ಕಲ್ಲಂಗಡಿ ಹಣ್ಣು ತಿಂದು ಇಬ್ಬರು ಬಾಲಕರು ಸಾವು | ಇಡೀ ಕುಟುಂಬದ ಸ್ಥಿತಿ ಗಂಭೀರ
ಹೈದರಾಬಾದ್: ಕಲ್ಲಂಗಡಿ ಹಣ್ಣು ತಿಂದು ಇಬ್ಬರು ಬಾಲಕರು ಸಾವನ್ನಪ್ಪಿ, ಮೂವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ನಡೆದಿದೆ.
ಕಲ್ಲಂಗಡಿ ಹಣ್ಣು ತಿಂದು ಅಸ್ವಸ್ಥರಾಗಿದ್ದ ಕುಟುಂಬವನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ವೇಳೆ ಬಾಲಕರಾದ ದರವೇಣಿ ಸಿವಾನಂದು (12) ಮತ್ತು ಚರಣ್ (10) ಸಾವನ್ನಪ್ಪಿದ್ದಾರೆ. ಕುಟುಂಬ ಇತರ ಸದಸ್ಯರಾದ ಶ್ರೀಶೈಲಂ, ಗುಣವತಿ ಮತ್ತು ಅಜ್ಜಿ ಸರಮ್ಮಲ್ ಅವರಿಗೆ ಚಿಕಿತ್ಸೆ ಮುಂದುವರಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಕಲ್ಲಂಗಡಿ ಹಣ್ಣು ತಿಂದು ಹೇಗೆ ಸಾವನ್ನಪ್ಪಲು ಸಾಧ್ಯ ಎನ್ನುವ ಪ್ರಶ್ನೆಗಳು ಕೇಳಿ ಬಂದಿತ್ತು. ಆದರೆ ವಾಸ್ತವವಾಗಿ ಇಡೀ ಕುಟುಂಬಸ್ಥರ ಸಾವಿಗೆ ಒಂದು ಇಲಿ ಕಾರಣವಾಗಿದೆ. ತನಗೆ ವಿಷ ಇಟ್ಟವರ ಸಾವಿಗೆ ಇಲಿ ಕಾರಣವಾಗಿದೆ.
ಇಲಿಯನ್ನು ಕೊಲ್ಲಲು ಇಲಿ ಪಾಶಾಣವನ್ನು ಮನೆಗೆ ತಂದಿದ್ದರು. ಇಲಿ ಪಾಶಾಣವನ್ನು ಸಿಂಪಡಿಸಿ ಉಳಿದದ್ದನ್ನು ಒಂದು ಕಪ್ಬೋರ್ಡ್ನಲ್ಲಿ ಇಟ್ಟಿದ್ದರು. ಇಲಿ ಮನೆಯಲ್ಲೆ ಓಡಾಗಿ ಪಾಶಾಣ ಸೇವಿಸಿ, ಅದೇ ಬಾಯಿಯಲ್ಲಿ ಮನೆಯಲ್ಲಿದ್ದ ಕಲ್ಲಂಗಡಿ ಹಣ್ಣನ್ನು ಸಹ ತಿಂದಿದೆ. ಇದು ತಿಳಿಯದೇ ಹಣ್ಣನ್ನು ತಿಂದು ಇಡೀ ಕುಟುಂಬ ಅನಾರೋಗ್ಯಕ್ಕೀಡಾಯಿತು. ಕಲ್ಲಂಗಡಿ ಹಣ್ಣಿನಲ್ಲಿ ಯಾವುದೇ ದ್ರವ ವಸ್ತು ಬಿದ್ದರೂ ಅದು ವೇಗವಾಗಿ ಇಡೀ ಕಲ್ಲಂಗಡಿ ಹಣ್ಣಿಗೆ ವಿಸ್ತರಿಸುತ್ತದೆ. ಇದರಿಂದಾಗಿ ಇಲಿ ಪಾಶಾನ ಕೂಡ ಅತೀ ವೇಗವಾಗಿ ಇಡೀ ಕಲ್ಲಂಗಡಿ ಹಣ್ಣನ್ನು ವ್ಯಾಪಿಸಿದೆ.