ದಸರಾ ಕ್ರೀಡಾಕೂಟದಲ್ಲಿ ಕಂಬಳ ಸೇರ್ಪಡೆ

ಮಂಗಳೂರು: ಈ ವರ್ಷದಿಂದ ದಸರಾ ಕ್ರೀಡಾಕೂಟದಲ್ಲಿ ಕಂಬಳ ಸೇರ್ಪಡೆಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶನಿವಾರ ಘೋಷಿಸಿದ್ದಾರೆ.
ಶನಿವಾರ ಸಂಜೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಗುರುಪುರ ಮಾಣಿಬೆಟ್ಟು ಗುತ್ತಿನ ಗದ್ದೆಯಲ್ಲಿ ನಡೆದ ಎರಡನೇ ವರ್ಷದ ಹೊನಲು ಬೆಳಕಿನ ಮೂಳೂರು – ಅಡ್ಡೂರು ಜೋಡುಕರೆ ಕಂಬಳ “ಗುರುಪುರ ಕಂಬಳೋತ್ಸವ”ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತಾಡಿದರು.
ಕರಾವಳಿ ಪ್ರದೇಶದ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳವನ್ನು ಸಂರಕ್ಷಿಸಬೇಕಾಗಿದೆ. ದಕ್ಷಿಣ ಕನ್ನಡದ ಧಾರ್ಮಿಕ ಚಿಂತನೆಗಳ ಮೇಲೆ ಜಗತ್ತಿಗೇ ಅಪಾರ ನಂಬಿಕೆ ಇದೆ. ಸೋಲುವುದು ಹೇಗೆಂದು ಕಲಿಯದಿದ್ದರೆ ಗೆಲ್ಲಲು ಸಾಧ್ಯವಿಲ್ಲ. ಹಾಗೇ ಈ ಕಂಬಳ ಕ್ರೀಡೆಯಲ್ಲಿ ಹೃದಯವಂತಿಕೆ ಮುಖ್ಯವಾಗಿರಲಿ. ಕಂಬಳ ಕ್ರೀಡೆಯಿಂದ ನಮ್ಮ ಸಂಪ್ರದಾಯ- ಪರಂಪರೆ ಬೆಳೆಯುತ್ತಿದೆ. ನಮ್ಮ ಸರ್ಕಾರ ಇದಕ್ಕೆ ಪ್ರೋತ್ಸಾಹ ನೀಡುತ್ತದೆ. ಮುಂದಿನ ವರ್ಷ ನಾಡ ಹಬ್ಬ ಮೈಸೂರು ದಸರಾದ ಕ್ರೀಡಾಕೂಟದಲ್ಲಿ ಕಂಬಳ ಆಯೋಜಿಸುತ್ತೇವೆ. ಮುಂದೆ ಇದು ಪರಂಪರೆಯಾಗಿ ಉಳಿದು ಮುಂದುವರಿಯಬೇಕು. ಈ ಕ್ರೀಡೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕಿದೆ. ಪಕ್ಷ, ಭೇದ, ಜಾತಿ ಮರೆತು ಈ ಕ್ರೀಡೆಯನ್ನು ಬೆಳೆಸೋಣ, ಪ್ರೋತ್ಸಾಹಿಸೋಣ. ಇದಕ್ಕೆ ನಾನು, ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ದೇಶದಲ್ಲೇ ಅತೀ ಹೆಚ್ಚಿನ ಕರಾವಳಿ ಭೂಭಾಗ ದ.ಕ. ಜಿಲ್ಲೆಯಲ್ಲಿದ್ದು ಅದನ್ನು ಬಳಸಿಕೊಂಡು ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸೋದ್ಯಮವನ್ನು ಬೆಳಸುವ ಕುರಿತು ಈಗಾಗಲೇ ಸರಕಾರ ಮಟ್ಟದಲ್ಲಿ ಚರ್ಚಿಸಲಾಗಿದೆ. ಇದರಿಂದ ಪ್ರವಾಸೋದ್ಯಮ ಬೆಳೆಯುವ ಜೊತೆಗೆ ಕರಾವಳಿಯ ಸಂಸ್ಕೃತಿಯನ್ನು ಬೆಳೆಸುವ ಕುರಿತು ಸರಕಾರ ಒತ್ತು ನೀಡಲು ಸರಕಾರ ಮುಂದಾಗಿದ್ದು, ಅದಕ್ಕಾಗಿ ಸರಕಾರ ಎಂದಿಗೂ ಜಿಲ್ಲೆಯ ಜನರೊಂದಿಗೆ ಇರಲಿದೆ ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜಾತಿ ಧರ್ಮಗಳನ್ನು ಮರೆತುಕಂಬಳ ನಡೆಸಿ ಬೆಳೆಸಲು ಸರಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: