ಇಂದು ಕನ್ನಡ ರಾಜ್ಯೋತ್ಸವ. ಪ್ರತಿ ವರ್ಷವೂ ಅದ್ದೂರಿಯಾಗಿ ಕರ್ನಾಟಕದಲ್ಲಿ ಆಚರಿಸುವ ನಾಡ ಹಬ್ಬ. ಕನ್ನಡ ನಮ್ಮ ಸ್ವಾಭಿಮಾನಿ ಭಾಷೆ. ಕರ್ನಾಟಕದಲ್ಲಿ ಹಲವು ಭಾಷೆಗಳಿದ್ದರೂ ಕನ್ನಡ ಮಾತನಾಡದೇ ಇರುವವರು ಬಹಳ ಕಡಿಮೆ. ಕರಾವಳಿ ಕಡೆಗೆ ಬಂದರೆ, ತುಳು, ಕೊಂಕಣಿ, ಉರ್ದು, ಬ್ಯಾರಿ ಹೀಗೆ ನಾನಾ ಮಾತೃ ಭಾಷೆಗಳನ್ನು ಮಾತನಾಡುವವರು ಕೂಡ ತಮ್ಮ ವ್ಯವಹಾರಕ್ಕೆ ಕನ್ನಡವನ್ನು ತಪ್ಪದೇ ಬಳಸುತ್ತಾರೆ. ಹಾಗಾಗಿಯೇ ಕನ್ನಡವನ್ನು ಮಾತೃಭಾಷೆ ಎಂದು ಹೇಳುವುದಕ್ಕಿಂತಲೂ ಕರ್ನಾಟಕದ ಸ್ವಾಭಿಮಾನಿ ಭಾಷೆ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗಳನ್ನು ನೋಡಿದರೆ, ನಮ್ಮ ಭಾಷಾ ಸ್ವಾಭಿಮಾನವನ್ನು ನಾವು ಕಳೆದುಕೊಳ್ಳುತ್ತಿದ್ದೇವೆಯೇ ಅಂತ ಅನ್ನಿಸುತ್ತದೆ.
ದೇಶವನ್ನು ಆಳಿದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷವು ಕನ್ನಡ ಸೇರಿದಂತೆ ಎಲ್ಲ ದ್ರಾವಿಡ ಭಾಷೆಗಳನ್ನು ನಾಶ ಮಾಡಿ ಕೇವಲ ಹಿಂದಿ ಮಾತ್ರವೇ ಉಳಿಯಬೇಕು ಎಂಬ ನಿಟ್ಟಿನಲ್ಲಿ, ಹಿಂದಿ ಭಾಷೆಯನ್ನು ಹೇರುತ್ತಿದ್ದಾರೆ. ಹಿಂದಿ ರಾಷ್ಟ್ರ ಭಾಷೆ ಎಂದು ಸಂವಿಧಾನಲ್ಲಿ ಹೇಳಲಾಗಿಲ್ಲವಾದರೂ ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಮಾಡಲು ಬಹಳಷ್ಟು ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ದ್ರಾವಿಡ ನಾಡಿನಲ್ಲಿ ತೀವ್ರ ವಿರೋಧವೂ ವ್ಯಕ್ತವಾಗಿದೆ. ಈಗಾಗಲೇ ತಮಿಳುನಾಡಿನಲ್ಲಿ ಅಲ್ಲಿನ ರಾಜ್ಯ ಸರ್ಕಾರ, ಅಲ್ಲಿನ ಸಂಸದರು, ನಾವು ಹಿಂದಿಯನ್ನು ಕಲಿಯುವುದಿಲ್ಲ. ನಮಗೆ ಅದರ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಕೇವಲ 400 ವರ್ಷಗಳ ಇತಿಹಾಸ ಇರುವ ಹಿಂದಿ ಭಾಷೆಯನ್ನು ದೇಶದಲ್ಲಿ ಹೇರಲು ಪ್ರಯತ್ನಗಳು ಮುಂದುವರಿದಿದ್ದರೆ.ಇತ್ತ 2 ಸಾವಿರಕ್ಕೂ ಅಧಿಕ ಹಳೆಯ ಕನ್ನಡ, ತುಳು, ತಮಿಳು, ತೆಲುಗು, ಮಲಯಾಳಂ ಭಾಷೆಗಳನ್ನು ನಾಶ ಮಾಡುವ ಪ್ರಯತ್ನವನ್ನುಮಾಡಲಾಗುತ್ತದೆ. ಆದರೆ ದುರಂತ ಏನೆಂದರೆ, ತಮಿಳು, ಮಲಯಾಳಂ, ತೆಲುಗು ಭಾಷೆಯ ರಾಜ್ಯಗಳಿಂದ ಹೋದ ಸಂಸದರು ಹಿಂದಿ ವಾಲಾಗಳು ಮುಖಕ್ಕೆ ಹೊಡೆದಂತೆ “ನಾವು ಹಿಂದಿ ಕಲಿಯುವುದಿಲ್ಲ” ಎಂದು ಹೇಳಿದ್ದರೆ, ಕರ್ನಾಟಕದಿಂದ ಹೋಗಿರುವ ಮಂಡ್ಯ ಸಂಸದೆ ಸುಮಲತಾ ಬಿಟ್ಟರೆ, ಬೇರಾವ ಸಂಸದರಿಗೂ ಕನ್ನಡದ ಪರವಾಗಿ ಧ್ವನಿ ಎತ್ತುವ ಧೈರ್ಯವೇ ಇಲ್ಲ. ಯಾಕೆಂದರೆ ಇವರೆಲ್ಲರೂ ಹಿಂದಿವಾಲಾ ಪಕ್ಷಗಳ ಗುಲಾಮರಾಗಿದ್ದಾರೆ.
ಇದೇ ನಾಚಿಗೆ ಕೆಟ್ಟ ಸಂಸದರು ಕೂಡ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಹೇಳಿದ್ದಾರೆ. ಹಿಂದಿವಾಲಗಳ ಮುಂದೆ ನಿಂತು ಕನ್ನಡದ ಪರವಾಗಿ ಘರ್ಜಿಸಲು ಸಾಧ್ಯವಾಗದ ಇವರನ್ನು ಆಯ್ಕೆ ಮಾಡಿದ ತಪ್ಪಿಗೆ ಇಂದು ಕನ್ನಡವನ್ನು ಕನ್ನಡಿಗರನ್ನು ಹಿಂದಿಯ ಮುಂದೆ ಮಂಡಿಯೂರಿ ಕುಳಿತುಕೊಳ್ಳುವಂತೆ ಮಾಡಿದೆ. ಹಿಂದಿವಾಲಗಳ ಮಕ್ಕಳು ಅವರ ಮಾತೃಭಾಷೆ ಸೇರಿ ಕೇವಲ 2 ಭಾಷೆಗಳನ್ನು ಕಲಿತರೆ ಸಾಕು. ಆದರೆ, ಕನ್ನಡಿಗರು ಕನ್ನಡ, ಇಂಗ್ಲಿಷ್, ಹಿಂದಿಯನ್ನೂ ಕಲಿಯಬೇಕಿದೆ. ಆದರೆ, ಹಿಂದಿಯ ಗುಲಾಮರಾಗಿ ಬಂದಿರುವ ಸಂಸದರು, ನೀವು ಇಂಗ್ಲಿಷ್ ಕಲಿಯುತ್ತೀರಿ, ಹಿಂದಿ ಕಲಿಯಲು ಏನು? ಇಂಗ್ಲಿಷ್ ಕಲಿತರ ಕನ್ನಡ ಉಳಿಯುತ್ತಾ ಹಾಗಿದ್ರೆ ಎಂದು ಪ್ರಶ್ನಿಸುತ್ತಿದ್ದಾರೆ. ಆದ್ರೆ, ಹಿಂದಿಯಲ್ಲಿ ಏನಿದೆ ಎಂದು ಹಿಂದಿಯನ್ನು ಕನ್ನಡಿಗರು ಕಲಿಯಬೇಕು? ಇಂಗ್ಲಿಷ್ ಇಲ್ಲದೇ ಇಂದು ಪ್ರಪಂಚ ನಡೆಯಲು ಸಾಧ್ಯವಿಲ್ಲ ಎನ್ನುವ ಸ್ಥಿತಿಯಿದೆ. ಇಂಗ್ಲಿಷ್ ಅನಿವಾರ್ಯ ಭಾಷೆ ಯಾಕೆಂದರೆ, ಮೆಡಿಕಲ್, ಇಂಜಿನಿಯರಿಂಗ್ ಮೊದಲಾದ ಉನ್ನತ ಶಿಕ್ಷಣಗಳನ್ನು ಮಾಡಬೇಕಾದರೆ, ಇಂಗ್ಲಿಷ್ ಅಗತ್ಯ. ಹಿಂದಿಯಲ್ಲಿ ಅವು ಯಾವುದೂ ಇಲ್ಲ. ಹಿಂದಿಯು ದೇಶದ ಮೂರು ರಾಜ್ಯಗಳಲ್ಲಿ ಮಾತ್ರವೇ ಇದೆ. ಅದಕ್ಕಾಗಿ ಇಡೀ ಭಾರತದಲ್ಲಿ ಹಿಂದಿಯನ್ನು ಹೇರಿ, ಇತರ ಭಾಷೆಗಳನ್ನು ನಾಶ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಇದು ಕಾಂಗ್ರೆಸ್ ನ ಕಾಲದಿಂದ ನಡೆದುಕೊಂಡು ಬಂದಿದ್ದು, ಬಿಜೆಪಿ ಸರ್ಕಾರವೂ ಇದೀಗ ಅದನ್ನೆ ಮುಂದುವರಿಸುತ್ತಿದೆ. ಕೇಂದ್ರ ಸರ್ಕಾರವು ಹಿಂದಿ ವಾಲಗಳ ಕೈಯಲ್ಲಿರುವುದರಿಂದಾಗಿ ದ್ರಾವಿಡ ಭಾಷೆಗಳು ಅಸಹಾಯಕ ಸ್ಥಿತಿಯಲ್ಲಿವೆ. ಸ್ವಾಭಿಮಾನವಿಲ್ಲದ, ತಪ್ಪುಗಳನ್ನು ತಟ್ಟಿ ಕೇಳುವ ಗುಂಡಿಗೆ ಇಲ್ಲದವರನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸಿದ್ದರಿಂದಲೇ ಇಂದಿಗೂ ಕನ್ನಡಿಗರು ತಮ್ಮ ಭಾಷೆಯನ್ನು ಉಳಿಸಿಕೊಳ್ಳಲೂ ಹೆಣಗಾಡುತ್ತಿದ್ದಾರೆ.
ಕನ್ನಡ ರಾಜ್ಯೋತ್ಸವವನ್ನು ಎಷ್ಟು ಅದ್ದೂರಿಯಾಗಿ ಮಾಡಿದರೇನು? ರಾಜ್ಯ ಸರ್ಕಾರ ಕನ್ನಡದ ಬಗ್ಗೆ ಎಷ್ಟು ಹೆಮ್ಮೆಯಿಂದ ಮಾತನಾಡಿದರೇನು? ಹಿಂದಿಯನ್ನು ಒಪ್ಪಿಕೊಂಡು ಅದರ ಗುಲಾಮಗಿರಿಯಲ್ಲಿ ಇಂದು ಕನ್ನಡವನ್ನು ಮುಂದುವರಿಸುವ ಸ್ಥಿತಿ ನಮಗಿದೆ. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಟಿಪ್ಪು ಸುಲ್ತಾನ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲಾದ ಧೈರ್ಯ ಶಾಲಿ, ಪರಾಕ್ರಮ ಶಾಲಿ, ಬುದ್ಧಿವಂತರಿಗೆ ಜನ್ಮ ನೀಡಿದ ಕನ್ನಡ ತಾಯಿಯ ಹೊಟ್ಟೆಯಲ್ಲಿ ಇಂದು, ತನ್ನ ರಾಜ್ಯದ ಭಾಷೆಯ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಲು ಸಾಧ್ಯವಾಗದ ಹೇಡಿಗಳು ಹುಟ್ಟಿರುವುದು ಇಡೀ ರಾಜ್ಯಕ್ಕೆ ಅವಮಾನ. ಅಂತೂ ಹಿಂದಿವಾಲಗಳ ಗುಲಾಮರಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರೇನು ಬಿಟ್ಟರೇನು…..