ಜೀವವಿಮೆಗೆ ವಿದೇಶಿ ಬಂಡವಾಳದ ಉರುಳು | ನಾ ದಿವಾಕರ
ಭಾರತೀಯ ಜೀವವಿಮಾ ನಿಗಮ (ಎಲ್ ಐಸಿ) ಸ್ವತಂತ್ರ-ಸ್ವಾವಲಂಬಿ ಭಾರತದ ಮುಕುಟಮಣಿ. ಸಮಾಜದ ಕಟ್ಟಕಡೆಯ ಮನುಷ್ಯನನ್ನೂ ತಲಪುವ ಕ್ಷಮತೆ, ಕಾರ್ಯವ್ಯಾಪ್ತಿ ಮತ್ತು ಜನೋಪಯೋಗಿ ಯೋಜನೆಗಳ ಮೂಲಕ ದೇಶದ ಕೋಟ್ಯಂತರ ದುಡಿಯುವ ಜನತೆಯ ಬದುಕಿನಲ್ಲಿ ಆಶಾಕಿರಣವನ್ನು ಮೂಡಿಸಿರುವ ಈ ಸಂಸ್ಥೆ 65 ವರ್ಷಗಳ ಸೇವೆಯನ್ನು ಪೂರೈಸಿ ಇಂದಿಗೂ ಸಹ ಯಶಸ್ಸಿನ ಮೆಟ್ಟಿಲನ್ನು ಏರುತ್ತಲೇ ಇದೆ. ಭಾರತದ ವಿಮಾಕ್ಷೇತ್ರಕ್ಕೆ ಎರಡು ಶತಮಾನದ ಇತಿಹಾಸವಿದೆ. 1818ರಲ್ಲಿ ಸ್ಥಾಪನೆಯಾದ ಓರಿಯೆಂಟಲ್ ಜೀವ ವಿಮಾ ಕಂಪನಿಯಿಂದ ಆರಂಭವಾದ ಈ ಪಯಣ ಹಲವು ಏಳುಬೀಳುಗಳನ್ನು ಕಂಡು, ಭಾರತ ಸ್ವಾತಂತ್ರ್ಯ ಗಳಿಸುವ ವೇಳೆಗೆ ಖಾಸಗಿ ಬಂಡವಾಳಿಗರ ಕೈ ಸೇರಿತ್ತು. ಟೈಮ್ಸ್ ಆಫ್ ಇಂಡಿಯಾ ಸಮೂಹದ ರಾಮಕೃಷ್ಣ ದಾಲ್ಮಿಯಾ ಒಡೆತನದ ಖಾಸಗಿ ವಿಮಾಕಂಪನಿ ಜನರು ಪಾವತಿಸುತ್ತಿದ್ದ ವಿಮೆ ಕಂತುಗಳ ದುರುಪಯೋಗ ಮಾಡುತ್ತಿದ್ದುದನ್ನು ಗಮನಿಸಿದ ನೆಹರೂ ಸರ್ಕಾರ 245 ಖಾಸಗಿ ವಿಮಾ ಕಂಪನಿಗಳನ್ನು ಒಂದುಗೂಡಿಸಿ ಭಾರತೀಯ ಜೀವವಿಮಾ ನಿಗಮವನ್ನು ಸ್ಥಾಪಿಸಿತ್ತು.
1956ರಲ್ಲಿ ಐದು ಕೋಟಿ ರೂ ಬಂಡವಾಳ ಮತ್ತು 200 ಕೋಟಿ ರೂ ವಹಿವಾಟಿನಿಂದ ಆರಂಭವಾದ ಎಲ್‍ಐಸಿ ಇಂದು ದೇಶಾದ್ಯಂತ 2048 ಗಣಕೀಕೃತ ಶಾಖೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಇಂದು ಜೀವವಿಮಾ ನಿಗಮದ ಒಟ್ಟು ಆಸ್ತಿ 31.11 ಲಕ್ಷ ಕೋಟಿ ರೂಗಳಷ್ಟಿದೆ. ದೇಶದ ಒಟ್ಟು ಶೇ 73.1 ವಿಮಾ ವಹಿವಾಟು ಎಲ್‍ಐಸಿ ಪಾಲಾಗಿದೆ. ಒಟ್ಟು 4851 ಕಚೇರಿಗಳು, 11.79 ಲಕ್ಷ ಏಜೆಂಟರು ಮತ್ತು 1.12 ಲಕ್ಷ ನೌಕರರಿಗೆ ಎಲ್‍ಐಸಿ ಜೀವನೋಪಾಯದ ಮಾರ್ಗವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಂಚವಾರ್ಷಿಕ ಯೋಜನೆಗಳ ಮೂಲಕ, ವಾರ್ಷಿಕ ಬಜೆಟ್‍ಗಳ ಮೂಲಕ ಜನತೆಗೆ ಒದಗಿಸುವ ಮೂಲ ಸೌಕರ್ಯಗಳ ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ ಎಲ್‍ಐಸಿಯ ಪಾತ್ರ ಮಹತ್ತರವಾದದ್ದು. 2ನೆಯ ಪಂಚವಾರ್ಷಿಕ ಯೋಜನೆಯಲ್ಲಿ 184 ಕೋಟಿ ರೂಗಳ ಹೂಡಿಕೆಯಿಂದ ಆರಂಭವಾದ ಸಂಸ್ಥೆಯ ಈ ಪಯಣ 2017-22ರ ಯೋಜನೆಯಲ್ಲಿ 28 ಲಕ್ಷ ಕೋಟಿ ರೂಗಳ ಬಂಡವಾಳ ಹೂಡಿದೆ.
ಆದರೆ ನವ ಉದಾರವಾದಿ ಮಾರುಕಟ್ಟೆ ಆರ್ಥಿಕ ನೀತಿಯನ್ನು ಅನುಸರಿಸುತ್ತಾ ಕಾರ್ಪೋರೇಟ್ ದೇಶದ ಸಕಲ ಸಂಪನ್ಮೂಲಗಳನ್ನು, ಬಂಡವಾಳದ ನೆಲೆಗಳನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ಅರ್ಪಿಸಲು ಸಿದ್ಧತೆ ನಡೆಸಿರುವ ಕೇಂದ್ರ ಸರ್ಕಾರ ಈಗ ಜೀವವಿಮಾ ಕಂಪನಿಯ ಸಮಾಧಿಯನ್ನು ಸಿದ್ಧಪಡಿಸುತ್ತಿದೆ. ದೀರ್ಘಕಾಲಿಕ ಬಂಡವಾಳ ಹೂಡಿಕೆಯಲ್ಲಿ ಸ್ಥಳೀಯ ಬಂಡವಾಳದ ಬದಲು ವಿದೇಶಿ ಬಂಡವಾಳ, ತಂತ್ರಜ್ಞಾನ ಮತ್ತು ಕೌಶಲ್ಯವನ್ನು ಸ್ವಾಗತಿಸುವ ಮೂಲಕ ವಿಮಾ ಕ್ಷೇತ್ರ ಮತ್ತು ಆರ್ಥಿಕತೆಯನ್ನು ವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳದ ಪ್ರಮಾಣವನ್ನು ಶೇ 74ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. “ ಭಾರತೀಯ ವಿಮೆ ”ಯ ವ್ಯಾಖ್ಯಾನವನ್ನೇ ತಿದ್ದುಪಡಿ ಮಾಡಿ , ಸೂಕ್ತ ರೀತಿಯಲ್ಲಿ ನಿಯಮಗಳನ್ನು ಬದಲಾಯಿಸುವ ಮೂಲಕ ವಿಮಾ ಕ್ಷೇತ್ರದಲ್ಲಿ ವಿದೇಶಿ ಕಂಪನಿಗಳ ಒಡೆತನಕ್ಕೆ ಅವಕಾಶ ಮಾಡಿಕೊಡಲು ಸರ್ವ ಸಿದ್ಧತೆ ನಡೆದಿದ್ದು, ಕಳೆದ ಬಜೆಟ್‍ನಲ್ಲೇ ಜೀವವಿಮಾ ನಿಗಮದ ಶೇರುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿತ್ತು. 2000ದಲ್ಲಿ ವಾಜಪೇಯಿ ಸರ್ಕಾರ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಪ್ರಪ್ರಥಮವಾಗಿ ಅವಕಾಶ ನೀಡಿ ಶೇ 26ರಷ್ಟು ನಿಗದಿಪಡಿಸಿತ್ತು. 2015ರಲ್ಲಿ ಮನಮೋಹನ್‍ಸಿಂಗ್ ಇದನ್ನು ಶೇ 49ಕ್ಕೆ ಹೆಚ್ಚಿಸಿತ್ತು.
ವಿಮೆ ವಹಿವಾಟನ್ನು ಅಭಿವೃದ್ಧಿಪಡಿಸಲು ಖಾಸಗಿ ಕಂಪನಿಗಳು ಹೊಸ ಅವಿಷ್ಕಾರಗಳನ್ನು ಅನುಸರಿಸುತ್ತಿದ್ದು ಇನ್ನೂ ಹೆಚ್ಚಿನ ಬಂಡವಾಳ ಹೂಡಿಕೆ ಅವಶ್ಯವಿದೆ ಎಂದು ಎಸ್‍ಬಿಐನ ಒಂದು ವಿಶ್ಲೇಷಣೆ ಹೇಳುತ್ತದೆ. ಜೀವವಿಮೆಯು ಭಾರತದ ಗ್ರಾಮಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗಬೇಕಿದ್ದು, ಈ ಹಿನ್ನೆಲೆಯಲ್ಲೇ ಈ ವಿದೇಶಿ ನೇರ ಬಂಡವಾಳ ಹೂಡಿಕೆಯ ಮೂಲಕ ಖಾಸಗಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಅನಿವಾರ್ಯವಾಗಿದೆ ಎಂದು ಈ ವಿಶ್ಲೇಷಣೆಯಲ್ಲಿ ಹೇಳಲಾಗಿದೆ. 2019ರ ಒಂದು ವರದಿಯ ಅನುಸಾರ ಭಾರತದಲ್ಲಿ ಜೀವವಿಮೆಯ ಒಳಹೊಕ್ಕುವ ಸಾಮಥ್ರ್ಯ ಶೇ 2.82ರಷ್ಟಿದೆ. ಜಾಗತಿಕ ಸರಾಸರಿ ಶೇ 3.35ರಷ್ಟಿದೆ. ಮಾರ್ಚ್ 2019ರ ವೇಳೆಗೆ ಭಾರತದ ಖಾಸಗಿ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳದ ಪ್ರಮಾಣ ಶೇ 35.5ರಷ್ಟಿದೆ. ಈ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ಮೂಲಕ ವಿಮಾ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸುವ ದೃಷ್ಟಿಯಿಂದ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿಯನ್ನು ಶೇ 74ಕ್ಕೆ ಹೆಚ್ಚಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 15000 ಕೋಟಿ ರೂ ಬಂಡವಾಳ ಹರಿದುಬರುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಅಂಕಿ ಅಂಶಗಳು ಮತ್ತು ಸಮರ್ಥನೆಗಳು ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣುತ್ತವೆ. ಆದರೆ ಈ ನವ ಉದಾರವಾದಿ ನೀತಿಯ ಪರಿಣಾಮ 65 ವರ್ಷಗಳ ಭವ್ಯ ಪರಂಪರೆ, ಇತಿಹಾಸ ಹೊಂದಿರುವ ಒಂದು ಸಾರ್ವಜನಿಕರ ಆಸ್ತಿ ಕೆಲವೇ ವರ್ಷಗಳಲ್ಲಿ ವಿದೇಶಿ/ಸ್ವದೇಶಿ ಬಂಡವಾಳಿಗರ ಕೈ ಸೇರುತ್ತದೆ. ವಿಮೆ ವ್ಯವಹಾರವೇ ಮೂಲತಃ ಲಾಭದಾಯಕವಾದದ್ದು. ಒಂದು ಸಾರ್ವಜನಿಕ ನಿಗಮವಾಗಿ ಎಲ್‍ಐಸಿ ತನ್ನ ಲಾಭ ಗಳಿಕೆಯನ್ನು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವಂತಹ ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ತೊಡಗಿಸುತ್ತಿದೆ. ಭಾರತ ಸರ್ಕಾರಕ್ಕೆ ಅತಿ ಹೆಚ್ಚು ಸಾಲ ನೀಡಿರುವ ಸಾರ್ವಜನಿಕ ಉದ್ದಿಮೆ ಎಂದರೆ ಜೀವ ವಿಮಾ ನಿಗಮವೊಂದೇ ಎನ್ನುವುದು ಸಂಸ್ಥೆಯ ಮತ್ತು ಸಿಬ್ಬಂದಿಯ ಹೆಗ್ಗಳಿಕೆಯಲ್ಲವೇ ?
ಈ ಹೆಗ್ಗಳಿಕೆಯನ್ನೂ ಸೇರಿದಂತೆ, ಲಕ್ಷಾಂತರ ಪಾಲಿಸಿದಾರರ ಭವಿಷ್ಯವನ್ನು ಶವಪೆಟ್ಟಿಗೆಯಲ್ಲಿ ಬಂಧಿಸಿ, ಲಕ್ಷಾಂತರ ಏಜೆಂಟರ ಭವಿಷ್ಯವನ್ನು ಕತ್ತಲಿಗೆ ದೂಡಿ, ಸಾವಿರಾರು ನೌಕರರ ಸುಭದ್ರ ಜೀವನಕ್ಕೆ ಸಂಚಕಾರ ತರುವ ನಿಟ್ಟಿನಲ್ಲಿ ಕೇಂದ್ರ ನರೇಂದ್ರ ಮೋದಿ ಸರ್ಕಾರ ಭಾರತೀಯ ಜೀವವಿಮಾ ನಿಗಮದ ಶವಪೆಟ್ಟಿಗೆಯನ್ನು ಸಿದ್ಧಪಡಿಸಿದ್ದು, ಕೊನೆಯ ಮೊಳೆಯ ರೂಪದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಶೇ 74ಕ್ಕೆ ಏರಿಸಿದೆ. ಇದು ಸಂಸ್ಥೆಯ ಉಳಿವಿಗೆ ನೀಡುತ್ತಿರುವ ಆಮ್ಲಜನಕ ಅಲ್ಲ ಅಥವಾ ಗುಟುಕು ಜೀವವನ್ನು ಕೆಲಕಾಲ ಉಳಿಸುವ ವೆಂಟಿಲೇಟರ್ ಸಹ ಅಲ್ಲ. ಸರ್ಕಾರದ ಈ ನೀತಿ ಎಲ್‍ಐಸಿ ಪಾಲಿಗೆ ಜೀವಕಂಟಕ ಉರುಳಾಗಿದೆ. 2000ದ ನಂತರ ಭಾರತದ ವಿಮಾ ಕ್ಷೇತ್ರವನ್ನು ಪ್ರವೇಶಿಸಿದ ಹಲವಾರು ವಿದೇಶಿ ಕಂಪನಿಗಳು ದಿವಾಳಿ ಎದ್ದುಹೋಗಿವೆ. ಈ ಕಂಪನಿಗಳೊಡನೆ ಒಡಂಬಡಿಕೆ ಮಾಡಿಕೊಂಡಿದ್ದ ರಾಷ್ಟ್ರೀಕೃತ ಬ್ಯಾಂಕುಗಳು ಹೊಸ ಸಹವರ್ತಿಯನ್ನು ಕಂಡುಕೊಳ್ಳಬೇಕಾದ ಪರಿಸ್ಥಿತಿಯೂ ಒದಗಿತ್ತು.
ಈಗ ನರೇಂದ್ರ ಮೋದಿ ಸರ್ಕಾರ ಅಧಿಕೃತವಾಗಿಯೇ ಜೀವವಿಮೆ ಕ್ಷೇತ್ರದಲ್ಲಿ ಶೇ 75ರಷ್ಟು ಬಂಡವಾಳ ಹೂಡಲು ವಿದೇಶಿ ಕಂಪನಿಗಳಿಗೆ ಅವಕಾಶ ನೀಡುವ ಮೂಲಕ ಜನಸಾಮಾನ್ಯರ ಬದುಕನ್ನು ಮತ್ತಷ್ಟು ಅನಿಶ್ಚಿತತೆಗೆ ದೂಡುತ್ತಿದೆ. ಅಂಗುಷ್ಟದಿಂದ ಹಿಡಿದು ತಲೆಗೂದಲವರೆಗೂ ವಿಮೆ ಮಾಡಿಸುವ ಪದ್ಧತಿಯನ್ನು ಅನುಸರಿಸುವ ವಿದೇಶಿ ವಿಮಾ ಕಂಪನಿಗಳು ಈ ಸೌಲಭ್ಯಗಳನ್ನು ಶ್ರೀಸಾಮಾನ್ಯನಿಗೂ ಒದಗಿಸಬಹುದು. ಭಾರತದಲ್ಲಿ ಪ್ರಚಲಿತವಾಗಿರುವ ದತ್ತಿವಿಮೆ (ಎಂಡೋಮೆಂಟ್ ಪಾಲಿಸಿ) ಮುಂದಿನ ದಿನಗಳಲ್ಲಿ ಕನಸಿನ ಮಾತಾಗಬಹುದು. ಅಷ್ಟೇ ಅಲ್ಲ, ದಶಕಗಳ ಪರಿಶ್ರಮದಿಂದ ಭಾರತದ ಪ್ರಜೆಗಳು ಬೆವರು ಸುರಿಸಿ ಕಟ್ಟಿದ ಒಂದು ಬೃಹತ್ ಸೌಧ- ಎಲ್ ಐ ಸಿ- ಸಾಮ್ರಾಜ್ಯಶಾಹಿ ಬಂಡವಾಳಿಗರ ಪಾಲಾಗಬಹುದು. ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ ಸಾರ್ವಜನಿಕ ಸ್ವತ್ತುಗಳ ಮಸಣದಲ್ಲಿ ಮತ್ತೊಂದು ಚಿನ್ನದ ಸಮಾಧಿ ಸೇರ್ಪಡೆಯಾಗುವುದಂತೂ ಖಚಿತ.