯ. ಲೂಧಿಯಾನ ಜಿಲ್ಲೆಯ ಭೈನಿ ಗ್ರಾಮದಲ್ಲಿ ರಾಮ್‍ಸಿಂಗ್ ಕುಕ ವೀರ ಯೋಧ ಜನಿಸಿದ. ಆತ ರಣಜಿತ್ ಸಿಂಗ್ ನೊಂದಿಗೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದವನು. ಸ್ವಾಮಿ ರಾಮದಾಸರ ಸಂಪರ್ಕದಿಂದ ರಾಮ್‍ಸಿಂಗ್ ಸದ್ಗುರುವಾದ. ಅವರೇ ನಾಮಧಾರಿಗಳು ಗುರು. ನಾಮಧಾರಿ ಸಂಪ್ರದಾಯಕ್ಕೆ ಅನುಗುಣವಾಗಿ ಗೋಪೂಜೆಯನ್ನು ಜಾರಿಗೆ ತಂದರು. ಈ ನಾಮಧಾರಿಗಳೇ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ಬ್ರಿಟಿಷರು ಇವರನ್ನು ಫಿರಂಗಿಯ ಬಾಯಿಗೆ ಕಟ್ಟಿ ದೇಹ ಛಿದ್ರಛಿದ್ರವಾಗುವಂತೆ ಮಾಡಿದರು. ಕೋಟಿಗೊಬ್ಬ ಕಾಲಪುರುಷ ಎಂಬಂತೆ 1883 ರಲ್ಲಿ ನಾಸಿಕ್ ಬಳಿ ಬಾಗೂರು ಎಂಬ ಹಳ್ಳಿಯಲ್ಲಿ ವೀರ ಸಾವರ್ಕರ್ ಜನಿಸಿದರು. ಸ್ವಾಮಿ ದಯಾನಂದ ಸರಸ್ವತಿ, ಕ್ರಾಂತಿ ಪುರುಷ ವಾಸುದೇವ ಫಡ್ಕೆ ಸ್ವರ್ಗಸ್ಥರಾದ ವರ್ಷವೇ ಸಾವರ್ಕರ್ ಜನಿಸಿದರು. ತಮ್ಮ ಹದಿನಾರನೇ ವಯಸ್ಸಿನಲ್ಲಿ ದೇಶದ ಹೋರಾಟಕ್ಕೆ ಎಲ್ಲವನ್ನೂ ಅರ್ಪಿಸಿದರು. ಅಷ್ಟೇ ಅಲ್ಲ ! 1907 ರಲ್ಲಿ ಲೋಕಮಾನ್ಯ ಬಾಲ ಗಂಗಾಧರ ತಿಲಕರು ಹೋರಾಟದ ನಾಯಕತ್ವ ವಹಿಸಿದ್ದರು. ತಿಲಕರ `ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಎಂಬ ಸಂದೇಶ ಎಲ್ಲರ ಹೃದಯದಲ್ಲಿ ಹೋರಾಟದ ಕಿಚ್ಚು ಹಚ್ಚಿತು. ತಿಲಕರನ್ನು ರಾಜದ್ರೋಹಿ ಎಂದು ಜೈಲಿಗೆ ಕಳುಹಿಸಿದ್ದು ಎಲ್ಲರ ಹೃದಯಗಳನ್ನು ಕಲಕಿದವು. ವಂಗ ವಿಭಜನೆ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿಯಾಯಿತು.
ಸ್ವಾತಂತ್ರ್ಯ ಹೋರಾಟದ ಪುಟಗಳಲ್ಲಿ ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಜೀವನವೇ ದೊಡ್ಡ ಅಧ್ಯಾಯ. ಬೋಸ್ ಅವರು ಭಾರತದ ಹೋರಾಟಕ್ಕೆ ಜರ್ಮನಿ, ಜಪಾನ್, ರಷ್ಯಾ ನೆರವು ಪಡೆದವರು. ಭಾರತೀಯ ನಾಗರೀಕ ಸೇವೆ ( ಐ ಸಿ ಎಸ್ ) ಅಧಿಕಾರಿಯಾಗಿ ಕೆಲಸ ಮಾಡದೇ ರಾಜೀನಾಮೆ ನೀಡಿ ಹೊರದೇಶಗಳಲ್ಲಿ ಸುತ್ತಾಡಿ ಸಶಸ್ತ್ರ ಹೋರಾಟಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡವರು. ಹೀಗಾಗಿ ಬ್ರಿಟಿಷರಿಗೆ ಭಾರತೀಯರ ಹೋರಾಟದ ಬಲ ಏನು ಎಂಬುದು ತಿಳಿಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಿಟಿಷರನ್ನು ಹೆಣೆಯಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದವರು. ಭಾರತೀಯ ರಾಷ್ಟ್ರೀಯ ಸೇನೆ ಕಟ್ಟಿದವರು. ಭಾರತೀಯರಿಗೆ ಸಶಸ್ತ್ರ ತರಬೇತಿ ಬೇಕು ಎಂದು ಪ್ರತಿಪಾದಿಸಿದವರು.
ಭಾರತೀಯ ಯೋಧರು ಮೊದಲ ಮಹಾ ಯುದ್ಧ ಮತ್ತು ಎರಡನೇ ಮಹಾ ಯುದ್ಧದಲ್ಲಿ ಬ್ರಿಟಿಷರ ಪರ ಹೋರಾಟ ನಡೆಸಿದರು. ಬ್ರಿಟಿಷ್ ದೊರೆ ಪರ ಹೋರಾಟ ನಡೆಸಿದರೆ ನಮಗೆ ಸ್ವಾತಂತ್ರ್ಯ ಲಭಿಸುವುದು ಸುಲಭವಾಗುತ್ತದೆ ಎಂದು ಭಾರತೀಯರು ಭಾವಿಸಿದ್ದರು. ಎರಡನೇ ಮಹಾ ಯುದ್ಧದಲ್ಲಿ ಸಿಂಗಪುರ ಮತ್ತು ಹಾಂಕಾಂಗ್‍ನಲ್ಲಿ ಜಪಾನ್ ವಿರುದ್ಧ ಹೋರಾಟ ನಡೆಯಿತು. ಭಾರತ, ಪಾಕ್, ಬಾಂಗ್ಲಾ ಒಳಗೊಂಡ ಅಂದಿನ ಭಾರತದ 87 ಸಾವಿರ ಸೈನಿಕರು ಯುದ್ಧದಲ್ಲಿ ಭಾಗವಹಿಸಿದ್ದರು. ಗಾಂಧಿ ಅಹಿಂಸೆ, ಅಸಹಕಾರದ ಮೂಲಕ ಹೋರಾಟ ನಡೆಸಿದರೆ ಸಾವಿರಾರು ಜನ ಕ್ರಾಂತಿ ಪಥದಲ್ಲಿ ತಮ್ಮ ಹೋರಾಟ ಮುನ್ನಡೆಸಿದರು. ಬ್ರಿಟಿಷರು ಅಧಿಕಾರ ಬಿಟ್ಟು ಹೋಗಲು ಇವುಗಳು ಕಾರಣ ಎಂಬುದಂತೂ ನಿಜ. ಇದೀಗ ಜಗತ್ತಿಗೆ ಕೈಬಿಡಲಾಗದ ದೇಶ ಎಂದರೆ ಭಾರತ.
ದೇಶದೊಳಗೆ ಬದಲಾವಣೆ ಏನು ಬಂದಿದೆ ? ಎಂದು ಕೇಳುವವರೇ ಹೆಚ್ಚು. ಈ ಪ್ರಶ್ನಿಸುವ ಅಧಿಕಾರವೇ ನಮಗೆ ನಿಜವಾದ ಸ್ವಾತಂತ್ರ್ಯ ಎಂಬುದನ್ನು ನಾವು ಮರೆತಿದ್ದೇವೆ. ಜಾಗತಿಕ ಮಟ್ಟದಲ್ಲಿ ಪ್ರಬಲ ದೇಶಗಳೂ ಸೇರಿದಂತೆ ಎಲ್ಲ ದೇಶಗಳು ಭಾರತವನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಹೋಗಿದೆ. ರಷ್ಯಾ- ಅಮೆರಿಕ- ಚೀನಾ ಮೂರು ಶಕ್ತಿ ಕೇಂದ್ರಗಳು. ಈ ಮೂರೂ ದೇಶಗಳೂ ಭಾರತವನ್ನು ಕಡೆಗಣಿಸುವ ಹಂತದಲ್ಲಿ ಈಗ ಉಳಿದಿಲ್ಲ. ಇದಕ್ಕೆ ಭಾರತದ ವಿದೇಶಾಂಗ ನೀತಿಯಲ್ಲಾದ ಬದಲಾವಣೆಯೇ ಕಾರಣ.
ಹಿಂದಿನಿಂದಲೂ ನಾವು ಅಲಿಪ್ತ ನೀತಿಯನ್ನು ಅನುಸರಿಸಿಕೊಂಡು ಬಂದಿದ್ದೇವೆ. ಅದನ್ನು ಈಗಲೂ ಕೈಬಿಟ್ಟಿಲ್ಲ. ಆದರೆ, ಒಂದು ಬದಲಾವಣೆ ಎಂದರೆ `ಏನೇ ಆಗಲಿ ಭಾರತ ಮೊದಲು’. ನಮ್ಮ ದೇಶದ ಹಿತಕ್ಕೆ ಧಕ್ಕೆ ತರುವ ಯಾವ ಕ್ರಮವನ್ನೂ ನಾವು ಒಪ್ಪಿಕೊಳ್ಳುವುದಿಲ್ಲ. ಅಲಿಪ್ತ ನೀತಿ ಕೈಲಾಗದವರ ಮಾತು ಎಂಬ ವಾದ ಮೊದಲಿನಿಂದಲೂ ಇತ್ತು. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಯಾವ ದೇಶವೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಈ ಹಿಂದೆ ನಮ್ಮ ನಾಯಕರು ಮಧುಚಂದ್ರಕ್ಕೆ ಹೋದಂತೆ ವಿದೇಶಗಳಿಗೆ ಹೋಗಿ ಬರುತ್ತಿದ್ದರು. ಆದರೆ, ಈಗ ವಿದೇಶಕ್ಕೆ ಹೋಗಬೇಕು ಎಂದರೆ ನಿಗದಿತ ಗುರಿ ಇದ್ದೇ ಇರುತ್ತದೆ. ಅದನ್ನು ಸಾಧಿಸುವವರೆಗೆ ನಮ್ಮ ನಾಯಕರು ಹಿಂದಕ್ಕೆ ಬರುವುದಿಲ್ಲ. ನಮ್ಮ ದೇಶದ ಬಗ್ಗೆ ಬೇರೆ ನಾಯಕರು ಅಪಸ್ವರ ಎತ್ತಿದರೆ ಅಲ್ಲೇ ಉತ್ತರ. ಮೀನಾ-ಮೇಷ ಎಣಿಸುವ ಪ್ರಶ್ನೆಯೇ ಇಲ್ಲ. ಶಾಂತಿ-ಅಭಿವೃದ್ಧಿ ಮಾತುಕತೆಯಾದಲ್ಲಿ ಅದಕ್ಕೆ ಎಲ್ಲಾ ಸಹಕಾರ. ಗಡಿಯಲ್ಲಿ ಕೆಣಕಿದರೆ ಮುಖಮೂತಿ ನೋಡದೆ ತಕ್ಕ ಶಾಸ್ತಿ. ಅವರು ಮತ್ತೆ ಈ ಕಡೆ ತಲೆಎತ್ತಿ ನೋಡಬಾರದು. ಸರ್ಜಿಕಲ್ ಸ್ಟ್ರೈಕ್ ಒಮ್ಮೆ ನಡೆಸಿದ್ದು ಇಡೀ ಜಗತ್ತಿಗೆ ದೊಡ್ಡ ಪಾಠ. ನಾವು ಶಾಂತಿ ಬಯಸುತ್ತೇವೆ. ಆದರೆ, ನಮ್ಮ ಸೇನೆಯನ್ನು ಬಲಿಷ್ಠಗೊಳಿಸದೇ ಇರುವುದಿಲ್ಲ. ಹಿಂದೆ ನಮ್ಮ ನೌಕಾದಳ ದುರ್ಬಲವಾಗಿತ್ತು. ಅದನ್ನು ಈಗ ಪ್ರಬಲಗೊಳಿಸಿರುವುದಲ್ಲದೆ ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಚೀನಾ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು 13 ದೇಶಗಳೊಂದಿಗೆ ಸೇರಿ ಜಗತ್ತಿಗೆ ತಿಳಿಯುವಂತೆ ಹೇಳುವುದರಲ್ಲಿ ಭಾರತ ಸಫಲವಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲೇ ಯುದ್ಧವಾಗಲಿ ಭಾರತ ತನ್ನದೇ ಆದ ನಿಲುವು ಹೊಂದಿರುತ್ತದೆ ಎಂಬುದನ್ನು ಅಮೆರಿಕವೂ ಸೇರಿದಂತೆ ಎಲ್ಲಾ ದೇಶಗಳು ಒಪ್ಪಿಕೊಂಡಿವೆ. ನಾವು ಯಾವ ದೇಶದ ಹಿಂಬಾಲಕರಲ್ಲ. ನಾವು ಯಾವ ದೇಶಕ್ಕೂ ನಾಯಕರಲ್ಲ. ಎಲ್ಲರೂ ಸಮಾನರು ಎಂಬ ಧೋರಣೆಯಲ್ಲೇ ಪ್ರತಿಯೊಂದು ಸಮಸ್ಯೆಯನ್ನು ಎದುರಿಸುತ್ತ ಬರಲಾಗಿದೆ. ರಷ್ಯಾ – ಉಕ್ರೇನ್ ಯುದ್ಧ ಆರಂಭವಾದ ಕೂಡಲೇ ಎಲ್ಲಾ ದೇಶಗಳೂ ರಷ್ಯಾವನ್ನು ಖಂಡಿಸಿದವು. ಪಾಕ್ ಒಂದು ಹೆಜ್ಜೆ ಮುಂದೆ ಹೋಗಿ ರಷ್ಯಾಗೆ ಸಂಪೂರ್ಣ ಬೆಂಬಲ ಘೋಷಿಸಿ ಅಮೆರಿಕದೊಂದಿಗೆ ದ್ವೇಷ ಕಟ್ಟಿಕೊಂಡಿತು. ಭಾರತ ತಟಸ್ಥ ಧೋರಣೆ ತಳೆದರೂ ಯುದ್ಧ ನಿಲ್ಲಬೇಕು ಎಂದು ಎಲ್ಲ ಅಂತಾರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಪ್ರತಿಪಾದಿಸಿತು. ಇದರಿಂದ ರಷ್ಯಾ- ಅಮೆರಿಕ ಎರಡೂ ದೇಶಗಳು ಭಾರತದ ನಿಲುವನ್ನು ಸ್ವಾಗತಿಸುವಂತಾಯಿತು. ಈ ಯುದ್ಧದಿಂದ ಹಣದುಬ್ಬರ ಮತ್ತು ಬೆಲೆ ಏರಿಕೆ ತೀವ್ರಗತಿಯಲ್ಲಿ ಸಾಗಿದ್ದು ನಿಜ. ಆದರೆ, ಅದನ್ನು ನಿಯಂತ್ರಿಸುವುದರಲ್ಲಿ ಸಫಲರಾಗಿದ್ದೇವೆ. ಶ್ರೀಲಂಕಾ ಮತ್ತು ಪಾಕ್ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ನಮ್ಮ ಪರಿಸ್ಥಿತಿ ಅವರಿಗೆ ಹೋಲಿಸಿದಲ್ಲಿ ಉತ್ತಮ.
ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಕೊರೊನಾ ಸೋಂಕು ಎರಡು ವರ್ಷಗಳ ಹಿಂದೆ ಕಂಡು ಬಂದಾಗ ಎಲ್ಲರೂ ಚೀನಾವನ್ನು ದೂಷಿಸಿದರು. ಭಾರತ ಕೊರೊನಾಗೆ ಲಸಿಕೆ ಕಂಡು ಹಿಡಿಯುವುದರಲ್ಲಿ ನಿರತವಾಯಿತು. ಇದರಿಂದ ಇಡೀ ಜಗತ್ತಿನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಲಸಿಕೆ ನೀಡಲು ಸಾಧ್ಯವಾಯಿತು. ಒಂದು ನೂರು ದೇಶಗಳಿಗೆ 65 ದಶಲಕ್ಷ ಲಸಿಕೆ ನೀಡಲು ಸಾಧ್ಯವಾಯಿತು. ಆರ್ಥಿಕವಾಗಿ ಎಲ್ಲ ದೇಶಗಳು ಕುಗ್ಗಿ ಹೋದವು. ಆದರೆ ಈಗ ಚೇತರಿಕೆ ವೇಗವಾಗಿ ಕಂಡು ಬರುತ್ತಿರುವುದು ಭಾರತದಲ್ಲಿ ಮಾತ್ರ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಕಡು ಬಡವರಿಗೆ ಉಚಿತ ಆಹಾರ ಒದಗಿಸಿದ್ದು ಇಡೀ ಜಗತ್ತಿನಲ್ಲೇ ಅತಿ ದೊಡ್ಡ ಯೋಜನೆ ಭಾರತದಲ್ಲಿ ಮಾತ್ರ. ಇದನ್ನು ಅಮೆರಿಕ ಕೂಡ ಶ್ಲಾಘಿಸಿದೆ.
ಭಾರತವು ತನ್ನ ಗಡಿಯಲ್ಲಿ ಒಂದು ಇಂಚು ನೆಲವನ್ನು ಬಿಟ್ಟು ಕೊಡುವುದಿಲ್ಲ ಎಂಬುದನ್ನು ಕಾಶ್ಮೀರ ಹಾಗೂ ಚೀನಾ ಗಡಿಯಲ್ಲಿ ನಾವು ಸಾಬೀತುಪಡಿಸಿದ್ದೇವೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಪಡಿಸಿದಾಗ ದೇಶದಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಏನೂ ಆಗಲಿಲ್ಲ. ಜಗತ್ತಿನಲ್ಲಿ ಎಲ್ಲೇ ಗಲಾಟೆಯಾಗಲೀ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಮೊದಲಿನಿಂದಲೂ ಸರ್ಕಾರಗಳು ಪರಿಣಾಮಕಾರಿಯಾಗಿ ಕೈಗೊಳ್ಳುತ್ತಾ ಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೀಗ ಅಂತಾರಾಷ್ಟ್ರೀಯ ಮಟ್ಟದ ನಾಯಕರಾಗಿ ಬೆಳೆದಿದ್ದಾರೆ. ಮೋದಿ ಅವರ ನಿರ್ಧಾರಗಳು ದೀರ್ಘಕಾಲಿಕ. ಈಗ ನಾವು ಅತ್ಯಂತ ಪ್ರಭಾವಶಾಲಿ ಸೇನೆಯನ್ನು ಹೊಂದಿದ್ದೇವೆ.
ಇತ್ತೀಚೆಗೆ ಎಂದರೆ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವ ಅಚರಿಸಲಾಯಿತು. ಪಾಕ್ ನೊಂದಿಗೆ ಯುದ್ಧಗಳಲ್ಲಿ ನಾವು ಜಯಗಳಿಸಿದ್ದೇವೆ. ಭಾರತವು 1971 ರಲ್ಲಿ ನಡೆದ ಬಾಂಗ್ಲಾ ವಿಮೋಚನೆ ಯುದ್ಧದಲ್ಲಿ ಪಾಕ್‍ಗೆ ಬುದ್ಧಿ ಕಲಿಸಲು ಸಾಧ್ಯವಾಯಿತು. ಡಿಸೆಂಬರ್ 16, 1971 ಪಾಕ್ ಸೇನಾ ಮುಖ್ಯಸ್ಥ ಎ.ಎ.ಕೆ. ನಿಯಾಜಿ ಭಾರತದ ಲೆಫ್ಟಿನೆಂಟ್ ಜನರಲ್ ಅರೋರ ಅವರಿಗೆ ಬೇಷರತ್ ಶರಣಾದರು. ಕಾರ್ಗಿಲ್ ಬಳಿ ಉಗ್ರವಾದಿಗಳ ಮೂಲಕ 1999 ರಲ್ಲೂ ಪಾಕ್ ನುಸುಳಲು ಯತ್ನಿಸಿದಾಗ ನಮ್ಮ ಯೋಧರು ದಿಟ್ಟತನದಿಂದ ಶತ್ರುಪಡೆಯನ್ನು ಹಿಮ್ಮೆಟ್ಟಿಸಿದರು. ಈ ಘಟನೆಯಿಂದ 527 ಸೈನಿಕರನ್ನು ನಾವು ಕಳೆದುಕೊಂಡೆವು. ಇದರಲ್ಲಿ 1363 ಸೈನಿಕರು ಗಾಯಗೊಂಡರು. ಆದರೂ ನಾವು ಧೃತಿಗೆಡಲಿಲ್ಲ. ಏಷ್ಯಾ ಖಂಡದಲ್ಲಿ ಭಾರತ ತನ್ನ ಅಧೀನದಲ್ಲಿದೆ ಎಂದು ತೋರಿಸಿಕೊಳ್ಳಲು ಚೀನಾ ಹವಣಿಸುತ್ತಿದೆ. ಇದಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ನಮ್ಮ ಸಾರ್ವಭೌಮತ್ವವನ್ನು ಕಾಯ್ದುಕೊಳ್ಳುವ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ವಿಚಾರವೇ ಇಲ್ಲ. ಯುವ ಜನಾಂಗವನ್ನು ಮುಂದಿನ ದಿನಗಳಿಗೆ ಸಜ್ಜುಗೊಳಿಸಬೇಕು. ನಮ್ಮ ಆರ್ಥಿಕ-ಸಾಮಾಜಿಕ ಬೆಳವಣಿಗೆಯೊಂದಿಗೆ ಗಡಿ ರಕ್ಷಣೆ ಕಾರ್ಯವೂ ಮಹತ್ವ ಪಡೆದಿದೆ ಎಂಬುದರಲ್ಲಿ ಸಂದೇಹವಿಲ್ಲ.
ಆಹಾರ ಉತ್ಪಾದನೆಯಲ್ಲಿ ಕ್ರಾಂತಿ
ಬ್ರಿಟಿಷರು ಬಿಟ್ಟು ಹೋದ ಮೇಲೆ ನಾವು ಮಾಡಿದ ಸಾಧನೆ ಎಂದರೆ ಹಸಿರು ಕ್ರಾಂತಿ. ಸ್ವಾತಂತ್ರ್ಯ ಬಂದ ದಿನದಿಂದ 1960 ವರೆಗೆ ಪ್ರತಿ ಎರಡು ವರ್ಷಕ್ಕೊಮ್ಮೆ ದೇಶವನ್ನು ಹಾಗೂ ರಾಜ್ಯವನ್ನು ಬರಗಾಲ ಕಾಡುತ್ತಿತ್ತು. ಅದರಲ್ಲೂ ಉತ್ತರ ಕರ್ನಾಟಕದ ಜನ ಕುಡಿಯಲು ನೀರಿಲ್ಲದೆ ಗುಳೆ ಹೋಗುತ್ತಿದ್ದರು. ಈಗ ಇಡೀ ಚಿತ್ರಣವೇ ಬದಲಾಗಿದೆ.
ಕೃಷಿ ಆರ್ಥಿಕತೆಯ ಪಿತಾಮಹ ಡಾ ಎಂ. ಎಸ್. ಸ್ವಾಮಿ ನಾಥನ್, ನಾರ್ಮನ್ ಬೋರ್ಲಾಗ್, ದಿಲ್‍ಬಾಗ್ ಸಿಂಗ್ ಅಥವಾಲ್ ಅವರನ್ನು ನಾವು ತಂಪು ಹೊತ್ತಿನಲ್ಲಿ ಸ್ಮರಿಸಬೇಕು. ಈ ಮಹನೀಯರು ದೇಶದ ಹಸಿರುಕ್ರಾಂತಿಗೆ ಕಾರಣಕರ್ತರು. ಡಾ ವರ್ಗೀಸ್ ಕುರಿಯನ್ ಅವರ ಪರಿಶ್ರಮದಿಂದ ದೇಶದಲ್ಲಿ ಹಾಲಿನ ಹೊಳೆ ಹರಿಯಿತು. ಭತ್ತ ( ಅಕ್ಕಿ ) ಗೋಧಿ, ಜೋಳದ ಉತ್ಪಾದನೆ ಅಧಿಕಗೊಂಡಿತು. ನಮ್ಮ ರೈತರು ಮತ್ತು ಕೃಷಿ ವಿಜ್ಞಾನಿಗಳು ಕೈಜೋಡಿಸಿದ್ದರಿಂದ ಇವೆಲ್ಲವನ್ನೂ ಸಾಧಿಸಲು ಸಾಧ್ಯವಾಯಿತು. ಈಗ ನಾವು ಹೊರದೇಶಕ್ಕೆ ಆಹಾರ ಧಾನ್ಯ ರಫ್ತು ಮಾಡುವ ಹಂತ ತಲುಪಿದ್ದೇವೆ. ಇದಕ್ಕೆ ನಾವು ನಮ್ಮ ನೇಗಿಲಯೋಗಿಗಳಿಗೆ ಶಿರಬಾಗಿ ನಮಿಸಬೇಕು. ಅದೇ ರೀತಿ ನಮ್ಮ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ( ಐಟಿ ಬಿಟಿ ) ಕಂಪನಿಗಳು ವಿಶ್ವಖ್ಯಾತಿ ಪಡೆದು ಕರ್ನಾಟಕ್ಕೆ ವಿದೇಶಿ ನೇರ ಬಂಡವಾಳ ಹೆಚ್ಚು ಹರಿದು ಬರುವಂತೆ ಮಾಡುವುದರಲ್ಲಿ ಸಫಲತೆ ಕಂಡಿವೆ.
ಸಂವಿಧಾನ ರಕ್ಷಣೆಯಲ್ಲಿ ಇಡೀ ಜಗತ್ತಿನಲ್ಲಿಯೇ ನಾವು ಮೊದಲಿಗರು. ಸಂವಿಧಾನದಲ್ಲಿ ವಿಧಿ 356 ಪ್ರಕಾರ ರಾಷ್ಟ್ರಪತಿಗಳು ಯಾವುದೇ ರಾಜ್ಯದ ವಿಧಾನಸಭೆ ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲು ಅವಕಾಶವಿದೆ. 2016 ವರೆಗೆ 124 ಬಾರಿ ಈ ಅಧಿಕಾರದ ದುರುಪಯೋಗ ಆಗಿದೆ. ಸಂವಿಧಾನ ರಚನೆ ಕಾಲದಲ್ಲೇ ಡಾ ಬಿ. ಆರ್. ಅಂಬೇಡ್ಕರ್ ಇದರ ಬಗ್ಗೆ ಎಚ್ಚರಿಕೆ ಮಾತನಾಡಿದ್ದರು. ಕರ್ನಾಟಕದಲ್ಲಿ ಎಸ್.ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಆಡಳಿತ ಪಕ್ಷದ ಒಂದು ಗುಂಪು ಬಂಡಾಯ ಎದ್ದಿತು. ಬೊಮ್ಮಾಯಿ ಅವರು ವಿಶ್ವಾಸ ಮತ ಪಡೆಯಲು ವಿಧಾನಸಭೆ ಕರೆದಿದ್ದರು. ಆದರೆ, ಅಂದಿನ ರಾಜ್ಯಪಾಲರು ಅದಕ್ಕೆ ಅವಕಾಶ ಕೊಡಲಿಲ್ಲ. ರಾಜ್ಯ ಸರ್ಕಾರವನ್ನು ವಜಾ ಗೊಳಿಸಿ ಏಪ್ರಿಲ್ 1989 ರಂದು ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು. ಎಸ್ ಆರ್ ಬೊಮ್ಮಾಯಿ ಅವರು ಸರ್ವೋಚ್ಛ ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಶ್ನಿಸಿದರು. ಸರ್ವೋಚ್ಛ ನ್ಯಾಯಾಲಯದ ಒಂಭತ್ತು-ಸದಸ್ಯರ ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ ಯಾವುದೇ ಸರ್ಕಾರದ ಹಣೆಬರಹ ರಾಜಭವನದ ಹುಲ್ಲು ಹಾಸಿನ ಮೇಲೆ ನಿರ್ಧಾರವಾಗುವಂತಿಲ್ಲ ರಾಜ್ಯಪಾಲರು ಶಾಸಕರ ತಲೆ ಎಣಿಸುವಂತಿಲ್ಲ. ಎಲ್ಲವೂ ವಿಧಾನಸಭೆಯಲ್ಲೇ ತೀರ್ಮಾನ ಆಗಬೇಕು ಎಂಬ ಐತಿಹಾಸಿಕ ತೀರ್ಪು ನೀಡಿತು. ಇದು ಭಾರತಕ್ಕೆ ಕರ್ನಾಟಕ ನೀಡಿರುವ ಕೊಡುಗೆ !
ವಿದ್ಯುತ್ ರಂಗಕ್ಕೆ ಕರ್ನಾಟಕದ ಕೊಡುಗೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಗಾಲಾಮ್ಲದ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದರೆ ನವೀಕರಣ ಇಂಧನ ಬಳಸಬೇಕು. ಇದರಿಂದ ವಿದ್ಯುತ್ ಉತ್ಪಾದನೆ ದರ ಅಧಿಕಗೊಳ್ಳುವುದು ಸಹಜ. ಆದರೆ, ಪರಿಸರ ಮೇಲಾಗುವ ಪರಿಣಾಮವನ್ನು ತಪ್ಪಿಸಬಹುದು. ನಮಗೆ ವಿದ್ಯುತ್ ಬೇಕು. ಅದರೊಂದಿಗೆ ನಮ್ಮ ಪರಿಸರದ ಮೇಲೆ ಯಾವುದೇ ರೀತಿಯಲ್ಲೂ ನಕಾರಾತ್ಮಕ ಪರಿಣಾಮ ಬೀರಬಾರದು. ಇದನ್ನು ಸಾಧಿಸಲು ಈಗ ಹಸಿರು ಜಲಜನಕ ಲಭಿಸಿದೆ. ಈಗ ಪ್ರತಿವರ್ಷ ಜಗತ್ತಿನಲ್ಲಿ 70 ಮಿಲಿಯನ್ ಮೆಟ್ರಿಕ್ ಟನ್ ಜಲಜನಕ ಬಳಕೆಯಾಗುತ್ತಿದೆ. ಇದನ್ನು ಪ್ರಮುಖವಾಗಿ ತೈಲ ಸಂಸ್ಕರಣ, ಅಮೋನಿಯಾ ತಯಾರಿಕೆ, ಉಕ್ಕು ಉತ್ಪಾದನೆ, ರಸಗೊಬ್ಬರ ಮತ್ತು ಆಹಾರ ಸಂಸ್ಕರಣ, ಖನಿಜ ಉತ್ಪಾದನೆಗೆ ವಿದ್ಯುತ್ ಮೂಲವಾಗಿ ಬಳಸಬಹುದು. ಪ್ರತಿ ಅಣುವಿನಲ್ಲೂ ಶೇಕಡಾ 90 ರಷ್ಟು ಜಲಜನಕ ಇದ್ದೇ ಇರುತ್ತದೆ. ನೀರನ್ನು ವಿಭಜಿಸಿ ಜಲ ಜನಕ ಪಡೆಯುವುದು ಈಗ ಅನುಸರಿಸುತ್ತಿರುವ ಪದ್ಧತಿ. ಹಬೆ-ಮಿಥೇನ್ ಸಂಸ್ಕರಣದಿಂದ ವಿದ್ಯುತ್ ಪಡೆಯಬಹುದು. ಜಲಜನಕದೊಂದಿಗೆ ಕಾರ್ಬನ್ ಮಾನಾಕ್ಸೈಡ್ – ಇಂಗಲಾಮ್ಲವೂ ಲಭಿಸುತ್ತದೆ. ಜಲಜನಕವನ್ನು ಇವುಗಳಿಂದ ಬೇರ್ಪಡಿಸಿದರೆ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ.
ಕಲ್ಲಿದ್ದಲು ಬಳಸಿ ಜಲಜನಕ ಉತ್ಪಾದಿಸಬಹುದು. ಆದರೆ, ಇದು ಶುದ್ಧ ರೂಪವಾಗಿರುವುದಿಲ್ಲ. ಪ್ರತಿವರ್ಷ 830 ಮಿಲಿಯ ಟನ್ ಇಂಗಾಲಾಮ್ಲ ಹೊರ ಬರುತ್ತದೆ. ಇದರಿಂದ ಪರಿಸರ ಮಾಲಿನ್ಯ ಅಧಿಕಗೊಳ್ಳುತ್ತದೆ. 40 ಮೆಗಾವ್ಯಾಟ್ ವಿದ್ಯುತ್ ಬಳಸಿ 9.1 ಟನ್ ನೀರನ್ನು ವಿಭಜಿಸಿದರೆ ಎಂಟು ಟನ್ ಆಮ್ಲಜನಕ ಮತ್ತು 1.1 ಟನ್ ಜಲಜನಕ ಬರುತ್ತದೆ. ಕಲ್ಲಿದ್ದಲಿಗಿಂತ ಜಲಜನಕ ಮೂರು ಪಟ್ಟು ಹೆಚ್ಚು ವಿದ್ಯುತ್ ನೀಡುತ್ತದೆ. ಜಲಜನಕ ವಾಹನಗಳೂ ಬಂದಿದೆ. ಅಲ್ಲದೆ, ಈಗ ಬಂದಿರುವ ಬ್ಯಾಟರಿ ಆಧರಿತ ವಾಹನಗಳನ್ನು ಜಲಜನಕದ ಬಳಸಿ ವಿದ್ಯುತ್ ಪಡೆದು ರಿಚಾರ್ಜ್ ಮಾಡಬಹುದು.
ಸೌರ, ಪವನ ವಿದ್ಯುತ್ ಇದ್ದಂತೆ ಜಲ ವಿದ್ಯುತ್ ಕೂಡಾ ಪರಿಸರ ಸ್ನೇಹಿ ಎಂಬುದನ್ನು ವಿಜ್ಞಾನಿಗಳು ಹೇಳುತ್ತಿದ್ದಾರೆ. ಹಿಂದೆ ಜಲ ವಿದ್ಯುತ್ ಯೋಜನೆ ಕೈಗೊಂಡಲ್ಲಿ ಮುಳುಗಡೆ ಪ್ರದೇಶ ಅಧಿಕವಾಗಿರುತ್ತಿತ್ತು. ಕೆಲವು ಬಾರಿ ಗ್ರಾಮಗಳನ್ನೇ ಸ್ಥಳಾಂತರಿಸಬೇಕಿತ್ತು. ಈಗ ತಂತ್ರಜ್ಞಾನ ಬದಲಾಗಿದೆ. ನದಿ ಹರಿಯುವ ಸ್ಥಳದಲ್ಲೇ ಸಣ್ಣ ಬ್ಯಾರೇಜ್ ನಿರ್ಮಿಸಿ ಪ್ರವಾಹದ ಕಾಲದಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಮಾಡುವ ಕಿರು ಜಲ ವಿದ್ಯುತ್ ಯೋಜನೆಗಳು ತಲೆಎತ್ತುತ್ತಿವೆ. ಚೀನಾ ಕೂಡಾ ಇದಕ್ಕೆ ಮಹತ್ವ ನೀಡಿದೆ. ಕೆನಡಾ, ಉರುಗ್ವೆ, ಇಂಡೋನೇಷ್ಯಾ, ನೇಪಾಳ ಜಲ ವಿದ್ಯುತ್ ಕೇಂದ್ರಗಳನ್ನು ಹೊಂದಿವೆ. ನಾರ್ವೆ ಯಂತೂ ಅತಿ ಹೆಚ್ಚು ಜಲ ವಿದ್ಯುತ್ ಹೊಂದಿರುವ ದೇಶವಾಗಿದೆ. ಜಗತ್ತಿನ ಶೇಕಡಾ 14 ರಷ್ಟು ಜನರಿಗೆ ಇನ್ನೂ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಿಲ್ಲ. ನಾವು 2030 ವೇಳೆಗೆ ಸುಸ್ಥಿರ ವಿದ್ಯುತ್ ವ್ಯವಸ್ಥೆ ಹೊಂದಲು ತೀರ್ಮಾನಿಸದ್ದೇವೆ.
ಎರಡು ಸಾವಿರ ವರ್ಷಗಳ ಹಿಂದೆ ಗ್ರೀಸ್‍ನಲ್ಲಿ ನೀರಿನಿಂದ ಚಕ್ರ ತಿರುಗುವಂತೆ ಮಾಡಿ ಆಹಾರ ಧಾನ್ಯಗಳ ಹಿಟ್ಟು ತಯಾರಿಸುವ ಪದ್ಧತಿ ಇತ್ತು. ಜಲ ವಿದ್ಯುತ್ ತಂತ್ರಜ್ಞಾನ ಅತ್ಯಂತ ಹಳೆಯದು. ಅದರಲ್ಲಿ ಹೆಚ್ಚು ಬದಲಾವಣೆ ಏನೂ ಆಗಿಲ್ಲ. ಜಲ ವಿದ್ಯುತ್ ಯೋಜನೆಯ ವಿಶೇಷ ಎಂದರೆ ಯಾವಾಗ ಬೇಕಾದರೂ ವಿದ್ಯುತ್ ಉತ್ಪಾದಿಸಬಹುದು. ಜಲಾಶಯದಲ್ಲಿ ನೀರಿನ ಸಂಗ್ರಹ ಇರಬೇಕು. ಇಡೀ ವರ್ಷ ವಿದ್ಯುತ್ ಸಿಗುವಂತೆ ಜಲ ವಿದ್ಯುತ್ ನಿರ್ವಹಣೆ ಮಾಡಬಹುದು.
ನಮ್ಮ ರಾಜ್ಯದ ಜಲ ವಿದ್ಯುತ್ ಯೋಜನೆಗಳಿಗೆ ಶತಮಾನದ ಇತಿಹಾಸವಿದೆ. ಮೈಸೂರು ಅರಸರ ಕಾಲದಲ್ಲಿ ಸರ್ ಕೆ. ಶೇಷಾದ್ರಿ ಅಯ್ಯರ್ ದಿವಾನರಾಗಿ ಕಾವೇರಿ ನದಿಯನ್ನು ಬಳಸಿಕೊಂಡು ಜಲ ವಿದ್ಯುತ್ ಯೋಜನೆ ಕೈಗೊಳ್ಳಲು ತೀರ್ಮಾನಿಸಿದರು. ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ 1890 ರಲ್ಲಿ ಜಲ ವಿದ್ಯುತ್ ಆರಂಭವಾಗಿತ್ತು. ಅದನ್ನು ತಿಳಿದುಕೊಂಡಿದ್ದ ಮೈಸೂರು ಅರಸರು 1899 ರಲ್ಲಿ ಲಾಬನೀರ್ ಎಂಬ ಎಂಜಿನಿಯರ್ ಅವರನ್ನು ನಯಾಗರ ಹಾಗೂ ಇತರ ಜಲ ವಿದ್ಯುತ್ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಿ ಬರಲು ವಿದೇಶಗಳಿಗೆ ಕಳುಹಿಸಿ ಕೊಟ್ಟರು. ಅದರ ಫಲವಾಗಿ 1900 ರಲ್ಲಿ ಗಗನಚುಕ್ಕಿ ಜಲಪಾತದ ಬಳಿ ಶಿವನಸಮುದ್ರ ಜಲ ವಿದ್ಯುತ್ ಯೋಜನೆ ಕೈಗೊಳ್ಳಲು ಗುದ್ದಲಿಪೂಜೆ ನಡೆಯಿತು. ಅಮೆರಿಕ ಜಿ.ಇ, ಕಂಪನಿ ಜನರೇಟರ್‍ಗಳನ್ನು ಕಳುಹಿಸಿಕೊಟ್ಟಿತು. ಗೋವಾವರೆಗೆ ಹಡಗಿನಲ್ಲಿ ಬಂದ ಯಂತ್ರ ಅಲ್ಲಿಂದ ರೈಲಿನಲ್ಲಿ ಮದ್ದೂರಿಗೆ ಬಂದಿತು. ಅಲ್ಲಿಂದ ಎತ್ತಿನಗಾಡಿ, ಕುದುರೆಗಳನ್ನು ಬಳಸಿ ಪ್ರಯಾಸದಿಂದ ಯಂತ್ರಗಳನ್ನು ರಸ್ತೆಗಳ ಮೂಲಕ ರವಾನಿಸಲಾಯಿತು. ಈ ರೀತಿ ನಿರ್ಮಿಸಿದ ಜಲ ವಿದ್ಯುತ್ ಕೇಂದ್ರ ಈಗಲೂ ಕಾರ್ಯ ನಿರ್ವಹಿಸುತ್ತಿದೆ.
ಕಲ್ಲಿದ್ದಲು, ನೀರು, ಗಾಳಿ, ಸೂರ್ಯ, ಅಣು ವಿದ್ಯುತ್ ಈ ಎಲ್ಲಾ ವಿಧಾನಗಳಿಗಿಂತ ಜಲ ವಿದ್ಯುತ್ ಉತ್ತಮ. ಇದರಲ್ಲಿ ಹೆಚ್ಚು ವಿದ್ಯುತ್ ಪಡೆಯಬಹುದು. ಅದರೊಂದಿಗೆ ಪರಿಸರ ರಕ್ಷಣೆಗೂ ಆದ್ಯತೆ ದೊರೆಯುತ್ತದೆ.
ಇಸ್ರೋ ಸಾಧನೆ !
ಇಸ್ರೋ ಎಂದೇ ಜನಪ್ರಿಯವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಎಂಬುದು ಭಾರತ ಮತ್ತು ಕರ್ನಾಟಕದ ಹೆಮ್ಮೆಯ ಆಧುನಿಕ ದೇವಾಲಯ. ವಿಕ್ರಂ ಸಾರಾಬಾಯ್ ಆರಂಭಿಸಿದ ಈ ಸಂಸ್ಥೆಯನ್ನು ಪ್ರೊ. ಯು.ಆರ್. ರಾವ್, ಸತೀಶ್ ಧವನ್, ಡಾ ಎ ಪಿ ಜೆ ಅಬ್ದುಲ್ ಕಲಾಂ, ರಾಧಾಕೃಷ್ಣ, ಕೆ ಕಸ್ತೂರಿರಂಗನ್, ಮಾಧವನ್ ನಾಯರ್ ಸೇರಿದಂತೆ ಹಲವು ವಿಜ್ಞಾನಿಗಳು ಭದ್ರ ಬುನಾದಿ ಹಾಕಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಸ್ರೋ ಸಂಸ್ಥೆ ಎಂದೂ ಹಿನ್ನಡೆ ಸಾಧಿಸುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ಇಲಾಖೆಗಳ ಪ್ರಧಾನ ಕಚೇರಿಗಳು ದೆಹಲಿಯಲ್ಲಿಯೇ ಇರುತ್ತದೆ. ಕೇಂದ್ರ ಸರ್ಕಾರಕ್ಕೆ ಸೇರಿದ್ದರೂ ಇಸ್ರೋ ಸಂಸ್ಥೆಯ ಪ್ರಧಾನ ಕಚೇರಿ ಬೆಂಗಳೂರು ಆಗಿರುವುದು ವಿಶೇಷ ಮಾತ್ರವಲ್ಲ, ನಮ್ಮ ಅದೃಷ್ಠ ಕೂಡಾ ! ಇಸ್ರೋ ಸಂಸ್ಥೆಯ ಚಟುವಟಿಕೆಗಳು ಹೆಚ್ಚಾಗಿ ದಕ್ಷಿಣ ಭಾರತದಲ್ಲೇ ಕೇಂದ್ರೀಕೃತಗೊಂಡಿದೆ.
ಚಂದ್ರಯಾನ, ಮಂಗಳಯಾನ ಕೈಗೊಂಡ ಸಂಸ್ಥೆಗೆ ಚಿಕ್ಕ ಉಪಗ್ರಹ ಉಡಾವಣೆ ಕಷ್ಟದ ಕೆಲಸವೇನಲ್ಲ. ದೇಶದಲ್ಲಿ ದೂರ ಸಂಪರ್ಕ, ಶಿಕ್ಷಣ, ಕೃಷಿ, ವೈದ್ಯಕೀಯ, ಜೀವ ವೈವಿಧ್ಯ ಅಧ್ಯಯನಕ್ಕೆ ಉಪಗ್ರಹಗಳನ್ನು ಇಸ್ರೋ ಕೊಡುಗೆ ಅಪಾರ ಮತ್ತು ಅಗಾಧ. ಗಡಿ ಭಾಗದಲ್ಲಿ ನಡೆಯುವ ಚಲನವಲನದ ಕಣ್ಣಿಡಲು ಈಗ ಮಿಲಿಟರಿಗೆ ಉಪಗ್ರಹದ ನೆರವು ಇದೆ. ಗಡಿ ಭಾಗದಲ್ಲಿ ಒಂದು ಸಣ್ಣ ಹುಲುಕಡ್ಡಿ ಅಲುಗಾಡಿದರೂ ಗುರುತಿಸುವಷ್ಟು ಅತಿ ಸೂಕ್ಷ್ಮ ಕ್ಯಾಮೆರಾಗಳನ್ನು ಅಳವಡಿಸಿರುವ ಉಪಗ್ರಹ ಬಾಹ್ಯಾಕಾಶ ಸಂಶೋಧನೆಯಲ್ಲಿ ನಮ್ಮ ವಿಜ್ಞಾನಿಗಳು ಸಾಧಿಸಿರುವ ಪ್ರಗತಿ ಬೇರೆ ಯಾವ ದೇಶದಲ್ಲೂ ಇಲ್ಲ ಎಂಬುದು ಅಭಿಮಾನ ಮತ್ತು ಹೆಮ್ಮೆಯ ಸಂಗತಿ.
ನಮ್ಮ ಆರ್ಥಿಕ ಸ್ಥಿತಿ ನೋಡಿಕೊಂಡು ಸಂಶೋಧನೆಗಳನ್ನು ನಡೆಸಬೇಕು. ಆದರೆ, ನಮ್ಮ ವಿಜ್ಞಾನಿಗಳ ಬುದ್ಧಿಮತ್ತೆ ಬೇರೆ ಯಾವ ದೇಶದ ವಿಜ್ಞಾನಿಯ ಪ್ರತಿಭೆಗೆ ಕಡಿಮೆ ಇಲ್ಲ. ಅಮೆರಿಕ. ರಷ್ಯಾ, ಕೆನಡಾ ಮತ್ತು ಚೀನಾಗಿಂತ ಕಡಿಮೆ ದರದಲ್ಲಿ ನಾವು ಉಪಗ್ರಹ ಉಡಾವಣೆ ಮಾಡುವುದರಿಂದ ಎಲ್ಲಾ ಚಿಕ್ಕ ಚಿಕ್ಕ ದೇಶಗಳೂ ತಮ್ಮದೇ ಉಪಗ್ರಹ ಉಡಾವಣೆಗೆ ನಮ್ಮ ಬಳಿ ಬರುವುದು ಸಹಜ.
ಉಪಗ್ರಹವನ್ನು ಶಾಂತಿಗೆ ಬಳಸುವ ಹಾಗೆ ಗಡಿ ರಕ್ಷಣೆಗೂ ಬಳಸಬಹುದು. ಸೈಬರ್ ದಾಳಿ ಈಗ ಅಧಿಕಗೊಂಡಿದೆ. ಅದನ್ನೂ ನಿಯಂತ್ರಿಸುವ ತಂತ್ರಜ್ಞಾನವನ್ನು ನಮ್ಮ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಮುಂಬರುವ ದಿನಗಳಲ್ಲಿ ಜ್ಞಾನಾಧರಿತ ತಂತ್ರಜ್ಞಾನಕ್ಕೆ ಮತ್ತಷ್ಟು ಮಹತ್ವ ಬರಲಿದೆ. ಆಗ ಇಸ್ರೋ, ಭಾರತೀಯ ವಿಜ್ಞಾನ ಮಂದಿರ ( ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ) ದೇಶದ ದೊಡ್ಡ ಆಸ್ತಿಯಾಗಲಿದೆ. ಮುಂದಿನ ಪೀಳಿಗೆ ಇದರಲ್ಲಿ ಸಂಪೂರ್ಣ ಏಕಸ್ವಾಮ್ಯತೆ ಸಾಧಿಸಿಲು ಬೇಕಾದ ವಾತಾವರಣ ರೂಪಿಸುವುದು ಅಗತ್ಯ. ಬಾಹ್ಯಾಕಾಶ ಸಂಶೋಧನೆ ಸಾಗರದ ಅಂತರಾಳದಲ್ಲಿರುವ ಸಂಪತ್ತನ್ನೂ ಕಂಡು ಹಿಡಿಯಬಲ್ಲ ತಂತ್ರಜ್ಞಾನವನ್ನು ಹೊಂದಿದೆ ಎಂಬುದು ಆಶ್ಚರ್ಯಕರವಾಗಿ ಕಂಡರೂ ನಿಜ. ಪರಿಸರದಲ್ಲಾಗತ್ತಿರುವ ಎಲ್ಲಾ ಬದಲಾವಣೆಗಳನ್ನು ಉಪಗ್ರಹ ಸೂಕ್ಷ್ಮವಾಗಿ ಗಮನಿಸಿ ಎಚ್ಚರಿಸುವ ಕೆಲಸ ಮಾಡಲಿದೆ.
ಕರ್ನಾಟಕ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಹತ್ವಪೂರ್ಣ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಿದೆ. ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾರಿಗೊಳಿಸಲಿವೆ. ಅದಕ್ಕಾಗಿ ಯುವ ಪೀಳಿಗೆಯನ್ನು ಸಿದ್ಧಪಡಿಸಲು ಸೂಕ್ತ ಶಿಕ್ಷಣ ಸಂಸ್ಥೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಇದರಲ್ಲಿ ಖಾಸಗಿ ಕ್ಷೇತ್ರದ ಸಹಕಾರ ಮತ್ತು ಸಹಭಾಗಿತ್ವವೂ ಇರುತ್ತದೆ. ಸಮಾಜ ಎಲ್ಲಾ ರಂಗಗಳಲ್ಲಿಯೋ ಮುನ್ನಡೆಯಬೇಕು ಎಂದರೆ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಕೈಜೋಡಿಸಬೇಕು.
ಕರ್ನಾಟಕ ಮತ್ತು ಭಾರತ ಸದಾ ಕಾಲ ಸಮಷ್ಠಿಯತ್ತ ಹಾಗೂ ಸಮೃದ್ಧಿಯತ್ತ ಪಯಣಿಸುತ್ತದೆ. ನಾಡ ಬಾಂಧವರೇ ! ಇದೋ ಬನ್ನಿ ! ರಾಜ್ಯದ ಮತ್ತು ರಾಷ್ಟ್ರದ ಈ ಪಯಣದಲ್ಲಿ ನಾವೂ ಪಾಲುದಾರರಾಗೋಣ ಹಾಗೂ ಭಾಗೀದಾರರಾಗೋಣ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka