ತಾನು ಕದ್ದ ಅಪಾರ ಮೊತ್ತದ ಹಣ ಕಂಡು ಸಂತೋಷದಿಂದ ಕಳ್ಳನಿಗೆ ಹೃದಯಾಘಾತ!
ಬಿಜ್ನೋರ್: ತಾನು ಕದ್ದ ಅಪಾರ ಮೊತ್ತದ ಹಣವನ್ನು ಕಂಡು ವಿಪರೀತ ಸಂತೋಷಕ್ಕೊಳಗಾದ ಕಳ್ಳನೋರ್ವ ಹೃದಯಾಘಾತಕ್ಕೊಳಗಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಹೃದಯಾಘಾತದ ಬಳಿಕ ಕಳ್ಳ ಆಸ್ಪತ್ರೆಗೆ ಸೇರಿದ್ದು, ಇದೀಗ ಕಳ್ಳ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕೊತ್ವಾಲಿ ದೇಹತ್ ಪ್ರದೇಶದಲ್ಲಿ ನಡೆದ ಭಾರೀ ಮೊತ್ತದ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ ಬಳಿಕ ವಿಚಾರಣೆ ನಡೆಸಿದ್ದು, ಈ ವೇಳೆ ಓರ್ವ ಕಳ್ಳನ ಕಥೆ ಕೇಳಿ ಪೊಲೀಸರಿಗೆ ನಗಬೇಕೋ ಅಳಬೇಕೋ ಎಂಬ ಸಂಕಟದಲ್ಲಿ ಬಿದ್ದಿದ್ದಾರೆ.
ಫೆ.16 ಮತ್ತು 17ರಂದು ನವಾಬ್ ಹೈದರ್ ಎಂಬುವನ ಮಾಲಿಕತ್ವದ ಸಾರ್ವಜನಿಕ ಸೇವಾ ಕೇಂದ್ರಕ್ಕೆ ಇಬ್ಬರು ಕಳ್ಳರು ನುಗ್ಗಿ 7 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದರು. ಇಷ್ಟೊಂದು ದೊಡ್ಡ ಪ್ರಮಾಣದ ಹಣವನ್ನು ಮೊದಲ ಬಾರಿಗೆ ನೋಡಿದ ಕಳ್ಳರ ಪೈಕಿ ಓರ್ವ ಕಳ್ಳನಿಗೆ ಸಂತೋಷ ತಡೆಯಲು ಸಾಧ್ಯವಾಗದೇ ಆತನಿಗೆ ಹೃದಯಾಘಾತ ಸಂಭವಿಸಿದೆ. ಹೃದಯಾಘಾತ ಸಂಭವಿಸಿದ ತಕ್ಷಣ ಕಳ್ಳನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳ್ಳನಿಗೆ ತಾನು ಕದ್ದಿರುವ ಮೊತ್ತಕ್ಕಿಂತಲೂ ಅಧಿಕ ಮೊತ್ತ ಚಿಕಿತ್ಸೆಗೆ ವ್ಯಯವಾಗಿದೆ ಎಂದು ತಿಳಿದು ಬಂದಿದೆ.
ಇತ್ತ ಕಳ್ಳತನದ ಬಗ್ಗೆ ನವಾಬ್ ಹೈದರ್ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನನ್ವಯ ನಗೀನಾ ಪೊಲೀಸರು ಆರೋಪಿಗಳಾದ ನೌಶದ್ ಮತ್ತು ಇಜಾಜ್ ಎಂಬವರನ್ನು ಬಂಧಿಸಿದಾಗ ಈ ಹೃದಯಾಘಾತದ ಸ್ಟೋರಿ ಬಯಲಾಗಿದೆ.