ಕಳ್ಳನನ್ನು ಹಿಡಿಯಲು ಹೋದ ಪೊಲೀಸ್ ನ್ನು ಥಳಿಸಿಕೊಂಡ ಗ್ರಾಮಸ್ಥರು!
ಕೋಲ್ಕತ್ತಾ: ಕಳ್ಳತನದ ಆರೋಪಿಯನ್ನು ಬಂಧಿಸಲು ಬಂದ ಪೊಲೀಸ್ ನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ದಿನಾಜ್ ಪುರದಲ್ಲಿ ನಡೆದಿದೆ.
ಕಳ್ಳತನ ಪ್ರಕರಣದ ತನಿಖೆಗೆಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಬಿಹಾರದ ಕಿಶಾನ್ಗಂಜ್ ಪೊಲೀಸ್ ಠಾಣೆಯ ಸ್ಟೇಸನ್ ಹೌಸ್ ಆಫೀಸರ್ ಅಶ್ವಿನ್ ಕುಮಾರ್ ಮೃತಪಟ್ಟ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಉತ್ತರ ದಿನಾಜ್ಪುರ್ನ ಗೋಲ್ಪೋಖರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಗ್ರಾಮದ ಗುಂಪೊಂದು ಅಶ್ವಿನ್ ಅವರನ್ನು ಹಿಡಿದು ಥಳಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಡ್ ಮಾಡಲು ಗ್ರಾಮಕ್ಕೆ ಬಂದಿದ್ದಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸ್ಥಳೀಯ ಪೊಲೀಸರ ಸಹಕಾರ ದೊರೆಯದ ಹಿನ್ನೆಲೆಯಲ್ಲಿ ಏಕಾಂಗಿಯಾಗಿಯೇ ಅಶ್ವಿನ್ ತೆರಳಿದ್ದರು ಎಂದು ಹೇಳಲಾಗಿದೆ.
ಅಶ್ವಿನ್ ಅವರು ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಡ್ ಮಾಡಲು ಗ್ರಾಮಕ್ಕೆ ಬಂದಿದ್ದಾಗ ಘಟನೆ ನಡೆದಿದೆ. ಇಸ್ಲಾಂಪುರ್ ಎಸ್ ಪಿ ನಮ್ಮೊಂದಿಗಿದ್ದಾರೆ. ಅಶ್ವಿನ್ ಮೇಲೆ ದಾಳಿ ಮಾಡಿದವರನ್ನು ನಾವು ಬಂಧಿಸುತ್ತೇವೆ ಎಂದು ಐಜಿ ಪೂರ್ನಿಯಾ ರೇಂಜ್ ಹೇಳಿದ್ದಾರೆ.
ಅಶ್ವಿನ್ ಗ್ರಾಮಕ್ಕೆ ಎಂಟ್ರಿಯಾಗುತ್ತಿದ್ದಂತೆಯೇ ಉತ್ತರ ದಿನಾಜ್ಪುರದ ಗ್ರಾಮದಲ್ಲಿ ಜನರು ಏಕಾಏಕಿ ದಾಳಿ ನಡೆಸಿದ್ದು, ಕಲ್ಲು ಮೊದಲಾದ ವಸ್ತುಗಳಿಂದ ಹಲ್ಲೆ ನಡೆಸಿ ಅಶ್ವಿನ್ ಅವರನ್ನು ಹತ್ಯೆ ಮಾಡಿದ್ದಾರೆ.