ಕನಸ್ಸಿನ ಕಂಗಳ ಚೆಲುವೆ – ಅಂಬರ | ವಿಶ್ವ ಪ್ರೇಮಿಗಳ ದಿನ
- ಧಮ್ಮಪ್ರಿಯಾ, ಬೆಂಗಳೂರು
ಅಂಬರ ದಿನನಿತ್ಯ ಒಂದಲ್ಲ ಒಂದು ಚಿಂತೆಯಲ್ಲಿ ಮಗ್ನಳಾಗಿದ್ದು ತುಂಬು ಮೈಕಟ್ಟಿನ, ಸುಂದರ ನಗುಮುಖದ, ಮುಖಕ್ಕೆ ಸುಂದರವಾಗಿ ಕಾಣುವ ಮೂಗುತಿ ತೊಟ್ಟ ಸುಂದರಿ. ಸೀರೆಯಲ್ಲಿ ಎಲ್ಲರನ್ನೂ ಮೀರಿಸುವ ನೀರೆ, ಇವಳ ನಗುವೇ ಕೆಲವರಿಗೆ ಮಂದಹಾಸ, ಇವಳ ಮೈ ಮಾಟವೇ ಕೆಲವರಿಗೆ ಹಬ್ಬದ ಊಟ, ನೋಡಲು ಹಾಗಿದ್ದಳು ಅಂಬರ, ಇವಳು ಕೆಲಸ ಮಾಡುವ ಆಫೀಸಿನಲ್ಲಿ ಎಲ್ಲರ ಮದ್ಯೆ ಇವಳೇ ಸುಂದರಿ, ಅಲ್ಲಿನ ಎಲ್ಲಾ ಪಡ್ಡೆ ಹುಡುಗರ ಎದೆಯಲ್ಲಿ ಏನೋ ಪುಳಕವೆಬ್ಬಿಸುವ ಚೆಲುವೆ, ಕೆಲಸ ಮುಗಿಸಿ ಎಲ್ಲರಿಗೂ ಗುಡ್ ಬಾಯ್ ಹೇಳಿ ಹೋಗುತ್ತಿದ್ದಳೆಂದರೆ ಪಡ್ಡೆ ಹುಡುಗರಿಗೆಲ್ಲಾ ನಿರಾಶೆಯ ಮನಸ್ಸು, ಆಳಾದ ಸಮಯ ಯಾಕಿಷ್ಟು ಬೇಗ ಹೋಯಿತು ಎಂದು ಹಿಡಿ ಶಾಪ ಹಾಕುವ ಗುಂಪೇ ಇವಳಿಗಾಗಿ ಶಪಿಸುತ್ತಿತ್ತು.
ಅಂಬರ ಮಾತಿನಲ್ಲಿ ಮುಗ್ದೆಯಾಗಿದ್ದರು ಬಹಳ ಸಂಪ್ರದಾಯದ ಆಚರಣೆಯ ಬಿಂಬದಂತಿದ್ದ ಮನಸ್ಸುಳ್ಳವಳು, ಒಮ್ಮೆ ಯಾರಾದರೂ ಗಟ್ಟಿಯಾಗಿ ಮಾತನಾಡಿದರೆ ಕಣ್ಣಂಚಲ್ಲಿ ಕಣ್ಣೀರಿಡುವ, ಮನದಲ್ಲಿಯೇ ನೋವನ್ನು ನುಂಗುತ್ತಾ, ನನ್ನ ಸಮಸ್ಯೆ ಯಾರಿಗೂ ಬೇಡವೆಂದು ಶಪಿಸುವವಳು, ಈಗಿದ್ದವಳು ಮಾತಿನಲ್ಲಿ ಬಹಳ ಭಯಪಡುತ್ತಿದ್ದವಳು, ಸಮಯಕ್ಕೆ, ಸಂದರ್ಭಕ್ಕೆ ತಕ್ಕಂತೆ ಉತ್ತರ ಕೊಡುವಲ್ಲಿ ಈಗಷ್ಟು ನೈಪುಣ್ಯತೆಯನ್ನು ಹೊಂದಿದವಳಲ್ಲ. ದೈರ್ಯವಾಗಿ ಮಾತನಾಡುವ ಎಲ್ಲವನ್ನೂ ಹೆದುರಿಸುವ, ಸಮಸ್ಯೆಯನ್ನು ಬಗೆಹರಿಸುವ, ಚಾಕುಚಕ್ಯತೆಯಿಂದ ಉತ್ತರ ನೀಡುವ ಎಲ್ಲಾ ಕೌಶಲ್ಯವುಳ್ಳವಳು. ಆಕಾಶಕ್ಕೆ ಹತ್ತಿರವಿರುವ ಮೋಡಗಳಲ್ಲಿ ಮೋಡದ ತುಣುಕಾಗಿ ಬೆಳೆದ ಅಂಬರ ಈ ಚೆಲುವೆ. ಈ ಚೆಲುವೆ ಒಂದು ಕಥೆಯಾಗಿ, ಜೀವನದ ಬದುಕಲ್ಲಿ ಮಾದರಿಯಾಗಿ ಬೆಳೆದು ನಿಂತವಳು.
ಅಂಬರಳದು ಮಧ್ಯಮವರ್ಗದ ಕುಟುಂಬ, ತಂದೆ ಮಾಯಣ್ಣ ಹಾಗೂ ತಾಯಿ ಜಾನಕಮ್ಮ ಇಬ್ಬರಲ್ಲೂ ಒಂದು ಅನ್ಯೋನ್ಯತೆ ಇತ್ತು, ಇವರಿಗೆ 5 ಮಕ್ಕಳಿದ್ದರು ಕಾರಣಾಂತರದಿಂದ ಚಿಕ್ಕವಯಸ್ಸಿನಲ್ಲೇ ಒಂದು ಮಗುವನ್ನು ಕಳೆದುಕೊಂಡಾಗಲು ಎಂದೂ ಎದೆಗುಂದಲಿಲ್ಲಾ. ಇನ್ನುಳಿದ ನಾಲ್ಕು ಮಕ್ಕಳು ಹೆಣ್ಣು ಮಕ್ಕಳೇ ಆಗಿದ್ದರಿಂದ ಮಾಯಣ್ಣ ಮತ್ತು ದಂಪತಿಗೆ ಗಂಡು ಮಕ್ಕಳಿಲ್ಲಾ ಎನ್ನುವ ಒಂದು ಸಣ್ಣ ಕೊರತೆ ಕಾಡತೊಡಗಿತ್ತು. ಇರುವ ನಾಲ್ಕು ಹೆಣ್ಣುಮಕ್ಕಳಲ್ಲೇ ಗಂಡು ಮಕ್ಕಳನ್ನು ಕಾಣಬಹುದು ಎಂದು ತೀರ್ಮಾನಿಸಿದ ದಂಪತಿಗಳು ಎಲ್ಲರಿಗೂ ಒಳ್ಳೆಯ ಶಿಕ್ಷಣ ಕೊಡಿಸಿದರೆ ಅವರೇ ದುಡಿಯುವವರಾಗುತ್ತಾರೆ ನಮಗೇನು ಚಿಂತೆ ಬೇಡ ಎಂದು ಪಣತೊಟ್ಟು ದುಡಿಯಲಾರಂಭಿಸಿದರು.
ಜಾತಿ ಮತ ಭೇದವಿಲ್ಲದ ಈ ಕುಟುಂಬ ಒಂದು ಸೌಮ್ಯ ಸಮಾಜದಂತಿತ್ತು. ಈ ನಾಲ್ಕು ಹೆಣ್ಣುಮಕ್ಕಳಲ್ಲಿ ಮೂರನೆಯವಳೇ ನಮ್ಮ ಕಥಾನಾಯಕಿ.ದಂಪತಿಗಳು ಇವಳನ್ನೇ ಗಂಡು ಮಗನಂತೆ ಬೆಳೆಸಿದ್ದರು, ಇನ್ನುಳಿದ ಮೂರೂ ಮಕ್ಕಳು ತಮ್ಮ ಬದುಕನ್ನು ಜೀವನದ ವಿಭಾಗವಾಗಿ ಕಂಡುಕೊಂಡವರೇ ಹೊರತು ತಂದೆ ತಾಯಿಯ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡವರಲ್ಲ. ಆದರೆ ತಂದೆ ತಾಯಿ ಮಾತ್ರ ಯಾರನ್ನೂ ತಾರತಮ್ಯದಿಂದ ನೋಡದೆ ಎಲ್ಲರೂ ಒಂದೇ ಎನ್ನುವ ಹಾಗೆ ಇದ್ದರು. ಆದರೂ ಅಂಬಾರಾಳಿಗೆ ಒಂದು ರೀತಿಯಲ್ಲಿ ಅಕ್ಕಂದಿರು ಅಪ್ಪ ಅಮ್ಮನಿಂದ ಪಡೆಯುತ್ತಿದ್ದ ಸವಲತ್ತುಗಳನ್ನು ಗಮನಿಸಿದರೆ ಇವಳಿಗೆ ಏನೂ ಸಿಗಲಿಲ್ಲವೇನೋ ಅನಿಸುತ್ತಿತ್ತು. ಮೊದಲ ಅಕ್ಕ ಅಂಜಿತ, ಎರಡನೇ ಅಕ್ಕ ವಸಂತ ಹಾಗೂ ಕೊನೆಯವಳೇ ಎಲ್ಲರ ಮುದ್ದು ತಂಗಿ ಸುಸ್ಮಿತಾ. ಎಲ್ಲರೂ ಮದುವೆಯಾಗಿ ನೆಮ್ಮದಿಯಾಗಿದ್ದಾರೆ.
ಅಂಬರಾಳಿಗೂ ಮದುವೆಯಾಗಿದೆ, ಚಂದ್ರ ಇವಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ಆತನು ಯಾವುದೋ ಖಾಸಗೀ ಕಂಪನಿಯೊಂದರಲ್ಲಿ ಒಳ್ಳೆಯ ಹುದ್ದೆಯಲ್ಲಿಯೇ ಇದ್ದು ದುಡಿಯುತ್ತಿದ್ದಾನೆ. ಚಂದ್ರ ಮತ್ತು ಅಂಬಾರಾಳಿಗೆ ಇಬ್ಬರಲ್ಲಿಯೂ ಹಣಕಾಸಿನ ವಿಷಯದಲ್ಲಿ ಒಂದು ಅನ್ಯೋನ್ಯತೆ, ಎಲ್ಲಿಯೂ ವೃತ ಹಣ ಪೋಲು ಮಾಡುವವರಲ್ಲಾ, ಅಂಬರ ಶಾಲೆಯ ದಿನಗಳಲ್ಲಿ ಪುಟ್ಟ ಪೋರಿಯಾಗಿದ್ದರು ಕ್ರೀಡೆಯಲ್ಲಿ ಎಲ್ಲರಿಗೂ ಮುಂದಿದ್ದಳು. ಶಾಲೆಯ ದಿನಗಳನ್ನು ಮುಗಿಸಿದ ಅಂಬಾರಾಳಿಗೆ ಕಾಲೇಜು ಮೆಟ್ಟಿಲು ಏರಿ ಪದವಿ ಮುಗಿಯುತ್ತಿದ್ದಂತೆ ಮದುವೆ ಮಾಡಿಬಿಟ್ಟರು. ಅಂಬರಾಳ ಕನಸ್ಸು ಸರ್ಕಾರಿ ಕೆಲಸಕ್ಕೆ ಹೋಗಬೇಕು ನಾನು ದುಡಿಯಬೇಕು, ದುಡಿದ ಹಣದಲ್ಲಿ ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಅವರಿಗೆ ನಾವಲ್ಲದೆ ಬೇರೆ ಯಾರು ನೋಡಿಕೊಳ್ಳುತ್ತಾರೆ, ಸಂಬಂಧಗಳಲ್ಲಿ ಯಾರನ್ನೂ ನಂಬಬಾರದು ಎನ್ನುವ ಛಲವಿತ್ತು.
ಮನೆಯವರ ಇಚ್ಛೆಯಂತೆ ಮದುವೆಯಾದ ಅಂಬರಾಳಿಗೆ ಒಂದು ಗಂಡು ಮಗುವಾಯಿತು. ಚಂದ್ರು ಸಹ ಅವಳ ಮನಸ್ಸನ್ನು ಅರಿತವನಾದರಿಂದ ಅಂಬರಾಳಿಗೆ ಕೆಲಸಕ್ಕೆ ಸೇರಲು ಅನುಮತಿ ನೀಡಿ ಕೊನೆಗೆ ಸರ್ಕಾರಿ ಕೆಲಸವೂ ಸಿಕ್ಕಿತು. ಬೆಂಗಳೂರು ನಗರದಿಂದ ಹೊರಗಡೆ ಹೋಗಲೇಬೇಕಾದ ಪರಿಸ್ಥಿತಿ ಬಂದದ್ದರಿಂದ ಅಂಬರ ತನ್ನ ತಾಯಿ ಜಾನಕಮ್ಮನೊಡನೆ ದೂರದ ರಾಯಚೂರು ಜಿಲ್ಲೆಯ ಯಾವುದೋ ಒಂದು ಸಣ್ಣ ಕಛೇರಿಯಲ್ಲಿ ಗುಮಾಸ್ತಳಾಗಿ ಕರ್ತವ್ಯಕ್ಕೆ ಸೇರಿದಳು. ಅಲ್ಲಿನ ಉರಿ ಬಿಸಿಲು, ಕಾರದ ಊಟ, ಒಂದು ಕಡೆ ಅಂಬರಾಳ ಹಸುಗೂಸು,ಜೀವನವೇ ಕಷ್ಟ ಎನ್ನುವಷ್ಟರ ಮಟ್ಟಿಗೆ ದಿನಗಳನ್ನು ಕಳೆಯಲಾರಂಭಿಸಿದರು. ಕೊನೆಗೆ ಕೆಲಸವೇ ಬೇಡ ಎನ್ನುವಷ್ಟರ ಮಟ್ಟಕ್ಕೆ ಯೋಚಿಸಿದ ಅಂಬಾರಾಳಿಗೆ ಮತ್ತೆ ತಂದೆ ತಾಯಿಯ ಕಷ್ಟದ ಜೀವನ ಸರಿ ಮಾಡುವುದು ಹೇಗೆ ಎಂದು ಚಿಂತಿಸಿದಳು. ಒಂದು ಕಡೆ ಗಂಡ, ಇನ್ನೊಂದುಕಡೆ ಇವಳು, ಅಪ್ಪ ಬೇರೆ ಕಡೆ, ಅಮ್ಮ ಬೇರೆ ಕಡೆ ಇವೆಲ್ಲಾ ಇವಳ ಮನದಲ್ಲಿ ಒಂದು ಅಬ್ಬರದ ಅಲೆಯನ್ನೇ ಎಬ್ಬಿಸಿಬಿಟ್ಟವು. ಆದರೂ ತಲೆ ಕೆಡಿಸಿಕೊಳ್ಳದೆ ಸಂಬಂಧಪಟ್ಟ ಅಧಿಕಾರಿಗಳ ಸಹಾಯದಿಂದ ಬೆಂಗಳೂರಿಗೆ ವರ್ಗಾವಣೆಯಾಗಿ ಬಂದಳು. ಬೆಂಗಳೂರಿಗೆ ಬಂದದ್ದು ಬಿಡುಗಡೆ ಸ್ವಾತಂತ್ರ್ಯ ಸಿಕ್ಕಂತಾಯಿತು. ವರ್ಗಾವಣೆ ಮಾಡಿದ ಅಧಿಕಾರಿಯನ್ನು ಈಗಲೂ ನೆನೆಯುವ, ಅವರಿಗೆ ಒಳ್ಳೆಯಾಗಲಿ ಎಂದು ಶಪಿಸುವ ಮುಗ್ದ ಮನಸ್ಸು ಅಂಬರಾಳದು.
ಅಂಬರ ಬೆಂಗಳೂರಿಗೆ ಬಂದಾಗಲೂ ಕೆಲವು ಸಮಸ್ಯೆ ಹೆದುರಿಸಬೇಕಾದ ಪರಿಸ್ಥಿತಿ ಎದುರಾಯಿತು, ಎರಡನೇ ಮಗುವಿಗೆ ಗರ್ಭವತಿಯಾದಳು, ಆ ಸಂದರ್ಭದಲ್ಲಿ ಅವಳಲ್ಲಾದ ದೈಹಿಕ
ಬದಲಾವಣೆ, ಆರೋಗ್ಯದಲ್ಲಾದ ಏರುಪೇರಿನ ಪರಿಣಾಮವಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟುಬಿಡುತ್ತೇನೆ ಎಂದು ಮುಂದಾದಳು. ಕೊನೆಗೂ ಅವಳ ಮುಂದೆ ನಿಂತದ್ದು ಅವಳ ತಂದೆ ತಾಯಿಯ ಹಾರೈಕೆಯ ಜವಾಬ್ದಾರಿ. ಕೆಲಸಕ್ಕೆಂದು ಬೈಕಿನಲ್ಲಿ ಚಂದ್ರುವಿನೊಡನೆ ಸುಮಾರು 45 ಕಿಲೋ ಮೀಟರ್ ದೂರವಾದರೂ ತುಂಬು ಗರ್ಭಿಣಿಯ ಪ್ರಯಾಣ ದುಡಿಮೆಯ ಕಡೆಗೆ ಸಾಗಿತ್ತು, ತಂದೆ ತಾಯಿಗೆ ಅಂದು ಮನವರಿಕೆಯಾಯಿತು. ಇವಳೇ ನಮ್ಮ ಮನೆಯ ಮಗ ಎಂದು ಆನಂದಿಸುತ್ತಿದ್ದರು. ಮೊದಲು ಗಂಡುಮಕ್ಕಳಿಲ್ಲದ ಕೊರತೆ ಅವರಲ್ಲಿ ಕಾಡುತ್ತಿದ್ದದ್ದನ್ನು ಅವರ ತಲೆಯಿಂದ ಸಂಪೂರ್ಣವಾಗಿ ಕಿತ್ತೊಗೆದವಳು ಅಂಬರ ಎಂದುಕೊಂಡರು. ಆದರೆ ಅಂಬರಾಳು ತನ್ನೊಳಗಿನ ನೋವನ್ನು ಯಾರಿಗೂ ಹೇಳಿಕೊಳ್ಳದ ಒಳ್ಳೆಯ ಮನಸ್ಸು ಯಾರಿಗೂ ಅರ್ಥವಾಗುತ್ತಿರಲಿಲ್ಲಾ. ತನ್ನ ನೋವನ್ನು ತಾನೇ ಅನುಭವಿಸಿದರು ಇನ್ನೊಬ್ಬರಿಗೆ ಹೇಳಿಕೊಳ್ಳಲಾಗದೆ ಹಾಗೆಯೇ ತಾನೇ ನುಂಗುತ್ತಾ ಬದುಕಿದಳು. ಅಂಬರಾಳಿಗೆ ಎರಡನೆಯ ಪಾಪು ಹೆಣ್ಣು ಮಗುವಾಗಿದ್ದರ ಖುಷಿಯೋ ಖುಷಿ,ಸಾಕಷ್ಟು ಸಂಭ್ರಮ, ಚಂದ್ರುವಿಗೆ ಮೊದಲ ಮಗು ಗಂಡು ಮಗುವಾಗಿದ್ದರಿಂದ ಸುಮ್ಮನಾಗಿದ್ದರು. ಮೊದಲ ಮಗು ಹೆಣ್ಣು ಮಗುವಾಗಿದ್ದರೆ ಈ ಬಾರಿಯೂ ಹೆಣ್ಣು ಹುಟ್ಟಿತೆಂದು ಮತ್ತೆ ಅಂಬರಾಳಿಗೆ ಮಾನಸಿಕ ಕಿರಿ ಕಿರಿ ಬರುತ್ತಿತ್ತೋ ಏನೋ.
ಆತನಿಗೆ ಗಂಡು ಸಂತಾನವೆಂಬುದು ಮನೆಯ ಯಜಮಾನಿಕೆ ಎನ್ನುವ ಮನಸ್ಥಿತಿಯವನು. ಅಂಬರ ತನ್ನ ತಂದೆ ತಾಯಿಯನ್ನು ಸಾಕುತ್ತಿರುವುದನ್ನು ದಿನನಿತ್ಯ ನೋಡಿದ್ದರು ಅದನ್ನು ಅರಿಯದ ಚಂದ್ರುವಿಗೆ ಗಂಡು ಸಂತಾನವೇ ಮುಖ್ಯ ಎನ್ನುವಂತಿದ್ದನು. ಕೊನೆಗೂ ಒಂದು ಹೆಣ್ಣು ಒಂದು ಗಂಡು ಆದುದ್ದರಿಂದ, ಕೀರ್ತಿಗೆ ಒಬ್ಬ ಆರತಿಗೆ ಒಬ್ಬಳು ಎನ್ನುವಂತೆ ಅಂಬರ ಸುಖವಾಗಿದ್ದಳು.ನಾವಿಬ್ಬರೂ ನಮಗಿಬ್ಬರು ಎನ್ನವಂತೆ ತುಂಬಾ ಸುಖ ಜೀವನ ನಡೆಸುತ್ತಿದ್ದ ಇವರಿಗೆ ಸಣ್ಣದೊಂದು ಸಮಸ್ಯೆ ಕಾಡತೊಡಗಿತು. ಅಂಬರ ಕೆಲಸ ಮಾಡುವ ಸ್ಥಳದಲ್ಲಿಯೂ ಒಳ್ಳೆಯ ಕೆಲಸ ಮಾಡುವ ವ್ಯಕ್ತಿಯಾಗಿದ್ದಳು. ಮನೆಯನ್ನು ಉತ್ತಮವಾಗಿ ನಡೆಸುವ ಸಾರಥಿಯಾಗಿದ್ದಳು. ಅಪ್ಪ ಅಮ್ಮನ ಪಾಲಿಗೆ ಒಳ್ಳೆಯ ಗಂಡುಮಗನಂತೆ ಇದ್ದ ಅಂಬರ ಗಂಡನಿಗೆ ತಕ್ಕ ಹೆಂಡತಿಯಾಗಿ ಬದುಕುತ್ತಿದ್ದಳು. ತನ್ನ ಗಂಡನ ಸಂಪಾದನೆ ಹಾಗೂ ಇವಳ ಸಂಪಾದನೆಯನ್ನು ಸೇರಿಸಿ ಒಂದು ಸುಂದರ ಮನೆಯನ್ನು ಕಟ್ಟಿಕೊಂಡಿದ್ದರು. ಮನೆಗೂ ಅಂಬರ ಎಂತಲೇ ನಾಮಕರಣ ಮಾಡಿಸಿದ್ದಳು ಅಂಬರ.
ಕೆಲವು ದಿನಗಳ ಬಳಿಕ ಅಂಬರ ಕೆಲಸಕ್ಕೆ ಬಾರದೆ ಮನೆಯಲ್ಲಿಯೇ ಇರಲು ಪ್ರಾರಂಭಿಸಿದಳು, ಯಾಕೆ ಏನಾಯಿತು ಎಂದು ಇವಳಿಗೆ ಪರಿಚಯವಿದ್ದ ಹರೀಶ್ ಕರೆ ಮಾಡಿ ಕೇಳಿದಾಗ ಬಹಳ ಅಳುವಿನ ಸ್ವರದಿಂದ ಏನೇನೋ ಹೇಳುತಲಿದ್ದಳು. ಯಾಕೆ ಏನಾಯಿತು ಎಂದು ಮತ್ತೊಮ್ಮೆ ಕೇಳಿದಾಗ ನನಗೆ ಬಹಳ ದೊಡ್ಡ ಸಮಸ್ಯೆಯಾಗಿದೆ. ನಾನು ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಏನು ಮಾಡಲು ಆಗುತ್ತಿಲ್ಲಾ ಕೆಲಸಕ್ಕೂ ಹೋಗಲು ಸ್ವಲ್ಪ ಕಷ್ಟವಾಗುತ್ತಿದೆ ಎಂದು ಅಳಲು ಪ್ರಾರಂಭಿಸಿದಳು. ಹರಿಯ ಉತ್ಸಾಹದ ಮಾತುಗಳು ಅವಳಿಗೆ ಒಂದು ರೀತಿಯ ಧೈರ್ಯದ ಮಾತುಗಳಾಗಿ ಮಾರ್ಪಟ್ಟು ಸ್ವಲ್ಪ ಲವಲವಿಕೆಯಿಂದ ಮಾತನಾಡಲು ಪ್ರಾರಂಭಿಸಿದಳು. ಕೊನೆಗೊಮ್ಮೆ ನೀನು ಹೇಳಿದ ಮಾತುಗಳು ನನಗೆ ಬದುಕಿನ ಭರವಸೆಗಳಾದವು ನಿನಗೆ ನನ್ನ ಕಡೆಯಿಂದ ಧನ್ಯವಾದಗಳು ಎಂದು ಹೇಳುದಳು. ಹರೀಶನು ಸ್ನೇಹವೆಂದರೆ ಬರೀ ಹಾಯ್ ಬಾಯ್ ಅಲ್ಲಾ, ಯಾರು ಯಾರಿಗೆ ಕಷ್ಟದಲ್ಲಿ ಸಹಾಯ ಮಾಡುತ್ತಾರೋ ನನಗೆ ಗೊತ್ತಿಲ್ಲಾ, ಆದರೆ ನನ್ನ ಕೈಲಾದ ಸಹಾಯ ಇಷ್ಟೇ ಎಂದು ಸುಮ್ಮನಾದ. ಅಂಬರ ಇದಾದ ಬಳಿಕ ತನ್ನೆಲ್ಲಾ ಮನಸ್ಸಿನ ನೋವುಗಳನ್ನು ಹರೀಶನಿಗೆ ಹೇಳಿಕೊಳ್ಳಬೇಕೆನಿಸಿತೋ ಏನೋ, ಒಮ್ಮೆ ಸಿಕ್ಕಾಗ ತನ್ನ ಮನದಾಳದ ಮಾತುಗಳನ್ನೆಲ್ಲವನ್ನು ನಿದಾನವಾಗಿ ಒಂದೊಂದಾಗಿ ಹೇಳಿಕೊಳ್ಳಲು ಪ್ರಾರಂಭಿಸಿದಳು,
ಹರೀಶ ಅಂದು ತೀರ್ಮಾನಿಸಿದ್ದು ಇವಳಿಗೆ ಎಲ್ಲವನ್ನೂ ಹೇಳಿಕೊಳ್ಳಲು ಒಳ್ಳೆಯಾ ಗೆಳೆಯರಿಲ್ಲಾ ಇವಳ ಸ್ನೇಹ ನನಗೇನು ನಷ್ಟವಿಲ್ಲಾ ಒಳ್ಳೆಯ ತನದಲ್ಲಿ ಇವಳೊಡನೆ ಇರುವುದು ಒಳ್ಳೆಯದು ಎಂದು ತೀರ್ಮಾನಿಸಿದ. ಅಂಬರ ಯಾವುದೇ ಮುಚ್ಚುಮರೆಯಿಲ್ಲದೆ ತನ್ನ ಜೀವನದಲ್ಲಿ ನಡೆದ ಘಟನೆಗಳೆಲ್ಲವನ್ನು ಹರೀಶನೊಡನೆ ಹಂಚಿಕೊಂಡಳು. ಹರೀಶನು ತನ್ನ ಜೀವನದ ಘಟನೆಗಳು, ತನ್ನ ಬದುಕಿನ ಕಹಿ ನೆನಪುಗಳು, ಬೇರೆಯವರು ತನ್ನ ಬಗ್ಗೆ ತೋರಿದ ತಾತ್ಸಾರದ ಮನೋಭಾವ ಎಲ್ಲವನ್ನೂ ಹೇಳುತ್ತಾ ಇಬ್ಬರೂ ಜೀವದ ಗೆಳೆಯ ಗೆಳತಿಯರಾದರು, ಇಬ್ಬರೂ ಕೊನೆಯದಾಗಿ ಒಬ್ಬರನ್ನೊಬ್ಬರು ಒಂದು ಕ್ಷಣವೂ ಬಿಟ್ಟಿರಲಾರದವರಂತೆ ತನ್ನ ಮನಸ್ಸಿನ ಭಾವನೆಗಳೆಲ್ಲವನ್ನು ಬೆಸೆಯತೊಡಗಿಸಿಕೊಂಡರು. ದಿನನಿತ್ಯ ಅವಳನ್ನು ನೋಡದಿದ್ದರೆ ಏನೋ ಒಂದು ತವಕ ಎನ್ನುವಷ್ಟರ ಮಟ್ಟಿಗೆ ಭಾವುಕನಾಗಿ ಬದುಕಲಾರಂಭಿಸಿದ ಹರೀಶ. ಅಂಬರ ಕೂಡ ಹಾಗೆಯೇ ಅವನಿಗೆ ದಿನನಿತ್ಯ ಸ್ಪಂದಿಸತೊಡಗಿದಳು. ಒಮ್ಮೆ ಹತ್ತು ಹದಿನೈದು ದಿನಗಳಾದರು ಅಂಬರ ಕರೆ ಮಾಡಲಿಲ್ಲಾ ಸಂದೇಶ ಕಳಿಸಲಿಲ್ಲಾ, ಹರೀಶನಿಗೆ ಒಂದು ರೀತಿಯ ತಳಮಳ ಶುರುವಾಯಿತು.
ಒಮ್ಮೆ ಕರೆ ಮಾಡಿ ಕೇಳಿದಾಗ ಅವಳ ಧ್ವನಿಯಲ್ಲಿ ಒಂದು ಮೌನದ ಭಾವವಿತ್ತು. ಹರೀಶನಿಗೆ ಒಂದು ರೀತಿಯಲ್ಲಿ ಗಾಬರಿಯ ವಾತಾವರಣ ನಿರ್ಮಾಣವಾಯಿತು. ಏನಾಯಿತು ನಿನ್ನ ಈ ಸಪ್ಪೆಯ ಮಾತುಗಳಲ್ಲಿ ಏನೋ ಸಮಸ್ಯೆ ಕಾಡುತ್ತಿದೆ ಎಂದು ಕೇಳಲು, ನಾನು ಇಷ್ಟೆಲ್ಲಾ ಕಷ್ಟ ಪಟ್ಟು ಜೀವನದಲ್ಲಿ ಏನಾದರು ಸಾಧಿಸಬೇಕು ಅನ್ನುವಷ್ಟರಲ್ಲಿ ಏನಾದರು ಒಂದು ಅಡೆತಡೆಗಳು ಬರುತ್ತಿವೆ ಎಂದು ದುಃಖಿತಳಾದಳು. ಅಮ್ಮ ಜಾನಕಮ್ಮನಿಗೆ ಹೃದಯದ ರಕ್ತ ನಾಳಗಳಲ್ಲಿ ಏನೋ ಸಮಸ್ಯೆಯಿದೆ ನೀವು ತಡಮಾಡಿದರೆ ಕಷ್ಟವಾಗುತ್ತದೆ ಎಂದ ಡಾಕ್ಟರ್ ಸಲಹೆಯನ್ನು ಕೇಳಿದ ತಕ್ಷಣವೇ ಇವಳಿಗೆ ದಿಕ್ಕು ತೋಚದಾಗಿದೆ. ಏನು ಆಗುವುದಿಲ್ಲಾ ಎಲ್ಲಾ ಸರಿ ಹೋಗುತ್ತೇ, ನೆಮ್ಮದಿಯಾಗಿರು, ಯಾಕೆ ಅಷ್ಟೊಂದು ಬೇಜಾರಾಗುತ್ತೀಯಾ ಒಳ್ಳೆಯ ಮನಸ್ಸಿರುವ ನಿನಗೆ ಒಳ್ಳೆಯದೇ ಆಗುತ್ತೇ, ನೀನು ಯಾರಿಗೂ ಕೆಟ್ಟದ್ದನ್ನು ಬಯಸಿದವಳಲ್ಲಾ, ದೈರ್ಯವಾಗಿರು ಎಂದು ಪರಿಪರಿಯಾಗಿ ಹರೀಶ ಹೇಳಿದ್ದಾನೆ. ಕೆಲಸ ಮುಗಿದ ತಕ್ಷಣ ಅಮ್ಮನನ್ನು ನೋಡಲು ಹೋಗಬೇಕು ಎಂದು ಪರಿತಪಿಸುತ್ತಿದ್ದಳು, ಹರೀಶ ಯಾವಾಗಲು ಅವಳಿಗೆ ಧೈರ್ಯ ತುಂಬುವ, ದೈರ್ಯವಾಗಿ ಮಾತನಾಡುವ, ಏನೇ ಬಂದರು ದೈರ್ಯವಾಗಿ ಹೆದುರಿಸುವ ವ್ಯಕ್ತಿಯಾಗಿ ಅಂಬರಳನ್ನು ತಯಾರು ಮಾಡಬೇಕು ಎನ್ನುವುದೇ ಇವನ ಮುಖ್ಯ ಗುರಿಯಾಗಿತ್ತು, ಅಂಬರ ಮೊದಮೊದಲು ಯಾರಾದರೂ ಏನಾದರು ಅಂದರೆ ಸಣ್ಣ ಸಣ್ಣ ವಿಚಾರಗಳಿಗೂ ಕಣ್ಣಲ್ಲಿ ನೀರು ತುಂಬಿಕೊಂಡು ಮಾತನಾಡುವ ಸೌಮ್ಯ ಸ್ವಭಾವದವಳಾಗಿದ್ದನ್ನು ಈಗಾಗಲೇ ಹರೀಶ ಗಮನಿಸಿದ್ದ.
ಈಗ ಅಂಬರ ಯಾವ ಮಟ್ಟಕ್ಕೆ ದೈರ್ಯವಾಗಿದ್ದಾಳೆ ಎಂದರೆ ಮಾತಿಗೆ ತಕ್ಷಣ ಮಾತನ್ನು ನೀಡುವ, ಸಮಯಕ್ಕೆ ತಕ್ಕಂತೆ ಎಲ್ಲರನ್ನೂ ಹೊಂದಾಣಿಕೆ ಮಾಡಿಕೊಳ್ಳುವ, ಸಂದರ್ಭ ಬಂದಾಗ ಚಂದ್ರುವನ್ನು ಸರಿಯಾದ ರೀತಿಯಲ್ಲಿ ಟ್ಯಾಕಲ್ ಮಾಡುವುದನ್ನೆಲ್ಲವನ್ನೂ ಕಲಿತ ಒಬ್ಬ ಕಥೆಯಾದ ಹುಡುಗಿಯಾಗಿದಾಳೆ. ಹರೀಶ ಇಂದು ಇವಳಿಗೆ ಒಂದು ರೀತಿಯ ಸ್ಪೂರ್ತಿಯಾಗಿದ್ದು ಸಮಯದ ಅಭಾವದ ನಿಮಿತ್ತಾ ಒಬ್ಬರನ್ನೊಬ್ಬರು ಬೇಟಿ ಮಾಡುವುದು ವಿರಳವಾಗಿದೆ. ಸಂದೇಶಕ್ಕೆ ಕೇವಲ ಹಬ್ಬದ ಶುಭಾಶಯಗಳು, ಬೆಳಗಿನ ಶುಭೋದಯಗಳು, ಶುಭರಾತ್ರಿ ಇಷ್ಟರಲ್ಲೇ ಕಾಲಕಳೆಯುವಂತಾಗಿದೆ. ಒಮ್ಮೊಮ್ಮೆ ಹರೀಶ ನನಗೆ ನಿನ್ನ ಶುಭಕಾಮನೆಗಳು ಬೇಕಾಗಿಲ್ಲಾ ನೀನೆ ಸಿಗದಿದ್ದ ಮೇಲೆ ಇವೆಲ್ಲದರ ಅಗತ್ಯ ನನಗಿಲ್ಲವೆಂದು ಜಗಳವಾಡಿದ ದಿನಗಳು ಬಹಳವಾಗಿವೆ, ಕೊನೆಗೂ ಹರೀಶ ಒಂಟಿಯಾಗಿ ತಿರುಗಾಡಲು ಪ್ರಾರಂಭಿಸಿಬಿಟ್ಟ. ನೋಡುಗರ ಕಣ್ಣಿಗೆ ಒಳ್ಳೆಯ ಸ್ನೇಹಿತರಂತಿದ್ದ ಅಂಬರ-ಹರೀಶ ಸಮಾಜದ ಕಟ್ಟಳೆಗಳು, ಕಟ್ಟುಪಾಡುಗಳಿಗೆ ಬಲಿಯಾದರು. ಮನೆಯ ಸುತ್ತಲಿನ ನೆಂಟರಿಷ್ಟರ ಮಾತುಗಳು ಅಂಬರಾಳಿಗೆ ಬಂಧನಗಳ, ಬೇಡಿಗಳಾಗಿ ಕಾಣತೊಡಗಿದವು. ಅಂಬರ ಇಂದು ಸಂಪೂರ್ಣವಾಗಿ ಹರೀಶನನ್ನು ಮರೆತು ತಾನು ತನ್ನ ಕುಟುಂಬ, ತಂದೆ ತಾಯಿ ಅತ್ತೆ, ಇಷ್ಟರಲ್ಲೆ ತನ್ನ ಜೀವನವನ್ನು ಸಾಗಿಸಲು ಮುಂದಾಳು, ಗಂಡುಮಕ್ಕಳಿಲ್ಲಾ ಎನ್ನುತ್ತಿದ್ದ ತಂದೆ ತಾಯಿಯ ಬದುಕಿಗೆ ಆಸರೆಯಾದಳು, ಅವಳ ನಿಜ ಜೀವನದ ಬದುಕಿಗೆ ಒಂದು ಕತೆಯಾದಳು.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw