ಭೀಮಾಬಾಯಿ ನಿಧನ: ಕಣ್ಣೀರು ಹಾಕಿದ “ಮಹಾನಾಯಕ” ಅಭಿಮಾನಿಗಳು
ಝೀಕನ್ನಡದಲ್ಲಿ ಮೂಡಿ ಬರುತ್ತಿರುವ ಮಹಾನಾಯಕ ಧಾರಾವಾಹಿಯ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ತಾಯಿ ಭೀಮಭಾಯಿ ನಿಧನ ಹೊಂದುವ ಸಂಚಿಕೆ ನೋಡಿ ವೀಕ್ಷಕರು ಕಣ್ಣೀರು ಹಾಕಿದ್ದು, ಜೊತೆಗೆ ಭೀಮಾಭಾಯಿ ಸಾವನ್ನಪ್ಪಿರುವುದನ್ನು ಕಂಡು ಮನುವಾದಿಗಳು ಸಂತೋಷಪಡುವ ದೃಶ್ಯ, ದುಃಖದಲ್ಲಿ ಕರಗಿರುವ ಅಂಬೇಡ್ಕರ್ ಅವರ ಕುಟುಂಬದ ಸ್ಥಿತಿಕಂಡು ವೀಕ್ಷಕರು ಕಣ್ಣೀರು ಹಾಕಿದರು.
ರಾಮ್ ಜಿ ಸಕ್ಪಾಲ್ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಭೀಮಾಭಾಯಿ ನಿಧನ ಇಡೀ ಕುಟುಂಬವನ್ನೇ ಕಂಗಾಲು ಮಾಡುತ್ತದೆ. ಇದರ ಜೊತೆಗೆ ಭೀಮಾಭಾಯಿಯ ಅಂತ್ಯಸಂಸ್ಕಾರಕ್ಕೆ ಬ್ರಾಹ್ಮಣವಾದಿಗಳು ಅಡ್ಡಿಪಡಿಸುತ್ತಾರೆ. ಭೀಮಾಭಾಯಿಯನ್ನು ಕಳೆದುಕೊಂಡ ತೀವ್ರ ನೋವಿನಲ್ಲಿರುವಾಗಲೇ, ಬ್ರಾಹ್ಮಣವಾದಿಗಳು ವಿಕೃತಿ ಮೆರೆದು ಖುಷಿಪಡುತ್ತಾರೆ. ಯಾರಿಗೂ ಜಗ್ಗದ ರಾಮ್ ಜಿ ಸಕ್ಪಾಲ್ ಕುಟುಂಬದ ಮೇಲೆ ಹಗೆ ತೀರಿಸಿಕೊಳ್ಳುವ ಅವಕಾಶ ದೊರಕಿದಂತೆ ಬ್ರಾಹ್ಮಣವಾದಿಗಳು ಸಂತೋಷ ಪಡುತ್ತಾರೆ. ಸ್ಮಶಾನದಲ್ಲಿ ಭೀಮಾಬಾಯಿಯ ಅಂತ್ಯಸಂಸ್ಕಾರ ನಡೆಸಬಾರದು ಎಂದು ಬ್ರಾಹ್ಮಣವಾದಿ ಬಾರ್ಬರಿ ಗುರು ಭೀಮಾಬಾಯಿ ಅಂತ್ಯಕ್ರಿಯೆಗೆ ಅಡ್ಡಿಪಡಿಸುತ್ತಾನೆ. ಹಳ್ಳಿಯ ಕೊನೆಯಲ್ಲಿ ನಿನ್ನ ಹೆಂಡತಿಯ ಅಂತ್ಯಸಂಸ್ಕಾರ ನೆರವೇರಿಸು, ನಿನ್ನ ಹೆಂಡತಿಗೆ ಸ್ವರ್ಗ ಸಿಗುವಂತೆ ಮಾಡುತ್ತೇನೆ ಎಂದು ದುರಾಂಹಕಾರಿ ಮಾತುಗಳನ್ನಾಡುತ್ತಾನೆ.
ಭೀಮಾಬಾಯಿಯ ನಿಧನದಿಂದ ಜರ್ಝರಿತವಾಗಿದ್ದ ರಾಮ್ ಜಿ ಸಕ್ಪಾಲ್ ಹಾಗೂ ಕುಟುಂಬಕ್ಕೆ ಬ್ರಾಹ್ಮಣವಾದಿಗಳು ಮತ್ತಷ್ಟು ನೋವನ್ನು ನೀಡುತ್ತಾರೆ. ಈ ದೃಶ್ಯ ಕಂಡು ಮಹಾನಾಯಕ ವೀಕ್ಷಕರು ಕಣ್ಣೀರು ಹಾಕುತ್ತಾರೆ.
ಬಹಳಷ್ಟು ಪ್ರದೇಶಗಳಲ್ಲಿ ಈಗಲೂ ದಲಿತರು ತೀರಿ ಹೋದಾಗ ಅವರ ಅಂತ್ಯಸಂಸ್ಕಾರಕ್ಕೆ ಇಂತಹ ಅಡ್ಡಿಗಳು ಆಗುತ್ತಲೇ ಇರುತ್ತವೆ. ಅಂಬೇಡ್ಕರ್ ಅವರು ಚಿಕ್ಕವಯಸ್ಸಿನಲ್ಲಿರುವಾಗ ಅವರ ಕುಟುಂಬಕ್ಕೆ ಆಗಿದ್ದ, ನೋವನ್ನು ಬಹಳಷ್ಟು ಜನರು ಈಗಲೂ ಅನುಭವಿಸುತ್ತಿದ್ದಾರೆ. ಆ ನೋವು ಹಾಗೂ ಅಂಬೇಡ್ಕರ್ ಅವರು ಆ ಸಣ್ಣ ವಯಸ್ಸಿನಲ್ಲಿ ಅನುಭವಿಸಿದ ನೋವು ಮಹಾನಾಯಕ ಪ್ರೇಕ್ಷಕರ ಕಣ್ಣನ್ನು ಒದ್ದೆ ಮಾಡಿತು.
ಇನ್ನೂ ಭೀಮಾಬಾಯಿ ಪಾತ್ರಕ್ಕೆ ಜೀವ ತುಂಬಿದ ನಟಿ ನೇಹಾ ಜೋಶಿ ಅವರ ಪಾತ್ರ ಈ ಧಾರವಾಹಿಯಲ್ಲಿ ಕೊನೆಗೊಂಡಿದೆ. ಅವರ ಅದ್ಬುತ ನಟನೆಗೆ ಕೂಡ ಮಹಾನಾಯಕ ಧಾರಾವಾಹಿ ಅಭಿಮಾನಿಗಳು, ಅಂಬೇಡ್ಕರ್ ಅಭಿಮಾನಿಗಳು, ಭೀಮಾಬಾಯಿ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.