ಕಾಡಾನೆ ದಾಳಿಗೆ 85 ವರ್ಷ ವಯಸ್ಸಿನ ವೃದ್ಧ ಬಲಿ
ಸುಳ್ಯ: 85 ವರ್ಷ ವಯಸ್ಸಿನ ವೃದ್ಧರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದಲ್ಲಿ ನಡೆದಿದ್ದು, ನೀರಿನ ದುರಸ್ತಿ ಕೆಲಸ ಮಾಡಿಸುತ್ತಿದ್ದ ವೇಳೆ ದಾಳಿ ನಡೆಸಿದ ಆನೆ ವೃದ್ಧರನ್ನು ಹತ್ಯೆ ಮಾಡಿದೆ.
ಕಲ್ಮಕಾರು ಗ್ರಾಮದ ಮೆಂಟಕಜೆ ನಿವಾಸಿ 85 ವರ್ಷ ವಯಸ್ಸಿನ ಕೃಷಿಕ ಶಿವರಾಮ ಗೌಡ ಆನೆ ದಾಳಿಗೆ ಬಲಿಯಾದವರಾಗಿದ್ದಾರೆ. ಏಪ್ರಿಲ್ 7ರಂದು ತಮ್ಮ ಮನೆಯ ಸಮೀಪದ ಕಾಡಿನಿಂದ ತೋಟಕ್ಕೆ ಬರುವ ನೀರಿನ ಪೈಪ್ ಅನ್ನು ಸರಿಪಡಿಸಲು ತೆರಳಿದ್ದ ಸಂದರ್ಭ ಇವರ ಮೇಲೆ ಕಾಡಾನೆ ದಾಳಿ ಮಾಡಿದೆ. ಪರಿಣಾಮ ಶಿವರಾಮ ಗೌಡರು ಗಂಭೀರ ಗಾಯಗೊಂಡಿದ್ದರು ಎನ್ನಲಾಗಿದೆ.
ಕಾಡಿಗೆ ತೆರಳಿ ಬಹಳಷ್ಟು ಹೊತ್ತಾಗಿಯೂ ವಾಪಸ್ ಬಾರದ ಕಾರಣ ಶಿವರಾಮ ಗೌಡರ ಕುಟುಂಬಸ್ಥರು ಆತಂಕಕ್ಕೀಡಾಗಿದ್ದು, ಘಟನಾ ಸ್ಥಳಕ್ಕೆ ತೆರಳಿ ನೋಡಿದಾಗ ಆನೆ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅರಣ್ಯಾಧಿಕಾರಿಗಳು ಘಟನೆಯ ಬಗ್ಗೆ ತಿಳಿದು ಬಳಿಕ ಆಸ್ಪತ್ರೆಗೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸುಬ್ರಹ್ಮಣ್ಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.