ಮನೆಯ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಲಿದೆ ‘ಜಿಯೋ ಕ್ಲೌಡ್ ಪಿಸಿ’
ನವದೆಹಲಿ: ಮನೆಗಳ ಸ್ಮಾರ್ಟ್ ಟಿವಿಗಳನ್ನು ಸುಲಭವಾಗಿ ಕಂಪ್ಯೂಟರ್ ಗಳಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ರಿಲಯನ್ಸ್ ಜಿಯೋ ಇಂಡಿಯಾ ಮೊಬೈಲ್ ಕಾಂಗ್ರೆಸ್ 2024ರಲ್ಲಿ ಪ್ರದರ್ಶಿಸಿದೆ.
ಜಿಯೋ ಕ್ಲೌಡ್ ಪಿಸಿ (Jio Cloud PC) ಹೆಸರಿನ ಈ ತಂತ್ರಜ್ಞಾನವು ಕೇವಲ ನೂರು ರೂಪಾಯಿಗಳಿಗೆ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸುತ್ತದೆ. ಇದಕ್ಕೆ ಬೇಕಾಗಿರುವುದು ಇಂಟರ್ ನೆಟ್ ಸಂಪರ್ಕ, ಸ್ಮಾರ್ಟ್ ಟಿವಿ, ಟೈಪಿಂಗ್ ಕೀಬೋರ್ಡ್, ಮೌಸ್ ಮತ್ತು ಜಿಯೋ ಕ್ಲೌಡ್ ಪಿಸಿ ಅಪ್ಲಿಕೇಷನ್. ಟಿವಿಗಳು ಸ್ಮಾರ್ಟ್ ಅಲ್ಲದಿದ್ದಲ್ಲಿ ಸಾಮಾನ್ಯ ಟಿವಿಗಳು ಸಹ ಜಿಯೋಫೈಬರ್ (JioFiber) ಅಥವಾ ಜಿಯೋಏರ್ ಫೈಬರ್ (JioAirFiber) ಜೊತೆಗೆ ಬರುವ ಸೆಟ್-ಟಾಪ್ ಬಾಕ್ಸ್ ಮೂಲಕ ಕಂಪ್ಯೂಟರ್ ಆಗಬಹುದು.
ಜಿಯೋ ಕ್ಲೌಡ್ ಪಿಸಿ ಎಂಬುದು ತಂತ್ರಜ್ಞಾನವಾಗಿದ್ದು, ಯಾವುದೇ ಟಿವಿಯು ಇಂಟರ್ ನೆಟ್ ಮೂಲಕ ಕ್ಲೌಡ್ ಕಂಪ್ಯೂಟಿಂಗ್‌ಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ. ಇದು ಬಳಸುವುದಕ್ಕೆ ಸಹ ಸುಲಭ. ಆದರೆ ಗ್ರಾಹಕರು ಅಪ್ಲಿಕೇಷನ್‌ಗೆ ಲಾಗಿನ್ ಮಾಡಬೇಕಾಗುತ್ತದೆ ಮತ್ತು ಕ್ಲೌಡ್‌ನಲ್ಲಿ ಸಂಗ್ರಹವಾಗಿರುವ ಎಲ್ಲ ಡೇಟಾ ಟಿವಿಯಲ್ಲಿ ಕಾಣಿಸುತ್ತದೆ. ಇಮೇಲ್, ಸಂದೇಶ ಕಳುಹಿಸುವುದು, ಸಾಮಾಜಿಕ ನೆಟ್ ವರ್ಕಿಂಗ್, ಇಂಟರ್ ನೆಟ್ ಸರ್ಫಿಂಗ್, ಶಾಲಾ ಪ್ರಾಜೆಕ್ಟ್ ಗಳು, ಕಚೇರಿ ಪ್ರಸೆಂಟೇಷನ್ ಮುಂತಾದ ಕಂಪ್ಯೂಟರ್‌ನಲ್ಲಿ ಮಾಡಬಹುದಾದ ಎಲ್ಲ ಕೆಲಸಗಳನ್ನು ಮನೆಯ ಟಿವಿಯಲ್ಲಿ ಮಾಡಬಹುದು. ಸರಳವಾಗಿ ಹೇಳುವುದಾದರೆ, ಎಲ್ಲ ಡೇಟಾವು ಕ್ಲೌಡ್‌ನಲ್ಲಿರುತ್ತದೆ ಮತ್ತು ಸರ್ವರ್, ಸ್ಟೋರೇಜ್, ಡೇಟಾಬೇಸ್, ನೆಟ್‌ವರ್ಕಿಂಗ್, ಸಾಫ್ಟ್‌ವೇರ್ ಮತ್ತು ಅನಲಿಟಿಕ್ಸ್ ಥರದ ಸೇವೆಗಳನ್ನು ಟಿವಿ ಮೂಲಕ ಬಳಕೆ ಮಾಡಬಹುದು.
ಭಾರತೀಯ ಮಧ್ಯಮ ವರ್ಗದ ಕುಟುಂಬಗಳು ಹೆಚ್ಚಿನ ಪ್ರಮಾಣದಲ್ಲಿ ಕಂಪ್ಯೂಟರ್‌ಗೆ ಸಂಪರ್ಕ ಹೊಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ತಂತ್ರಜ್ಞಾನ ವರದಾನವಿದ್ದಂತೆ. ಏಕೆಂದರೆ ಕ್ಲೌಡ್ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಇದು ಸುರಕ್ಷಿತ ಮಾತ್ರವಲ್ಲ, ಡೇಟಾ ಮರುಪಡೆಯುವಿಕೆ ಸಹ ಸಾಮಾನ್ಯ ಕಂಪ್ಯೂಟರ್ ಅನ್ನು ಬಳಸುವುದಕ್ಕಿಂತ ಸುಲಭವಾಗಿದೆ. ಟಿವಿ ಜೊತೆಗೆ ಮೊಬೈಲ್ ನಲ್ಲೂ ಬಳಸಬಹುದು. ಕಂಪನಿಯು ಈ ಅಪ್ಲಿಕೇಷನ್ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸದಿದ್ದರೂ ಮುಂದಿನ ಕೆಲವು ತಿಂಗಳಲ್ಲಿ ಇದನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: