ಕನ್ನಡ ಸಿನಿಮಾ ದುರ್ಗತಿಯೂ ನಾಯಕ ನಟರ ಭ್ರಮೆಯೂ-ನಾ ದಿವಾಕರ
ಸಿನಿಮಾ ರಂಗ ಎರಡು ನೆಲೆಗಳಲ್ಲಿ ಕೆಲಸ ಮಾಡುತ್ತದೆ. ಮೊದಲನೆಯದು ಶುದ್ಧ ಮನರಂಜನೆ, ಅಂದರೆ ಪ್ರೇಕ್ಷಕರನ್ನು ರಂಜಿಸುವ ಒಂದು ಮಾಧ್ಯಮವಾಗಿ, ಜನಸಾಮಾನ್ಯರು ಜೀವನದ ಜಂಜಾಟಗಳಿಂದ ಕೆಲ ಕಾಲ ಹೊರಬರಲು ರಜತ ಪರದೆ ನೆರವಾಗುತ್ತದೆ. ಶೇ 90ಕ್ಕೂ ಹೆಚ್ಚು ಸಿನಿಮಾಗಳು ಈ ವರ್ಗಕ್ಕೆ ಸೇರಿರುತ್ತವೆ. ಎರಡನೆಯ ನೆಲೆ ಎಂದರೆ ಸಮಾಜದ ಅಂಕು ಡೊಂಕುಗಳನ್ನು, ಓರೆಕೋರೆಗಳನ್ನು ಪರದೆಯ ಮೇಲೆ ಬಿತ್ತರಿಸುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸವನ್ನೂ ಸಿನಿಮಾ ಮಾಡಲು ಸಾಧ್ಯವಿದೆ. ಇದನ್ನು ಸಿನಿಮಾ ಪರಿಭಾಷೆಯಲ್ಲಿ ಕಲಾತ್ಮಕ ಅಥವಾ ಹೊಸ ಅಲೆಯ ಚಿತ್ರಗಳು ಎಂದು ಕರೆಯಲಾಗುತ್ತದೆ.
ಕಲಾತ್ಮಕ ಚಿತ್ರಗಳಿಗೂ ಸಹ ತನ್ನದೇ ಆದ ಇತಿಹಾಸವಿದೆ. ಕಮರ್ಷಿಯಲ್ ಎಂದು ಹೇಳಲಾಗುವ ಅನೇಕ ಚಲನ ಚಿತ್ರಗಳೂ ಸಹ ಸಾಮಾಜಿಕ ಸಂದೇಶವನ್ನು ಹೊತ್ತು ಬಂದು, ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವುದನ್ನು ಕಂಡಿದ್ದೇವೆ. ಭಾರತದಲ್ಲಿ ಸಿನಿಮಾ ಎಂದರೆ ವಿಸ್ಕೃತ ನಾಟಕಗಳಂತೆಯೇ ಮೂಡಿಬರುತ್ತಿದ್ದುದು ಸಾಮಾನ್ಯವಾಗಿತ್ತು. ಮೂಕಿ ಸಿನಿಮಾ ಕಾಲದಿಂದಲೂ ಸಾಂಪ್ರದಾಯಿಕ ರಂಗಭೂಮಿಯ ಪ್ರಯೋಗಗಳನ್ನೇ ಸಿನಿಮಾ ಪರದೆಯ ಮೇಲೆ ಸಹ ಮಾಡುವ ಪ್ರಯತ್ನಗಳು ಯಶಸ್ವಿಯಾಗುತ್ತಿದ್ದವು. ಹಿಂದಿ ಚಿತ್ರರಂಗದ ಗುರುದತ್, ಬಸು ಭಟ್ಟಾಚಾರ್ಯ, ರಾಜಕಪೂರ್, ಹೃಷಿಕೇಷ್ ಮುಖರ್ಜಿ, ಶ್ಯಾಂ ಬೆನಗಲ್, ಬಂಗಾಲದ ಸತ್ಯಜಿತ್ ರೇ, ಮೃಣಾಲ್ ಸೆನ್, ಋತ್ವಿಕ್ ಘಟಕ್, ಮಲಯಾಳದ ಅಡೂರ್ ಗೋಪಾಲಕೃಷ್ಣನ್ ಹೀಗೆ ಹಲವು ನಿರ್ದೇಶಕರು ಚಲನಚಿತ್ರ ನಿರ್ಮಾಣಕ್ಕೆ ಹೊಸ ಸ್ಪರ್ಶ ನೀಡುವುದರಲ್ಲಿ ಯಶಸ್ವಿಯಾಗಿದ್ದರು.
ಕನ್ನಡದಲ್ಲಿ 1960ರ ದಶಕದವರೆಗೂ ಇಡೀ ಚಿತ್ರರಂಗವನ್ನು ಆವರಿಸಿಕೊಂಡಿದ್ದ ಪೌರಾಣಿಕ ಕಥನಗಳಿಂದ ಹೊರಬಂದು ಸಾಮಾಜಿಕ ಕಥಾವಸ್ತುವಿನ ಚಿತ್ರ ನಿರ್ಮಾಣ ಆರಂಭವಾದದ್ದು 1970ರ ಆಸುಪಾಸಿನಲ್ಲಿ. ಕೌಟುಂಬಿಕ ಕಥಾವಸ್ತುವಿನ ಹಿನ್ನೆಲೆಯಲ್ಲೇ ಒಂದು ಉತ್ತಮ ಸಾಮಾಜಿಕ ಸಂದೇಶವನ್ನು ಸಾರುವ ಚಿತ್ರಕಥೆಗಳು ಹಲವು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಬೆಳೆಸಿವೆ. ಹಲವು ಕಾದಂಬರಿ ಆಧರಿತ ಚಿತ್ರಗಳು ಕನ್ನಡ ಚಿತ್ರರಂಗವನ್ನು ವಿಶ್ವಮಟ್ಟದಲ್ಲಿ ಖ್ಯಾತಿಪಡೆಯುವಂತೆ ಮಾಡಿವೆ. ನಾಂದಿ, ಉಯ್ಯಾಲೆ, ಚಕ್ರತೀರ್ಥ, ಹಣ್ಣೆಲೆ ಚಿಗುರಿದಾಗ, ಬಂಗಾರದಹೂವು, ಚಂದವಳ್ಳಿಯ ತೋಟ, ಸಂಧ್ಯಾರಾಗ, ನಂದಾದೀಪ, ಗೆಜ್ಜೆಪೂಜೆ, ಶರಪಂಜರ ಫಣಿಯಮ್ಮ, ಸಂಸ್ಕಾರ, ಹೀಗೆ ಹಲವು ಚಿತ್ರಗಳು ನಮ್ಮ ಸಮಾಜವನ್ನು ಇಂದಿಗೂ ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ, ಮೂಢನಂಬಿಕೆಗಳ ವಿರುದ್ಧ, ಸಾಮಾಜಿಕ ಅನಿಷ್ಟಗಳ ವಿರುದ್ಧ ಬೆಳಕು ಚೆಲ್ಲಿವೆ.
ಪೌರಾಣಿಕ, ಐತಿಹಾಸಿಕ ಮತ್ತು ಭಕ್ತಿರಸ ಪ್ರಧಾನ ಚಿತ್ರಗಳ ಪರಂಪರೆಯಲ್ಲೂ ಕನ್ನಡ ಚಿತ್ರರಂಗ ತನ್ನದೇ ಆದ ಛಾಪು ಮೂಡಿಸಿದ್ದರೆ ಅದರ ಹಿಂದೆ ಡಾ ರಾಜಕುಮಾರ್ ಅವರ ಅಭಿನಯ ಸಾಮಥ್ರ್ಯ ಮತ್ತು ಕಲಾಪ್ರೌಢಿಮೆ ಇತ್ತು ಎನ್ನುವುದು ಸುಸ್ಪಷ್ಟ. ಬಹುಶಃ ಡಾ ರಾಜ್ ಅವರ ಮೇರು ನಟನೆಯನ್ನು ಹೊರಗಿಟ್ಟು ಈ ಸರಣಿಯ ಹಲವಾರು ಚಿತ್ರಗಳನ್ನು ಪರದೆಯ ಮೇಲೆ ಊಹಿಸಿಕೊಳ್ಳುವುದೂ ಕಷ್ಟ. ರಣಧೀರ ಕಂಠೀರವದಿಂದ ಮಯೂರ ಚಿತ್ರದವರೆಗೆ, ಹರಿಭಕ್ತ ಚಿತ್ರದಿಂದ ಭಕ್ತಕುಂಬಾರದವರೆಗೆ, ಮಹಿಷಾಸುರ ಮರ್ಧಿನಿಯಿಂದ ಭಬ್ರುವಾಹನನವರೆಗೆ ಡಾ ರಾಜ್ ಈ ಚಾರಿತ್ರಿಕ, ಕಾಲ್ಪನಿಕ ಪಾತ್ರಗಳಿಗೆ ಜೀವ ತುಂಬಿದ್ದರು. 1960ರ ದಶಕದ ಉತ್ತರಾರ್ಧದಲ್ಲಿ ಡಾ ರಾಜ್ ಸಾಮಾಜಿಕ ಕಥಾವಸ್ತು ಇರುವ ಚಿತ್ರಗಳೆಡೆಗೆ ಹೆಚ್ಚು ವಾಲಿದ್ದರು.
1960 ರಿಂದ 1980ರವರೆಗೆ ಕನ್ನಡ ಚಿತ್ರಗಳಲ್ಲಿ ನಾಯಕ ಒಂದು ನಿರ್ದಿಷ್ಟ ಕಥಾವಸ್ತುವಿನ ನಾಯಕನಾಗಿರುತ್ತಿದ್ದ. ಒಂದು ನಿರ್ದಿಷ್ಟ ಊರು, ಅಲ್ಲಿನ ಪರಿಸರದಲ್ಲಿನ ಸಾಮಾಜಿಕ ಸ್ಥಿತ್ಯಂತರಗಳು, ಅಲ್ಲಿನ ಕೌಟುಂಬಿಕ ಜೀವನ ಮತ್ತು ಜೀವನೋಪಾಯ, ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳು ಮತ್ತು ಸಾಮಾಜಿಕ ಜೀವನದ ಮೇಲೆ ಪ್ರಭಾವ ಬೀರುವ ಊಳಿಗಮಾನ್ಯ ಧೋರಣೆ, ಜಾತಿ ವ್ಯವಸ್ಥೆ, ಭೂಮಾಲೀಕರ ಶೋಷಣೆ, ಜಾತಿ ತಾರತಮ್ಯ ಹೀಗೆ ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ರೂಪುಗೊಳ್ಳುತ್ತಿದ್ದ ಕಥೆಗಳು ಒಂದು ಕುಟುಂಬ ಮತ್ತು ಆ ಕುಟುಂಬ ಸದಸ್ಯರ ಜೀವನದ ಸುತ್ತ ಹೆಣೆದುಕೊಳ್ಳುತ್ತಿದ್ದವು. ಇಲ್ಲಿ ನಾಯಕನ ವೈಭವೀಕರಣ ಸಹಜವಾಗಿಯೇ ಇರುತ್ತಿತ್ತು. ಆದರೆ ನಾಯಕನ ಸುತ್ತ ಪ್ರಭಾವಳಿ ಇರುತ್ತಿರಲಿಲ್ಲ. ಬಂಗಾರದ ಮನುಷ್ಯದಂತಹ ಸಂದೇಶ ಪ್ರಧಾನ ಚಿತ್ರದಲ್ಲೂ ಸಹ ನಾಯಕ ನಟ ಒಂದು ರೂಪಕವಾಗಿಯೇ ಕಂಡುಬರುತ್ತಾನೆ.
ಹಾಗಾಗಿ ಈ ಕಾಲಘಟ್ಟದ ಚಲನಚಿತ್ರಗಳನ್ನು ನೋಡಿ ಚಿತ್ರಮಂದಿರಗಳಿಂದ ಹೊರಬರುವಾಗ ಪಾತ್ರಗಳು ಮನದಲ್ಲಿ ಉಳಿಯುತ್ತಿದ್ದವು, ಹೀರೋ ಅಥವಾ ಹೀರೋಯಿನ್ ಅಲ್ಲ. ಬಂಗಾರದ ಮನುಷ್ಯದ ರಾಜೀವ, ಶರಪಂಜರದ ಕಾವೇರಿ, ಸಾಕ್ಷಾತ್ಕಾರದ ಮಹೇಶ, ಹಂಸಗೀತೆಯ ಭೈರವಿ ವೆಂಕಟಸುಬ್ಬಯ್ಯ, ನಾಗರಹಾವು ಚಿತ್ರದ ರಾಮಾಚಾರಿ ಹೀಗೆ ನಾಯಕ/ನಾಯಕಿ ನಟನಟಿಯರು ನಿರ್ವಹಿಸುತ್ತಿದ್ದ ಪಾತ್ರಗಳು ಅಚ್ಚಳಿಯದೆ ಉಳಿಯುತ್ತಿದ್ದವು. ಬಹುಪಾಲು ಕಮರ್ಷಿಯಲ್ ಚಿತ್ರಗಳಲ್ಲೂ ಸಹ ನಾಯಕ ನಟನ ಪ್ರಭಾವಳಿ ಕಥಾಹಂದರವನ್ನು ಮೀರಿ ಹೋಗುತ್ತಿರಲಿಲ್ಲ, ಕಥೆಯ ಪ್ರಾದೇಶಿಕ ವಿಸ್ತಾರವನ್ನೂ ದಾಟಿ ಹೋಗುತ್ತಿರಲಿಲ್ಲ. ನಂದಗೋಕುಲ, ಬಯಲುದಾರಿ, ನಮ್ಮ ಸಂಸಾರ, ನಾಗರಹಾವು ಹೀಗೆ ನೂರಾರು ಚಿತ್ರಗಳ ನಾಯಕರು ಆ ಚಿತ್ರದ ಕಥಾವಸ್ತುವಿಗಷ್ಟೇ ಸೀಮಿತವಾಗಿ ವೈಭವೀಕರಣಕ್ಕೊಳಪಡುತ್ತಿದ್ದರು. ರಜತ ಪರದೆಯ ಹೊರಗೆ ತಮ್ಮದೇ ಆದ ಅಭಿಮಾನಿ ವೃಂದವನ್ನು ಹೊಂದಿದ್ದುದೂ ಹೌದು. ಪರದೆಯ ಮೇಲಾಗಲೀ, ಪರದೆಯಿಂದಾಚೆಗಿನ ಸಾರ್ವಜನಿಕ ಬದುಕಿನಲ್ಲಾಗಲೀ ಈ ಕಾಲಘಟ್ಟದ ನಾಯಕನಟರು ತಮ್ಮನ್ನು ಸಮಸ್ತ ಕನ್ನಡಿಗರ ಅಸ್ಮಿತೆಯೊಡನೆ ಸಮೀಕರಿಸಿಕೊಳ್ಳುತ್ತಿರಲಿಲ್ಲ.
ಈ ಪರಂಪರೆ ಕೊನೆಯಾದದ್ದು 1980ರ ದಶಕದ ಆಸುಪಾಸಿನಲ್ಲಿ. ವ್ಯವಸ್ಥೆಯ ವಿರುದ್ಧ ಬಂಡಾಯ ಹೂಡುವ, ಪ್ರತಿರೋಧದ ದನಿಯಾಗಿ ನಾಯಕ ಪಾತ್ರಧಾರಿಗಳು ಪರದೆಯ ಮೇಲೆ ವಿಜೃಂಭಿಸಲು ಆರಂಭವಾದ ಕಾಲಘಟ್ಟ ಇದು. ವ್ಯವಸ್ಥೆಯ ವಿರುದ್ಧ ಸಿಡಿದೇಳುವ ನಾಯಕನ ಸುತ್ತ ಹೆಣೆದ ಕಥಾವಸ್ತುಗಳು 40 ವರ್ಷಗಳು ಕಳೆದರೂ ಇಂದಿಗೂ ಪರದೆಯ ಮೇಲೆ ಕಾಣುತ್ತಲೇ ಇವೆ. ಹಿಂದಿ ಚಿತ್ರರಂಗದಲ್ಲಿ ದಕ್ಷಿಣ ರಾಜ್ಯಗಳಂತೆ ಸಿನಿಮಾ ನಟರನ್ನು ಆರಾಧ್ಯ ದೈವದಂತೆ ಕಾಣುವ ಪರಂಪರೆ ಇಲ್ಲವಾದ್ದರಿಂದ “ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ” ನಾಯಕ ಪಾತ್ರಗಳು ಪರದೆಯಿಂದಾಚೆ ಪ್ರಭಾವಳಿ ಸೃಷ್ಟಿಸಲಿಲ್ಲ. ಅಮಿತಾಬ್ ಇಂತಹ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರೂ, ತನ್ನನ್ನು ಸಮಸ್ತ ಮರಾಠಿಗರ/ಹಿಂದಿ ಭಾಷಿಕರ ಪ್ರತಿನಿಧಿ ಎಂದು ಬಿಂಬಿಸುವಂತಹ ಪಾತ್ರ ನಿರ್ವಹಿಸಲಿಲ್ಲ.
ದಕ್ಷಿಣದಲ್ಲಿ ಆದದ್ದೇ ಬೇರೆ. ಇಲ್ಲಿ ಸಿನಿಮಾದಲ್ಲಿನ ನಾಯಕ, ಆ ಚಿತ್ರದ ಕಥಾವಸ್ತುವಿನಿಂದ ಒಮ್ಮೆಲೆ ಜಿಗಿದು ಸಮಸ್ತ ಕನ್ನಡಿಗರ ನಡುವೆ ಪ್ರತಿಷ್ಠಾಪನೆಯಾಗಿಬಿಟ್ಟ. ಡಾ ರಾಜ್ ಸಹ ಈ ಬದಲಾವಣೆಗೆ ಹೊಂದಿಕೊಂಡಿದ್ದನ್ನು ಪರಶುರಾಮ್, ಶಬ್ದವೇಧಿ, ಧೃವತಾರೆ ಮುಂತಾದ ಚಿತ್ರಗಳಲ್ಲಿ ಗಮನಿಸಬಹುದು. ಆದರೆ ಸಿನಿಮಾ ಚಿತ್ರಕಥೆಯ ನಾಯಕನನ್ನು ಸಮಸ್ತ ಜನತೆಯ ಪ್ರೆತಿನಿಧಿಯನ್ನಾಗಿ, ಅಸ್ಮಿತೆಯನ್ನಾಗಿ ಮಾಡುವ ಪರಂಪರೆಗೆ ನಾಂದಿ ಹಾಡಿದ್ದು ವಿಷ್ಣುವರ್ಧನ್ ಮತ್ತು ಅಂಬರೀಷ್. ಇದನ್ನು ಮುಂದುವರೆಸಿದವರು ರವಿಚಂದ್ರನ್,ಉಪೇಂದ್ರ ಮತ್ತು ಇತ್ತೀಚಿನ ಪೊಗರುವರೆಗಿನ ನಾಯಕ ನಟರು. ನಾಯಕ ನಟನ ವೈಭವೀಕರಣ ರೋಚಕತೆ ಪಡೆಯುತ್ತಿದ್ದಂತೆಲ್ಲಾ ಚಿತ್ರಗಳಲ್ಲಿ ಹಿಂಸಾತ್ಮಕ ದೃಶ್ಯಗಳೂ ಹೆಚ್ಚಾಗತೊಡಗಿದವು.
ದೇಶದಲ್ಲಿ ಬದಲಾಗುತ್ತಿದ್ದ ರಾಜಕೀಯ ಸನ್ನಿವೇಶಗಳು, ಸಾಂಸ್ಕೃತಿಕ ರಾಜಕಾರಣ ಸೃಷ್ಟಿಸಿದ್ದ ಅನ್ಯಮತೀಯ ದ್ವೇಷ ಮತ್ತು ಭಯೋತ್ಪಾದನೆಯ ಹೆಚ್ಚಳದಿಂದ ಸೃಷ್ಟಿಯಾದ ಭೂಗತ ಲೋಕದ ಚಿತ್ರಣ ಇವೆಲ್ಲವೂ ಸಿನಿಮಾ ನಾಯಕನನ್ನು ಸರ್ವವ್ಯಾಪಿ, ಸರ್ವಶಕ್ತ, ಸರ್ವಾಂತರ್ಯಾಮಿಯನ್ನಾಗಿ ಮಾಡಿಬಿಟ್ಟಿತು. ಸಕಲ ಸದ್ಗುಣ ಸಂಪನ್ನ ಎನ್ನಬಹುದಾದ ಡಾ ರಾಜ್ ನಿರ್ಮಿಸಿದ್ದ ನಾಯಕನ ಛಾಯೆ ಕ್ರಮೇಣ ಮರೆಯಾಗಿಬಿಟ್ಟಿತು. ಸಮಾಜದ ಮತ್ತು ವ್ಯವಸ್ಥೆಯ ಓರೆಕೋರೆಗಳನ್ನು ಸರಿಪಡಿಸಲು ನಾಯಕ “ ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ” ನ ಪಾತ್ರ ನಿರ್ವಹಿಸುತ್ತಲೇ ಎಲ್ಲವನ್ನೂ ಸದೆಬಡಿಯುವ ಒಂದು ವಿಶಿಷ್ಟ ಪರಂಪರೆ ಚಿತ್ರರಂಗವನ್ನು ಆವರಿಸಿತ್ತು.
ಇಲ್ಲಿ ಪುರುಷ ಪ್ರಧಾನ ಮೌಲ್ಯಗಳೂ ಅಷ್ಟೇ ಪರಿಣಾಮಕಾರಿಯಾಗಿದ್ದುದರಿಂದ ಕನ್ನಡ ಚಿತ್ರರಂಗ ಪ್ರಬುದ್ಧ ನಟಿ ಎನ್ನಬಹುದಾದ ಒಬ್ಬ ನಾಯಕ ನಟಿಯನ್ನೂ 1990ರ ನಂತರ ಸೃಷ್ಟಿಸಲಾಗಲಿಲ್ಲ. ಬೆರಳೆಣಿಕೆಯಷ್ಟು ನಟಿಯರು ಇದ್ದರೂ ಅವಕಾಶವಂಚಿತರಾಗಿ ನೇಪಥ್ಯಕ್ಕೆ ಸರಿಯಬೇಕಾಯಿತು. ತಮ್ಮ ಇಮೇಜ್ ಉಳಿಸಿಕೊಳ್ಳಲು ನಟಿ ಮಾಲಾಶ್ರೀ ಇದೇ ಸಿದ್ಧಮಾದರಿಯ ನಾಯಕ ನಟನ ಸ್ಥಾನ ಅಲಂಕರಿಸಬೇಕಾಯಿತು. ಈ ಪರಂಪರೆಯಲ್ಲಿ ಪೊಲೀಸ್ ಪಾತ್ರಗಳೂ ಸಹ ಕಾನೂನು ಚೌಕಟ್ಟುಗಳನ್ನು ಮೀರಿ ಸರ್ವಶಕ್ತ ನಾಯಕನ ಪ್ರಭಾವಳಿಗೆ ಒಳಗಾದವು. ಇತ್ತೀಚಿನ ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದಲ್ಲಿ (ಧೈರ್ಯವಿದ್ದವರು ನೋಡಬಹುದು) ಸಮವಸ್ತ್ರವಿಲ್ಲದೆಯೇ ಶತ್ರುಪಾಳಯವನ್ನು ಸದೆಬಡಿಯುವ ದೃಶ್ಯಗಳೇ ಹೆಚ್ಚಾಗಿರುವುದನ್ನು ನೋಡಿದರೆ, ಈ ಬೆಳವಣಿಗೆಯ ಮತ್ತೊಂದು ಆಯಾಮವೂ ಪರಿಚಯವಾಗುತ್ತದೆ.
ಸರ್ವಶಕ್ತ ನಾಯಕ ವಿಜೃಂಭಿಸಬೇಕೆಂದರೆ ಅನ್ಯಾಯಗಳು ಕ್ರೂರ ಸ್ವರೂಪದಲ್ಲಿ ವ್ಯಕ್ತವಾಗಬೇಕು. ನಾಯಕನಲ್ಲಿ ಆಕ್ರೋಶ ಹೆಚ್ಚಾಗಬೇಕೆಂದರೆ ಅವನ ಸುತ್ತಮುತ್ತಲಿನ ಜನರು ಕ್ರೂರ ಚಿತ್ರಹಿಂಸೆಗೊಳಪಡಬೇಕು. ನಾಯಕ ನೂರಡಿ ದೂರದಲ್ಲಿ ನಿಂತು ಮುಷ್ಟಿ ಬಿಗಿದರೆ ಹತ್ತಾರು ಖಳನಾಯಕನ ಭಂಟರು ಗಗನದೆತ್ತರಕ್ಕೆ ಎಗರಿ ಧೊಪ್ಪೆಂದು ಕೆಳಕ್ಕೆ ಬೀಳುವ ದೃಶ್ಯಗಳು ಈ ಸರ್ವಶಕ್ತ, ಸರ್ವಾಂತರ್ಯಾಮಿ ನಾಯಕ ನಟನನ್ನು ಮರೆಸಲು ನೆರವಾದವು. ಅಭಿನಯ ಕೌಶಲ್ಯಗಳು ನೇಪಥ್ಯಕ್ಕೆ ಸರಿದು ಹಾವಭಾವಗಳು ಮುನ್ನೆಲೆಗೆ ಬಂದ ಈ ಬೆಳವಣಿಗೆಯ ನಡುವೆ, ನಟನೆಯಲ್ಲಿ ಪ್ರಬುದ್ಧತೆ ಕಳೆದುಹೋಗಿದ್ದು ನಮ್ಮ ಗಮನಕ್ಕೇ ಬರಲಿಲ್ಲ. ಹಾಗೆಯೇ ಪರದೆಯ ಮೇಲೆ ಎಲ್ಲವನ್ನೂ ಮೆಟ್ಟಿನಿಲ್ಲುವ ನಾಯಕ ನಟನ ಇಮೇಜ್ ಕಾಪಾಡಲು ಕಾಲಿನಿಂದ ಎದೆಗೆ ಒದೆಯುವ ದೃಶ್ಯಗಳು ಹೆಚ್ಚು ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದವು.
ಚಲನ ಚಿತ್ರದ ನಾಯಕ ಅನ್ಯಾಯವನ್ನು ಮೆಟ್ಟಿನಿಲ್ಲುವುದು ಜನಪ್ರಿಯ ಸಿದ್ಧಸೂತ್ರ ಆದರೆ ಸರ್ವಶಕ್ತ ನಾಯಕ ತನ್ನ ವಿರುದ್ಧ ನಿಲ್ಲುವ ಎಲ್ಲರನ್ನೂ ವಸ್ತುಶಃ ಮೆಟ್ಟಿನಿಲ್ಲುವುದು ವಿಕೃತ ಕ್ರೌರ್ಯದ ಸಂಕೇತ. ಖಳನಾಯಕನನ್ನು ಮತ್ತು ಖಳನ ಭಂಟರನ್ನು ಕಾಲಿನಿಂದಲೇ ಹೊಸಕಿಹಾಕುವುದು, ನಾಯಕ ಗಾಳಿಯಲ್ಲಿ ವಾನರನಂತೆ ಹಾರಿಬಂದು ಖಳನ ಎದೆಗೆ ಕಾಲಿನಿಂದ ಒದೆಯುವುದು ಇದು ಹೀರೋನ ಇಮೇಜ್ ಹೆಚ್ಚಿಸಲು ನೆರವಾಗಿದ್ದೇನೋ ಹೌದು, ಆದರೆ ಈ ಅಸಹಜತೆಯ ಹೊರತುಪಡಿಸಿ ನೋಡಿದಾಗ, ಇಂತಹ ದೃಶ್ಯಗಳು ಸಮಾಜಕ್ಕೆ ವಿಕೃತ ಸಂದೇಶವನ್ನು ರವಾನಿಸುವುದನ್ನು ಅಲ್ಲಗಳೆಯಲಾಗುವುದಿಲ್ಲ.
ಪೊಗರು ಚಿತ್ರದ ದೃಶ್ಯವನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಬ್ರಾಹ್ಮಣ್ಯವನ್ನು, ಬ್ರಾಹ್ಮಣರ ಅಂಧಶ್ರದ್ಧೆಯನ್ನು, ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯವನ್ನು ಬಿಂಬಿಸುವ ಅನೇಕ ಚಿತ್ರಗಳಲ್ಲಿ ಅಸ್ಪೃಶ್ಯ ಸಮುದಾಯವನ್ನು ಅಪಮಾನಿಸುವ ದೃಶ್ಯಗಳು ಹೇರಳವಾಗಿವೆ. ಕರ್ಮಠ ಬ್ರಾಹ್ಮಣ್ಯದ ಮೌಢ್ಯ, ಅಂಧವಿಶ್ವಾಸ ಮತ್ತು ಸಾಂಪ್ರದಾಯಿಕ ಮಡಿವಂತಿಕೆಯನ್ನು ಲೇವಡಿ ಮಾಡುವ ದೃಶ್ಯಗಳೂ ಹೇರಳವಾಗಿವೆ. ಉದಯಕುಮಾರ್ ನಟಿಸಿದ ಹೇಮಾವತಿ ಚಿತ್ರದಲ್ಲಿ ಬ್ರಾಹ್ಮಣ್ಯದ ವಿಕೃತಿಗಳನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಆದರೆ ಸಮಾಜಕ್ಕೆ ಒಂದು ಸತ್ ಸಂದೇಶ ನೀಡಲು ಬಾಯಿಂದ ಮಾತನಾಡಿದರೂ ಸಾಕಲ್ಲವೇ ? ಪೊಗರು ನಾಯಕ ಕಾಲಿನಿಂದ ಮಾತನಾಡುತ್ತಾನೆ.
ಇದನ್ನು ಸೃಜನಶೀಲತೆ ಎನ್ನಲಾಗುವುದಿಲ್ಲ. ಈ ದೃಶ್ಯವನ್ನು ಹಿಂದೂ ಧರ್ಮಕ್ಕೆ ಅವಮಾನ ಮಾಡಿದಂತೆ ಎಂದು ಯೋಚಿಸುವ ಬದಲು, ಮಾನವ ಸಂವೇದನೆಯನ್ನು ಅವಮಾನಿಸಿದಂತೆ ಎಂದು ಯೋಚಿಸುವುದು ಪ್ರಬುದ್ಧತೆ. ಈ ಪ್ರಬುದ್ಧತೆ ಪಡೆಯಲು ಅಸ್ಪೃಶ್ಯ ಜಾತಿಗಳನ್ನು, ಅಲ್ಪಸಂಖ್ಯಾತ ಸಮುದಾಯವನ್ನು, ಮಹಿಳೆಯರನ್ನು, ಶೋಷಿತರನ್ನು ಇನ್ನೂ ಕ್ರೂರ ಮಾದರಿಯಲ್ಲಿ ಅವಮಾನಿಸಿರುವ ಚಿತ್ರಗಳ ಬಗ್ಗೆಯೂ ದನಿ ಎತ್ತಬೇಕಲ್ಲವೇ ? “ ಶೂದ್ರ ಮುಂಡೇದೇ ” ಎಂದು ಹೀಗಳೆಯುವ ದೃಶ್ಯಗಳು ಎಷ್ಟು ಚಿತ್ರಗಳಲ್ಲಿವೆ ಅಲ್ಲವೇ ? ಇದು ಒಂದೆಡೆ ಶೂದ್ರ/ಅಸ್ಪೃಶ್ಯರನ್ನು ಮತ್ತೊಂದೆಡೆ ಹೆಣ್ತನವನ್ನು ಅಪಮಾನಿಸುವುದೇ ಅಲ್ಲವೇ ? ಈ ಸೂಕ್ಷ್ಮಗಳನ್ನು ಅರಿತು ಚಲನ ಚಿತ್ರ ನಿರ್ಮಿಸುವ ಪರಂಪರೆಯಿಂದ ಕನ್ನಡ ಚಿತ್ರರಂಗ ಎಂದೋ ಹೊರಬಂದಿದೆ. ಹಾಗಾಗಿಯೇ “ಪೊಗರು ” ತುಸು ಹೆಚ್ಚು.
ಇದೇ ಸಂದರ್ಭದಲ್ಲಿ ಜಗ್ಗೇಶ್ ಮತ್ತು ದರ್ಶನ್ ವಿವಾದವನ್ನೂ ಗಮನಿಸಿದಾಗ ನಮ್ಮ ಕನ್ನಡ ಸಿನಿಮಾದ ಹೀರೋಗಳು ಹೇಗೆ ಸರ್ವಾಂತರ್ಯಾಮಿಗಳಾಗಲು ಬಯಸುತ್ತಿದ್ದಾರೆ ಎನ್ನುವುದನ್ನೂ ಗ್ರಹಿಸಬಹುದು. ಪರದೆಯ ಮೇಲೆ ಸಮಸ್ತ ಆರು ಕೋಟಿ ಕನ್ನಡಿಗರು ನನ್ನ ಹಿಂದಿದ್ದಾರೆ ಎಂದು ಆತ್ಮರತಿಯಿಂದ ಬೀಗುವ ಹೀರೋ ಹೊರಜಗತ್ತಿನಲ್ಲೂ ಹಾಗೆಯೇ ಭಾವಿಸುವುದರಿಂದಲೇ, ಜಗ್ಗೇಶ್ ತಮಗೆ ಅವಮಾನವಾದರೆ ಸಮಸ್ತ ಕನ್ನಡಿಗರಿಗೆ ಅವಮಾನವಾದಂತೆ ಎಂಬ ಭ್ರಮೆಗೊಳಪಡುತ್ತಾರೆ. ಇಬ್ಬರು ನಟರ ನಡುವಿನ ಸಂಘರ್ಷ ನಾಡಿನ ಅಸ್ಮಿತೆಯೊಡನೆ ಸಮೀಕರಿಸಲ್ಪಡುವುದು ಅಪಾಯಕಾರಿಯಷ್ಟೇ ಅಲ್ಲ, ಅಸಹ್ಯಕರ ಬೆಳವಣಿಗೆ. ತಮ್ಮದೇ ಆದ ರಾಜಕೀಯ ಅಸ್ತಿತ್ವ ಮತ್ತು ಪರದೆಯ ಮೇಲಿನ ಇಮೇಜ್ ಕಾಪಾಡಿಕೊಳ್ಳಲು ಆಗಾಗ್ಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಈ ನಾಯಕ ನಟರಲ್ಲಿ ಸಮಷ್ಟಿ ಪ್ರಜ್ಞೆಯೇ ಇಲ್ಲ ಎನ್ನುವುದಕ್ಕೆ ಸಾಕ್ಸ್ಯಾಧಾರಗಳೇನೂ ಬೇಕಿಲ್ಲ.
ಗುಂಪು ಥಳಿತ ಮತ್ತು ದೈಹಿಕ ಹಲ್ಲೆಯ ಮೂಲಕ ಹಾಸ್ಯದ ಹೊನಲು ಹರಿಸುವ ರಜತ ಪರದೆಯಿಂದ ಇನ್ನೆಂತಹ ಸೃಜನಶೀಲತೆ ನಿರೀಕ್ಷಿಸಲು ಸಾಧ್ಯ ? ಇಂದಿನ ಬಹುತೇಕ ಚಿತ್ರಗಳನ್ನು ನೋಡಿದಾಗ ಯಾವುದಾದರೂ ಭಾವನೆಗಳಿಗೆ ಧಕ್ಕೆ ಉಂಟಾಗುವುದೇ ಆದರೆ ಅದು ಹೆಣ್ತನ, ಮಹಿಳಾ ಅಸ್ಮಿತೆ, ಶೋಷಿತರ ಅಸ್ತಿತ್ವ ಮತ್ತು ಮಾನವ ಸಂವೇದನೆಯ ಭಾವನೆಗಳಿಗೆ ಹೆಚ್ಚಿನ ಧಕ್ಕೆ ಉಂಟಾಗುತ್ತಿದೆ ಎನ್ನಬಹುದು. ಸಿನಿಮಾದ ಹೀರೋ ತನ್ನ ಸಹಮಾನವನ ಹೆಗಲ ಮೇಲೆ ಕಾಲೂರುವ ದೃಶ್ಯ ನಮ್ಮ ಮನಸಿಗೆ ಘಾಸಿ ಉಂಟುಮಾಡಬೇಕಿತ್ತು. ಅಲ್ಲಿ ಹೆಗಲು ಮತ್ತು ಕಾಲು ಎರಡೂ ಕಥಾವಸ್ತುವಿನ ಒಂದು ಅಂಶ. ಅಲ್ಲಿ ನಮಗೆ ಜಾತಿ ಅಸ್ಮಿತೆಗಳು ಕಾಣುತ್ತಿದೆಯೇ ಹೊರತು, ಮನುಜ ಸಂವೇದನೆ ಕಾಣುತ್ತಿಲ್ಲ. ಇದು ನಮ್ಮ ನಡುವಿನ ದುರಂತ.
ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ಸಿನಿಮಾ ಮತ್ತು ಅಭಿನಯ ಕೌಶಲ್ಯ ಪರಸ್ಪರ ಸಂಪರ್ಕ ಕಳೆದುಕೊಂಡಿರುವುದನ್ನು ಮೂರು ದಶಕಗಳಿಂದಲೂ ನೋಡುತ್ತಿದ್ದೇವೆ. ಹಾಗಾಗಿಯೇ ಎಲ್ಲರೂ ಪ್ರಬುದ್ಧ ನಟರೆಂದೇ ಹೆಸರು ಗಳಿಸುತ್ತಾರೆ. ಅಭಿಮಾನಿ ಸಂಘಗಳು, ರಾಜಕೀಯ ನೆಲೆಗಳು ಮತ್ತು ಜಾತಿ ಅಸ್ಮಿತೆ ಇವುಗಳೇ ಒಬ್ಬ ನಟನ ಇಮೇಜ್ ವೃದ್ಧಿಸಲು ನೆರವಾಗುತ್ತವೆ. ಇದು ಕನ್ನಡ ಚಿತ್ರರಂಗ ಎದುರಿಸುತ್ತಿರುವ ದುರಂತ. ಹಾಗಾಗಿಯೇ ಕಳೆದ 40 ವರ್ಷಗಳಲ್ಲಿ ಒಬ್ಬ ರಾಜೀವ-ರಾಚೂಟಪ್ಪ (ಬಂಗಾರದ ಮನುಷ್ಯ) ಸೃಷ್ಟಿಯಾಗಿಲ್ಲ. ಒಬ್ಬ ರಾಮಯ್ಯ (ಕಸ್ತೂರಿ ನಿವಾಸ), ಒಬ್ಬ ಕಾವೇರಿ-ರಂಗನಾಯಕಿ (ಶರಪಂಜರ-ರಂಗನಾಯಕಿ) ಸೃಷ್ಟಿಯಾಗಿಲ್ಲ. ಒಬ್ಬ ಸಾಹುಕಾರ (ಸಂಪತ್ತಿಗೆ ಸವಾಲ್), ಒಬ್ಬ ನಕ್ಷತ್ರಿಕ (ಸತ್ಯಹರಿಶ್ಚಂದ್ರ) ಸೃಷ್ಟಿಯಾಗಿಲ್ಲ. ಎಲ್ಲವನ್ನೂ ನಾಯಕನಟರೇ ಆವರಿಸಿಕೊಂಡಿದ್ದಾರೆ. ಉಳಿದವರು ನಿಮಿತ್ತಗಳಾಗಿ ವಿರಮಿಸುತ್ತಾರೆ.
ಈ ಮೇಲಿನ ಪಾತ್ರಧಾರಿಗಳನ್ನು ಮತ್ತು ಸನ್ನಿವೇಶಗಳನ್ನು ನೆನಪಿಸಿಕೊಂಡಾಗ ನಮಗೆ ನಟರ ಹೆಸರು ನೆನಪಾಗುವುದಿಲ್ಲ. ಪಾತ್ರದ ಹೆಸರು ನೆನಪಾಗುತ್ತದೆ, ಭಕ್ತ ಕುಂಬಾರನಂತೆ. ಆದರೆ ಮುನಿರತ್ನಂ ಕುರುಕ್ಷೇತ್ರ ನೋಡಿ ಹೊರಬರುವಾಗ ಮಹಾಭಾರತದ ಒಂದು ಪಾತ್ರವೂ ನೆನಪಾಗುವುದಿಲ್ಲ. ದರ್ಶನ್ ಮಾತ್ರ ಮನಸಿನಲ್ಲಿ ಉಳಿಯುತ್ತಾರೆ (ಉತ್ತಮ ನಟನೆಯಿಂದ ಅಲ್ಲ ಸರ್ವವ್ಯಾಪಿ ಇಮೇಜ್‍ನಿಂದ). ಈ ಪರಂಪರೆಯೇ ಪೊಗರು ಚಿತ್ರದ ದೃಶ್ಯಗಳಿಗೆ ಕಾರಣವಾಗಿದೆ. ಇದರಿಂದ ಹೊರಬರಲು ಬಹುಶಃ ಸಾಧ್ಯವಿಲ್ಲ ಎನಿಸುತ್ತದೆ. ನಮ್ಮ ಭಾವನೆಗಳಿಗೆ ಧಕ್ಕೆ ಉಂಟಾಗುವುದೇ ಆದರೆ ಈ ಮಾನವ ಸೂಕ್ಷ್ಮ ಭಾವನೆಗಳು ಘಾಸಿಗೊಳಗಾಗಬೇಕು. ಆಗಲಾದರೂ ಪರದೆಯ ಮೇಲೆ ಹೀರೋಗಳ ಕಾಲುಗಳು ನಡೆಯಲು/ಓಡಲು ಮಾತ್ರ ಬಳಕೆಯಾಗಬಹುದು. (ಮಣ್ಣಿನ ಮಗ ಚಿತ್ರದ “ ಭಗವಂತ ಕೈ ಕೊಟ್ಟ ” ಹಾಡು ನೆನಪಾಗುತ್ತದೆ).