ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ವಿಷಾದ - Mahanayaka
6:05 PM Wednesday 30 - October 2024

ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ವಿಷಾದ

bedar
30/07/2024

ಬೀದರ್: ಪತ್ರಕರ್ತರು ಸರ್ಕಾರದ ಜನರ ಸಮಸ್ಯೆಗಳನ್ನು ಮುಂದಿಡುವ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ವಿಷಾದಿಸಿದರು.

ಜಿಲ್ಲಾ ಪತ್ರಿಕಾ ದಿನಾಚರಣೆ ಸಮಿತಿ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಜನರ ನೋವಿಗೆ ಧ್ವನಿಯಾಗಬೇಕಾದವರು ಕಾರ್ಪೊರೇಟ್ ಗಳ ಶ್ರೀಮಂತಿಕೆಯ ವಿಜೃಂಭಣೆ ಮತ್ತು ಸೆಲೆಬ್ರಿಟಿಗಳ ಜೀವನ ವಿಕೃತಿಗಳ ವಿಜೃಂಭಣೆಗೆ ಆದ್ಯತೆ ನೀಡುವಂತಾಗಿರುವುದು ನಾಚಿಕೆಯ ಸಂಗತಿ ಎಂದರು.

ಪತ್ರಕರ್ತರು ಕೇಳಿಸಿಕೊಳ್ಳುವ ಕುತೂಹಲ ಕಳೆದುಕೊಂಡಿರುವುದರಿಂದ, ಸತ್ಯ, ಸುಳ್ಳನ್ನು ಸರಿಯಾಗಿ ಗ್ರಹಿಸುವ ವ್ಯವಧಾನ ಇಲ್ಲದಂತಾಗಿದೆ. ಇದರಿಂದ ಗುಣಮಟ್ಟದ ಪತ್ರಿಕೋದ್ಯಮ ಇಲ್ಲವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬೀದರ್ ಜಿಲ್ಲೆ ಉರ್ದು, ಮರಾಠಿ, ತೆಲುಗು, ಕನ್ನಡ ಭಾಷೆಗಳ ಸಂಗಮವೂ ಆಗಿದೆ. ಸೂಫಿ-ಶರಣರು–ವಚನಕಾರರು, ಚಳವಳಿಯ ನಾಡು. ದಾಸೋಹ ಚಳವಳಿಗೆ ಸಾಕ್ಷಿಯಾಗಿರುವ ಈ ನೆಲದಲ್ಲಿ ಗಾಂಧಿವಾದ ಮತ್ತು ಸಮಾಜವಾದಿ ಆಶಯಗಳು ಆಳವಾಗಿ ಬೇರೂರಿವೆ. ಈ ಮಣ್ಣಿನ ಗುಣವೇ ಪತ್ರಕರ್ತರಿಗೆ ಮಾದರಿಯಾಗಲಿ ಎಂದು ಕೆ.ವಿ. ಪ್ರಭಾಕರ ಆಶಿಸಿದರು.
ಈ ಜಿಲ್ಲೆ ಮಿನಿ ಭಾರತದಂತಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಸಿಖ್ ಧರ್ಮಗಳು ಸಮವಾಗಿ ಸಂಗಮಗೊಂಡಿವೆ. ಅಣ್ಣ ಬಸವಣ್ಣನವರಿಂದ ಗುರುನಾನಕರವರೆಗೆ ಆಧ್ಯಾತ್ಮಿಕ ಸಂಗಮವಾಗಿದೆ ಎಂದು ಬಣ್ಣಿಸಿದರು.

ಪೌರಾಡಳಿತ ಸಚಿವ ರಹೀಂಖಾನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಮೊಹ್ಮದ್ ಗೌಸ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ

ಮುದ್ರಣ ಮಾಧ್ಯಮ ವಿಶ್ವಾಸಾರ್ಹ:

ಮುದ್ರಣ ಮಾಧ್ಯಮ ಈಗಲೂ ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ದೃಶ್ಯಮಾಧ್ಯಮದಲ್ಲಿ ಪ್ರಸಾರವಾಗುವ ಸುದ್ದಿಗಳ ಬಗ್ಗೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು. ಸುದ್ದಿಗಳು ವಸ್ತುನಿಷ್ಠವಾಗಿರಬೇಕು. ಸತ್ಯದ ಪರವಾಗಿರಬೇಕು. ರೋಚಕತೆಗಾಗಿ ಏನನ್ನೋ ತೋರಿಸಬಾರದು ಎಂದು ಸಲಹೆ ನೀಡಿದರು. ಹಿಂದೆ ಪತ್ರಿಕೆಯಲ್ಲಿನ ಸುದ್ದಿಗಳನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸುತ್ತಿದ್ದರು. ಜನಪ್ರತಿನಿಧಿಗಳು, ಅಧಿಕಾರಿಗಳು ಚರ್ಚಿಸುತ್ತಿದ್ದರು. ಲೋಪದೋಷ ಸರಿಪಡಿಸುವ ಕಾರ್ಯ ನಡೆಯುತಿತ್ತು. ಆದರೆ, ಈಗ ಸುದ್ದಿಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಸಚಿವರು ಹೇಳಿದರು.

ಮಾಧ್ಯಮದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸ್ವತಃ ನೀತಿ ಸಂಹಿತೆ ರೂಪಿಸಿಕೊಳ್ಳಬೇಕು. ಹೇಗೆ ಕೆಲಸ ಮಾಡಬೇಕು ಎನ್ನುವುದರ ಬಗ್ಗೆ ಚೌಕಟ್ಟು ರೂಪಿಸಿಕೊಳ್ಳಬೇಕು. ವಸ್ತುನಿಷ್ಠ, ನಿರ್ಭೀತ, ನಿಷ್ಪಕ್ಷಪಾತವಾದ ಸ್ವತಂತ್ರ ಮಾಧ್ಯಮ ಇರಬೇಕು ಎನ್ನುವುದು ಎಲ್ಲರ ಆಪೇಕ್ಷೆಯಾಗಿದೆ. ಜನಾಭಿಪ್ರಾಯ ರೂಪಿಸುವ ದೊಡ್ಡ ಶಕ್ತಿ ಮಾಧ್ಯಮಗಳಿಗಿದೆ ಎಂದು ಸಚಿವರು ಹೇಳಿದರು.

ಶಿವಾನಂದ ತಗಡೂರು, ಸಿಎಂ ಮಾಧ್ಯಮ ವಿಭಾಗದ ವಿಶೇಷ ಕರ್ತವ್ಯಾಧಿಕಾರಿ ಗಿರೀಶ್ ಕೋಟೆ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ. ಸಿಇಒ ಡಾ. ಗಿರೀಶ್ ಬದೋಲೆ, ಎಸ್.ಪಿ.ಪ್ರದೀಪ್ ಗಂಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ವರದಿ: ರವಿಕುಮಾರ ಶಿಂಧೆ


ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

ಇತ್ತೀಚಿನ ಸುದ್ದಿ