ಕಾಫಿನಾಡ ಬಿಜೆಪಿ ಭೀಷ್ಮನಿಗೆ ಇರೋಕು ನೆಲೆ ಇಲ್ಲ, ರಸ್ತೆ ಬದಿ ಕೂತಿರೋ ವಿಠಲ್ ಆಚಾರ್ಯ...! - Mahanayaka
3:49 PM Wednesday 27 - November 2024

ಕಾಫಿನಾಡ ಬಿಜೆಪಿ ಭೀಷ್ಮನಿಗೆ ಇರೋಕು ನೆಲೆ ಇಲ್ಲ, ರಸ್ತೆ ಬದಿ ಕೂತಿರೋ ವಿಠಲ್ ಆಚಾರ್ಯ…!

vitthal acharya
27/11/2024

ಚಿಕ್ಕಮಗಳೂರು: ಬಿಜೆಪಿಯ ಭೀಷ್ಮಯಂದೇ ಖ್ಯಾತಿಯಾಗಿದ್ದ 92 ವರ್ಷದ ವಿಠಲ್ ಆಚಾರ್ಯ ಇರೋಕು ನೆಲೆಯಿಲ್ಲದೆ ರಸ್ತೆ ಬದಿ ಕೂರುವಂತಹ ಸ್ಥಿತಿ ನಿರ್ಮಾಣವಾಗಿದೆ. 1975ರ ಎಮರ್ಜೆನ್ಸಿ ವೇಳೆ ಇಂದಿರಾಗಾಂಧಿ ಸರ್ಕಾರದ ವಿರುದ್ಧ ಹೋರಾಡಿ ಯಡಿಯೂರಪ್ಪ, ಶಂಕರಮೂರ್ತಿ ಹಾಗೂ ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಜೈಲುವಾಸ ಅನುಭವಿಸಿದ್ದ ವಿಠಲ್ ಆಚಾರ್ಯ ಇಂದು ರಸ್ತೆ ವಾಸ ಅನುಭವಿಸುವಂತಾಗಿದೆ.

92 ವರ್ಷದ ವಿಠಲ್ ಆಚಾರ್ಯ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿಯ ಭೀಷ್ಮ ಎಂದೇ ಖ್ಯಾತಿಯಾಗಿದ್ದರು. ಆರ್.ಎಸ್.ಎಸ್. ಕಟ್ಟಾಳು. ಎಮರ್ಜೆನ್ಸಿಯಲ್ಲಿ ಯಡಿಯೂರಪ್ಪ, ಶಂಕರಮೂರ್ತಿ, ಪಿ.ಜಿ.ಆರ್.ಸಿಂಧ್ಯಾ, ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಜೈಲು ವಾಸ ಅನುಭವಿಸಿದ್ದ ಇವರ ಶಿಷ್ಯಂದಿರೇ ಸಿ.ಟಿ.ರವಿ, ಸುನೀಲ್ ಕುಮಾರ್. 7ನೇ ವಯಸ್ಸಿಗೆ ಆರ್.ಎಸ್.ಎಸ್. ಸೇರಿ ಸಂಘಕ್ಕಾಗಿ ಜೀವ ತೇಯ್ದ ಹಿರಿಜೀವ. ಬದುಕಿನಲ್ಲಿ 107 ಪ್ರಕೃತಿ ಯಜ್ಞ ಮಾಡಿರೋ ಈ ಜೀವಕ್ಕೆ ಅದು ನಿಲ್ಲಲೇಬಾರದು ಅನ್ನೋದು ಬಯಕೆ. ಅದಕ್ಕಾಗಿ 25 ಲಕ್ಷ ಹಣವಟ್ಟು ಸೈಟ್ ಕೂಡ ಮಾರೋದಕ್ಕೆ ಸಿದ್ಧವಿದೆ ಈ ಜೀವ. ಆದರೆ, ಕುಟುಂಬಸ್ಥರೇ ಮಾಡಿರೋ ಮೋಸದಿಂದ ಕೊಟ್ಯಾಂತರ ರೂಪಾಯಿ ಆಸ್ತಿ ಇದ್ದರೂ ಇಂದು ರಸ್ತೆವಾಸ ಅನುಭವಿಸುವಂತಾಗಿದೆ.

ಕೇಸರಿ ಪಂಜೆ, ವೈಟ್ ಶರ್ಟ್ ಧರಿಸಿ ಮಾತನಾಡೋಕೆ ಕಷ್ಟಪಡೋ ವಿಠಲ್ ಆಚಾರ್ಯ ಯಾರೆಂದು ಚಿಕ್ಕಮಗಳೂರಿನ ಲಕ್ಷಾಂತರ ಜನರಿಗೆ ಗೊತ್ತಿಲ್ಲ. ಆದರೆ, ಹಿರಿಯ ಬಿಜೆಪಿಗರಿಗೆ ಚೆನ್ನಾಗಿ ಗೊತ್ತು. ವಿಠಲ್ ಆಚಾರ್ಯ ಮೂಲತಃ ಉಡುಪಿ ಜಿಲ್ಲೆಯವರು. ಆದರೆ, ಕರ್ಮಭೂಮಿ ಕಾಫಿನಾಡು ಚಿಕ್ಕಮಗಳೂರು. ದಶಕಗಳಿಂದ ಚಿಕ್ಕಮಗಳೂರಿನಲ್ಲೇ ನೆಲೆಯೂರಿರೋ ಇವರು ಆರ್.ಎಸ್.ಎಸ್. ಕಟ್ಟಾಳು. 7ನೇ ವಯಸ್ಸಿನಿಂದ 84ನೇ ವಯಸ್ಸಿನವರೆಗೆ ಸಂಘಕ್ಕಾಗಿ ಜೀವ ತೇಯ್ದಿದ್ದಾರೆ. 1975ರಲ್ಲಿ ಅಂದಿನ ಪ್ರಧಾನಿ ದೇಶದ ಮೇಲೆ ಎಮರ್ಜೆನ್ಸಿ ಹೇರಿದಾಗ ಅದರ ವಿರುದ್ಧ ಹೋರಾಡಿ ಯಡಿಯೂರಪ್ಪ, ಪಿ.ಜಿ.ಆರ್.ಸಿಂಧ್ಯಾ, ಶಂಕರಮೂರ್ತಿ, ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಬೆಳಗಾವಿ–ಬಳ್ಳಾರಿ ಜೈಲಿನಲ್ಲಿ ದಿನ ಕಳೆದಿದ್ದಾರೆ. ಚಿಕ್ಕಮಗಳೂರು ನಗರಸಭೆ ಸದಸ್ಯರಾಗಿದ್ದ ಇವರು, ಜನಸಂಘದಿಂದ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದರು. ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳೋ ದತ್ತಪೀಠದ ಹೋರಾಟದಲ್ಲೂ ಸಿ.ಟಿ.ರವಿ, ಕಾರ್ಕಳ ಸುನೀಲ್ ಕುಮಾರ್ ಬೆನ್ನೆಲುಬಾಗಿ ನಿಂತವರು. ಆದರೆ, ಇಂದು ಬೀದಿಯಲ್ಲಿ ಜೀವನ ಕಳೆಯುತ್ತಿದ್ದಾರೆ. ನಾಲ್ಕು ಗಂಡು, ಒಂದು ಹೆಣ್ಣು ಮಗುವಿದ್ದು ಎಲ್ಲರೂ ಡಾಕ್ಟ್ರು–ಇಂಜಿನಿಯರ್. ಕೊಟ್ಯಾಂತರ ಆಸ್ತಿ ಇದ್ರು ಇಂದು ಅನಾಥರಾಗಿ ಸಂಧ್ಯಾಕಾಲವನ್ನ ಬೀದಿಬದಿ ಕಳೆಯುತ್ತಿದ್ದಾರೆ.

92 ವರ್ಷದ ವಿಠಲ್ ಆಚಾರ್ಯ ಜೀವನದಲ್ಲಿ 107 ಪ್ರಕೃತಿ ಯಜ್ಞ ಮಾಡಿದ್ದಾರೆ. ಅದು ನಿಲ್ಲಬಾರದು ಅನ್ನೋದು ಇವ್ರ ಬಯಕೆ. ನಿಸ್ವಾರ್ಥವಾಗಿ ಪ್ರಕೃತಿಗೆ ಮಾಡುವ ಯಜ್ಞವದು. ಈ ಯಜ್ಞಕ್ಕೆ ಹಾಕುವ ವಸ್ತುಗಳು ಕಾರ್ಬನ್ ಡೈಆಕ್ಸೈಡ್ ಉತ್ಪತ್ತಿಸಿದರೂ ಪ್ರಕೃತಿ ಅದನ್ನ ಪಡೆದು ನಮಗೆ ಆಕ್ಸಿಜನ್ ನೀಡುತ್ತೆ. ಅದು ನಿಲ್ಲಬಾರದು ಅಂತ ಈ ಇಳಿವಯಸ್ಸಲ್ಲಿ ಹೋರಾಡ್ತಿದ್ದಾರೆ.

ಇಂದಿನ ಪೀಳಿಗೆ ಜನರಿಗೆ ಆಸಕ್ತಿ ಇಲ್ಲ. ಯಜ್ಞ ನಿಲ್ಲಬಾರದು ಅಂತ ಬ್ಯಾಂಕಿನಲ್ಲಿ 25 ಲಕ್ಷ ಹಣವಿಟ್ಟು ಪ್ರತಿವರ್ಷ ಯಜ್ಞ ಮಾಡ್ತಿದ್ರಂತೆ. ಆದ್ರೆ, ತಾನು ಸತ್ತ ನಂತರವೂ ಯಜ್ಞ ನಿಲ್ಲಬಾರದು ಅಂತ ಮಕ್ಕಳಿಗೆ ಆಸ್ತಿ ಮಾಡಿ, ಅವರಿಗೊಂದು ದಡ ಮುಟ್ಸಿ ಯಜ್ಞಕ್ಕೆ ಅಂತ ಒಂದು ಸೈಟ್ ಇಟ್ಕೊಂಡಿದ್ದರು. ಆ ಸೈಟ್ ಮಾರಿ ಅಥವ ಅದರಲ್ಲಿ ಕಾಂಪ್ಲೆಕ್ಸ್ ಕಟ್ಟಿ ಟ್ರಸ್ಟ್ ನಿರ್ಮಿಸಿ ಬಂದ ಹಣದಲ್ಲಿ ಯಜ್ಞ ನಡೆಸಬೇಕು ಅನ್ನೋದು ಇವ್ರ ಬಯಕೆ. ಹೋರಾಟ. ಕೊನೆ ಆಸೆ. ಆದರೆ, ಇವರಿಗೆ ಹೆತ್ತ ಮಕ್ಕಳೇ ಮೋಸ ಮಾಡಿದ್ದಾರಂತೆ. ಮಕ್ಕಳೇ ಮೋಸ ಮಾಡಿದ್ದಾರೆಂದು ಅವರ ಅನ್ನ ನನಗೆ ಬೇಡ ಅಂತ ಮನೆ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ಮಾಡ್ತಿದ್ದಾರೆ.

ಇವರಿಗೆ ಇರೋ ಮಕ್ಕಳೆಲ್ಲರೂ ಸಿರಿವಂತರೆ. ಆದರೂ, ಈ ಇಳಿವಯಸ್ಸಿನಲ್ಲಿ ಮಕ್ಕಳ ಮನೆಗೆ ಹೋಗದೇ ಬೇರೆಡೆ ಇದ್ದು 84 ವರ್ಷ ಆಗೋವರೆಗೂ ಪ್ರಕೃತಿ ಯಜ್ಞ ಮಾಡಿದ್ದಾರೆ. ಆದರೀಗ ತಾನೇ ಕಷ್ಟ ಪಟ್ಟು ಮಾಡಿದ್ದ ಜಾಗ ಇಲ್ಲ. ಆ ಜಾಗ ಟ್ರಸ್ಟ್ ಗೆ ಕೊಡಲೇಬೇಕು. ಪ್ರತಿವರ್ಷ ಪ್ರಕೃತಿಯಜ್ಞ ನಡೆಯಲೇಬೇಕು. ನಿಲ್ಲಬಾರದು ಅಂತ ಬೀದಿಯಲ್ಲಿ ಕುಳಿತು ಹೋರಾಟ ಮಾಡುವಂತಾಗಿರೋದು ನಿಜಕ್ಕೂ ದುರಂತ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ